ಸರ್ಕಾರಕ್ಕೆ ವರ್ಷವೊಂದರಲ್ಲಿ ಲಕ್ಷ ಕೋಟಿ ರೂ. ನಷ್ಟ
ಮೋದಿ ಸರ್ಕಾರದ 10 ವರ್ಷಗಳ ಸಾಧನೆಗಳಲ್ಲಿ ಉದ್ಯಮಿಗಳ ಸಂಪತ್ತು ವೃದ್ಧಿಗೆ ಸಹಕರಿಸುತ್ತಿರುವುದು ಒಂದು ಬಹುದೊಡ್ಡ ಸಾಧನೆ. ಅದರಲ್ಲೊಂದು ಸಾಧನೆ ಕಾರ್ಪೊರೇಟ್ ತೆರಿಗೆ ಕಡಿತ. ಶೇ. 30 ರಷ್ಟಿದ್ದ ಕಾರ್ಪೊರೇಟ್ ತೆರಿಗೆಯನ್ನು ಶೇ. 22ಕ್ಕೆ ಕಡಿತ ಮಾಡುವ ಮೂಲಕ ಮೋದಿ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಸರ್ಕಾರಕ್ಕೆ ಬರಬೇಕಾದ ಆದಾಯದಲ್ಲಿ ಅಂದಾಜು 4 ಲಕ್ಷ ಕೋಟಿ ರೂ. ಕಳೆದುಕೊಂಡಿದೆ. ಇದರರ್ಥ, ಇಷ್ಟು ದೊಡ್ಡ ಮೊತ್ತದ ಸಂಪತ್ತನ್ನು ಉದ್ಯಮಿಗಳ ಸಂಪತ್ತಿನ ವೃದ್ಧಿಗೆ ಸರ್ಕಾರ ಕೊಡುಗೆ ನೀಡಿದೆ. ಮತ್ತೊಂದೆಡೆ, ತನ್ನ ಬಜೆಟ್ ಕೊರತೆ ತುಂಬಿಕೊಳ್ಳಲು ಜನಸಾಮಾನ್ಯರು ಬಳಕೆಮಾಡುವ ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ ಹೆಚ್ಚಳ, ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗೆ ನೀಡುವ ಅನುದಾನ ಕಡಿತ, ಸಾರ್ವಜನಿಕ ಉದ್ಯಮಗಳಿಂದ ತನ್ನ ಪಾಲಿನ ಮಾರಾಟ, ಮತ್ತಷ್ಟು ಮಗದಷ್ಟು ಸಾಲ, ಸಾಲ, ಸಾಲ…
ಸರ್ಕಾರ (ಕಾರ್ಯಾಂಗ) ಎಂದರೆ ಆಳುವ ವರ್ಗದ ವ್ಯವಹಾರಗಳನ್ನು ನಿರ್ವಹಿಸುವ ಸಮಿತಿಯಲ್ಲದೆ ಬೇರೇನೂ ಅಲ್ಲ ಎಂಬ ಮಾತಿದೆ. ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷದ ಒಕ್ಕೂಟ ಸರ್ಕಾರವು ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಭಾರತದ ಬಲಿಷ್ಠ ಕಾರ್ಪೊರೇಟ್ ವಲಯದ ಅನುಕೂಲಕ್ಕಾಗಿ ಕೆಲಸ ಮಾಡಲು ಅದು ಮುಕ್ತ ಮತ್ತು ಲಜ್ಜೆಗೆಟ್ಟ ಮಾರ್ಗವನ್ನು ಅನುಸರಿಸುತ್ತಿದೆ.
ಸೆಪ್ಟೆಂಬರ್ 20, 2019 ರಂದು, ಮೋದಿಯವರ ಹೂಸ್ಟನ್ ಕಾರ್ಯಕ್ರಮಕ್ಕೆ 40 ಗಂಟೆಗಳ ಮೊದಲು, ಸರ್ಕಾರವು ಬೃಹತ್ ತೆರಿಗೆ ದರ ಕಡಿತವನ್ನು ಘೋಷಿಸಿತು. ಸೆಪ್ಟೆಂಬರ್ 2019 ರಲ್ಲಿ ಅಸ್ತಿತ್ವದಲ್ಲಿದ್ದ ಕಂಪನಿಗಳಿಗೆ ಮೂಲ ಕಾರ್ಪೊರೇಟ್ ತೆರಿಗೆಯನ್ನು 30 ಪ್ರತಿಶತದಿಂದ 22 ಪ್ರತಿಶತಕ್ಕೆ ಕಡಿತಗೊಳಿಸಿತು ಮತ್ತು ಅಕ್ಟೋಬರ್ 1, 2019 ರ ನಂತರ ಸಂಯೋಜಿತವಾದ ಹೊಸ ಉತ್ಪಾದನಾ ಸಂಸ್ಥೆಗಳಿಗೆ, ಕಾರ್ಪೊರೇಟ್ ತೆರಿಗೆಯನ್ನು ಶೇ. 25 ರಿಂದ ಶೇ. 15 ಕ್ಕೆ ಇಳಿಸಲಾಯಿತು.
ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನಸಾಮಾನ್ಯರು ಬಳಕೆ ಮಾಡುವ ಸರಕು ಮತ್ತು ಸೇವೆಗಳ ಮೇಲಿನ ತೆರಿಗೆಯನ್ನು ವಿಪರೀತವಾಗಿ ಹೆಚ್ಚಳ ಮಾಡಿದೆ ಎಂದು ಯಾರಾದರೂ ಹೇಳಿದರೆ, ಮೋದಿ ಅಭಿಮಾನಿಗಳು ತಟ್ಟನೆ ಕೊಡುವ ಉತ್ತರ ‘ದೇಶ ಅಭಿವೃದ್ಧಿಯಾಗಬೇಕಾದರೆ ತೆರಿಗೆ ಹೆಚ್ಚಳ ಮಾಡಲೇಬೇಕು’ ಎನ್ನುತ್ತಾರೆ. ಹಾಗಾದರೆ, ಕಾರ್ಪೊರೇಟ್ ತೆರಿಗೆ ಕಡಿತ ಮಾಡಿದ್ದೇಕೆ? ಎಂದು ಪ್ರಶ್ನಿಸಿದರೆ, ಅದು ಹೂಡಿಕೆದಾರರಿಗೆ ಪ್ರೋತ್ಸಾಹ ನೀಡಲು ಮತ್ತು ಉದ್ಯಮಗಳ ಬೆಳವಣಿಗೆಗೆ ಕಾರ್ಪೊರೇಟ್ ತೆರಿಗೆ ಕಡಿತ ಅವಶ್ಯಕ ಎನ್ನುತ್ತಾರೆ!!
ವಿಪರ್ಯಾಸವೆಂದರೆ, ಸರ್ಕಾರವು ಕಾರ್ಪೊರೇಟ್ ತೆರಿಗೆ ಕಡಿತ ಕೆಲವು ರೀತಿಯ ಉದ್ಯೋಗವನ್ನು ಹೆಚ್ಚಿಸುವ ಹೆಜ್ಜೆ ಎಂದು ಬಿಂಬಿಸಲು ಪ್ರಯತ್ನಿಸಿತು. ತೆರಿಗೆ ರಿಯಾಯಿತಿಗಳು ಕಾರ್ಪೊರೇಟ್‌ಗಳ ಹೂಡಿಕೆಯನ್ನು ಹೆಚ್ಚಿಸಲು ಕಾರಣವಾಗುತ್ತವೆ ಮತ್ತು ಪ್ರತಿಯಾಗಿ ಹೆಚ್ಚಿನ ಉದ್ಯೋಗಗಳ ಸೃಷ್ಟಿಗೆ ಕಾರಣವಾಗುತ್ತವೆ ಎಂಬುದು ಅವರ ವಿಲಕ್ಷಣ ತರ್ಕವಾಗಿತ್ತು. ಬೆಳವಣಿಗೆಗಳು ತೋರಿಸಿದಂತೆ, ಅಂತಹ ಯಾವದೂ ಸಂಭವಿಸಿಲ್ಲ. 2019 ರಲ್ಲಿ ಯಾವುದೇ ಉದ್ಯೋಗದ ಬೆಳವಣಿಗೆ ಇರಲಿಲ್ಲ, ಮತ್ತು ನಂತರ, 2020 ರಲ್ಲಿ, ಸಾಂಕ್ರಾಮಿಕ ರೋಗವು ಭಾರತವನ್ನು ನಲುಗಿಸಿತು. ಇದು ಹಲವಾರು ತಿಂಗಳುಗಳವರೆಗೆ ವಿವಿಧ ರೂಪಗಳಲ್ಲಿ ನಡೆದು, ಯಾವುದೇ ಪೂರ್ವ ಸಿದ್ದತೆ ಇಲ್ಲದೆ, ಅವೈಜ್ಞಾನಿಕವಾಗಿ ಮಾಡಿದ ಲಾಕ್‌ಡೌನ್ ಘೋಷಣೆ ದೇಶದ ಆರ್ಥಿಕತೆಯನ್ನು ಮತ್ತಷ್ಟು ನಾಶಪಡಿಸಲು ಕಾರಣವಾಯಿತು.
ದೇಶ ಸಂಕಷ್ಟದಲ್ಲಿದ್ದಾಗ ಉದ್ಯಮಿಗಳ ಸಂಪತ್ತು ಹೆಚ್ಚಳ!!
ವಿಚಿತ್ರವೆಂದರೆ, ಸಾಂಕ್ರಾಮಿಕ ಮತ್ತು ಲಾಕ್‌ಡೌನ್‌ಗಳ ವಿನಾಶದಿಂದ ಕಾರ್ಪೊರೇಟ್ ವಲಯವು ಉತ್ತಮವಾಗಿ ಹೊರಹೊಮ್ಮಿದವು!! ಆ ಅವಧಿಯಲ್ಲಿ ಅವುಗಳ ಸಂಪತ್ತು ವೇಗವಾಗಿ ವೃದ್ಧಿಗೊಂಡಿತು. 2020 ರ ಅಂತ್ಯದ ವೇಳೆಗೆ ದೊಡ್ಡ ಕಂಪನಿಗಳ ಲಾಭವು ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿತು. ಇದು ಕಾರ್ಪೊರೇಟ್ ತೆರಿಗೆ ದರಗಳಲ್ಲಿನ ಭಾರೀ ಕಡಿತದಿಂದ ಮಾತ್ರವಲ್ಲದೆ ಸಾಂಕ್ರಾಮಿಕ ಸಮಯದಲ್ಲಿ ಕಾರ್ಮಿಕರ ವೆಚ್ಚವನ್ನು ಉಳಿಸಲು, ಕಾರ್ಮಿಕರನ್ನು ಹಿಮ್ಮೆಟ್ಟಿಸಲು ಅಥವಾ ವಜಾಗೊಳಿಸಲು ಉದ್ಯಮಕ್ಕೆ ಸರ್ಕಾರದಿಂದ ನೀಡಲಾದ ‘ಮುಕ್ತ ಅವಕಾಶಗಳು’ ಸಹಾಯ ಮಾಡಿತು..
ಕಡಿಮೆ ತೆರಿಗೆ ದರವು ಹೊಸ ಹೂಡಿಕೆಗಳನ್ನು, ವಿಶೇಷವಾಗಿ ಉತ್ಪಾದನೆಯಲ್ಲಿ ಹೂಡಿಕೆಗಳನ್ನು ಆಕರ್ಷಿಸುತ್ತದೆ, ಮತ್ತು ಇದು ದೇಶದ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ಆಡಳಿತ ನಡೆಸುವವರು ವಾದಿಸುತ್ತಾರೆ. ಅತಿ ಶ್ರೀಮಂತರು ಮತ್ತು ಕಾರ್ಪೊರೇಟ್ ವಲಯಕ್ಕೆ ಇಂತಹ ರಿಯಾಯಿತಿಗಳು ಇನ್ನಷ್ಟು ಅಸಮಾನತೆಯ ಹೆಚ್ಚಳಕ್ಕೆ ಕಾರಣವಾಗಿವೆ.
2019-20ರಿಂದ ಜಾರಿಯಾದ ಮತ್ತು ಉದ್ಯಮಿಗಳಿಗೆ ಲಾಭ ಮಾಡಿಕೊಡುವ ಕಾರ್ಪೊರೇಟ್ ತೆರಿಗೆ ದರಗಳಲ್ಲಿನ ಕಡಿತದಿಂದಾಗಿ 2019-20 ಮತ್ತು 2020-21ರಲ್ಲಿ ಸರ್ಕಾರವು 1.84 ಲಕ್ಷ ಕೋಟಿ ರೂಪಾಯಿಗಳ ಆದಾಯ ನಷ್ಟವನ್ನು ಅನುಭವಿಸಿದೆ ಎಂದು ಸಂಸದೀಯ ಸಮಿತಿಯ ವರದಿಯೊಂದರಿಂದ ತಿಳಿಯುತ್ತದೆ. ಕಾರ್ಪೊರೇಟ್ ತೆರಿಗೆ ದರವನ್ನು ಕಡಿಮೆ ಮಾಡಿದ ಮೊದಲ ವರ್ಷದಲ್ಲಿ, ಅಂದರೆ 2019-20 ರಲ್ಲಿ ಒಟ್ಟಾರೆ ನಷ್ಟವು 86,835 ಕೋಟಿ ರೂ.ಗಳಷ್ಟಿತ್ತು, ನಂತರ 2020-21ರಲ್ಲಿ 96,400 ಕೋಟಿ ರೂ. ನಷ್ಟವಾಗಿದೆ ಎಂದು ವರದಿ ಹೇಳುತ್ತದೆ. ನಂತರದ 2021-22 ಮತ್ತು 2022-23ರ ಎರಡು ಆರ್ಥಿಕ ವರ್ಷಗಳಲ್ಲಿ ತಲಾ ಅಂದಾಜು ಒಂದು ಲಕ್ಷ ಕೋಟಿ ರೂ. ನಷ್ಟ ಸೇರಿಸಿದರೆ, ನಾಲ್ಕು ಆರ್ಥಿಕ ವರ್ಷಗಳಲ್ಲಿ ಸರ್ಕಾರಕ್ಕೆ ಸರಿಸುಮಾರು 4 ಲಕ್ಷ ಕೋಟಿ ರೂಗಳ ನಷ್ಟವಾಗಿದೆ.
ಕಾರ್ಪೊರೇಟ್ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಂತೆ!!
ಕಾರ್ಪೊರೇಟ್ ತೆರಿಗೆಯನ್ನು ಶೇ. 8 ರಷ್ಟು ಕಡಿತ ಮಾಡಿರುವುದರಿಂದ ಸರ್ಕಾರಕ್ಕೆ ಈ ತೆರಿಗೆಯಿಂದ ಬರುವ ಆದಾಯ ಹೆಚ್ಚಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತದೆ. ಇದಕ್ಕೆ ಅವರು ನೀಡಿದ ಕಾರಣವೆಂದರೆ, 2021-22ರಲ್ಲಿ 7.12 ಲಕ್ಷ ಕೋಟಿ ರೂ. ಕಾರ್ಪೊರೇಟ್ ತೆರಿಗೆ ಸಂಗ್ರಹವಾಗಿದೆ. 2018-19 ಕ್ಕೆ ಹೋಲಿಸಿದರೆ ಹೆಚ್ಚಿನ ತೆರಿಗೆ ಬಂದಿದೆ ಎಂಬುದು. ಶೇ. 8ರಷ್ಟು ತೆರಿಗೆ ಕಡಿತ ಮಾಡದೇ ಇದ್ದರೆ, ಮತ್ತಷ್ಟು ತೆರಿಗೆ ಸಂಗ್ರಹವಾಗುತ್ತಿತ್ತು ಎಂಬುದನ್ನು ಇವರು ಮರೆಮಾಚುತ್ತಾರೆ.
2014-2015ರಲ್ಲಿ ಮೋದಿ ಅಧಿಕಾರಕ್ಕೆ ಬಂದಾಗ ಆದಾಯ ತೆರಿಗೆ ಸಂಗ್ರಹವು ರೂ. 2.6 ಲಕ್ಷ ಕೋಟಿಯಿಂದ 2021-22 ರಲ್ಲಿ ರೂ. 5.6 ಲಕ್ಷ ಕೋಟಿಗೆ ಏರಿಕೆಯಾಗಿದೆ – ಇದು ಶೇ. 117 ರಷ್ಟು ಏರಿಕೆಯಾಗಿದೆ. ಅದೇ ಅವಧಿಯಲ್ಲಿ, ಕಾರ್ಪೊರೇಟ್‌ಗಳ ಮೇಲೆ ವಿಧಿಸಲಾದ ಕಾರ್ಪೊರೇಷನ್ ತೆರಿಗೆಯು ಕೇವಲ ಶೇ. 28 ರಷ್ಟು ಅಂದರೆ, ರೂ. 4.3 ಲಕ್ಷ ಕೋಟಿಯಿಂದ ರೂ. 5.5 ಲಕ್ಷ ಕೋಟಿಗೆ ಹೆಚ್ಚಾಗಿದೆ,.
ಒಟ್ಟು ತೆರಿಗೆ ಆದಾಯದಲ್ಲಿ ಕಾರ್ಪೊರೇಟ್ ತೆರಿಗೆಯ ಪಾಲು 2014-15 ರಲ್ಲಿ ಶೇ. 34.5 ರಿಂದ 2021-22 ರಲ್ಲಿ ಶೇ. 24.7 ಕ್ಕೆ ಕುಸಿಯಿತು. ಅದೇ ಅವಧಿಯಲ್ಲಿ ಕಸ್ಟಮ್ಸ್ ಆದಾಯವು ಶೇ. 15 ರಿಂದ ಶೇ. 6 ಕ್ಕೆ ಇನ್ನಷ್ಟು ತೀವ್ರವಾಗಿ ಕುಸಿಯಿತು. ಆದರೆ ಆದಾಯ ತೆರಿಗೆಯಿಂದ ಬಂದ ಆದಾಯ ಶೇ. 20.8ರಿಂದ ಶೇ. 25.3ಕ್ಕೆ ಏರಿಕೆಯಾಗಿದೆ. (ಚಾರ್ಟ್ ನೋಡಿ)
ಅದೇ ಅವಧಿಯಲ್ಲಿ, ಒಟ್ಟು ತೆರಿಗೆ ಆದಾಯವು ಶೇ. 78 ರಷ್ಟು ಹೆಚ್ಚಾಗಿದೆ, ಇದು ಕಾರ್ಪೊರೇಟ್ ತೆರಿಗೆ ಮತ್ತು ಆದಾಯ ತೆರಿಗೆ ಬೆಳವಣಿಗೆಯ ದರಗಳಲ್ಲಿನ ಹೆಚ್ಚಿನ ಪ್ರಮಾಣದ ವ್ಯತ್ಯಾಸವನ್ನು ಸ್ಪಷ್ಟವಾಗಿ ತೋರುತ್ತದೆ.
ಸಾಲದ ಪಾಲು ಹೆಚ್ಚಳ
ಹೀಗೆ ತೆರಿಗೆ ಕಡಿತದಿಂದ ಉಂಟಾಗುವ ಕೊರತೆ ತುಂಬಿಕೊಳ್ಳಲು ಸರ್ಕಾರ ಜನಸಾಮಾನ್ಯರ ಮೇಲಿನ ತೆರಿಗೆ ಹೆಚ್ಚಳ ಮಾಡತೊಡಗುತ್ತದೆ. ಬಹುತೇಕ ಸರಕು ಮತ್ತು ಸೇವೆಗಳ ಮೇಲೆ ಜಿಎಸ್ ಟಿ ವಿಧಿಸುವುದು, ಈ ತೆರಿಗೆಯನ್ನು ಹಾಗಾಗ್ಗೆ ಹೆಚ್ಚಳ ಮಾಡುವುದು, ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬ್ಕಾರಿ ಸುಂಕ ಹೆಚ್ಚಳ ಮಾಡುವುದರ ಮೂಲಕ ಆದಾಯದ ಕೊರತೆ ತುಂಬಿಕೊಳ್ಳಲು ಮುಂದಾಗುತ್ತದೆ.
ಸಾಲದೆಂಬಂತೆ, ಮೋದಿ ಸರ್ಕಾರವು ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಮೇಲಿನ ಅಬಕಾರಿ ಸುಂಕವನ್ನು ಎಷ್ಟು ಹೆಚ್ಚಿಸಿದೆ ಎಂದರೆ, ಇದರಿಂದ ಅದರ ಆದಾಯವು 2014-15 ರಲ್ಲಿ ಸುಮಾರು ರೂ. 99,000 ಕೋಟಿಗಳಿಂದ 2020-21 ರಲ್ಲಿ ರೂ. 3.73 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ. ಏಳು ವರ್ಷಗಳ ಹಿಂದಿನ ಆದಾಯಕ್ಕಿಂತ ಸುಮಾರು ಶೇ. 277 ಹೆಚ್ಚಳ! ಪರಿಣಾಮವಾಗಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ವಿಪರೀತವಾಗಿ ಏರಿಕೆಯಾಗಿದೆ. ಸರಕಾರ ನೀಡುತ್ತಿದ್ದ ಸಬ್ಸಿಡಿಯನ್ನು 2019ರಲ್ಲಿ ನಿಲ್ಲಿಸಿದ್ದರೂ ಅಡುಗೆ ಅನಿಲ ಬೆಲೆ ಎರಡೂವರೆ ಪಟ್ಟು ಏರಿಕೆಯಾಗಿದೆ.
ಕಾರ್ಪೊರೇಟ್ ತೆರಿಗೆ ಕಡಿತಕ್ಕೂ ಮುನ್ನ ಅಂದರೆ, 2018-19 ರಲ್ಲಿ ಸರ್ಕಾರದ ಒಟ್ಟು ಆದಾಯದಲ್ಲಿನ ಕಾರ್ಪೊರೇಟ್ ತೆರಿಗೆಯ ಪಾಲು ಶೇ. 21 ರಷ್ಟಿತ್ತು. ಅದು 2022-23 ರಲ್ಲಿ ಶೇ. 15 ಕ್ಕೆ ಕುಸಿದಿದೆ. 2018-19 ರಲ್ಲಿ ಕೊರತೆ ತುಂಬಿಕೊಳ್ಳಲು ಒಟ್ಟು ಆದಾಯದ ಶೇ. 20 ರಷ್ಟನ್ನು ಸಾಲ ಮಾಡುವ ಮೂಲಕ ತುಂಬಿಕೊಂಡಿದ್ದರೆ, 2022-23 ರಲ್ಲಿ ಸಾಲದ ಪ್ರಮಾಣ ಶೇ. 35.
ಹೂಡಿಕೆಗಳು ನಿಧಾನಗೊಂಡಿರುವುದೇಕೆ?
ದೇಶದಲ್ಲಿ ಹೂಡಿಕೆಗಳು ನಿಧಾನಗೊಂಡಿರುವುದು ಕಾರ್ಪೊರೇಟ್ ತೆರಿಗೆ ದರಗಳ ಕಾರಣದಿಂದಲ್ಲ, ಉತ್ಪನ್ನಗಳಿಗೆ ಬೇಡಿಕೆಯ ಕೊರತೆಯಿಂದಾಗಿ ಹೊಸ ಉದ್ಯಮಗಳ ಸ್ಥಾಪನೆಯಾಗುತ್ತಿಲ್ಲ. ಇರುವ ಕೈಗಾರಿಕೆಗಳೂ ಅಭಿವೃದ್ಧಿ ಹೊಂದುತ್ತಿಲ್ಲ. ಕಾರ್ಪೊರೇಟ್ ತೆರಿಗೆ ದರವನ್ನು ದೊಡ್ಡ ಪ್ರಮಾಣದಲ್ಲಿ ಕಡಿತಗೊಳಿಸಿದ ಮಾತ್ರಕ್ಕೆ ಹೂಡಿಕೆದಾರರು ಮತ್ತಷ್ಟು ಹೂಡಿಕೆ ಮಾಡುವುದಿಲ್ಲ. ಇಷ್ಟು ಪ್ರಮಾಣದ ತೆರಿಗೆ ಕಡಿತ ಮಾಡದಿದ್ದರೆ, ಭಾರತ ಸರ್ಕಾರವು ಸುಮಾರು 4 ಲಕ್ಷ ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಹೊಂದಿರುತ್ತಿತ್ತು. ಈ ಹಣದಿಂದ ಬಡವರಿಗೆ ಪರಿಹಾರ ನೀಡಲು, ಹೊಸ ಮೂಲಸೌಕರ್ಯಗಳನ್ನು ಸೃಷ್ಟಿಸಲು ಸರ್ಕಾರವು ಹೂಡಿಕೆ ಮಾಡಿದ್ದರೆ, ಅದು ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುತ್ತಿತ್ತು, ಇದರಿಂದ ಕುಟುಂಬದ ಆದಾಯದಲ್ಲಿ ಹೆಚ್ಚಳವಾಗಿ, ಜನರ ಖರೀದಿ ಶಕ್ತಿ ಹೆಚ್ಚುತ್ತಿತ್ತು. ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿ, ಉತ್ಪಾದಕತೆ ಹೆಚ್ಚಾಗುವ ಮೂಲಕ ಮತ್ತಷ್ಟು ಉದ್ಯೋಗಗಳ ಸೃಷ್ಟಿಯಾಗುತ್ತಿತ್ತು. ಒಟ್ಟಾರೆಯಾಗಿ ದೇಶದ ಆರ್ಥಿಕ ಅಭಿವೃದ್ಧಿಗೆ ನೆರವಾಗುತ್ತಿತ್ತು. ಆದರೆ, ಮೋದಿ ಸರ್ಕಾರಕ್ಕೆ ಜನಸಾಮಾನ್ಯರ ಹಿತಕ್ಕಿಂತ ದೊಡ್ಡ ಉದ್ಯಮಿಗಳ ಸಂಪತ್ತಿನ ವೃದ್ಧಿ ಮಾಡುವುದರ ಬಗ್ಗೆಯೇ ಹೆಚ್ಚಿನ ಆಸಕ್ತಿ.
ಶ್ರೀಮಂತರಿಗೆ ರಿಯಾಯತಿ ನೀಡಿ, ಜನಸಾಮಾನ್ಯರನ್ನು ಹಿಂಡುವ ದೂರದೃಷ್ಟಿಯಿಲ್ಲದ, ಅನ್ಯಾಯದ ಇಂತಹ ಆರ್ಥಿಕ ನೀತಿಯು ದೇಶವನ್ನು ಸಂಕಷ್ಟದೆಡೆಗೆ ತಳ್ಳುತ್ತದೆ. ಹಣವನ್ನು ಉಳಿಸುವ ಸಲುವಾಗಿ, ಆಹಾರ ಧಾನ್ಯ ವಿತರಣೆ ಅಥವಾ ಅಡುಗೆ ಅನಿಲ ಸಬ್ಸಿಡಿಗೆ ಅಗತ್ಯವಿರುವ ನಿರ್ಣಾಯಕ ವೆಚ್ಚವನ್ನು ಮೊಟಕುಗೊಳಿಸಲಾಗಿದೆ. ಸರ್ಕಾರಿ ಗೋದಾಮುಗಳಲ್ಲಿ ದಾಖಲೆಯ ಮಟ್ಟದಲ್ಲಿ ಧಾನ್ಯಗಳ ದಾಸ್ತಾನುಗಳು ತುಂಬಿವೆಯಾದರೂ, ಕೇವಲ ಹಣವನ್ನು ಉಳಿಸುವ ಸಲುವಾಗಿ, ಅದನ್ನು ವಿತರಿಸಲು ಸರ್ಕಾರಕ್ಕೆ ಇಷ್ಟವಿಲ್ಲ.
ಶ್ರೀಮಂತರಿಗೆ ಯಾವುದೇ ರಿಯಾಯಿತಿಗಳು ಆರ್ಥಿಕತೆಯನ್ನು ಉತ್ತೇಜಿಸುವುದಿಲ್ಲ. ಏಕೆಂದರೆ ಖರೀದಿ ಸಾಮರ್ಥ್ಯ ಹೆಚ್ಚಿಸಲು ಜನರ ಕೈಗೆ ಹಣ ಬೇಕೇ ವಿನಃ, ಶ್ರೀಮಂತರ ಕೈಗೆ ಮತ್ತಷ್ಟು ಹಣ ಕೊಡುವುದಲ್ಲ. ಸರ್ಕಾರವು ವಿಶೇಷವಾಗಿ, ಜನರ ಕಲ್ಯಾಣ ಕಾರ್ಯಕ್ರಮಗಳಿಗೆ ಹಣವನ್ನು ಖರ್ಚು ಮಾಡುವ ಮೂಲಕ ಮತ್ತು ಶ್ರೀಮಂತರ ಮೇಲೆ ತೆರಿಗೆಯನ್ನು ಹೆಚ್ಚಿಸುವ ಮೂಲಕ ಮಾತ್ರ ಇದನ್ನು ಮಾಡಬಹುದು. ಆದರೆ ಮೋದಿ ಸರ್ಕಾರವು ಕುರುಡಾಗಿ ವಿರುದ್ಧ ದಿಕ್ಕಿನಲ್ಲಿ ಮುಂದುವರಿಯುತ್ತದೆ – ಭಾರತದ ಜನರಿಗೆ ಅಪಾರ ಮತ್ತು ನಿರಂತರ ನೋವನ್ನು ಉಂಟುಮಾಡುತ್ತದೆ.
ನಿಮ್ಮ ಟಿಪ್ಪಣಿ ಬರೆಯಿರಿ