
ಭಾರತ ಒಕ್ಕೂಟ ಸರ್ಕಾರದ ಪ್ರಧಾನಿ ಪಟ್ಟ ಅಲಂಕಿಸಿದ ಮೋದಿ, ತಮ್ಮಅಧಿಕಾರಾವಧಿಯ 9ವರ್ಷಗಳಲ್ಲಿ 4.7 ಲಕ್ಷ ಕೋಟಿ ರೂ ಮೌಲ್ಯದ ಸಾರ್ವಜನಿಕ ಆಸ್ತಿಗಳನ್ನು ಮಾರಿದರು, ತಮ್ಮ ಅವಧಿಯಲ್ಲೇ ನೂರು ಲಕ್ಷ ಕೋಟಿ ರೂ. (ರೂ. 100 ಲಕ್ಷ ಕೋಟಿ ) ಸಾಲ ಮಾಡಿ, 2014ರ ವರೆಗೂ ರೂ. 55 ಲಕ್ಷ ಕೋಟಿ ಇದ್ದ ಒಕ್ಕೂಟ ಸರ್ಕಾರದ ಸಾಲವನ್ನು ರೂ. 155 ಲಕ್ಷ ಕೋಟಿಗೆ ಹೆಚ್ಚಿಸಿದರು. ಇದೂ ಸಾಲದು ಎಂಬಂತೆ, ಆಪತ್ತಿನ ಕಾಲಕ್ಕೆ ಕೂಡಿಟ್ಟಿದ್ದ ರಿಸರ್ವ್ ಬ್ಯಾಂಕಿನ ಮೀಸಲು ಹಣದ ಮೇಲೂ ಕಣ್ಣಿಟ್ಟು ರೂ. 1.76 ಲಕ್ಷ ಕೋಟಿಯನ್ನೂ ತೆಗೆದುಕೊಂಡರು. ಬ್ಯಾಂಕುಗಳಲ್ಲಿನ ದೊಡ್ಡ ಉದ್ಯಮಿಗಳ ಲಕ್ಷಾಂತರ ಕೋಟಿ ರೂಪಾಯಿ ಸಾಲ ಮನ್ನಾ ಮಾಡುತ್ತಾ, ಸಾರ್ವಜನಿಕರ ಆಸ್ತಿ ಮಾರುತ್ತಾ, ಸಾಲ ಮಾಡುತ್ತಾ, ಆಪತ್ತಿನ ಕಾಲಕ್ಕೆಂದು ಅದುವರೆಗೆ ಕೂಡಿಟ್ಟಿದ್ದ ಮೀಸಲು ಹಣಕ್ಕೂ ಕೈ ಹಾಕಿದ ಮೋದಿಯವರ 10 ವರ್ಷಗಳ ಆಡಳಿತದ ಕತೆಯಿದು.
‘ವಸೂಲಾಗದ ಸಾಲ (NPA)’ ಅಂತ ನಮ್ಮತ್ರ ದೊಡ್ಡ ಪಟ್ಟಿ ತರಬೇಡಿ. ಸಾಲ ವಸೂಲಿ ಮಾಡಿ, ಇಲ್ಲಾ ರೈಟ್ ಆಫ್ ಮಾಡಿ’ (Write off ಎಂದರೆ, ವಸೂಲಾಗದ ಸಾಲದ ಲೆಕ್ಕ ಬರೆಯುವ ಪುಸ್ತಕದಿಂದ ಅಳಿಸಿಹಾಕುವುದು) ಎನ್ನುತ್ತಾ ಅಂದಿನ ರಿಸರ್ವ್ ಬ್ಯಾಂಕ್ ಗೌವರ್ನರ್ ರಘುರಾಂ ರಾಜನ್ ರಾಷ್ಟ್ರೀಯ ಬ್ಯಾಂಕುಗಳ ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತಾರೆ.
ಇದಲ್ಲದೆ, ರಿಸರ್ವ್ ಬ್ಯಾಂಕಿನಲ್ಲಿರುವ ರೂ. 9 ಲಕ್ಷ ಕೋಟಿ ಮೀಸಲು ಹಣದಲ್ಲಿ(ಆಕಸ್ಮಿಕ ನಿಧಿ-contingency fund) ಮೂರನೇ ಒಂದು ಭಾಗ ಹಣವನ್ನು ಸರ್ಕಾರಕ್ಕೆ ವರ್ಗಾವಣೆ ಮಾಡಬೇಕು ಎಂಬ ಕೇಂದ್ರ ಸರ್ಕಾರದ ಸಲಹೆಗೆ ರಾಜನ್ ಒಪ್ಪಲಿಲ್ಲ. ರಾಜನ್ ಅವರ ನಂತರ ಸರ್ಕಾರ 2016ರ ಸೆಪ್ಟೆಂಬರ್ 4 ರಂದು ಉರ್ಜಿತ್ ಪಟೇಲರನ್ನು ರಿಸರ್ವ್ ಬ್ಯಾಂಕ್ ಗೌರ್ನರ್ ಹುದ್ದೆಗೆ ನೇಮಕ ಮಾಡುತ್ತಾರೆ.
ನೋಟು ರದ್ದತಿ
ಉರ್ಜಿತ್ ಪಟೇಲ್ ಅವರು ಗೌವರ್ನರ್ ಆದ ನಂತರ ಉದ್ಯಮಿಗಳಿಂದ ಸಾಲ ವಸೂಲಿ ಮಾಡುವ ಬದಲಾಗಿ ವಸೂಲಾಗದ ಸಾಲದ ಲೆಕ್ಕ ಪುಸ್ತಕದಿಂದ ಲಕ್ಷಾಂತರ ಕೋಟಿ ಸಾಲದ ಲೆಕ್ಕವನ್ನು ‘ರೈಟ್ ಆಫ್’ ಮಾಡುವ ಅಥವಾ ‘ಮನ್ನಾ’ ಮಾಡುವ ಕೆಲಸ ಮುಂದುವರಿಯುತ್ತದೆ. ಬ್ಯಾಂಕುಗಳು ದಿವಾಳಿಯತ್ತ ಸಾಗುತ್ತಿದ್ದಂತೆ ಅದನ್ನು ತಪ್ಪಿಸಲು, ನೋಟು ರದ್ದತಿ ಮೂಲಕ ಜನಸಾಮಾನ್ಯರ ಬಳಿ ಇದ್ದ ಹಣ ಬ್ಯಾಂಕುಗಳಿಗೆ ಬಂದು ಬೀಳುವಂತೆ ಮಾಡುತ್ತಾರೆ. ಆಳುವ ಬಂಡವಾಳಶಾಹಿ ವರ್ಗ ಮತ್ತು ಆರೆಸ್ಸೆಸ್, 2016ರ ನವೆಂಬರ್ 8ರಂದು ರಾತ್ರಿ 8 ಗಂಟೆಗೆ ಪ್ರಧಾನಿ ಮೋದಿ ಅವರ ಮೂಲಕ, ಐನೂರು ಮತ್ತು ಸಾವಿರ ಮುಖಬೆಲೆಯ ನೋಟುಗಳ ಅಮಾನ್ಯ ಮಾಡಿ ಘೋಷಣೆ ಮಾಡಿಸುತ್ತಾರೆ. ಹಣ ಬದಲಾವಣೆಗೂ ಅವಕಾಶ ಕೊಡದೆ, ಮದ್ಯರಾತ್ರಿಯಿಂದಲೇ ಈ ನೋಟುಗಳು ಮಾನ್ಯ ಕಳೆದುಕೊಳ್ಳುತ್ತವೆ. ಈ ವಿಷಯದಲ್ಲಿ ಅಂದು ರಿಸರ್ವ್ ಬ್ಯಾಂಕ್ ಗೌವರ್ನರ್ ಅವರನ್ನು ಪಕ್ಕಕ್ಕೆ ಸರಿಸಿ ತಾವೇ ರಿಸರ್ವ್ ಬ್ಯಾಂಕಿನ ನೀತಿ ನಿಲುವುಗಳನ್ನು ರೂಪಿಸತೊಡಗುತ್ತಾರೆ. ನೋಟು ರದ್ದತಿ ವಿಷಯದಲ್ಲಿ ಬಹಿರಂಗವಾಗಿ ಏನನ್ನೂ ಮಾತನಾಡದಂತೆ ತಿಂಗಳು ಕಾಲ ಗೌವರ್ನರ್ ಉರ್ಜಿತ್ ಪಟೇಲ್ ಅವರ ಬಾಯಿ ಮುಚ್ಚಿಸಲಾಗುತ್ತದೆ. ಉರ್ಜಿತ್ ಪಟೇಲ್ ಕೆಲ ಕಾಲ ಎಲ್ಲವನ್ನೂ ಸಹಿಸಿಕೊಂಡು ತಮ್ಮ ಹುದ್ದೆಯಲ್ಲಿ ಮುಂದುವರಿಯುತ್ತಾರೆ.
ಮೀಸಲು ಹಣದ ಮೇಲೆ ಕಣ್ಣು
ನೋಟು ರದ್ದತಿಯ ಕಾರ್ಯ ಮುಗಿದು, ಜನಸಾಮಾನ್ಯರ ಬಳಿ ಇದ್ದ ಹಣ ಬ್ಯಾಂಕುಗಳಿಗೆ ಹರಿದು ಬರುತ್ತದೆ. ಆ ನಂತರ ಮೋದಿ ಸರ್ಕಾರದ ದೃಷ್ಟಿ ರಿಸರ್ವ್ ಬ್ಯಾಂಕಿನಲ್ಲಿ ಇದ್ದ ರೂ. 9.59 ಲಕ್ಷ ಕೋಟಿ (ಜೂನ್ 2018ರಲ್ಲಿ ಇದ್ದಂತೆ) ಮೀಸಲು ಹಣ(CF)ದ ಮೇಲೆ ಬೀಳುತ್ತದೆ.
ಮೀಸಲು ಹಣದಲ್ಲಿ ಮೂರನೇ ಒಂದು ಭಾಗದಷ್ಟು ಹಣವನ್ನು (3 ಲಕ್ಷ ಕೋಟಿಗೂ ಹೆಚ್ಚು) ಕೇಂದ್ರ ಸರ್ಕಾರದ ಖಜಾನೆಗೆ ವರ್ಗಾವಣೆ ಮಾಡುವಂತೆ ರಿಸರ್ವ್ ಬ್ಯಾಂಕಿನ ಮೇಲೆ ಕೇಂದ್ರ ಸರ್ಕಾರ ಒತ್ತಡ ತರುತ್ತದೆ. ಇಂತಹ ಕ್ರಮ ರಿಸರ್ವ್ ಬ್ಯಾಂಕಿನ ಸ್ವಾಯತ್ತತೆಗೆ ದಕ್ಕೆ ತರುತ್ತದೆ ಎಂದು ಉರ್ಜಿತ್ ಪಟೇಲ್ ಹೇಳುವ ಮೂಲಕ, ಮೀಸಲು ಹಣದಲ್ಲಿನ ಒಂದು ಭಾಗವನ್ನು ಕೇಂದ್ರದ ಖಜಾನೆಗೆ ವರ್ಗಾವಣೆ ಮಾಡಲು ನಿರಾಕರಿಸುತ್ತಾರೆ. ಈ ಮೀಸಲು ನಿಧಿ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ನೆರವಿಗೆ ಬರುತ್ತದೆ, ಇದನ್ನು ಸರ್ಕಾರಕ್ಕೆ ವರ್ಗಾವಣೆ ಮಾಡುವುದು ಬೇಡ ಎಂದು ಕೆಲವು ವಿರೋಧ ಪಕ್ಷಗಳ ನಾಯಕರು ಮತ್ತು ಆರ್ಥಿಕ ತಜ್ಞರು ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಾರೆ. ಭಾರತದ ಮಾಜಿ ಮುಖ್ಯ ಆರ್ಥಿಕ ತಜ್ಞ ಪ್ರಣಬ್ ಸೇನ್ ಅವರು ‘ಆರ್‌ಬಿಐ ಅನ್ನು “ರಾಕ್-ಬಾಟಮ್” ಮಟ್ಟದಲ್ಲಿ ಇಡುವುದು ಒಳ್ಳೆಯದಲ್ಲ’ ಎನ್ನುತ್ತಾರೆ.
ಸರ್ಕಾರದ ಈ ಕ್ರಮಕ್ಕೆ ಸಮರ್ಥನೆ ಏನು?
ಇವರ ಎಚ್ಚರಿಕೆಗಳನ್ನು ಪರಿಗಣಿಸದ ಸರ್ಕಾರ, ‘ಹೆಚ್ಚುವರಿ ಮೀಸಲು ವರ್ಗಾವಣೆಯು ಕ್ಷೀಣಿಸುತ್ತಿರುವ ಆರ್ಥಿಕ ಬೆಳವಣಿಗೆಯನ್ನು ಸ್ಥಿರಗೊಳಿಸಲು ಸರ್ಕಾರಕ್ಕೆ ಒಂದಷ್ಟು ಆಯ್ಕೆಗಳನ್ನು ನೀಡುತ್ತದೆ’ ಎಂದು ಸಮರ್ಥಿಸಿಕೊಳ್ಳುತ್ತದೆ.
ಭಾರತೀಯ ರಿಸರ್ವ್ ಬ್ಯಾಂಕ್‌ನ ಮೀಸಲು ತುಂಬಾ ದೊಡ್ಡದಾಗಿದೆ, ಅಷ್ಟೊಂದು ಮೀಸಲು ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ವಾದಿಸುತ್ತದೆ. ಟೆಲಿಗ್ರಾಫ್‌ನಲ್ಲಿನ ವರದಿಯಂತೆ, ಭಾರತೀಯ ರಿಸರ್ವ್ ಬ್ಯಾಂಕ್ ನಿರ್ವಹಿಸುವ ಒಟ್ಟು ಆಸ್ತಿಯ ಶೇ. 28 ರ ಬಫರ್ ಸುಮಾರು ಶೇ. 14 ರ ಜಾಗತಿಕ ಮಾನದಂಡಕ್ಕಿಂತ ಹೆಚ್ಚಿದೆ ಎಂಬುದು ಸರ್ಕಾರದ ವಾದ.
2018 ರಲ್ಲಿ, ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯಂ ಅವರು ಭಾರತೀಯ ರಿಸರ್ವ್ ಬ್ಯಾಂಕ್ ವಿಶ್ವದ ಕೇಂದ್ರ ಬ್ಯಾಂಕುಗಳಲ್ಲಿ ಅತಿ ಹೆಚ್ಚು ಮೀಸಲುಗಳನ್ನು ಹೊಂದಿದೆ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಬಹುದಾದ ಹೆಚ್ಚುವರಿ ಬಂಡವಾಳವು ರೂ. 4.5 ಲಕ್ಷ ಕೋಟಿ ಮತ್ತು ರೂ 7 ಲಕ್ಷ ಕೋಟಿ ನಡುವೆ ಇದೆ ಎಂದು ವಾದಿಸಿದ್ದರು.
ಇನ್ನೊಂದು ಅಭಿಪ್ರಾಯದ ಪ್ರಕಾರ, ರಿಸರ್ವ್ ಬ್ಯಾಂಕ್ ಹೆಚ್ಚಿನ ಬಂಡವಾಳ ಮೀಸಲುಗಳನ್ನು ಹೊಂದಿದ್ದರೂ, ಇದರಲ್ಲಿ ಹೆಚ್ಚಿನವು ರೂಪಾಯಿ ಮೌಲ್ಯದ ಕುಸಿತದಿಂದ ಉದ್ಭವಿಸುವ ಕಾಲ್ಪನಿಕವಾಗಿದೆ. ಇದರ ನಿಜವಾದ ನಗದು ಮೀಸಲು ತುಂಬಾ ಹೆಚ್ಚಿಲ್ಲ. ಅಮರ್ತ್ಯ ಲಾಹಿರಿ, ಆರ್‌ಬಿಐ ಅನುದಾನಿತ ಸೆಂಟರ್ ಫಾರ್ ಅಡ್ವಾನ್ಸ್‌ಡ್ ಫೈನಾನ್ಶಿಯಲ್ ರಿಸರ್ಚ್ ಅಂಡ್ ಲರ್ನಿಂಗ್‌ನ ನಿರ್ದೇಶಕ ಮತ್ತು ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು 2018 ರಲ್ಲಿ ಆರ್‌ಬಿಐ ವಾಸ್ತವವಾಗಿ “ವಿಶ್ವದ ಅತ್ಯಂತ ಕಡಿಮೆ ಬಂಡವಾಳದ ಕೇಂದ್ರ ಬ್ಯಾಂಕ್‌ಗಳಲ್ಲಿ ಒಂದಾಗಿದೆ” ಎಂದು ಬರೆದಿದ್ದಾರೆ.
ಉರ್ಜಿತ್ ಪಟೇಲ್ ರಾಜಿನಾಮೆ
ಮೀಸಲು ವರ್ಗಾವಣೆ ಮತ್ತು ಆರ್ ಬಿ ಐ ನ ಆರ್ಥಿಕ ಬಂಡವಾಳದ ಚೌಕಟ್ಟಿನ ಕುರಿತು ಸಮಾಲೋಚನೆಗಳನ್ನು ಪ್ರಾರಂಭಿಸಲು ಸರ್ಕಾರದ ಒತ್ತಡ ಮತ್ತು ಸರ್ಕಾರದ ನಿಯಂತ್ರಣವು ಸಂಘರ್ಷಕ್ಕೆ ಕಾರಣವಾಗುತ್ತದೆ. ಸರ್ಕಾರದ ಈ ನಡೆ ಭಾರೀ ಆಕ್ರೋಶವನ್ನು ಸೃಷ್ಟಿಸಿತು. ಈ ಪರಿಸ್ಥಿತಿಯಲ್ಲಿ ಆರ್‌ಬಿಐ ತನ್ನ 2018ರ ನವೆಂಬರ್ 19 ರ ಸಭೆಯಲ್ಲಿ ಸರ್ಕಾರದೊಂದಿಗೆ ಸಮಾಲೋಚನೆಗಾಗಿ ತಜ್ಞರ ಸಮಿತಿಯನ್ನು ಸ್ಥಾಪಿಸಲು ಒಪ್ಪಿಕೊಂಡಿತು. ಆದರೆ, ಆರ್‌ಬಿಐನ ಮೀಸಲು ವಿಷಯಕ್ಕೆ ಸಂಬಂದಿಸಿದಂತೆ ಸರ್ಕಾರದ ಸಮರ್ಥನೆಯನ್ನು ಪಟೇಲ್ ಒಪ್ಪಲಿಲ್ಲ. ಸರ್ಕಾರದ ಕ್ರಮವು ಕೇಂದ್ರ ಬ್ಯಾಂಕ್‌ನ ರೇಟಿಂಗ್‌ಗಳನ್ನು ಕಡಿಮೆ ಮಾಡಲು ಕಾರಣವಾಗಬಹುದು ಎಂದು ಪಟೇಲ್ ಆತಂಕ ವ್ಯಕ್ತಪಡಿಸುತ್ತಾರೆ.
ರಿಸರ್ವ್ ಬ್ಯಾಂಕಿನ ನೀತಿ ನಿರ್ಧಾರ ಕೈಗೊಳ್ಳುವ ಸಮಿತಿಯಲ್ಲಿ ಮೋದಿ ಸರ್ಕಾರದ ಪರ ಇರುವ ಅಧಿಕಾರಿಗಳು ಬಹುಸಂಖ್ಯೆಯಲ್ಲಿ ಇರುವಂತೆ ನೋಡಿಕೊಳ್ಳುವ ಮೂಲಕ, ಸಭೆಯ ಬಹುಮತದ ತೀರ್ಮಾನದ ಜಾರಿಯ ಹೆಸರಿನಲ್ಲಿ ಮೀಸಲು ಹಣದ ಒಂದಷ್ಟು ಅಂಶವನ್ನು ಕೇಂದ್ರ ಸರ್ಕಾರದ ಖಜಾನೆಗೆ ವರ್ಗಾವಣೆ ಮಾಡುವ ಒತ್ತಡ ಹೆಚ್ಚಾಯಿತು. ಇದರಿಂದ ಬೇಸತ್ತ ಉರ್ಜಿತ್ ಪಟೇಲ್ 2018ರ ಡಿಸೆಂಬರ್ 10 ರಂದು ಗವರ್ನರ್ ಹುದ್ದೆಗೆ ರಾಜೀನಾಮೆ ನೀಡುತ್ತಾರೆ. ನಂತರ, 15ನೇ ಹಣಕಾಸು ಆಯೋಗದ ಸದಸ್ಯರಾಗಿದ್ದ ಶಕ್ತಿಕಾಂತ ದಾಸ್ ಅವರನ್ನು ಆರ್ಬಿಐ ಗವರ್ನರ್ ಆಗಿ ಸರ್ಕಾರ ನೇಮಿಸುತ್ತದೆ.
ಬಿಮಲ್ ಜಲನ್ ನೇತೃತ್ವದ ತಜ್ಞರ ಸಮಿತಿ ರಚನೆ
ಇದಾದ ಎರಡು ವಾರದ ನಂತರ, ಭಾರತೀಯ ರಿಸರ್ವ್ ಬ್ಯಾಂಕ್ 2018ರ ಡಿಸೆಂಬರ್ 27ರಂದು ಮಾಜಿ ಆರ್‌ಬಿಐ ಗವರ್ನರ್ ಬಿಮಲ್ ಜಲನ್ ನೇತೃತ್ವದ ತಜ್ಞರ ಸಮಿತಿಯನ್ನು ರಚಿಸಿ, ಭಾರತೀಯ ರಿಸರ್ವ್ ಬ್ಯಾಂಕ್ ಹೊಂದಿರಬೇಕಾದ ಮೀಸಲು ಮೊತ್ತವನ್ನು ನಿರ್ಣಯಿಸಲು ಸೂಚಿಸುತ್ತದೆ. ಮೂರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸುತ್ತದೆ.
ಜಲನ್ ಅಡಿಯಲ್ಲಿನ ತಜ್ಞರ ಸಮಿತಿಯಲ್ಲಿ ಮಾಜಿ ಆರ್‌ಬಿಐ ಡೆಪ್ಯುಟಿ ಗವರ್ನರ್ ರಾಕೇಶ್ ಮೋಹನ್ (ಉಪಾಧ್ಯಕ್ಷರು), ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರ ಗಾರ್ಗ್, ಆರ್‌ಬಿಐ ಕೇಂದ್ರ ಮಂಡಳಿಯ ಸದಸ್ಯರಾದ ಭರತ್ ದೋಷಿ ಮತ್ತು ಸುಧೀರ್ ಮಂಕಡ್ ಮತ್ತು ಆರ್‌ಬಿಐ ಡೆಪ್ಯುಟಿ ಗವರ್ನರ್ ಎನ್‌ಎಸ್ ವಿಶ್ವನಾಥನ್ ಅವರು ಸದಸ್ಯರಾಗಿರುತ್ತಾರೆ.
ಡೆಪ್ಯೂಟಿ ಗೌರ್ನರ್ ವಿರಲ್ ಆಚಾರ್ಯ ರಾಜಿನಾಮೆ
“RBI ನ ಸ್ವಾತಂತ್ರ್ಯವನ್ನು ಕೇಂದ್ರ ಸರ್ಕಾರ ಗೌರವಿಸದೇ ಇದ್ದರೆ, ಇಂದಲ್ಲ ನಾಳೆ ಹಣಕಾಸು ಮಾರುಕಟ್ಟೆಯ ಆಕ್ರೋಶಕ್ಕೆ ಗುರಿಯಾಗಬೇಕಾದೀತು” ಎಂದು ರಿಸರ್ವ್ ಬ್ಯಾಂಕಿನ ಡೆಪ್ಯೂಟಿ ಗೌರ್ನರ್ ವಿರಲ್ ಆಚಾರ್ಯ ಎಚ್ಚರಿಸುತ್ತಾರೆ. ಇಷ್ಟಾದರೂ ಕೇಂದ್ರ ಸರ್ಕಾರ ತನ್ನ ನಿಲುವು ಬದಲಾಯಿಸುವುದಿಲ್ಲ. ಇದೆಲ್ಲವನ್ನೂ ನೋಡಿ ಸಹಿಸಿಕೊಳ್ಳಲು ಆಗದೆ, ಸರ್ಕಾರದ ಒತ್ತಡ ಸಹಿಸಿಕೊಳ್ಳಲಾಗದೇ, ವಿರಲ್ ಆಚಾರ್ಯ ಅವರು ತಮ್ಮಅಧಿಕಾರದಿಯ 6 ತಿಂಗಳ ಮೊದಲೇ, ವೈಯಕ್ತಿಕ ಕಾರಣ ನೀಡಿ 2019 ರ ಜುಲೈ 23ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಾರೆ.
ರಿಸರ್ವ್ ಬ್ಯಾಂಕಿನ ಸ್ವಾಯತ್ತತೆಯ ಪರ ದ್ವನಿ ಎತ್ತಿದ ಅಧಿಕಾರಿಗಳು ಒಬ್ಬೊಬ್ಬರೇ ನಿರ್ಗಮಿಸುತ್ತಾರೆ. ಮೀಸಲು ಹಣ ದೋಚಲು ಮೋದಿ ಸರ್ಕಾರಕ್ಕೆ ಇದ್ದ ಅಡೆತಡೆಗಳು ಕಡಿಮೆಯಾಗುತ್ತವೆ. ರಿಸರ್ವ್ ಬ್ಯಾಂಕಿನ ಮೀಸಲು ಹಣದಲ್ಲಿ 1.76 ಲಕ್ಷ ಕೋಟಿಯನ್ನು ಕಸಿದು ಕೇಂದ್ರದ ಬಜೆಟ್ ಖಾತೆಗೆ ಸೇರಿಸುತ್ತಾರೆ.
ಏನಿದು ರಿಸರ್ವ್ ಬ್ಯಾಂಕ್ ಮೀಸಲು ನಿಧಿ?
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮೀಸಲು ಮುಖ್ಯವಾಗಿ ಎರಡು ಭಾಗಗಳಿಂದ ಮಾಡಲ್ಪಟ್ಟಿದೆ. ಒಂದು ಮರುಮೌಲ್ಯಮಾಪನ ಖಾತೆ (ಬುಲಿಯನ್ ಮೀಸಲು ಮತ್ತು ಕರೆನ್ಸಿ ವಿನಿಮಯ ದರಗಳಲ್ಲಿನ ಲಾಭಗಳಿಂದ ಬರುತ್ತದೆ). ಇನ್ನೊಂದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತುರ್ತು ಹೊಂದಾಣಿಕೆಗಳನ್ನು ಮಾಡಲು, ಸಂಸ್ಥೆಯ ಹೂಡಿಕೆಗಳಲ್ಲಿನ ನಷ್ಟವನ್ನು ತಡೆಗಟ್ಟಲು ಅಥವಾ ಭಾರತೀಯ ಕರೆನ್ಸಿ ಮೌಲ್ಯವನ್ನು ಹೆಚ್ಚಿಸಲು ಬಳಸುವ ಆಕಸ್ಮಿಕ ನಿಧಿಯಾಗಿದೆ.
ರಿಸರ್ವ್ ಬ್ಯಾಂಕ್ ಮೀಸಲುಗಳಲ್ಲಿ ಹೆಚ್ಚಿನವು ಚಿನ್ನದ ನಿಕ್ಷೇಪಗಳು ಮತ್ತು ವಿದೇಶಿ ವಿನಿಮಯ ಸ್ವತ್ತುಗಳ ಮೂಲಕ ನಿರ್ವಹಿಸಲ್ಪಡುತ್ತವೆ, ಇದು ಒಟ್ಟಾಗಿ ಕರೆನ್ಸಿ ಮತ್ತು ಚಿನ್ನದ ಮರುಮೌಲ್ಯಮಾಪನ ಮೀಸಲು ಖಾತೆಯನ್ನು ರೂಪಿಸುತ್ತದೆ. ಆರ್‌ಬಿಐ ಆಕಸ್ಮಿಕ ನಿಧಿ (ಸಿಎಫ್) ಅನ್ನು ಸಹ ಸಂಗ್ರಹಿಸುತ್ತದೆ, ಇದು ಅನಿರೀಕ್ಷಿತ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಮತ್ತೊಂದು ನಿಬಂಧನೆಯಾಗಿದೆ.
RBI ಹೊಂದಿರುವ ಸೆಕ್ಯುರಿಟಿಗಳ ಮೇಲಿನ ಬಡ್ಡಿಯ ಮೂಲಕ ಹೆಚ್ಚುವರಿ ಆದಾಯ ಬರುತ್ತದೆ. ಇದರಿಂದ ಬಂದ ಆದಾಯವನ್ನು ತನ್ನ ಸ್ವಂತ ವೆಚ್ಚಗಳನ್ನು ಪೂರೈಸಿದ ನಂತರ ಸರ್ಕಾರಕ್ಕೆ ವರ್ಗಾಯಿಸಲಾಗುತ್ತದೆ. ರಿಸರ್ವ್ ಬ್ಯಾಂಕ್ ತನ್ನ ಗಳಿಕೆಯ ಒಂದು ಭಾಗವನ್ನು ಆಕಸ್ಮಿಕ ನಿಧಿ (CF) ಗೆ ವರ್ಗಾಯಿಸುತ್ತದೆ.
ನಿಮ್ಮ ಟಿಪ್ಪಣಿ ಬರೆಯಿರಿ