ಡಾಲರ್ ಎದುರು 86 ಕ್ಕೆ ಕುಸಿದ ರೂಪಾಯಿ ಮೌಲ್ಯ

2013ರ ಆಗಸ್ಟ್ 23 ರಂದು ಅಂದಿನ ಗುಜರಾತ್ ಮುಖ್ಯಮಂತ್ರಿ ಮೋದಿಯವರು ಸೌರಾಷ್ಟ್ರದಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡುತ್ತ, “ಭಾರತೀಯ ರೂಪಾಯಿ ಬಹಳಷ್ಟು ಸದ್ದು ಮಾಡುತ್ತಿದ್ದ ಸಮಯವಿತ್ತು. ಆದರೆ ಇಂದು ಅದು ತನ್ನ ಧ್ವನಿಯನ್ನು ಕಳೆದುಕೊಂಡಿದೆ. ಮತ್ತು ಅದೇ ರೀತಿ ನಮ್ಮ ಪ್ರಧಾನಿಯ ಧ್ವನಿಯನ್ನು ನಾವು ಕೇಳಲು ಸಾಧ್ಯವಾಗುತ್ತಿಲ್ಲ. ಇಬ್ಬರೂ ಮೂಕರಾಗಿದ್ದಾರೆ. ಇಂದು ನಮ್ಮ ಕರೆನ್ಸಿ ಮರಣಶಯ್ಯೆಯಲ್ಲಿದೆ. ಇದು ಟರ್ಮಿನಲ್ ಹಂತದಲ್ಲಿದೆ ಮತ್ತು ತುರ್ತಾಗಿ ವೈದ್ಯರ ಗಮನ ಬೇಕಿದೆ. ಪ್ರಸ್ತುತ ರೂಪಾಯಿ ಮತ್ತು ಯುಪಿಎ ಸರ್ಕಾರಗಳೆರಡೂ ಮೌಲ್ಯ ಕಳೆದುಕೊಂಡಿವೆ. ನಮ್ಮ ದೇಶವನ್ನು ವಿನಾಶದಿಂದ ತಡೆಯುವ ಸಮಯ ಬಂದಿದೆ. ಕೇಂದ್ರ ಸರ್ಕಾರವು ದೇಶವನ್ನು ದಾರಿ ತಪ್ಪಿಸುತ್ತಿದೆ. ನಮ್ಮ ದೇಶ ಏಕೆ ವಿನಾಶದತ್ತ ಸಾಗುತ್ತಿದೆ ಎಂಬುದನ್ನು ಜನರು ತಿಳಿದುಕೊಳ್ಳಬೇಕು” ಎಂದಿದ್ದರು. ಅಂದು ಮೋದಿಯವರೇ ಹೇಳಿದಂತೆ ರೂಪಾಯಿ ಇಂದು ಟರ್ಮಿನಲ್ ಹಂತದ ಹಾದಿಯಲ್ಲಿ ಸಾಗುತ್ತಿದೆ
2013ರಲ್ಲಿ ಅಮೆರಿಕಾದ ಡಾಲರ್ ಎದುರು ರೂಪಾಯಿ ಮೌಲ್ಯ 60 ರಷ್ಟಿತ್ತು. ಅಂದಿಗೆ ಡಾಲರ್ ಎದುರು ರೂಪಾಯಿ ಅದುವರೆಗಿನ ಐತಿಹಾಸಿಕ ಮೌಲ್ಯ ಕಳೆದುಕೊಂಡಿತ್ತು. ಅಂದು ನರೇಂದ್ರ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದರು ಮತ್ತು ಕಾರ್ಪೊರೇಟ್ ಕುಳಗಳ ಮತ್ತು ಹಿಂದುತ್ವವಾಧಿಗಳ ಪ್ರಧಾನಿ ಹುದ್ದೆಯ ಅಭ್ಯರ್ಥಿಯೂ ಆಗಿದ್ದರು. ಅಂದು ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರು. ನರೇಂದ್ರ ಮೋದಿ ಪ್ರಧಾನಿಯಾದ 2014ರ ನಂತರವೂ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಲೇ ಬಂದಿದೆ. 2025ರ ಜೂನ್ 20ರಂದು ಅಮೆರಿಕನ್ ಡಾಲರ್ ಎದುರು ರೂಪಾಯಿಯ ಮೌಲ್ಯ 86.84 ಇತ್ತು.
ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ರೂಪಾಯಿ ಮತ್ತು ಡಾಲರ್ ಮೌಲ್ಯದಲ್ಲಿ ಸಮನಾಗಿದ್ದವು. 1950 ರಲ್ಲಿ ರೂಪಾಯಿ ಮೌಲ್ಯ 4.79 ಇತ್ತು. ಭಾರತವು ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ (LPG) ನೀತಿಗಳನ್ನು ಒಪ್ಪಿಕೊಳ್ಳುವವರೆಗೂ, ಅಂದರೆ 1991ರ ವರೆಗೂ 17.5 ರಷ್ಟಿತ್ತು. LPG ನೀತಿಗಳ ಪರಿಣಾಮ ರೂಪಾಯಿ ಮೌಲ್ಯ ಕುಸಿಯುತ್ತಲೇ ಹೋಯಿತು. ಈ ನೀತಿಗಳನ್ನೇ ಅಳವಡಿಸಿಕೊಂಡಿರುವ ಬಿಜೆಪಿ ತನ್ನ ಆಡಳಿತದಲ್ಲಿ ರೂಪಾಯಿಯನ್ನು ಬಲಗೊಳಿಸುತ್ತದೆ ಎಂದು ಬಿಜೆಪಿಯ ನೀತಿ ನಿಲುವುಗಳನ್ನು ಬಲ್ಲವರು ಅಂದೂ ಕೂಡ ನಂಬಿರಲಿಲ್ಲ.
ಅಧಿಕಾರ ಹಿಡಿಯಲು ಏನೇನೆಲ್ಲಾ ನಾಟಕವಾಡಿದರು
2014ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು, ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಗುರಿ ಮುಟ್ಟುವ ಪ್ರಯತ್ನದಲ್ಲಿ ಬಿಜೆಪಿ, ಅದರ ಮಾತೃ ಸಂಸ್ಥೆ ಆರ್ ಎಸ್ ಎಸ್ ಮತ್ತದರ ಪರಿವಾರ ಏನೆಲ್ಲಾ ತಂತ್ರಗಾರಿಕೆ ನಡೆಸಿದವು ಎಂಬುದನ್ನು ಮತ್ತೊಮ್ಮೆ ನೆನಪಿಸಿಕೊಳ್ಳಬೇಕು. ದೇಶದ ಮತದಾರರ ಬೆಂಬಲ ಪಡೆಯಲು ಮನಮೋಹನ್ ಸಿಂಗ್ ನೇತೃತ್ವದ ಯುಪಿಎ-2ರ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ಮೇಲೆ ದಾಳಿ ಮಾಡುತ್ತಿದ್ದ ಇವರಿಗೆ ಸಿಕ್ಕ ಅಸ್ತ್ರಗಳಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯದ ಕುಸಿತ ವಿಷಯವೂ ಒಂದು.
ಅಂದು, ಬಿಜೆಪಿ ನಾಯಕರು ರೂಪಾಯಿ ಮೌಲ್ಯ ಕುಸಿತ ಕುರಿತಂತೆ ಏನೆಲ್ಲಾ ಹೇಳಿದ್ದರು ಎಂಬುದಕ್ಕೆ ಒಂದರೆಡು ಉದಾಹರಣೆಗಳು ಇಲ್ಲಿವೆ:
ಬಿಜೆಪಿ ಪಕ್ಷದ ನಾಯಕಿ ಸುಸ್ಮಾ ಸ್ವರಾಜ್ ಅವರು ಟ್ವಿಟರ್‌ನಲ್ಲಿ “ರೂಪಾಯಿ ಮೌಲ್ಯ ಕಳೆದುಕೊಂಡಿದೆ. ಪ್ರಧಾನಿ ಕೃಪೆ ಕಳೆದುಕೊಂಡಿದ್ದಾರೆ” ಎಂದು ಹೇಳಿದ್ದರು.
ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಅವರು 11 ಜುಲೈ 2013 ರಂದು “ಯುಪಿಎ ಅಧಿಕಾರಕ್ಕೆ ಬಂದಾಗ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು ರಾಹುಲ್ ಗಾಂಧಿಯವರ ವಯಸ್ಸಿಗೆ ಸಮನಾಗಿತ್ತು. ಇಂದು ಅದು ಸೋನಿಯಾ ಗಾಂಧಿ ಅವರ ವಯಸ್ಸಿಗೆ ಸಮಾನವಾಗಿದೆ ಮತ್ತು ಶೀಘ್ರದಲ್ಲೇ ಅದು ಮನಮೋಹನ್ ಸಿಂಗ್ ಅವರ ವಯಸ್ಸನ್ನು ಮುಟ್ಟಲಿದೆ” ಎಂದು ಹೇಳಿದ್ದರು. ಅಂದು ರಾಹುಲ್ ಗಾಂಧಿ ಅವರಿಗೆ 41 ವರ್ಷ, ಸೋನಿಯಾ ಗಾಂಧಿ ಅವರಿಗೆ 67 ವರ್ಷ ಮತ್ತು ಮನಮೋಹನ್ ಸಿಂಗ್ ಅವರಿಗೆ 80 ವರ್ಷ ವಯಸ್ಸಾಗಿತ್ತು.
“ತೀಕ್ಷ್ಣವಾದ ಕುಸಿತದ ನಂತರ US ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು ಸಾರ್ವಕಾಲಿಕ ಕನಿಷ್ಠ 60.15 ಆಗಿದೆ, ಮೇ ಮತ್ತು ಜುಲೈ 9ರ ನಡುವೆ 53 ರೂ.ನಿಂದ 60.15 ರೂ.ಗೆ ಕುಸಿದಿದೆ. ರಾಷ್ಟ್ರೀಯ ಹೆಮ್ಮೆಯನ್ನು ಗಂಭೀರವಾಗಿ ಘಾಸಿಗೊಳಿಸುವುದರ ಹೊರತಾಗಿ, ಈ ತೀವ್ರ ಕುಸಿತವು ಪ್ರಸ್ತುತ ಯುಪಿಎ ಸರ್ಕಾರದ ಭಾರತೀಯ ಆರ್ಥಿಕತೆಯ ಅಸಮರ್ಪಕ ನಿರ್ವಹಣೆಗೆ ನೇರವಾಗಿ ಸಂಬಂಧಿಸಿದೆ” ಎಂದು ರವಿಶಂಕರ್ ಪ್ರಸಾದ್ ಹೇಳಿದ್ದರು.
ಆದರೆ, ಐಸಿಯುನಲ್ಲಿದ್ದ ರೂಪಾಯಿಗೆ (ಅದನ್ನು ಬಲಗೊಳಿಸಲು) ಯಾವ ಚಿಕಿತ್ಸೆ ನೀಡಬೇಕು ಎಂಬ ಸಲಹೆಯನ್ನು ಜವಾಬ್ದಾರಿಯುತ ಪ್ರಮುಖ ವಿರೋಧ ಪಕ್ಷವಾಗಿ ಬಿಜೆಪಿ ಅಂದು ನೀಡಲಿಲ್ಲ. ಅಥವಾ ರೂಪಾಯಿ ಕುಸಿತಕ್ಕೆ ಕಾರಣವಾದ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ (LPG) ನೀತಿಗಳಿಗೆ ಪರ್ಯಾಯವಾಗಿ ತನ್ನ ಬಳಿ ಯಾವ ನೀತಿಗಳಿವೆ ಎಂಬುದನ್ನೂ ಅದು ಹೇಳಲಿಲ್ಲ. ದೇಶದ ಪ್ರಜೆಗಳನ್ನು ಮಾತುಗಳಿಂದಲೇ ಮರುಳುಮಾಡುವ ಕಲೆಯನ್ನು ಸಂಘಪರಿವಾರ ಎಷ್ಟು ಚೆನ್ನಾಗಿ ಕರಗತ ಮಾಡಿಕೊಂಡಿದೆ ಎಂಬುದಕ್ಕೆ ಇದೊಂದು ಉದಾಹರಣೆಯಷ್ಟೆ.
11 ವರ್ಷಗಳಲ್ಲಿ ಶೇ. 40 ರಷ್ಟು ಕುಸಿತ
ಕಾಂಗ್ರೆಸ್ ಆಡಳಿತದ ವಿರುದ್ದ ಇಷ್ಟೆಲ್ಲಾ ಟೀಕೆ ಮಾಡಿ, ಒಂದಷ್ಟು ಜನರ ಮನಸ್ಸನ್ನು ಗೆದ್ದು, ಶೇ. 31ರಷ್ಟು ಮತ ಪಡೆದು ಅಧಿಕಾರಕ್ಕೆ ಬಂದ ಬಿಜೆಪಿ ರೂಪಾಯಿ ಮೌಲ್ಯ ವೃದ್ಧಿಗೆ ಅಥವಾ ಮತ್ತಷ್ಟು ಕುಸಿಯದಂತೆ ತಡೆಯಲು ತೆಗೆದುಕೊಂಡ ಕ್ರಮಗಳೇನು ಎಂಬ ಪ್ರಶ್ನೆಯನ್ನು ನಾವಿಂದು ಕೇಳಬೇಕಿದೆ. 2014ರ ಏಪ್ರಿಲ್ ನಲ್ಲಿ 60 ರೂ.ಗೆ ಒಂದು ಡಾಲರ್ ಸಿಗುತ್ತಿತ್ತು. ಇಂದು ಒಂದು ಡಾಲರ್ ಕೊಳ್ಳಬೇಕಾದರೆ 86 ರೂ ಕೊಡಬೇಕು. ಅಂದರೆ, 26 ರೂ ಹೆಚ್ಚು. ಅಥವಾ ಶೇ. 40 ರಷ್ಟು ಹೆಚ್ಚು ಹಣ ಕೊಡಬೇಕು.
ರೂಪಾಯಿ ಮೌಲ್ಯ ಕುಸಿತ ಮೇಲ್ನೋಟಕ್ಕೆ ಅಂತಾರಾಷ್ಟ್ರೀಯ ವ್ಯವಹಾರಕ್ಕೆ ಸಂಬಂಧಿಸಿದ್ದು ಎನಿಸಿದರೂ, ಜನಸಾಮಾನ್ಯರ ಮೇಲೆ ಇದರ ನೇರ ಪರಿಣಾಮ ಬೀರಲಿದೆ. ವಿದೇಶದಿಂದ ಆಮದು ಮಾಡಿಕೊಳ್ಳುವ ಎಲ್ಲ ಸರಕುಗಳೂ ಜನಸಾಮಾನ್ಯರಿಗೆ ದುಬಾರಿಯಾಗಲಿದೆ. ಭಾರತವು ಲೋಹಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳು ಇತ್ಯಾದಿಗಳ ಆಮದಿನ ಮೇಲೆ ಹೆಚ್ಚಾಗಿ ಅವಲಂಬಿತವಾಗಿದೆ ಮತ್ತು ದೇಶವು US ಡಾಲರ್‌ಗಳಲ್ಲಿ ತನ್ನ ಪಾವತಿಯನ್ನು ಮಾಡುತ್ತದೆ. ರೂಪಾಯಿ ಮೌಲ್ಯದ ಕುಸಿತದೊಂದಿಗೆ, ದೇಶವು ಅದೇ ವಸ್ತುವಿಗೆ ಮೊದಲಿಗಿಂತ ಹೆಚ್ಚು ಪಾವತಿಸಬೇಕಾಗುತ್ತದೆ. ಈ ವಿದ್ಯಮಾನವು ಕಚ್ಚಾ ವಸ್ತು ಮತ್ತು ಉತ್ಪಾದನಾ ವೆಚ್ಚಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ, ಅದು ಅಂತಿಮವಾಗಿ ಗ್ರಾಹಕರಿಗೆ ವರ್ಗಾಯಿಸುತ್ತದೆ.
ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯ ಮೇಲೆ ಪರಿಣಾಮ ;
ರೂಪಾಯಿ ಮೌಲ್ಯ ಕುಸಿತವು ಪೆಟ್ರೋಲ್ ಮತ್ತು ಡೀಸೆಲ್, ಅನಿಲ ಇವುಗಳ ಮೇಲೆ ಹೆಚ್ಚಿನ ಪರಿಣಾಮ ಕಾಣುತ್ತದೆ. ಏಕೆಂದರೆ, ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲು ಡಾಲರ್‌ನಲ್ಲಿ ಹಣ ಪಾವತಿಸಬೇಕು. ಇದಕ್ಕಾಗಿ ರೂಪಾಯಿ ಕೊಟ್ಟು ಡಾಲರ್ ಪಡೆಯಬೇಕು. ಭಾರತ ತನಗೆ ಅಗತ್ಯವಿರುವ ಒಟ್ಟು ಕಚ್ಚಾ ತೈಲದಲ್ಲಿ ಶೇ. 80ಕ್ಕೂ ಹೆಚ್ಚಿನ ಭಾಗವನ್ನು ಆಮದು ಮಾಡಿಕೊಳ್ಳುತ್ತದೆ. (ಭಾರತದಲ್ಲೇ ಹೊರತೆಗೆಯುವ ಪೆಟ್ರೋಲಿಯಂ ಗೆ ಅಂತರಾಷ್ಟ್ರೀಯ ಮಾರುಕಟ್ಟೆ ದರ ನಿಗದಿ ಮಾಡಿ ಮಾರುತ್ತಿದ್ದಾರೆ ಎಂಬುದನ್ನೂ ಗಮನಿಸಬೇಕು)
ಕೊರೋನಾದಿಂದಾಗಿ ರೂಪಾಯಿ ಮೌಲ್ಯ ಕುಸಿದಿದೆಯೇ?
ಕೊರೋನಾ ಸೃಷ್ಟಿಸಿದ ಬಿಕ್ಕಟ್ಟಿನ ಪರಿಣಾಮದಿಂದಾಗಿ ರೂಪಾಯಿ ಮೌಲ್ಯ ಕುಸಿದಿದೆ ಎಂಬ ಕಾರಣವನ್ನೂ ಆಳುವ ವರ್ಗದ ಆರ್ಥಿಕ ತಜ್ಞರು ಹೇಳುತ್ತಾರೆ. ಆದರೆ, ಕೊರೋನಾ ಬಿಕ್ಕಟ್ಟಿನ ಮೊದಲು 2019ರಲ್ಲಿ ರೂಪಾಯಿ ಮೌಲ್ಯ 72 ಇತ್ತು. ಮೋದಿ ಆಡಳಿತಕ್ಕೆ ಬಂದ 2014 ರಲ್ಲಿ 60 ಇದ್ದ ರೂಪಾಯಿ ಮೌಲ್ಯ, 2019ರ ವರೆಗಿನ 5 ವರ್ಷಗಳಲ್ಲಿ 12 ರಷ್ಟು (ಶೇ. 20 ಅಥವಾ ಪ್ರತಿ ವರ್ಷ ಸರಾಸರಿ 4ರಷ್ಟು) ಕುಸಿದಿತ್ತು ಎಂಬುದನ್ನು ಗಮನಿಸಬೇಕು. 2021ರಲ್ಲಿ 75 ರಷ್ಟಿತ್ತು. ಅಂದರೆ, ಕೊರೋನಾ ಸಂಕಷ್ಟದ 2 ವರ್ಷಗಳಲ್ಲಿ ರೂಪಾಯಿ ಮೌಲ್ಯ 3ರಷ್ಟನ್ನು ಮಾತ್ರ ಕಳೆದುಕೊಂಡಿತು. 2022ರಲ್ಲಿ 80 ಕ್ಕೆ ಕುಸಿದಿತ್ತು.
ರೂಪಾಯಿ ಮೌಲ್ಯ ಕುಸಿತವಲ್ಲ, ಡಾಲರ್ ಮೌಲ್ಯ ಹೆಚ್ಚಾಗಿದೆಯಷ್ಟೆ!!??
ರೂಪಾಯಿ ಮೌಲ್ಯ ಕುಸಿತವಲ್ಲ, ಡಾಲರ್ ಮೌಲ್ಯ ಹೆಚ್ಚಾಗಿದೆಯಷ್ಟೆ ಎನ್ನುತ್ತಾರೆ ಬಿಜೆಪಿಯವರು. ರೂಪಾಯಿ ಮೌಲ್ಯ ಕುಸಿತಕ್ಕೆ ಮೋದಿ ಆಡಳಿತ ಕಾರಣವಲ್ಲ ಎಂದು ಸಮರ್ಥಿಸಿಕೊಳ್ಳಲು ಇಂತಹ ವಾದಗಳನ್ನು ಆಳುವ ವರ್ಗದ ಆರ್ಥಿಕ ತಜ್ಞರು ಮಾಡತೊಡಗಿದ್ದಾರೆ. ಡಾಲರ್ ವಿಶ್ವದ ಅತ್ಯಂತ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟ, ಅತ್ಯಂತ ಶಕ್ತಿಶಾಲಿ ಕರೆನ್ಸಿಯಾಗಿದೆ. ಜಗತ್ತಿನ ಬಹುಪಾಲು ವಿದೇಶಿ ವಿನಿಮಯಕ್ಕಾಗಿ ಅಮೆರಿಕಾದ ಡಾಲರ್ ಬಳಕೆಯೇ ಇದಕ್ಕೆ ಕಾರಣ ಎಂದೂ ಹೇಳುತ್ತಾರೆ. ರಷ್ಯಾ-ಉಕ್ರೇನ್ ನಡುವಿನ ಸಂಘರ್ಷದ ನಂತರದ ಜಗತ್ತಿನ ಪರಿಸ್ಥಿತಿಯೂ ಇದಕ್ಕೆ ಕಾರಣ ಎನ್ನುತ್ತಾರೆ.
ಬ್ರಿಟಿಷ್ ಪೌಂಡ್, ಜಪಾನೀಸ್ ಯೆನ್ ಮತ್ತು ಯೂರೋ ಮುಂತಾದ ಕರೆನ್ಸಿಗಳು ಯುಎಸ್ ಡಾಲರ್ ಎದುರು ಭಾರತೀಯ ರೂಪಾಯಿಗಿಂತ ಹೆಚ್ಚು ದುರ್ಬಲವಾಗಿವೆ. ಆದ್ದರಿಂದ, ಈ ಕರೆನ್ಸಿಗಳ ವಿರುದ್ಧ ಭಾರತೀಯ ರೂಪಾಯಿ ಬಲಗೊಂಡಿದೆ ಎಂದು ಕೇಂದ್ರ ಸಚಿವರೊಬ್ಬರು ಹೇಳಿದ್ದರು.
2014ರ ಮಾರ್ಚ್ ನಲ್ಲಿ ಮತ್ತು 2023ರಲ್ಲಿ ಅಮೆರಿಕ ಡಾಲರ್ ಎದುರು ಕೆಲವು ದೇಶಗಳ ಕರೆನ್ಸಿ ಮೌಲ್ಯ ಹೀಗಿದೆ.
ಚೈನಾದ ಯುಹಾನ್ 6.2 ಇತ್ತು. ಇಂದು 7.2 ಇದೆ. ಶೇ. 16 ರಷ್ಟು ಕುಸಿತ.
ಜಪಾನೀಸ್ ಯೆನ್ 101 ಇತ್ತು. ಇಂದು 149 ಇದೆ. ಶೇ. 49 ರಷ್ಟು ಕುಸಿತ.
ಯುಕೆ ಪೌಂಡ್ 1.67 ಇತ್ತು. ಇಂದು 1.22 ಇದೆ. ಪೌಂಡ್ ತನ್ನ ಮೌಲ್ಯ ಹೆಚ್ಚಿಸಿಕೊಂಡಿದೆ.
ಯೂರೋ 1.38 ಇತ್ತು. ಇಂದು 1.06 ಇದೆ. ಇದೂ ಸಹ ತನ್ನ ಮೌಲ್ಯ ಹೆಚ್ಚಿಸಿಕೊಂಡಿದೆ.
ಒಂದು ಚೀನಾದ ಯುಹಾನ್ ಗೆ ಇಂದಿನ 11.40 ರೂಪಾಯಿಗೆ ಸಮ (ನವೆಂಬರ್ 12, 2023)
ಜಗತ್ತಿನ ಇತರೆ ರಾಷ್ಟ್ರಗಳ ಕರೆನ್ಸಿಗಳಿಗೆ ಹೋಲಿಸಿದರೆ ಭಾರತದ ರೂಪಾಯಿ ಸ್ಥಿರವಾಗಿದೆಯೇ? ಇಲ್ಲಿ ಕೆಲವು ಪ್ರಮುಖ ದೇಶಗಳ ಕರೆನ್ಸಿ ಮತ್ತು ರೂಪಾಯಿ ಮೌಲ್ಯದ ಪಟ್ಟಿ ಇದೆ. ಈ ಬಹುತೇಕ ದೇಶಗಳ ಕರೆನ್ಸಿ ಎದುರು ರೂಪಾಯಿ 2014ರಲ್ಲಿದ್ದ ಮೌಲ್ಯ ಇಳಿಕೆಯಾಗಿದೆ. ಈ ಕೆಳಗಿನ ಪಟ್ಟಿ ನೋಡಿ:
ವಿವಿಧ ದೇಶಗಳ ಕರೆನ್ಸಿ ಎದುರು ಭಾರತೀಯ ರೂಪಾಯಿ ಮೌಲ್ಯ 2014 ಮತ್ತು 2023ರ ವ್ಯತ್ಯಾಸ
| EURO | GBP | USD | CNY | CAD | AUD | |
| Nov 12, 2023 | 88.98 | 101.84 | 83.27 | 11.40 | 60.31 | 52.91 |
| Apr 2014 | 81.04 | 98.28 | 60.29 | 9.36 | 58.50 | 54.44 |
| difference | -7.94 | -3.56 | -22.98 | -2.04 | -1.81 | +1.53 |
Great British pound(GBP), United States dollar(USD), Chinese yuan(CNY), Canadian Dollar (CAD), Australian dollar(AUD) -cs-
ಪಾಕಿಸ್ತಾನದ ರೂಪಾಯಿ ;
ನಮ್ಮ ನೆರೆ ದೇಶಗಳ ಉದಾಹರಣೆ ಕೊಟ್ಟು ತಮ್ಮ ವಿಫಲತೆಯನ್ನು ಮರೆಮಾಚಲು ನಮ್ಮ ನಾಯಕರು ಮುಂದಾಗಿದ್ದಾರೆ. ಅಮೆರಿಕದ ಡಾಲರ್ ಎದುರು ಪಾಕಿಸ್ತಾನದ ರೂಪಾಯಿ 2014 ರಲ್ಲಿ 101 ಇತ್ತು, 2023ರಲ್ಲಿ 280 ಇದೆ. ಬಾಂಗ್ಲಾದೇಶದ ಕರೆನ್ಸಿ ಟಾಕ 2014 ರಲ್ಲಿ 78 ಇತ್ತು, 2023 ರಲ್ಲಿ 110 ಇದೆ. ನೇಪಾಳದ ರೂಪಾಯಿ 2014 ರಲ್ಲಿ 97 ಇತ್ತು, 2023 ರಲ್ಲಿ 132 ಇದೆ. ಈ ಮೂರು ನೆರೆಯ ದೇಶಗಳೂ ವಿಶ್ವ ವಾಣಿಜ್ಯ ಸಂಸ್ಥೆಯ ಷರತ್ತುಗಳನ್ನು ಅಂದರೆ, ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ನೀತಿಗಳನ್ನು ವೇಗವಾಗಿ ಜಾರಿಗೆ ತರುತ್ತಿವೆ. ಇದರ ಪರಿಣಾಮವೇ ಈ ದೇಶಗಳ ಕರೆನ್ಸಿ ಮೌಲ್ಯಗಳ ಕುಸಿತಕ್ಕೆ ಪ್ರಮುಖ ಕಾರಣ.
ಜನರಲ್ಲಿ ಅಚ್ಚೇ ದಿನಗಳ ಭರವಸೆ ಹುಟ್ಟಿಸಿ, ವಿಶ್ವ ನಾಯಕರಾಗಲು ಹೊರಟಿರುವ ಮೋದಿಯವರೂ ಇಂತವೇ ಜನವಿರೋಧಿ, ದೇಶವಿರೋಧಿ ಎಲ್.ಪಿ.ಜಿ ನೀತಿಗಳನ್ನು ಭಾರತದಲ್ಲಿ ಅಳವಡಿಸಿ ಕೊಂಡಿರುವುದೇ ನಮ್ಮ ರೂಪಾಯಿ ಮೌಲ್ಯ ಈ ಪ್ರಮಾಣದಲ್ಲಿ ಕುಸಿಯಲು ಕಾರಣವಾಗಿದೆ. ಇದರ ನಡುವೆಯೂ ಭಾರತದ ಆರ್ಥಿಕತೆ ಇನ್ನೂ ಈ ಪ್ರಮಾಣದಲ್ಲಿ ಭದ್ರವಾಗಿ ಉಳಿದಿರಲು ಕಾರಣ, ಮತ್ತು 2008ರ ಜಗತ್ತಿನ ಆರ್ಥಿಕತೆ ಕುಸಿತದ ಹೊಡೆತಕ್ಕೆ ಬಗ್ಗದೇ ಇರಲು ಕಾರಣ, ನಮ್ಮ ದೇಶದ ದೊಡ್ಡ ದೊಡ್ಡ ಉತ್ಪಾದನಾ ಉದ್ಯಮಗಳು, ವಿವಿಧ ಬಗೆಯ ಸೇವೆಗಳು, ಹಣಕಾಸು ಈ ಎಲ್ಲಾ ವಲಯಗಳಲ್ಲಿ ಬಹುತೇಕ ಉದ್ಯಮಗಳು ಸಾರ್ವಜನಿಕ ಒಡೆತನದಲ್ಲಿ ಇರುವುದರಿಂದ ಮತ್ತು ರಿಸರ್ವ್ ಬ್ಯಾಂಕಿನಲ್ಲಿ ಮೀಸಲು ನಿಧಿ ಹೆಚ್ಚಾಗಿದ್ದುದರಿಂದ ಮತ್ತು ಸರ್ಕಾರಿ ಗೋದಾಮುಗಳಲ್ಲಿ ಸಾಕಷ್ಟು ಆಹಾರ ಧಾನ್ಯಗಳ ಸಂಗ್ರಹಣೆ ಇದ್ದುದರಿಂದ ಮಾತ್ರ. ಮತ್ತು ಈ ಎಲ್ಲಾ ಸಾರ್ವಜನಿಕ ಕ್ಷೇತ್ರಗಳ ರಕ್ಷಣೆಗೆ ಪಣತೊಟ್ಟು ನಿಂತು, ಎಲ್ ಪಿ ಜಿ ನೀತಿಗಳ ವಿರುದ್ದ ಎಡ ಸಂಘಟನೆಗಳು ಮತ್ತು ಜನತೆಯ ದಿಟ್ಟ, ನಿರಂತರ ಚಳುವಳಿಗಳೂ ಕಾರಣ. ಜನತೆಯ ಚಳುವಳಿಯನ್ನು ಹತ್ತಿಕ್ಕುವ ಮೂಲಕ ಇವೆಲ್ಲವನ್ನೂ ಖಾಸಗಿಯವರಿಗೆ ಒಪ್ಪಿಸುವ ಗುರಿಯೊಂದಿಗೆ ಹೆಜ್ಜೆ ಇಟ್ಟಿರುವ ನರೇಂದ್ರ ಮೋದಿಯವರು ದೇಶವನ್ನು ನಾಶ ಮಾಡಲು ಹೊರಟಿದ್ದಾರೆ. ಇದನ್ನು ತಪ್ಪಿಸಲು ಜನತೆ ತಮ್ಮ ಚಳುವಳಿಯನ್ನು ಮತ್ತಷ್ಟು ವ್ಯಾಪಕಗೊಳಿಸಬೇಕಾಗಿದೆ.
ನಿಮ್ಮ ಟಿಪ್ಪಣಿ ಬರೆಯಿರಿ