(ಒಂದು ಭಾವನಾತ್ಮಕ ಕಥೆ)

ರೀ… ಫ್ರಾಕ್ ಚೆನ್ನಾಗಿದೆಯಾ ನೋಡಿ ಬನ್ನಿ.
ಕೊಠಡಿಯಲ್ಲಿದ್ದ ಪತಿಯನ್ನು ಕರೆಯುತ್ತಾಳೆ ಸುನಂದ.
“ಯಾರಿಗೇ… ಫ್ರಾಕ್ ಹೊಲಿದಿದ್ದೀಯಾ?” ಎನ್ನುತ್ತಾ ಕೊಠಡಿಯಿಂದ ಹೊರಗೆ ಬರುತ್ತಾನೆ ಆನಂದ.
ಮಡದಿ ತೋರಿಸಿದ ಹೆಣ್ಣು ಮಗುವಿನ ಫ್ರಾಕ್ ನೋಡುತ್ತಾ, “ತುಂಬಾ ಚೆನ್ನಾಗಿದೆ ಸುನಂದ, ಇದು ನಮ್ಮ ಪುಟ್ಟಿ ಹಾಕೊಂಡ್ರೆ ಎಷ್ಟ್ ಚಂದ ಕಾಣುಸ್ತಾಳೆ ಅಲ್ವಾ?” ಎನ್ನುತ್ತಾನೆ.
“ನಮ್ ಪುಟ್ಟೀಗೆ ಕಣ್ರಿ ಫ್ರಾಕ್ ಹೊಲಿದಿರೋದು.”
“ಹೌದಾ? ಆದ್ರೆ ಅವಳಿಗೆ ತಲುಪಿಸೋದು ಹೇಗೆ?”
ನಾನೇ ಕೊಟ್ಟು ಬರೋಣ ಅಂದ್ಕೊಂಡಿದ್ದೀನಿ.
ನಮಗೆ ಮಗನ ಮನೆ ಎಲ್ಲಿದೆ ಅಂತಾನೇ ಗೊತ್ತಿಲ್ವಲ್ಲೇ?
ಸೊಸೆಗೆ ಪೋನ್ ಮಾಡ್ತೀನಿ, ಅವಳು ಅವರ ಮನೆ ಹತ್ರ ಇರೋ ಯಾವುದಾದ್ರೂ ಒಂದು ಸ್ಥಳಕ್ಕೆ ಪುಟ್ಟಿನಾ ಕರ್ಕೊಂಡು ಬರ್ತೀನಿ ಅಂತ ಹೇಳಿದ್ದಾಳೆ. ಫ್ರಾಕ್ ಕೊಟ್ಟು, ಎರಡು ಮೊಮ್ಮಗಳನ್ನು ನೋಡ್ಕೊಂಡು, ಅವಳ ಜೊತೆ ಒಂದಷ್ಟು ಸಮಯ ಆಟ ಆಡ್ಕೊಂಡು ಬರ್ತೀನಿ.
ಏನೋ ನಿನ್ನಿಷ್ಟ ಬಂದಂಗೆ ಮಾಡು ತಾಯಿ.
…. ಹೀಗೆ ವೃದ್ದ ದಂಪತಿಗಳ ಮಾತು ಮುಂದುವರಿಯುತ್ತದೆ.
…….
ಸುನಂದ ಮತ್ತು ಆನಂದ ದಂಪತಿಗಳಿಂದ ಮಗ -ಸೊಸೆ ದೂರ ಇದ್ದಾರೆ. ಇದಕ್ಕೂ ಮೊದಲು ಸುನಂದ ಪುಟ್ಟ ಮೊಮ್ಮಗಳನ್ನು ನೋಡಲು ಮಗನ ಮನೆಗೆ ಹೋಗಿ ಬರುತ್ತಿದ್ದರು. ಅವಳನ್ನು ಹತ್ತಿರದ ಉದ್ಯಾನವನಕ್ಕೆ ಕರೆದೊಯ್ದು ಆಟ ಆಡಿಸುತ್ತಿದ್ದರು. ಬೇಕರಿ, ಅಂಗಡಿಗಳಿಗೆ ಕರೆದೊಯ್ದು ಆಕೆ ಕೇಳಿದ ತಿಂಡಿ ಪದಾರ್ಥಗಳನ್ನು ಕೊಡಿಸುತ್ತಿದ್ದರು. ಆಟದ ಸಾಮಾನುಗಳನ್ನು ಕೊಡಿಸುತ್ತಿದ್ದರು. ಆಕೆಯನ್ನು ತಮ್ಮ ಮನೆಗೂ ಕರೆತಂದು ಅವಳು ಕೇಳುವ ತಿಂಡಿ ತಿನಿಸುಗಳನ್ನು ಮಾಡಿಕೊಡುತ್ತಿದ್ದರು. ತಾತನೂ ಮೊಮ್ಮಗಳು ಪುಟ್ಟಿಯ ಜೊತೆ ಆಟವಾಡುತ್ತಾ, ಖಾಲಿ ಬಿಳಿ ಕಾಗದದ ಮೇಲೆ ಚಿತ್ರ ಬಿಡಿಸುತ್ತಾ, ಅಕ್ಷರಗಳನ್ನು ಬರೆಸುತ್ತ, ಟಿವಿ ಮತ್ತು ಮೊಬೈಲ್ ನಲ್ಲಿ ಅವಳು ನೋಡಲು ಇಷ್ಟಪಡುವ ಮಕ್ಕಳ ವಿಡಿಯೋಗಳನ್ನು ಹಾಕಿಕೊಡುತ್ತ ಒಂದಷ್ಟು ಸಮಯ ಕಳೆಯುತ್ತಿದ್ದರು. ಸೊಸೆ ತನ್ನ ಅತ್ತೆ, ಮಾವವನ್ನು ಮಾತನಾಡಿಸಿದರೂ, ಮಗ ಮಾತ್ರ ತನ್ನ ಅಮ್ಮ ಅಥವಾ ಅಪ್ಪನನ್ನು ಮಾತನಾಡಿಸುತ್ತಿರಲಿಲ್ಲ.
ಹೀಗಿರುವಾಗ ಒಂದು ದಿನ….
“ರೀ ಸುನಂದಮ್ಮವ್ರೇ, ನಿಮ್ ಮಗ ಮನೆ ಖಾಲಿ ಮಾಡ್ಕೊಂಡು ಹೋದ್ರು ರೀ” ಎನ್ನುತ್ತ ಮಗನ ಮನೆಯ ನೆರೆಮನೆಯವರು ಸುದ್ದಿ ಮುಟ್ಟಿಸಿದರು. ಸುನಂದಳಿಗೆ ದುಖಃ ತಡೆಯಲಾಗಲಿಲ್ಲ. ನಮಗೆ ಒಂದು ಮಾತೂ ಹೇಳಲಿಲ್ಲವಲ್ಲಾ, ಮಗ ಮಾತನಾಡುತ್ತಿಲ್ಲ ಸರಿ, ನಮ್ಮ ಜೊತೆ ಮಾತನಾಡುತ್ತಿದ್ದ ಸೊಸೆ ಕೂಡಾ ಮನೆ ಖಾಲಿ ಮಾಡಿ ಬೇರೆಡೆ ಹೋಗುತ್ತಿದ್ದೇವೆ ಎಂದು ಹೇಳಲಿಲ್ಲವಲ್ಲ ಎಂದು ಕಣ್ಣೀರಿಟ್ಟಳು.
ಮೂರು ದಿನಗಳಾದರೂ, ಸೊಸೆ ಪೋನ್ ಮಾಡಿ ಮನೆ ಖಾಲಿ ಮಾಡಿದ ವಿಷಯ ತಿಳಿಸಲಿಲ್ಲ. ಸುನಂದಳಿಗೆ ತಡೆಯಲಾಗಲಿಲ್ಲ, ಸೊಸೆಗೆ ಪೋನ್ ಮಾಡಿದಳು:
“ಹಲೋ… ಕಲ್ಪನಾ….”
“ಹೇಳಿ ಅತ್ತೆ”
ಚೆನ್ನಾಗಿದ್ದೀಯೇನಮ್ಮ? ಪುಟ್ಟಿ ಏನ್ಮಾಡ್ತಿದ್ದಾಳೆ?
ಅವಳು ಹೊರಗಡೆ ಆಟ ಆಡ್ತಾ ಇದ್ದಾಳೆ ಅತ್ತೆ.
ಇಷ್ಟು ಮಾತನಾಡುವಾಗಲೂ ಸುನಂದಳ ಕಣ್ಣುಗಳಲ್ಲಿ ನೀರು ತಂಬಿ ಹರಿಯುತ್ತಿತ್ತು. ಕಣ್ಣೀರು ಹೊರೆಸಿಕೊಳ್ಳುತ್ತ; “ಮನೆ ಖಾಲಿ ಮಾಡ್ತೀವಿ ಅಂತ ನಮಗೆ ಒಂದ್ ಮಾತೂ ಹೇಳಲಿಲ್ಲ ಯಾಕಮ್ಮ? ಹೇಳಿದ್ರೆ ನಾವೇನು ಬೇಡ ಅಂತಿದ್ವಾ?…. ದುಖಃ ಉಮ್ಮಳಿಸಿ ಬಂತು. ದ್ವನಿ ಗದ್ಗದಿತವಾಗಿತ್ತು.
ನಂಗೇನೂ ಗೊತ್ತಿಲ್ಲ ಅತ್ತೆ. ನಾನು ಅಮ್ಮನ ಮನೆಗೆ ಹೋಗಿ ಬರುವಷ್ಟರಲ್ಲಿ ನಿಮ್ಮ ಮಗ ಎಲ್ಲಾ ಸಿದ್ದತೆ ಮಾಡಿಕೊಂಡಿದ್ರು. ನಿಮ್ ಮಗನ ಬುದ್ದಿ ನಿಮಗೆ ಗೊತ್ತೇ ಇದೆಯಲ್ವಾ. ನಾನು ಮನೆಗೆ ಬಂದು ಒಂದು ನಿಮಿಷ ಕೂಡಾ ಇರೋಕಾಗ್ಲಿಲ್ಲ. ನಿಮಗೆ ಪೋನ್ ಮಾಡಿ ತಿಳಿಸೋಣ ಅಂದ್ರೆ ಟೈಮೇ ಸಿಗ್ಲಿಲ್ಲ.
ಹೋಗ್ಲಿ ಬಿಡಮ್ಮ. ಈಗ ಯಾವ್ ಏರಿಯಾದಲ್ಲಿ ಮನೆ ಮಾಡ್ಕೊಂಡಿದ್ದೀರಿ?
ಇಲ್ಲೇ… ಜೆಪಿ ನಗರ ಅತ್ತೆ.
ಪುಟ್ಟಿಯನ್ನು ಯಾವ ಸ್ಕೂಲಿಗೆ ಸೇರಿಸಿದ್ದೀರಿ?
(ಶಾಲೆಯ ಹೆಸರು ಮತ್ತು ವಿಳಾಸ ಹೇಳುತ್ತಾಳೆ ಸೊಸೆ)
ಸರಿನಮ್ಮ, ಮನೆ ಅಡ್ರೆಸ್ ಕಳ್ಸು, ಯಾವಾಗ್ಲಾದ್ರೂ ಮನೆಗೆ ಬರ್ತೀವಿ.
ಸರಿ ಅತ್ತೆ.
ಈ ರೀತಿ ಅತ್ತೆ ಸೊಸೆ ಮಾತನಾಡಿದ ನಂತರ ಒಂದು ವರ್ಷ ಆದ್ರೂ ಸೊಸೆ ಅಡ್ರೆಸ್ ಮೆಸೇಜ್ ಮಾಡಲಿಲ್ಲ. ಸುನಂದ ಮತ್ತು ಆನಂದ್ ಗೆ ತಮ್ಮ ಮೊಮ್ಮಗಳು ಪುಟ್ಟಿಯನ್ನು ನೋಡ್ಬೇಕು ಅನ್ನೋ ಆಸೆ. ಆದ್ರೆ ಅವರು ಎಲ್ಲಿದ್ದಾರೆ ಅಂತ ಗೊತ್ತಿಲ್ಲ. ಸೊಸೆ ಹೇಳಿದ ಶಾಲೆಯ ಬಳಿಯಾದರೂ ಹೋಗಿ ಮೊಮ್ಮಗಳನ್ನು ನೋಡಬೇಕು ಅನಿಸಿತು. ಒಮ್ಮೆ ಹೊರಟೇ ಬಿಟ್ಟರು.
…….
ಇದೇ ಸ್ಕೂಲ್ ಅಲ್ವಾ ಸೊಸೆ ಹೇಳಿದ್ದು?
ಹೌದು ಕಣ್ರೀ, ಇದೇ ಸ್ಕೂಲ್.
“ಫಸ್ಟ್ ಸ್ಟಾಂಡರ್ಡ್ ಮಕ್ಕಳನ್ನು ಎಷ್ಟೊತ್ತಿಗೆ ಬಿಡ್ತಾರೆ?” ತಮ್ಮ ಮಕ್ಕಳನ್ನು ಕರೆದೊಯ್ಯಲು ಬಂದಿದ್ದ ಮಹಿಳೆಯೊಬ್ಬರನ್ನು ಕೇಳಿದರು.
“12 ಗಂಟೆಗೆ ಬಿಡ್ತಾರೆ ಆಂಟಿ” ಎಂದಳು ಆ ಮಹಿಳೆ.
ಇನ್ನೂ ಅರ್ಧ ಗಂಟೆ ಇದೆ. ಸೊಸೆ ಏನಾದ್ರೂ ಇಲ್ಲಿಗೆ ಬಂದ್ಬಿಟ್ರೆ? ನಮ್ಮನ್ನು ನೋಡಿ ಏನಾದ್ರೂ ಅಂದ್ಬಿಟ್ರೆ? ನಾವು ಸ್ವಲ್ಪ ಮರೆಯಾಗಿಯೇ ಇರೋಣ. ದೂರದಲ್ಲೇ ನಿಂತು ನೋಡೋಣ. ಎನ್ನುತ್ತಾ ಶಾಲಾ ವಾಹನದ ಮರೆಯಲ್ಲಿ ನಿಂತು, ಪುಟ್ಟಿ ಬರಬಹುದೆಂದು ಸ್ಕೂಲ್ ಗೇಟ್ ಕಡೆಗೆ ದಿಟ್ಟಿಸಿ ನೋಡತೊಡಗಿದರು. ಯೂನಿಫಾರಂ ಧರಿಸಿರುವ ಶಾಲಾ ಮಕ್ಕಳ ನಡುವೆ ತಮ್ಮ ಮೊಮ್ಮಗಳನ್ನು ಗುರುತಿಸುವುದೇ ಕಷ್ಟ ಎನಿಸಿತು ಅವರಿಗೆ.
ಅದೋ ಅಲ್ಲಿ ಪುಟ್ಟಿ ಬಂದ್ಲು.
ಅವಳೇನಾ?!
ಹೌದು ಕಣ್ರೀ… ಅವಳೇನೆ.
ಇಷ್ಟು ಸಣ್ಣ ಇದ್ದಾಳಲ್ಲೇ? ನನಗೇನೋ ಡೌಟು.
ಪುಟ್ಟಿ ವ್ಯಾನ್ ಹತ್ತಲು ಹೊರಟಳು. ಸೊಸೆ ಬಂದಿಲ್ಲ ಎಂಬುದನ್ನು ಖಾತರಿಪಡಿಸಿಕೊಂಡು, ಪುಟ್ಟಿಯ ಸಮೀಪ ಹೊರಟರು.
ಏಯ್ ಪುಟ್ಟಿ,…
ಪುಟ್ಟಿ ಸಂಕೋಚದಿಂದ ತಲೆತಗ್ಗಿಸಿದಳು.
ನಾನು ನಿಮ್ಮಜ್ಜಿ,… ಇಲ್ನೋಡು ತಾತ….
ಪುಟ್ಟಿ ತಲೆ ಎತ್ತಿ ನೋಡಿ ಮತ್ತೆ ಸಂಕೋಚದಿಂದ ತಲೆ ತಗ್ಗಿಸಿದಳು.
ಮೊಮ್ಮಗಳ ಮಾತುಗಳನ್ನು ಕೇಳಿ ವರ್ಷವೇ ಆಗಿದ್ದ ಸುನಂದ ಮತ್ತು ಆನಂದನಿಗೆ ಖುಷಿಯೋ ಖುಷಿ.
ಪುಟ್ಟಿ ಅಜ್ಜ ಅಜ್ಜಿಯನ್ನು ಕಂಡು ಮುಸಿ ಮುಸಿ ನಗುತ್ತ ವಾಹನದ ಕಡೆಗೆ ಹೆಜ್ಜೆಹಾಕತೊಡಗಿದಳು. ವಾಹನ ಹತ್ತಿ ಕುಳಿತ ಪುಟ್ಟಿಯನ್ನು ಕೆಲ ನಿಮಿಷಗಳ ಕಾಲ ಮಾತನಾಡಿಸಿ, ಆಕೆಯ ಕೈಗೆ ಒಂದಷ್ಟು ಹಣ ಕೊಟ್ಟರು.
“ಮೇಡಮ್ ನಾನು ಹೊರಡಲೇ?” ಹೆಚ್ಚು ಸಮಯ ಕಾಯಲಾಗದ ವಾಹನದ ಡ್ರೈವರ್ ನಮ್ಮ ಸೂಚನೆಗಾಗಿ ಎದುರುನೋಡಿದ. ವಾಹನ ಮುಂದಕ್ಕೆ ಚಲಿಸುತ್ತಿದ್ದಂತೆ ಪುಟ್ಟಿ ಕಿಟಕಿಯಿಂದಲೇ ಟಾಟಾ, ಬಾಯ್ ಬಾಯ್ ಎನ್ನುತ್ತ ತಮಗಾದ ಖುಷಿ ವ್ಯಕ್ತಪಡಿಸಿದರು.
ಮರುದಿನ ಸೊಸೆಯಿಂದ ಕರೆ ಬಂತು.
ಹಲೋ…
ಹೇಳು ಕಲ್ಪನಾ.
ಪುಟ್ಟಿನ ನೋಡೋಕೆ ನಿನ್ನೆ ಸ್ಕೂಲ್ ಹತ್ರ ಹೋಗಿದ್ರಂತೆ?
ನೋಡ್ಬೇಕು ಅನ್ನಿಸ್ತು ಕಲ್ಪನಾ, ಅದಕ್ಕೆ ನಿಮ್ಮ ಮಾವ ಮತ್ತು ನಾನು ಹೋಗಿದ್ವಿ.
ನೋಡಿ ಅತ್ತೆ, ನಿಮ್ಗೆ ಮೊಮ್ಮಗಳನ್ನು ನೋಡ್ಬೇಕು ಅನಿಸಿದ್ರೆ, ಸ್ಕೂಲ್ ಹತ್ರ ಹೋಗ್ಬೇಡಿ. ಅಲ್ಲೆಲ್ಲಾ ತುಂಬಾ ಸ್ತ್ರಿಟ್ ಇದೆ. ಮಕ್ಕಳನ್ನು ಮಾತಾಡ್ಸೋಕೆ ಬೇರೆ ಯಾರನ್ನೂ ಅಲ್ಲಿ ಬಿಡಲ್ಲ. ನಿಮಗೆ ನಮ್ಮ ಮನೆಗೆ ಬರೋಕೆ ಇಷ್ಟ ಇಲ್ಲ ಅಂದ್ರೆ ಯಾವುದಾದ್ರೂ ಜಾಗಕ್ಕೆ ನಾನೇ ಮಗಳನ್ನು ಕರ್ಕೊಂಡ್ ಬರ್ತೀನಿ. ಬರುವಾಗ ಪೋನ್ ಮಾಡಿ ಬನ್ನಿ.
ಸೊಸೆಯ ಮಾತು ಕೇಳಿದ ಸುನಂದಳಿಗೆ ದುಖಃ ತಡೆಯಲಾಗಲಿಲ್ಲ. ಮೊಮ್ಮಗಳನ್ನು ನೋಡಲೂ ಇವರು ಬಿಡುತ್ತಿಲ್ಲವಲ್ಲ ಎಂದು ದುಖಿಃತಳಾದಳು. ತನ್ನಲ್ಲಿರುವ ದುಖಃ ತೋರ್ಪಡಿಸಿಕೊಳ್ಳದೆ,
“ಸರಿ ಕಲ್ಪನಾ, ಹಾಗೇ ಮಾಡ್ತೀನಿ” ಎನ್ನುತ್ತಾ ಕರೆ ಕಡಿತ ಮಾಡಿದಳು.
….…
ತಿಂಗಳುಗಳು ಕಳೆದವು. ತಮ್ಮ ಮೊಮ್ಮಗಳಿಗೆ ಒಂದು ಚಂದದ ಫ್ರಾಕ್ ಹೊಲಿದುಕೊಡಬೇಕು ಎನಿಸಿತು ಸುನಂದಳಿಗೆ. ಹೊಲೆದೇ ಬಿಟ್ಟಳು. ಅದನ್ನು ತಲುಪಿಸುವುದು ಹೇಗೆ ಎಂಬ ಪ್ರಶ್ನೆ ಸುನಂದ ಮತ್ತು ಆನಂದನಿಗೆ ಮೂಡಿತು.
ಒಂದು ದಿನ ಮೊಮ್ಮಗಳಿಗೆ ಫ್ರಾಕ್ ಕೊಟ್ಟು, ಅವಳ ಜೊತೆ ಸ್ವಲ್ಪ ಸಮಯ ಆಟವಾಡಿ ಬರಲು ನಿರ್ಧರಿಸಿದ ಸುನಂದ ಸೊಸೆಗೆ ಪೋನ್ ಕರೆ ಮಾಡುತ್ತಾಳೆ.
ಹಲೋ ಕಲ್ಪನಾ…
ಹೇಳಿ ಅತ್ತೆ.
ಪುಟ್ಟಿಯನ್ನು ನೋಡ್ಬೇಕು ಅನ್ಸುತ್ತೆ, ಆಕೆಗೆ ಫ್ರಾಕ್ ಹೊಲಿದಿದ್ದೀನಿ. ಅದನ್ನು ಹಾಕೊಂಡ್ರೆ ಅವ್ಳು ತುಂಬಾ ಚೆಂದ ಕಾಣಿಸ್ತಾಳೆ. ನಾಳೆ ನೀವು ಇರೋ ಏರಿಯಾಗೆ ಬರ್ತೀನಿ. ಪುಟ್ಟಿನ ಎಲ್ಲಿಗೆ ಕರ್ಕೊಂಡು ಬರ್ತೀಯಾ?
ಪುಟ್ಟಿಗೆ ಹುಷಾರಿಲ್ಲ ಅತ್ತೆ.
ಏನಾಯ್ತು ಕಲ್ಪನಾ? (ತುಂಬಾ ಗಾಬರಿಯಿಂದ ಕೇಳುತ್ತಾಳೆ ಸುನಂದಾ)
ಒಂದು ವಾರದಿಂದ ಜ್ವರ ಇದೆ. ಸ್ಕೂಲ್ ಗೂ ರಜೆ ಹಾಕಿದ್ದೀವಿ. ನಿಮ್ ಮಗನಿಗೂ ಹುಷಾರಿಲ್ಲ.
ಅವನಿಗೆ ಏನಾಯ್ತು ಕಲ್ಪನಾ? (ಮತ್ತಷ್ಟು ಗಾಬರಿಯಿಂದ ಸುನಂದ ಪ್ರಶ್ನಿಸುತ್ತಾಳೆ. ಪೋನ್ ಸಂಭಾಷಣೆ ಆಲಿಸುತ್ತಿದ್ದ ಆನಂದ “ಅಡ್ರೆಸ್ ಕೇಳು. ನಾನೂ ಬರ್ತೀನಿ” ಎಂದು ಮೆದು ದ್ವನಿಯಲ್ಲಿ ಹೇಳುತ್ತಾರೆ).
ಅವ್ರು ಬಿದ್ದು ಕಾಲಿಗೆ ಪೆಟ್ಟಾಗಿದೆ. ಅವರೂ ಕೆಲಸಕ್ಕೆ ಹೋಗಿಲ್ಲ. ಮನೆಯಲ್ಲೇ ಇದ್ದಾರೆ.
ಅಯ್ಯೋ, ಅವ್ನು ತಂಬಾ ಎಚ್ಚರಿಕೆಯಿಂದ ನಡೆಯುತ್ತಿದ್ದನಲ್ಲ, ಪೆಟ್ಟು ಹೇಗಾಯ್ತು? ಅಡ್ರೆಸ್ ಎಲ್ಲಿ ಬರುತ್ತೆ ಹೇಳು, ನಾವು ಈಗಲೇ ಬರ್ತೀವಿ.
ಅದೇ ಅತ್ತೆ, ಜೆಪಿ ನಗರ… ಅತ್ತೆ ಒಂದು ಮಾತು ಕೇಳ್ತೀನಿ, ಬೇಜಾರ್ ಮಾಡ್ಕೊಬೇಡಿ.
ಸುನಂದಳಿಗೆ ಮತ್ತಷ್ಟು ಗಾಬರಿ, ಕೆಲ ಕ್ಷಣದಲ್ಲಿ ಏನೇನೋ ಕೆಟ್ಟ ಕಲ್ಪನೆಗಳು ಮನದಲ್ಲಿ ಮೂಡಿದವು. “ಅದೇನು ಕೇಳು ಕಲ್ಪನ.”
ನೀವು ನಿಮ್ಮ ಮಗನಿಗೆ ಕೈ ಮುರೀಲಿ, ಕಾಲು ಮುರೀಲಿ, ಅವರಿಗೆ ಕಷ್ಟ ಬರಲಿ… ಅಂತ ಶಾಪ ಹಾಕ್ತೀರಾ?
ಸೊಸೆಯ ಈ ಮಾತುಗಳು ಸುನಂದಳ ಎದೆಗೆ ಈಟಿ ಚುಚ್ಚಿದಂತೆ ಭಾಸವಾಯ್ತು. ಮಕ್ಕಳು ಎಷ್ಟೇ ಕೆಟ್ಟವರಾದರೂ, ಅವರು ತಮ್ಮ ಹೆತ್ತವರನ್ನು ನೋಡಿಕೊಳ್ಳದಿದ್ದರೂ, ಯಾವ ತಾಯಿಯಾದರೂ ತನ್ನ ಮಕ್ಕಳಿಗೆ ಶಾಪ ಹಾಕುತ್ತಾರೆಯೇ?
ಏನು ಕಲ್ಪನಾ, ಇಂತಹ ಮಾತಾಡ್ತೀಯಾ? ಯಾರಾದ್ರೂ ತನ್ನ ಮಕ್ಕಳಿಗೆ ಶಾಪ ಹಾಕ್ತಾರಾ? ಯಾಕೆ ಈ ರೀತಿ ಮಾತಾಡ್ತೀಯ ನೀನು? ಇಷ್ಟಕ್ಕೂ ನಾನಾಗಲೀ, ನಿಮ್ಮ ಮಾವನಾಗಲೀ ಈ ಶಾಪ, ಪಾಪ ಏನನ್ನು ನಂಬೋದಿಲ್ಲ ಅಂತ ನಿಂಗೂ ಗೊತ್ತಲ್ವಾ?
ಯಾವ ದೇವರನ್ನು ಕೇಳಿದ್ರೂ, ಯಾವ ಪೂಜಾರಿಗಳನ್ನು ಕೇಳಿದ್ರೂ “ಅವರ ತಾಯಿ ತಂದೆ ಶಾಪ ಇದೆ, ಅದರ ಪರಿಣಾಮವೇ ನಿಮಗೆ ಇಷ್ಟೆಲ್ಲಾ ಕಷ್ಟಗಳಿಗೆ ಕಾರಣ” ಅಂತಾರೆ. ನಿಮಗ್ಯಾಕೆ ನಮ್ಮ ಮೇಲೆ ಇಷ್ಟೊಂದು ದ್ವೇಷ?
ಹೀಗೆ ಅತ್ತೆ-ಸೊಸೆಯ ನಡುವೆ ಒಂದಷ್ಟು ಮಾತಿನ ಚಕಮಕಿ ನಡೆಯುತ್ತದೆ. ಕಡೆಗೂ ಮಗನ ಮನೆಯ ವಿಳಾಸ ತಿಳಿಯಲೇ ಇಲ್ಲ.
…….
ತಾನು ತುಂಬಾ ಇಷ್ಟಪಟ್ಟು ಹೊಲಿದ ಫ್ರಾಕ್ ಧರಿಸಿದ ಮೊಮ್ಮಗಳನ್ನು ನೋಡಬೇಕೆಂಬ ಅಜ್ಜಿಯ ಆಸೆ ಆಸೆಯಾಗಿಯೇ ಉಳಿಯುತ್ತದೆ. ಮೊಮ್ಮಗಳು ಬೆಳೆಯುತ್ತಾ ಹೋಗುತ್ತಾಳೆ, ಅಜ್ಜಿ ಹೊಲಿದ ಫ್ರಾಕ್ ಮಾತ್ರ ಅದೇ ಅಳತೆಯಲ್ಲಿ ಕಪಾಟಿನಲ್ಲಿ ಜೋಪಾನವಾಗಿದೆ.
ಕಪಾಟು ತೆರೆದಾಗಲೆಲ್ಲಾ ಫ್ರಾಕ್ ಕಣ್ಣಿಗೆ ಬೀಳುತ್ತದೆ. ಆಗ ಮೊಮ್ಮಗಳ ತುಂಟಾಟಗಳು, ಆಕೆಯ ಜೊತೆ ಆಡಿದ ಜೂಟಾಟಗಳು, ಆಕೆಯ ತೊದಲು ನುಡಿಗಳು ನೆನಪಿಗೆ ಬರುತ್ತವೆ. ಮೊಮ್ಮಗಳ ಜೊತೆ ಆಟವಾಡಿದ, ಆಕೆಯನ್ನು ತೊಡೆಯ ಮೇಲೆ ಮಲಗಿಸಿಕೊಂಡು ಜೋಗುಳ ಆಡಿದ, ಬೇಡ ಎಂದು ಹಠ ಮಾಡಿದಾಗಲೆಲ್ಲಾ ಮಕ್ಕಳ ಕಥೆ ಹೇಳಿ ಹಾಲು ಕುಡಿಸುತ್ತಿದ್ದ, ತಿಂಡಿ ತಿನ್ನಿಸುತ್ತಿದ್ದ, ಮಾಡಿದ ತಿಂಡಿ ಇಷ್ಟವಿಲ್ಲದಿದ್ದರೆ ಆಕೆ ಇಷ್ಟಪಡುವ ತಿಂಡಿ ಮಾಡಿಕೊಟ್ಟ ದಿನಗಳು, ಆಕೆಗೆ ನಿದ್ರೆ ಬರದಿದ್ದಾಗ ತೊಡೆಯ ಮೇಲೆ ಮಲಗಿಸಿಕೊಂಡು ಜೋಗುಳದ ಹಾಡುಗಳನ್ನು ಹಾಡುತ್ತ ಅರ್ಧರಾತ್ರಿಯವರೆಗೂ ನಿದ್ದೆಗೆಟ್ಟ ದಿನಗಳು, ಪಾರ್ಕ್ ನಲ್ಲಿ ಆಟವಾಡಿಸುತ್ತಿದ್ದ ದೃಶ್ಯಗಳೆಲ್ಲಾ ನೆನಪಿಗೆ ಬರುತ್ತಿರುತ್ತವೆ.
ನಿಮ್ಮದೊಂದು ಉತ್ತರ