
‘ಐಕ್ಯರಂಗ’ (ಇಂದಿನ ‘ಜನಶಕ್ತಿ’) ವಾರ ಪತ್ರಿಕೆಯ ಫೆಬ್ರವರಿ 24, 2002 ರ ಸಂಚಿಕೆಯಲ್ಲಿ ಪ್ರಕಟವಾದ ನನ್ನದೊಂದು ಲೇಖನ.
ಹೊಸ ವರ್ಷ ಕಾರ್ಮಿಕರ ಪಾಲಿಗೆ ಹೊಸ ಭರವಸೆ ತರಲಿಲ್ಲ. ಮತ್ತದೇ ಆತಂಕ. ಅದೇ ಭಯ. ಅದೇ ಅತಂತ್ರ ಸ್ಥಿತಿ. ಅದೇ ನೋವು ನರಳುವಿಕೆಯಿಂದಲೇ ಕೆಲಸ ಮಾಡಬೇಕಾದ ಒತ್ತಡ. ಹೊಸ ವರ್ಷದಲ್ಲಿ ಈ ಸಂಕಟಗಳು ಮತ್ತಷ್ಟು ಹೆಚ್ಚುವ ಬೀತಿ. ಹೊಸ ವರ್ಷವನ್ನು ಹೊಸ ಹರುಷದೊಂದಿಗೆ ಸ್ವಾಗತಿಸಬೇಕು ಅಂದುಕೊಂಡರೂ ಅದು ಸಾಧ್ಯವಾಗುತ್ತಿಲ್ಲ. ನಾಳೆಗಳ ಕುರಿತು ಸುಂದರ ಕನಸುಗಳನ್ನು ಕಂಡಿದ್ದ ಯುವ ಮನಸ್ಸುಗಳಿಗೆ ಏನೋ ಆತಂಕ. ಮೂರು ವರ್ಷಗಳ ಹಿಂದೆ ಉದ್ಯೋಗ ಸಿಕ್ಕಾಗ ಕಟ್ಟಿದ್ದ ಕನಸಿನ ಆಶಾಗೋಪುರ ಕುಸಿಯತೊಡಗಿದೆ. ಅಧಿಕ ಲಾಭಗಳಿಸುವ ಏಕೈಕ ಉದ್ದೇಶದ ವಿದೇಶಿ ಕಂಪನಿಯ ಮಾಲೀಕರಿಂದಾಗಿ ಕಾರ್ಮಿಕರ ಬದುಕು ಅಸಹನೀಯವಾಗಿದೆ. ಹತ್ತು ಗಂಟೆಗಳ ನಿರಂತರ ದುಡಿಮೆಯಿಂದಾಗಿ ಬೆನ್ನು ಮೂಳೆ ಬಾಗಿದೆ. ಹಲವರು ಶಸ್ತ್ರಚಿಕೆತ್ಸೆ ಮಾಡಿಸಿ ಬೆನ್ನು ಮೂಳೆ ಸರಿಪಡಿಸಿಕೊಂಡು ಮತ್ತೆ ದುಡಿಯುತ್ತಿದ್ದಾರೆ. ನಡು ಪಟ್ಟಿ ಕಟ್ಟಕೊಂಡು ಕಾಲು ನೋವಿನಲ್ಲೂ ಕಾಲಿಗೆ ಬಿಗಿಯಾದ ಪಟ್ಟಿ ಕಟ್ಟಿಕೊಂಡಿದ್ದಾರೆ. ಶ್ವಾಶಕೋಶದ ಶಸ್ತ್ರ ಚಿಕಿತ್ಸೆಯ ನಂತರನೂ ಅದೇ ಕೆಲಸದಲ್ಲಿ ನಿರತರಾಗಿದ್ದಾರೆ. ಅದೇ ಕೆಲಸ. ಅದೇ ಒತ್ತಡ. ಮತ್ತದೇ ನೋವು. ಬೆಂಗಳೂರಿನಿಂದ 30 ಕಿ.ಮೀ. ದೂರವಿರುವ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟೊಯೋಟೊ ಕಿರ್ಲೋಸ್ಕರ್ ಕಾರ್ಮಿಕರ ನೋವಿನ ಕತೆ ಇದು.
8 ನಿಮಿಷಕ್ಕೆ ಒಂದು ಕಾರು:
ಕೇವಲ 8 ನಿಮಿಷಕ್ಕೆ ಒಂದು ಕಾರು! ದಿನಕ್ಕೆ 120 ಕಾರು! ಫೆಬ್ರವರಿ ತಿಂಗಳಿಂದ ಕೇವಲ 6 ನಿಮಿಷಕ್ಕೆ ಒಂದು ಕಾರು ತಯಾರಿಸಲು ಆಡಳಿತ ವರ್ಗ ನಿರ್ಧರಿಸಿ ಆದೇಶಿಸಿದೆ. 1200 ಕಾರ್ಮಿಕರ ಅವಿರತ ಶ್ರಮದಿಂದ ಟೊಯೋಟೊ ಕಿರ್ಲೋಸ್ಕರ್ ಕಾರ್ಖಾನೆ ಮಾಲೀಕರು ಕೋಟಿಗಟ್ಟಲೆ ಹಣ ಸಂಪಾದಿಸುತ್ತಿದ್ದಾರೆ. ದಿನದಲ್ಲಿ 6 ಕೋಟಿ ರೂ.ಗಳ ವ್ಯಾಪಾರ ವಹಿವಾಟು ನಡೆಸುತ್ತಿದೆ. ಇಷ್ಟೊಂದು ಕಾರುಗಳನ್ನು ಉತ್ಪಾದಿಸುವ 1200 ಕಾರ್ಮಿಕರ ಒಟ್ಟು ವೇತನ ದಿನವೊಂದಕ್ಕೆ ಕೇವಲ 1,50,000 ರೂ.ಮಾತ್ರ. ವಾಹನ ತಯಾರಿಕಾ ಕಾರ್ಖಾನೆಗಳಲ್ಲಿಯೇ ಅತ್ಯಂತ ಶೋಚನೀಯ ವೇತನವನ್ನು ಇಲ್ಲಿನ ಕಾರ್ಮಿಕರಿಗೆ ನೀಡುತ್ತಿದ್ದಾರೆ. ಇತರ ಕಾರ್ಖಾನೆಗಳಲ್ಲಿ, ಕಾರ್ಖಾನೆಯ ಒಟ್ಟು ವಹಿವಾಟಿನ ಶೇ 10ರಿಂದ 16 ರ ವರೆಗೆ ಕಾರ್ಮಿಕರ ವೇತನ ಇದ್ದರೆ, ಇಲ್ಲಿ ಕೇವಲ ನೂರು ರೂಪಾಯಿಗೆ 50 ಪೈಸೆ ಮಾತ್ರ. ಇಷ್ಟಿದ್ದೂ ಕಾರ್ಮಿಕರಿಗೆ ಅಧಿಕ ಸವಲತ್ತು ಕೊಡುತ್ತಿದ್ದೇವೆ, ಯಾವುದೇ ಕಾರ್ಖಾನೆ ನೀಡದಷ್ಟು ಅಧಿಕ ವೇತನ ನೀಡುತ್ತಿದ್ದೇವೆ ಎಂದು ಆಡಳಿತ ವರ್ಗ ಅಪ್ಪಟ ಸುಳ್ಳು ಪ್ರಚಾರ ಮಾಡುತ್ತಿದೆ. ಬಸ್ಸಿನ ಸೌಲಭ್ಯ ಹೊದಗಿಸಿ 200 ರೂ. ಕಸಿದುಕೊಳ್ಳುತ್ತಿದೆ. ಕ್ಯಾಂಟೀನ್ ಸೌಲಭ್ಯ ಹೊದಗಿಸಿ 400 ರೂ. ಕಸಿದುಕೊಳ್ಳುತ್ತಿದೆ.
ಎಸ್.ಎಮ್. ಕೃಷ್ಣ ಸರ್ಕಾರವೂ ಎನ್ ಡಿ ಎ ಸರ್ಕಾರದ ನೀತಿಯನ್ನೇ ನಮ್ಮ ರಾಜ್ಯದಲ್ಲಿ ಜಾರಿಗೆ ತರಲು ಮುಂದಾಗಿದೆ. ಕೇಂದ್ರದ ಎನ್ ಡಿಎ ಸರ್ಕಾರ, ಐಎಂಎಪ್ ಮತ್ತು ವಿಶ್ವಬ್ಯಾಂಕ್ ಆದೇಶಗಳನ್ನು ಪಾಲಿಸುತ್ತದೆ. ಮೆಕ್ಸಿಕೊ, ಬ್ರೆಜಿಲ್ ಮತ್ತು ಅರ್ಜೆಂಟೈನಾ ದೇಶಗಳು ಐಎಂಎಪ್ ಶರತ್ತುಗಳಿಗೆ ಒಪ್ಪಿದ ನಂತರ ಏನಾಗಿದೆ ಎಂಬುದು ಮುಖ್ಯಮಂತ್ರಿ ಕೃಷ್ಣರವರಿಗೆ ಗೊತ್ತಿಲ್ಲವೇ? ವಿದೇಶಿ ಕಂಪನಿಗಳು ನಮ್ಮ ದೇಶದೊಳಕ್ಕೆ ಬಂದರೆ ದೇಶದ ಅಭಿವೃದ್ದಿಯಾಗುತ್ತದೆ ಎಂಬ ಭ್ರಮೆಯಿಂದ ಅವರಿಗೆ ಕೆಂಪು ಹಾಸು ಹಾಸಿ ನಮ್ಮ ಸರ್ಕಾರ ಸ್ವಾಗತಿಸುತ್ತಿದೆ. ಲಾಭ ಕೊಳ್ಳೆ ಹೊಡೆಯಲು ಬಂದಿರುವ ಈ ವಿದೇಶಿ ಬಂಡವಾಳಿಗರು, ನಮ್ಮ ದೇಶದ ಕಾರ್ಮಿಕರ ಹಕ್ಕಗಳನ್ನೇ ಇಲ್ಲವಾಗಿಸುವಂತೆ ನಮ್ಮ ಆಳುವ ವರ್ಗದ ಮೇಲೆ ಒತ್ತಡ ತರುತ್ತಿವೆ. ಕಾರ್ಮಿಕರು ಹಲವು ತ್ಯಾಗ ಬಲಿದಾನಗಳಿಂದ ಗಳಿಸಿದ ಸವಲತ್ತುಗಳನ್ನು ಕಸಿಯತೊಡಗಿದ್ದಾರೆ. ಇಲ್ಲಿನ ಕಾರ್ಮಿಕರಿಗೆ ಕಡಿಮೆ ಕೂಲಿ ನೀಡಿ ಕಾರ್ಮಿಕರ ರಕ್ತ ಹೀರಿ ಹೆಚ್ಚಿನ ಲಾಭಗಳಿಸುತ್ತಿವೆ. ನಮ್ಮ ದೇಶದ ಸಂಪತ್ತನ್ನು ಲೂಟಿ ಹೊಡೆಯುತ್ತಿವೆ. ಕೇಂದ್ರ ಸರ್ಕಾರ ಕಾರ್ಮಿಕ ಕಾಯ್ದೆಯನ್ನೇ ತಿದ್ದುಪಡಿ ಮಾಡಿ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳಲು ಹೊರಟಿರುವಾಗ, ರಾಜ್ಯದಲ್ಲಿ ಈಗಿರುವ ಕಾನೂನುಗಳ ಜಾರಿಗೂ ಸರ್ಕಾರ, ಕಾರ್ಮಿಕ ಇಲಾಖೆ ಮುಂದಾಗುತ್ತಿಲ್ಲ. ವಿದೇಶಿ ಬಂಡವಾಳಿಗರು ನಮ್ಮ ದೇಶದ ಕಾನೂನಿಗೆ ಸವಾಲು ಹಾಕಲು ಹೊರಟಿರುವುದನ್ನು ಸರ್ಕಾರ ಮೂಖ ಪ್ರೇಕ್ಷಕನಂತೆ ನೋಡುತ್ತಿದೆ. ಕಾನೂನಿಗೆ ಅಗೌರವ ತೋರಿಸುವ ವಿದೇಶಿ ಕಂಪನಿಗಳ ವಿರುದ್ಧ ಕ್ರಮ ಜರುಗಿಸುವ ಧೈರ್ಯ ಸರ್ಕಾರಕ್ಕಿಲ್ಲವಾಗಿದೆ. ಅಮೆರಿಕ, ವಿಶ್ವಬ್ಯಾಂಕ್ ಮತ್ತು ವಿಶ್ವ ವಾಣಿಜ್ಯ ಸಂಸ್ಥೆ (ಐಎಂಎಪ್) ಇವುಗಳ ಷರತ್ತುಗಳಿಗೆ ತಲೆ ಬಾಗಿರುವ ನಮ್ಮ ಸರ್ಕಾರ ಕಾರ್ಮಿಕರ ಹಿತವನ್ನು ಬಲಿಕೊಡಲು ಹೊರಟಿದೆ. ನಮ್ಮ ದೇಶದ ಬಂಡವಾಳಶಾಹಿಗಳು ವಿದೇಶಿಯರೊಡನೆ ಕೂಡಿ ಲಾಭ ಮಾಡತೊಡಗಿದ್ದಾರೆ. ದೇಶದ ಕಾನೂನಿಗೆ ಸವಾಲು ಹಾಕಿರುವ ಟೊಯೋಟಾ ಕಿರ್ಲೋಸ್ಕರ್ ಕಂಪನಿ ಆಡಳಿತ ಮಂಡಳಿ ಇದಕ್ಕೆ ಇತ್ತೀಚಿನ ನಿದರ್ಶನ.
ಸ್ಥಳೀಯರ ನಿಂದನೆ: ಕಾರ್ಮಿಕರ ಆಕ್ರೋಶ
ಡಿಸೆಂಬರ್ 31. ಗಿರೀಶ್ ಗೌಡ ಎಂಬ ಕಾರ್ಮಿಕನೊಬ್ಬ ಸೂಪರ್ ವೈಸರ್ ಜೊತೆ ತನಗಾಗುತ್ತಿರುವ ತೊಂದರೆಯ ಬಗ್ಗೆ ಹೇಳಿಕೊಳ್ಳುತ್ತಿರುವಾಗ, ಆಡಳಿತ ಮಂಡಳಿಯ ಸುಲಾಸ್ ಡಿ ವಾಲ್ ಎಂಬ ವ್ಯಕ್ತಿ ಮದ್ಯಪ್ರವೇಶಿಸಿ ಗಿರೀಶ್ ನನ್ನು ತುಚ್ಚವಾಗಿ ನಿಂದಿಸಿದ. ಮಾತ್ರವಲ್ಲದೆ ಸ್ಥಳೀಯರನ್ನು ಕೀಳು ಪದಗಳಿಂದ ನಿಂದಿಸಿದ ಸುದ್ದಿ ಕಾರ್ಮಿಕರ ನಡುವೆ ಹರಡಿ, ಕಾರ್ಮಿಕರಲ್ಲಿ ಆಕ್ರೋಶ ಉಕ್ಕಿತು. ಹೊರದೇಶದ ಮಾಲೀಕನ ಗುಲಾಮನಾಗಿರುವ ಆ ವ್ಯಕ್ತಿ, ನಮ್ಮ ನೆಲದಲ್ಲಿ ನಿಂತು ಸ್ಥಳೀಯರನ್ನು ನಿಂದಿಸಿದ್ದನ್ನು ತಕ್ಷಣವೇ ಅವರೆಲ್ಲರೂ ಪ್ರತಿಭಟಿಸಿದರು. ಆತನ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿ ಕೆಲಸ ಸ್ಥಗಿತಗೊಳಿಸಿದರು. ಕಾರ್ಮಿಕ ಮುಖಂಡರ ಮದ್ಯಪ್ರವೇಶದಿಂದ ಈ ಮುಷ್ಕರ 50 ನಿಮಿಷಗಳ ನಂತರ ವಾಪಸ್ಸಾಯಿತು. ಅಂದೇ ಗಿರೀಶ್ ನನ್ನು ಕೆಲಸದಿಂದ ವಜಾ ಮಾಡಿದ ಆಡಳಿತ ಮಂಡಳಿಯು ಕಾರ್ಮಿಕರ ಒಗ್ಗಟ್ಟಿಗೆ ಸವಾಲೆಸೆಯಿತು. ಆಡಳಿತ ಮಂಡಳಿಯ ಈ ನಡೆಯನ್ನು ಕಾರ್ಮಿಕ ಮುಖಂಡರು ಖಂಡಿಸಿದರು. ವಜಾ ಆದೇಶವನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿದರು. ಮುಖಂಡರ ಮಾತಿಗೆ ಒಪ್ಪುವುದಿರಲಿ, ಅವರನ್ನು ತುಚ್ಚವಾಗಿ ಕಾಣಲಾಯ್ತು. ನಾವು ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಯಾರೇ ಬಂದರೂ ಹಿಂತೆಗೆದುಕೊಳ್ಳುವುದಿಲ್ಲ. ಯಾರೇ ಆಗಲಿ ನಮ್ಮನ್ನು ಎದುರು ಹಾಕಿಕೊಂಡಲ್ಲಿ ಅಂತಹವರನ್ನು ಮುಲಾಜಿಲ್ಲದೆ ಕೆಲಸದಿಂದ ವಜಾಮಾಡುತ್ತೇವೆ ಎಂದರು. 50 ನಿಮಿಷ ಕೆಲಸ ಸ್ಥಗಿತಗೊಳಿಸಿದ್ದಕ್ಕೆ 8 ಗಂಟೆಗಳ ವೇತನವನ್ನು ಕಡಿತಗೊಳಿಸಿದರು.
ಮುಷ್ಕರ;
ಆಡಳಿತ ವರ್ಗದ ನಿರಂತರ ಶೋಷಣೆ ವಿರುದ್ದ ಕಾರ್ಮಿಕರು ಎಚ್ಚೆತ್ತುಕೊಂಡರು. ಈ ನೀತಿಯನ್ನು ಪ್ರತಿಭಟಿಸದಿದ್ದರೆ ತಮಗೆ ಉಳಿಗಾಲವಿಲ್ಲವೆಂದು ಅರಿತ ಕಾರ್ಮಿಕರು ಹೋರಾಟದ ಸಿದ್ದತೆ ನಡೆಸಿದರು. ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಆಡಳಿತ ಮಂಡಳಿಗೆ ಹಲವು ಬಾರಿ ಮನವಿ ಸಲ್ಲಿಸಿದರು. ಕೊಬ್ಬಿದ ವಿದೇಶಿ ಗೂಳಿಗೆ ಕಾರ್ಮಿಕರ ಕೂಗು ಕೇಳಿಸಲೇ ಇಲ್ಲ. ಜನವರಿ 8 ರಂದು ಕಾರ್ಮಿಕ ಮುಖಂಡರು ಬೇಡಿಕೆಯ ಪಟ್ಟಿ ಸಲ್ಲಿಸಿ, ಬೇಡಿಕೆ ಈಡೇರಿಸದಿದ್ದರೆ ಜನವರಿ 24 ರಿಂದ ಅನಿರ್ಧಿಷ್ಟಾವಧಿ ಮುಷ್ಕರ ಮಾಡುವುದಾಗಿ ಎಚ್ಚರಿಸಿದರು. ಅಂದು ಮನವಿ ಪತ್ರ ಸ್ವೀಕರಿಸಿದ ಆಡಳಿತ ಮಂಡಳಿಯು, ಮರುದಿನ ಸಂಘದ ಮುಖಂಡರ ಮೇಲೆ ಕ್ರಮ ಜರುಗಿಸಿತು. ಅಧ್ಯಕ್ಷ ಸತೀಶ್ ರನ್ನು ಅಮಾನತುಗೊಳಿಸಿ ಕಾರ್ಯದರ್ಶಿ ಶಿವಕುಮಾರ್ ಮತ್ತು ಜಂಟಿ ಕಾರ್ಯದರ್ಶಿ ರಘು ಈ ಇಬ್ಬರನ್ನು ಯಾವುದೇ ನೋಟೀಸ್ ನೀಡದೆ ವಜಾಗೊಳಿಸಿದರು. ಈ ಸುದ್ದಿ ಕಾರ್ಮಿಕರ ನಡುವೆ ಕಾಡ್ಗಿಚ್ಚಿನಂತೆ ಹರಡಿತು. ಮೊದಲೇ ನೋವಿನಿಂದ ಕುದಿಯುತ್ತಿದ್ದ ಕಾರ್ಮಿಕರಿಗೆ ಮಾಲೀಕರ ಇಂತಹ ದಬ್ಬಾಳಿಕೆ ಸಹಿಸಲು ಸಾಧ್ಯವಾಗಲಿಲ್ಲ. ಇದನ್ನು ಪ್ರತಿಭಟಿಸಲು ಜನವರಿ 10 ರಿಂದಲೇ ಮುಷ್ಕರಕ್ಕಿಳಿದರು.
ಬಿಡದಿ ಸಭೆಗೆ ಶಾಸಕರಿಂದ ಅಡ್ಡಿ;
ಕಾರ್ಮಿಕರ ಮುಷ್ಕರವನ್ನು ಹತ್ತಿಕ್ಕಲು ಆಡಳಿತ ವರ್ಗ ನಿರಂತರ ಪ್ರಯತ್ನಿಸುತ್ತದೆ. ಕಾರ್ಮಿಕರು ಕಾರ್ಖಾನೆಯ ಬಳಿ ಸೇರದಂತೆ ತಡೆಯಲು ಪೊಲೀಸರ ಮೇಲೆ ಪ್ರಭಾವ ಬೀರಿ 144 ಸೆಕ್ಷನ್ ಜಾರಿಗೊಳಿಸಿದರು. ಸಾರ್ವಜನಿಕರ ಗಮನ ಸೆಳೆಯಲು ಕಾರ್ಮಿಕರು ರಕ್ತದಾನ ಶಿಬಿರ ನಡೆಸುವ ಮೂಲಕ 80 ಕಾರ್ಮಿಕರು ತಮ್ಮ ರಕ್ತ ದಾನ ಮಾಡಿದರೆ, ಪೊಲೀಸರು ಈ ಶಿಬಿರದ ಟೆಂಟನ್ನೇ ಕಿತ್ತು ಬೀಸಾಡಿದರು. ಮುಷ್ಕರನಿರತ ಕಾರ್ಮಿಕರು ಬರುತ್ತಿದ್ದ ವಾಹನವನ್ನು ತಡೆದು ಕೇಸು ದಾಖಲಿಸಿದರು. ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಮತ್ತು ಮತ್ತೊಬ್ಬ ಮುಖಂಡ ವಾಸು ಎಂಬುವವರನ್ನು ಪೊಲೀಸರು ಬಂದಿಸಿ ಜೈಲಿಗೆ ತಳ್ಳಿದರು. ಕಾರ್ಮಿಕರು ಸಾರ್ವಜನಿಕರಿಗೆ ತಮ್ಮ ಸಂಕಷ್ಟ ವಿವರಿಸಲು ಮತ್ತು ಸರ್ಕಾರದ ಮೇಲೆ ಒತ್ತಡ ತರುವ ಸಲುವಾಗಿ ನಗರದ ನಾಲ್ಕು ಕಡೆ ಬಹಿರಂಗ ಸಭೆ ನಡೆಸಲು ತೀರ್ಮಾನಿಸಿದರು. ಬಿಡದಿ ಬಳಿ ಸಭೆ ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದರು. ಸ್ಥಳೀಯ ಶಾಸಕರು ಸಭೆ ನಡೆಸಲು ಸಿಐಟಿಯು ಸಂಘಟನೆಗೆ ಅವಕಾಶ ಕೊಡಬಾರದೆಂದೂ, ನಾವು ಸಭೆ ನಡೆಸಲು ಬಿಡುವುದಿಲ್ಲ ಎಂದರು. ಸಭೆ ನಿಗದಿಯಾಗಿದ್ದ ಸಮಯದಲ್ಲಿ ಸಾವಿರಾರು ಕಾರ್ಮಿಕರು ಒಂದೆಡೆ ನೆರೆದಿದ್ದರೆ, ಸಭೆಯಲ್ಲಿ ಗಲಭೆ ಸೃಷ್ಟಿಸಲೆಂದೇ ಶಾಸಕ ಸಿ.ಎಂ.ಲಿಗಪ್ಪನವರ ಮಗ 50 ಜನ ಗೂಂಡಾಗಳ ಜೊತೆಗೂಡಿ ಪೊಲೀಸ್ ಠಾಣೆಯ ಬಳಿಯೇ ನೆರೆದಿದ್ದರು. ಹೆಜ್ಜಾಲದ ಗೋಲಿಬಾರ್ ಜನರ ಮನದಲ್ಲಿ ಇನ್ನೂ ಮಾಸುವ ಮುನ್ನ ಮತ್ತೊಂದು ಅಂತಹ ದುರಂತಕ್ಕೆ ಈ ಗೂಂಡಾ ಪಡೆ ಸಜ್ಜಾಗಿತ್ತು. ಹೆಜ್ಜಾಲ ಗೋಲಿಬಾರ್ ಬಗ್ಗೆ ತನಿಖೆ ನಡೆಸಿದ ಆಯೋಗ, ಸಿ.ಎಂ.ಲಿಂಗಪ್ಪವನರ ಗೂಂಡಾ ಪಡೆ ಇದಕ್ಕೆ ಕಾರಣವೆಂದು ಗುರುತಿಸಿ, ಶಾಸಕರ ಮೇಲೆ ವಿಚಾರಣೆ ನಡೆಸುವಂತೆ ಸೂಚಿಸಿರುವ ಸುದ್ದಿ ವಿಧಾನಸಭೆಯಲ್ಲಿ ಪ್ರಕಟವಾಗುತ್ತಿರುವ ಸಂದರ್ಭದಲ್ಲೇ ಮತ್ತೆ ಅಂತದ್ದೇ ದುರಂತ ಸೃಷ್ಟಿಗೆ ಈ ಪಡೆ ಸಜ್ಜಾಗಿದ್ದುದನ್ನು ಗಮನಿಸಿದ ಕಾರ್ಮಿಕರು ಅಂದು ಶಾಂತರಾಗಿಯೇ ಹಿಂತಿರುಗಿದರು.
ಕಾರ್ಮಿಕರು ಕೆಂಗೇರಿ ಉಪನಗರ, ವಿಜಯನಗರ, ದಾಸರಹಳ್ಳಿ ಪ್ರದೇಶಗಳಲ್ಲಿ ಯಶಸ್ವಿ ಸಭೆಗಳನ್ನು ನಡೆಸಿದರು. ದಾಸರಹಳ್ಳಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಪೀಣ್ಯ ಕೈಗಾರಿಕಾ ಪ್ರದೇಶದ ಕಾರ್ಮಿಕರೂ ಸೇರಿದಂತೆ 3 ಸಾವಿರಕ್ಕೂ ಅಧಿಕ ಕಾರ್ಮಿಕರು 2 ಕಿ.ಮೀ. ದೂರ ಮೆರವಣಿಗೆ ನಡೆಸಿ ಬೃಹತ್ ಬಹಿರಂಗ ಸಭೆ ನಡೆಸಿದರು. ಇಂದೆಂದೂ ಕಾಣದಂತ ಬಾರೀ ಪೊಲೀಸ್ ಬಂದೂಬಸ್ತ್ ಏರ್ಪಡಿಸಲಾಗಿತ್ತು. ಪೆಪ್ಸಿ, ಟಾಟಾ, ವಿಪ್ರೋ, ವೈನ್ ಕ್ರಾಫ್ಟ್, ಔಮಾ ಇಂಜಿನಿಯರಿಂಗ್, ಸದರನ್ ಡೈಸ್ಟಿಂಗ್ ಪೊರೆಸ್, ಕಮ್ಸಾಡಯಲ್ಸ್ ಅಂಡ್ ಡಿವೈಸಸ್ ಕಾರ್ಖಾನೆಗಳ ಕಾರ್ಮಿಕರೂ ಇದರಲ್ಲಿ ಸೇರಿದ್ದರು.
ಮುಖ್ಯಮಂತ್ರಿ ಮನೆ ಮುಂದೆ ದರಣಿ:
ತಮ್ಮ ಬೇಡಿಕೆಗಳಿಗಾಗಿ ಒತ್ತಾಯಿಸಿ ಕಾರ್ಮಿಕರು ಸಿಐಟಿಯು ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ನಡೆಸಿ ಮನವಿ ಪತ್ರ ಸಲ್ಲಿಸಿದರು. ಚುನಾವಣಾ ಗುಂಗಿನಲ್ಲಿದ್ದ ಮುಖ್ಯಮಂತ್ರಿಗಳು ಮನವಿ ಸ್ವೀಕರಿಸಿ ಸಮಸ್ಯೆ ಪರಿಹರಿಸಲು ಯತ್ನಿಸುವುದಾಗಿ ಹೇಳಿದರು. ಕಾರ್ಮಿಕ ಮಂತ್ರಿ ಹಿಂಡಸಗೇರಿ ಮನೆ ಮುಂದೆ ಜಮಾಯಿಸಿದ ಕಾರ್ಮಿಕರು ಮಾಲೀಕರ ಧೋರಣೆ ಬಗ್ಗೆ ದೂರು ನೀಡಿ, ಸರ್ಕಾರ ಮಧ್ಯ ಪ್ರವೇಶಿಸಬೇಕೆಂದು ಒತ್ತಾಯಿಸಿದರು. ಟೊಯೋಟೊ ಕಿರ್ಲೋಸ್ಕರ್ ಆಡಳಿತ ಮಂಡಳಿಯು ಕಾರ್ಮಿಕ ಕಾನೂನನ್ನೇ ಉಲ್ಲಂಘಿಸಿ ಕಾರ್ಮಿಕ ಇಲಾಖೆಗೆ ಸವಾಲು ಹಾಕಿದೆ. ಯಾವುದೇ ನೋಟಿಸ್ ನೀಡದೆ ವಿಚಾರಣೆ ಇಲ್ಲದೆ ಕಾರ್ಮಿಕ ಮುಖಂಡರನ್ನು ವಜಾಗೊಳಿಸಲಾಗಿದೆ. ನಿಯಮ ಉಲ್ಲಂಘಿಸಿ 10 ಗಂಟೆಗಳ ಕಾಲ ದುಡಿಸಿಕೊಳ್ಳುತ್ತಿದ್ದಾರೆ. ಕಾನೂನು ಉಲ್ಲಂಘಿಸಿದವರ ವಿರುದ್ದ ಕ್ರಮ ಕೈಗೊಳ್ಳಿ ಎಂದು ಸಚಿವರನ್ನು ಒತ್ತಾಯಿಸಿದರು. ಮಾಲೀಕರನ್ನು ಕರೆದು ನಿಮ್ಮ ಸಮಸ್ಯೆ ಪರಿಹರಿಸುತ್ತೇನೆಂದು ಅವರು ಕಾರ್ಮಿಕರಿಗೆ ಭರವಸೆ ನೀಡಿದರು.
ಕಾರ್ಮಿಕ ಆಯುಕ್ತರ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಆಡಳಿತ ಮಂಡಳಿಯವರು ಯಾವುದೇ ಬೇಡಿಕೆಗೂ ಒಪ್ಪಲು ಸಾಧ್ಯವಿಲ್ಲವೆಂದು ಖಡಾಖಂಡಿತವಾಗಿ ನುಡಿದರು. ಯಾವುದೇ ಕಾರಣಕ್ಕೂ ವಜಾ ಆದ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ. ಹಾಗೇನಾದರೂ ಆದರೆ ನಾವು ಕಾರ್ಖಾನೆ ನಡೆಸಲು ಸಾಧ್ಯವಿಲ್ಲ. ಕಾರ್ಮಿಕರು ಮುಷ್ಕರ ಬಿಟ್ಟು ಕೆಲಸಕ್ಕೆ ಹಾಜರಾಗಲಿ. ಶೇ.100ರಷ್ಟು ಉತ್ಪಾದನೆ ಮಾಡಿ ತೋರಿಸಲಿ. ನಂತರ ಉಳಿದ ಬೇಡಿಕೆಗಳ ಬಗ್ಗೆ ಮಾತನಾಡುತ್ತೇವೆ ಎಂದು ಹೇಳಿದರು. ಕಾರ್ಮಿಕ ಆಯುಕ್ತರು ತಮ್ಮ ಅಧಿಕಾರ ಚಲಾಯಿಸಲು ಅಸಮರ್ಥರಾದರು. ಖಾಯ್ದೆ ಉಲ್ಲಂಘಿಸಿದ ಕಾರ್ಖಾನೆಯ ವಿರುದ್ದ ಕ್ರಮ ಜರುಗಿಸುವ ಬದಲು ಮುಷ್ಕರ ವಾಪಸ್ ತೆಗೆಯುವಂತೆ ಕಾರ್ಮಿಕರ ಮನವೊಲಿಸಲು ಪ್ರಯತ್ನಮಾಡಿದರು. ಅದಕ್ಕೆ ಕಾರ್ಮಿಕರು ಒಪ್ಪದಿದ್ದಾಗ ವಜಾ ಕ್ರಮವನ್ನು ಅಮಾನತ್ತಿಗೆ ಬದಲಾಯಿಸಿ ವಿಚಾರಣೆ ನಡೆಸಲು ಒಪ್ಪಿದರೆ, ಮುಷ್ಕರ ವಾಪಸ್ ತೆಗೆಯುವುದಾಗಿ ಒಂದು ಹಂತದಲ್ಲಿ ಮುಖಂಡರು ಸಲಹೆ ಕೊಟ್ಟರು. ಆದರೆ ಆಡಳಿತ ಮಂಡಳಿ ತನ್ನ ಬಿಗಿ ಪಟ್ಟು ಬಿಡಲಿಲ್ಲ.
ಮತ್ತೊಮ್ಮೆ ಕಾರ್ಮಿಕ ಸಚಿವರ ಬಳಿ ಸಭೆ ನಡೆದರೂ ಯಾವುದೇ ಪ್ರಯೋಜನವಾಗಲಿಲ್ಲ. ಕಾರ್ಮಿಕರು ಇನ್ನಿತರ ಕಾರ್ಖಾನೆಗಳ ಕಾರ್ಮಿಕರ ಮತ್ತು ಸಾರ್ವಜನಿಕರ ಬೆಂಬಲ ಪಡೆದು ದೊಡ್ಡ ಮಟ್ಟದ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಫೆಬ್ರವರಿ 23 ರಂದು ವಿವಿಧ ಸಂಘಟನೆಗಳ ಮುಖಂಡರು ಸಭೆ ಸೇರಿ ಸೌಹಾರ್ಧ ಬೆಂಬಲ ಸೂಚಿಸಿದ್ದಾರೆ. ಚಿಕ್ಕಲಾಲ್ ಬಾಗ್ ನಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ಒತ್ತಾಯಿಸಿ ಸರ್ಕಾರಕ್ಕೆ ಮನವಿ ಕೊಡಲು ನಿರ್ಧರಿಸಿದರು. ಕಾರ್ಮಿಕರ ಧೀರ ಹೋರಾಟ ಮುಂದುವರಿಯಿತು.
ನಿಮ್ಮ ಮಕ್ಕಳ ಭವಿಷ್ಯ ಹಾಳುಮಾಡದಿರಿ!!
“ನಿಮ್ಮ ಮಗ ಕೆಲವು ಪುಂಡರ ಜೊತೆ ಸೇರಿ ಕೆಲಸಕ್ಕೆ ಗೈರು ಹಾಜರಾಗುತ್ತಿದ್ದಾನೆ. ನಿಮ್ಮ ಮಗನಿಗೆ ಬುದ್ದಿ ಹೇಳಿ ಕೆಲಸಕ್ಕೆ ಕಳಿಸಿ. ನಿಮ್ಮ ಮಗನ ಭವಿಷ್ಯ ಹಾಳು ಮಾಡದಿರಿ” ಕಾರ್ಮಿಕರ ಸಂಘಟಿತ ಹೋರಾಟ ಮುರಿಯಲು ಮಾಲೀಕ ವರ್ಗ, ಕಾರ್ಮಿಕರ ತಂದೆ ತಾಯಿಗಳಿಗೆ ನೀಡಿದ ಉಪದೇಶವಿದು. ಕನಕಪುರ, ಹಾಸನ, ಬೆಂಗಳೂರಿನ ಹಲವು ಕಡೆಗಳಲ್ಲಿ, ಕಾರ್ಮಿಕರ ಪೋಷಕರಿಗೆ ಅನುಕೂಲವಾಗುವ ಕಡೆಗಳಲ್ಲಿನ ದೊಡ್ಡ ದೊಡ್ಡ ಹೊಟೆಲ್ ಗಳಲ್ಲಿ ಸಭೆ ಕರೆದು, ಭರ್ಜರಿ ಊಟದ ವ್ಯವಸ್ಥೆ ಮಾಡಿ, ಸಂಘಟನೆಯ ವಿರುದ್ದ ಅಪಪ್ರಚಾರ ನಡೆಸಿದರು. “ಕೆಲವೇ ಕಾರ್ಮಿಕರು ಮುಷ್ಕರದಲ್ಲಿದ್ದಾರೆ. ಆಡಳಿತ ವರ್ಗದ ಸದಸ್ಯರ ಮೇಲೆ ಹಲ್ಲೆ ನಡೆಸಲು ಯತ್ನಿಸಿ, ಕುಡಿದು ಗಲಾಟೆ ಮಾಡಿದ ಇಬ್ಬರು ಕಾರ್ಮಿಕರನ್ನು ವಜಾ ಮಾಡಿದ್ದೇವೆ. ನಿಮ್ಮ ಮಗನನ್ನು ಕೆಲಸಕ್ಕೆ ಕಳಿಸಿ. ನಿಮ್ಮ ಮನೆಗೆ ವಾಹನ ಕಳಿಸಿಕೊಡುತ್ತೇವೆ ಅಥವಾ ಕಾರ್ಖಾನೆಯಲ್ಲೇ ರಾತ್ರಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದೇವೆ. ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ.” ಹೀಗೆ ಪೋಷಕರಿಗೆ ಹೇಳಿದರು. ಸಿಐಟಿಯು ಸಂಘದ ವಿರುದ್ದ ಹಲವು ಸುಳ್ಳು ಆರೋಪಗಳನ್ನು ಹೊರಿಸಿದರು. ಸಿಐಟಿಯು ಜೊತೆ ಕೈಜೋಡಿಸಿದರೆ ನಿಮ್ಮ ಮಕ್ಕಳ ಭವಿಷ್ಯ ಹಾಳಾಗುತ್ತದೆ ಎಂದು ನಂಬಿಸಲು ಯತ್ನಿಸಿದರು. ಸರ್ಕಾರ ಮತ್ತು ಪೋಲೀಸ್ ಇಲಾಖೆಯ ಬಂಡವಾಳಶಾಹಿ ಪರ ನೀತಿಯಿಂದಾಗಿ, ಕೆಲವು ಕಾರ್ಖಾನೆ ಕಾರ್ಮಿಕರು ಎದುರಿಸಿದ್ದ ಸಂಕಷ್ಟಗಳಿಗೆಲ್ಲಾ, ಸಂಘವೇ ಕಾರಣ ಎಂದು ದೂರಿದರು. ಆದರೂ ಕಾರ್ಮಿಕರ ಹೋರಾಟವನ್ನು ತಡೆಯಲು ಅವರಿಂದ ಸಾದ್ಯವಾಗಲಿಲ್ಲ.
ಕೈ ಚೆಲ್ಲಿದ ಇಂಟಕ್;
ಇಲ್ಲಿನ ಸಂಘಕ್ಕೆ ಕಾನೂನು ಸಲಹೆಗಾರರಾಗಿದ್ದ INTUC ಮುಖಂಡರು, ಕಾರ್ಮಿಕರ ಮುಷ್ಕರ ಪ್ರಾರಂಭವಾಗುತ್ತಿದ್ದಂತೆ ಮಾಲೀಕರ ಜೊತೆ ಮಾತುಕತೆ ನಡೆಸಿದರು. ಕಾರ್ಮಿಕರ ಬೇಡಿಕೆಗೆ ಮಾಲೀಕ ವರ್ಗ ಮಣಿಯಲಾರದೆಂದು ಅರಿತ ಆ ಮುಖಂಡ ಮುಷ್ಕರ ವಾಪಸ್ ತೆಗೆದು ಕೆಲಸಕ್ಕೆ ಹೋಗುವಂತೆ ಕಾರ್ಮಿಕರ ಬಳಿ ಹೇಳಿದರು. ಈಗಾಗಲೇ ಆಡಳಿತ ವರ್ಗದಿಂದ ಸಾಕಷ್ಟು ಕಿರುಕುಳ ಅನುಭವಿಸಿದ್ದು, ಈಗ ಸೋತು ಒಳಹೋದರೆ ಖಂಡಿತ ನಮಗೆ ಉಳಿಗಾಲವಿಲ್ಲ. ಮುಖಂಡರೇ ಇಲ್ಲವೆಂದ ಮೇಲೆ ನಮ್ಮನ್ನ ಕೇಳುವವರಾರು? ನಾಳೆ ನಮಗೂ ಇಂತಹುದೇ ಗತಿ ಬರಬಹುದೆಂದು ಅರಿತ ಕಾರ್ಮಿಕರು ಇಂಟಕ್ ಮುಖಂಡರ ಮನವಿಗೆ ಒಪ್ಪಲಿಲ್ಲ. ಆ ಮುಖಂಡರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಹೊರಟು ಹೋದರು. ದಿಕ್ಕು ಕಾಣದ ಕಾರ್ಮಿಕರು, ಸ್ಥಳೀಯ ಶಾಸಕರ ಮೊರೆ ಹೋದರು. ಶಾಸಕರ ಮಗ ಮಾಲೀಕರೊಡನೆ ಮಾತುಕತೆಯ ನಾಟಕವಾಡಿ ಮುಷ್ಕರವನ್ನು ವಾಪಸ್ ಪಡೆದು ಕೆಲಸಕ್ಕೆ ಹಿಂತಿರುಗುವಂತೆ ಹೇಳಿದನು. ಕಾರ್ಮಿಕರು ಒಪ್ಪದಿದ್ದಾಗ ಬೆದರಿಸಿದನು. ಒಂದು ವೇಳೆ ನೀವು ಸಿಐಟಿಯು ಸಂಘಟನೆಯನ್ನು ತಂದರೆ ನಾನು ಬಿಡುವುದಿಲ್ಲವೆಂದು ಹೆದರಿಸಿದನು. ಕಾರ್ಮಿಕರು ಜನತಾದಳ(ಎಸ್) ಮುಖಂಡರೊಬ್ಬರನ್ನು ಕರೆತಂದರು. ಅವರದೂ ಅದೇ ಮಂತ್ರ. ಮೊದಲು ನೀವು ಕೆಲಸಕ್ಕೆ ಹೋಗಿ ನಂತರ ಮಾತನಾಡೋಣ ಎಂದರು. ಕಾರ್ಮಿಕರು ಒಪ್ಪಲಿಲ್ಲ. ಕನಕಪುರ ಕ್ಷೇತ್ರದ ವಿದಾನಸಭೆಯ ಉಪ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ, ರಾಜ್ಯ ಸಚಿವ ಡಿ.ಕೆ.ಶಿವಕುಮಾರ್ ಬಳಿ ಹೋದರೂ ಏನೂ ಪ್ರಯೋಜನವಾಗಲಿಲ್ಲ. ಇವರೆಲ್ಲರೂ ಮಾಲೀಕರ, ಬಂಡವಾಳಶಾಹಿಗಳ ಪರ ವಕಾಲತ್ತು ವಹಿಸುವ ಜನ. ಕಾರ್ಮಿಕರ ಹಿತಕ್ಕಿಂತ ಇವರಿಗೆ ಮಾಲೀಕರ ಹಿತವೇ ಮುಖ್ಯ ಎಂಬ ಸತ್ಯವನ್ನು ಅರಿತ ಕಾರ್ಮಿಕರು ಕಾರ್ಮಿಕ ವರ್ಗದ ಪರವಾಗಿ ಪ್ರಾಮಾಣಿಕವಾಗಿ ಹೋರಾಡುತ್ತಿರುವ ಸಿಐಟಿಯು ಸಂಘದ ನೇತೃತ್ವ ಬಯಸಿ ಬಂದರು. ಸೂರ್ಯನಾರಾಯಣ ರಾವ್ ನೇತೃತ್ವದಲ್ಲಿ ಹೋರಾಟ ಮುಂದುವರಿಯಿತು.
“ಹಾಸುಂಡು ಬೀಸಿ ಹೊಗೆದಂಗ”
“ಬಾಳೆಲೆಯ ಹಾಸುಂಡು ಬೀಸಿ ಹೊಗೆದಂಗ” ಈ ಮಾತು ಟೊಯೋಟಾ ಕಿರ್ಲೋಸ್ಕರ್ ಕಾರ್ಮಿಕರಿಗೆ ಅನ್ವಯಿಸುತ್ತದೆ. ಕಾರ್ಮಿಕರಿಂದ ನಿರಂತರ ದುಡಿಸಿ ಶಕ್ತಿ ಹೀನವಾಗಿ ‘ಅನ್ ಫಿಟ್’ (ಕೆಲಸಕ್ಕೆ ಯೋಗ್ಯವಲ್ಲ) ಎಂಬ ಸರ್ಟಿಪಿಕೆಟ್ ಕೊಟ್ಟು ಮನೆಗೆ ಕಳಿಸುವ ಕಾರ್ಮಿಕನ ಸ್ಥಿತಿ, ಊಟಕ್ಕೆ ಉಪಯೋಗಿಸಿದ ಬಾಳೆ ಎಲೆಯಂತಾಗಿದೆ. ಒಂದೇ ಸಮನೆ ಬಗ್ಗಿ ದುಡಿಯಬೇಕು. ನಿಶ್ಯಕ್ತಿಯಿದ್ದರೂ ಬಾರವಾದ ವಸ್ತುಗಳನ್ನು ಮೇಲೆತ್ತಲೇ ಬೇಕು. ಕಾಲು ನೋವಿದ್ದರೂ ಸರಿ, ಕಾಲಿಗೆ ಬಿಗಿಯಾದ ಪಟ್ಟಿ ಕಟ್ಟಿಕೊಂಡಾದರೂ ಗಾಲಿ ತಳ್ಳಲೇಬೇಕು. ಸೊಂಟ ನೋವಿರಲಿ, ಶಸ್ತ್ರಚಿಕೆತ್ಸೆಯೇ ಆಗಿರಲಿ ಸೊಂಟಕ್ಕೆ ಬೆಲ್ಟ್ ಹಾಕಿಯಾದರೂ ಕೆಲಸ ಮಾಡಲೇಬೇಕು. ಕೇವಲ 2 ವರ್ಷಗಳಲ್ಲಿ ಇನ್ನೂ ಖಾಯಂ ಆಗುವ ಮುನ್ನವೇ 15 ಕಾರ್ಮಿಕರು ಅನ್ ಫಿಟ್ ಆಗಿ ಮನೆಗೆ ಹೋಗಿದ್ದಾರೆ. ಹೀಗೆ ದುಡಿದರೆ ಉಳಿದ ಕಾರ್ಮಿಕರಿಗೂ ಅನ್ ಫಿಟ್ ಸರ್ಟಿಫಿಕೆಟ್ ತೆಗೆದುಕೊಳ್ಳುವ ಕಾಲ ದೂರವಿಲ್ಲ. ಖಾಲಿ ಜಾಗ ತುಂಬಲು ನಿರುದ್ಯೋಗಿಗಳ ಪಡೆಯೇ ಸಾಲುಗಟ್ಟಿ ನಿಂತಿರುವಾಗ ಮಾಲೀಕರಿಗೆ ಕೆಲಸಗಾರರ ಬಗ್ಗೆ ಚಿಂತೆ ಇಲ್ಲ. ಕಾರ್ಮಿಕರ ಬದುಕಂತೂ ಗಾಡಾಂಧಕಾರದಲ್ಲಿ ಮುಳುಗಿದೆ.
ನಿಮ್ಮ ಟಿಪ್ಪಣಿ ಬರೆಯಿರಿ