ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ಏನಾಯಿತು?

ಆರ್ಥಿಕ ಬಿಕ್ಕಟ್ಟು ಜಾಗತಿಕವಾಗಿದೆ. ಅನೇಕ ಯುರೋಪಿಯನ್ ರಾಷ್ಟ್ರಗಳಲ್ಲಿ ತೀವ್ರ ಆರ್ಥಿಕ ಹಿಂಜರಿತವಿದೆ. 2008ರಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟು ಬಹುಕಾಲ ಮುಂದುವರಿದಿದೆ. ಬಂಡವಾಳಗಾರರು ಲಾಭ ಹೆಚ್ಚಿಸಿಕೊಳ್ಳಲು ತಮ್ಮ ಉತ್ಪನ್ನಗಳಿಗೆ ಹೆಚ್ಚಿನ ಬೆಲೆಗಳನ್ನು ವಿಧಿಸುತ್ತಾರೆ. ಉತ್ಪಾದಕತೆಯನ್ನು ಹೆಚ್ಚಿಸಲು ಕಾರ್ಮಿಕರ ಸಂಖ್ಯೆಯನ್ನು ಕಡಿಮೆ ಮಾಡಲು ಯಂತ್ರಗಳು ಮತ್ತು ಮಾಹಿತಿ ತಂತ್ರಜ್ಞಾನವನ್ನು ಬಳಸುತ್ತಾರೆ. ಇದರಿಂದಾಗಿ ಉದ್ಯೋಗ ನಷ್ಟ, ಜನರ ಕೊಳ್ಳುವ ಶಕ್ತಿ ಕಡಿಮೆಯಾಗುತ್ತಿದೆ. ವಸ್ತುಗಳ ಮಾರಾಟವಾಗದಿದ್ದರೆ, ಇದು ಉತ್ಪಾದನೆಯನ್ನು ನಿಧಾನಗೊಳಿಸುತ್ತದೆ. ಕಾರ್ಖಾನೆಗಳು ಕಾರ್ಯನಿರ್ವಹಿಸುವುದಿಲ್ಲ. ಇಂದು ಬಂಡವಾಳಶಾಹಿ ಈ ಸುಳಿದಲ್ಲಿ ಸಿಲುಕಿಕೊಂಡಿದೆ. ಇಂದಿನ ಭಾರತದ ಸ್ಥಿತಿಯೂ ಇದೇ ಆಗಿದೆ. ಮಾರ್ಕ್ಸ್‌ವಾದ ಪ್ರತಿಪಾದಿಸುವ ಮೂಲಭೂತ ಬದಲಾವಣೆಯನ್ನು ಮಾಡುವ ಮೂಲಕ ಮಾತ್ರ ಆರ್ಥಿಕ ಸಂಕಷ್ಟಗಳನ್ನು ಹೋಗಲಾಡಿಸಬಹುದು. ಈ ಸಂದರ್ಭದಲ್ಲಿ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದ ಬಿಜೆಪಿ ನಾಯಕರ ಮಾತುಗಳು ನೆನಪಿಗೆ ಬರುತ್ತಿವೆ. ಆ ಭರವಸೆ ಏನಾಯ್ತು ಎಂಬ ಕುರಿತು ಕಿರು ವಿಶ್ಲೇಷಣೆ ಇಲ್ಲಿದೆ.

ಭಾರತೀಯ ಜನತಾ ಪಕ್ಷದ 2014ರ ಚುನಾವಣಾ ಆಶ್ವಾಸನೆಗಳಲ್ಲಿ “ದೇಶದಲ್ಲಿನ ನಿರುದ್ಯೋಗ ಸಮಸ್ಯೆ ಬಗೆಹರಿಸುತ್ತೇವೆ” ಎಂಬುದೂ ಒಂದು. ತಾನು ಅಧಿಕಾರಕ್ಕೆ ಬಂದರೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಅಂದು ಮೋದಿ ಜನತೆಗೆ ಭರವಸೆ ಕೊಟ್ಟಿದ್ದರು. ಅವರ ಈ ಭರವಸೆ ಈಡೇರಿದ್ದರೆ, ಅವರ ಆಡಳಿತದ 12 ವರ್ಷಗಳಲ್ಲಿ ಹೊಸದಾಗಿ 24 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಈ ರೀತಿ ಆಗಿದ್ದರೆ ಇಂದು ಜನರು ಉದ್ಯೋಗ ಹುಡುಕುತ್ತಾ ಅಲೆಯುವ ಸ್ಥಿತಿ ಇರುತ್ತಿರಲಿಲ್ಲ. ಮೋದಿ ಸರ್ಕಾರ ಮತ್ತಷ್ಟು ಉದ್ಯೋಗ ಸೃಷ್ಟಿಸುವ ಮಾತಿರಲಿ, ಅಂದು ಇದ್ದ ಬಹಳಷ್ಟು ಉದ್ಯೋಗಗಳನ್ನೇ ನಾಶ ಮಾಡುವಂತಹ ನೀತಿಗಳನ್ನು ಅನುಸರಿಸಿದರು.

2014ರ ಮೊದಲೇ, ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿ, ಜನರು ಸಂಕಷ್ಟದಲ್ಲಿ ಸಿಲುಕಿದ್ದರು. ಇಂತಹ ಸಂಕಷ್ಟಗಳನ್ನೇ ಬಂಡವಾಳ ಮಾಡಿಕೊಂಡು, ತನಗೆ ಅಧಿಕಾರ ಕೊಟ್ಟರೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಜನರನ್ನು ನಂಬಿಸಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇಂತಹ ಸಂದರ್ಭದಲ್ಲಿ ಉದ್ಯೋಗಾವಕಾಶಗಳ ಹೆಚ್ಚಳಕ್ಕೆ ಸರ್ಕಾರ ಯೋಜನೆಗಳನ್ನು ರೂಪಿಸಬೇಕಿತ್ತು. ಜನರ ಆದಾಯ ಹೆಚ್ಚಿಸುವು ಮೂಲಕ, ಹಣದ ಹರಿವು ಹೆಚ್ಚಿಸುವ ಮೂಲಕ, ಜನರ ಕೊಳ್ಳುವ ಶಕ್ತಿ ಹೆಚ್ಚಿಸಲು ಬೇಕಾದ ವಾತಾವರಣ ನಿರ್ಮಿಸಬೇಕು. ಇದರಿಂದ ಸರಕುಗಳ ಮಾರಾಟ ಹೆಚ್ಚಳವಾಗುತ್ತದೆ, ಸರಕುಗಳ ಬೇಡಿಕೆ ಹೆಚ್ಚಾಗುತ್ತದೆ, ಸರಕುಗಳನ್ನು ಉತ್ಪಾಧಿಸುವ ಮತ್ತಷ್ಟು ಸಣ್ಣ ಮತ್ತು ದೊಡ್ಡ ಕಾರ್ಖಾನೆಗಳ ಸ್ಥಾಪನೆಯಾಗುತ್ತವೆ, ಹಲವರಿಗೆ ಸ್ವಂತ ಉದ್ಯೋಗ ಸೃಷ್ಟಿಸಿಕೊಳ್ಳುವ ವಾತಾವರಣ ನಿರ್ಮಾಣವಾಗುತ್ತದೆ. ಮತ್ತೊಂದೆಡೆ, ಜನರ ಪ್ರವಾಸ ಹೆಚ್ಚಾಗಿ ಪ್ರವಾಸೋದ್ಯಮದ ವೃದ್ಧಿಯ ಜೊತೆಗೆ ಸೇವಾ ವಲಯದಲ್ಲಿ ಬೇಡಿಕೆ ಹೆಚ್ಚಾಗುತ್ತದೆ, ಇದರಿಂದಾಗಿ ಸರಕು ಮತ್ತು ಸೇವಾ ವಲಯಗಳಲ್ಲಿ ಹೊಸ ಹೊಸ ಉದ್ಯೋಗ ಸೃಷ್ಟಿಗೆ ಪ್ರೋತ್ಸಾಹ ಸಿಗುತ್ತದೆ.

2014ರಲ್ಲಿ 5.44 ರಷ್ಟಿದ್ದ ನಿರುದ್ಯೋಗ ದರವು, ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ಲೆಕ್ಕಾಚಾರಗಳ ಪ್ರಕಾರ, ನಿರುದ್ಯೋಗವು 2019 ರಲ್ಲಿ ಶೇ. 5.27 ರಿಂದ 2020 ರಲ್ಲಿ ಶೇ. 8 ಕ್ಕೆ ಏರಿತು. ಆ ನಂತರದ ಎರಡು ವರ್ಷಗಳಲ್ಲಿ ಶೇ. 5.98 ಹಾಗೂ ಶೇ. 7.33ರಷ್ಟು ದಾಖಲಾಗಿದೆ. ಆವರ್ತಕ ಕಾರ್ಮಿಕ ಬಲ ಸಮೀಕ್ಷೆ (PLFS) 2025ರ ವಾರ್ಷಿಕ ಸಮೀಕ್ಷೆಯ ಪ್ರಕಾರ, 15 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಲ್ಲಿ ಮಾಧ್ಯಮಿಕ ಶಿಕ್ಷಣ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷಣ ಪಡೆದವರ ನಿರುದ್ಯೋಗ ದರವು 2025ರಲ್ಲಿ ಶೇ. 6.5ರಷ್ಟಿದೆ. ಇದೇ ಅವಧಿಯಲ್ಲಿ ನಿಯಮಿತ ವೇತನ ಅಥವಾ ಸಂಬಳ ಪಡೆಯುವ ಉದ್ಯೋಗಿಗಳ ಪಾಲು ಶೇ. 23.6ರಷ್ಟಿದೆ ಎಂದು ಸರ್ಕಾರ ತಿಳಿಸಿದೆ.

ಈಗ ದೇಶದಲ್ಲಿ ಉದ್ಯೋಗ ಅರಸಿ ಅಲೆಯುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಲಭ್ಯವಿರುವ ಉದ್ಯೋಗಗಳು ಯಾವುದೇ ಹೆಚ್ಚಳವಿಲ್ಲದೆ ಹಾಗೆಯೇ ಉಳಿದಿವೆ. ವರ್ಷದಿಂದ ವರ್ಷಕ್ಕೆ ಸೂಕ್ತ ವಯೋಮಾನದವರ ಸಂಖ್ಯೆ ಮತ್ತು ಉದ್ಯೋಗ ಅರಸಿ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಮತ್ತೊಂದಡೆ, ಇದಕ್ಕೆ ಪೂರಕವಾಗಿ ಉದ್ಯೋಗಾವಕಾಶಗಳ ಪ್ರಮಾಣದಲ್ಲಿ ಹೆಚ್ಚಾಗುತ್ತಿಲ್ಲ.

ಏಕಾಏಕಿ ನೋಟು ಅಮಾನ್ಯೀಕರಣ

ಮಾರುಕಟ್ಟೆಯಲ್ಲಿ ಹಣದ ಹರಿವು ಹೆಚ್ಚಿಸಬೇಕಾಗಿದ್ದ ಮೋದಿ ಸರ್ಕಾರ ಮಾಡಿದ್ದೇನು? 2016 ರ ನವೆಂಬರ್ 8ರ ರಾತ್ರಿ ಏಕಾಏಕಿ 500 ಮತ್ತು 1000 ರೂ ಮೌಲ್ಯದ ನೋಟುಗಳನ್ನು ಅಮಾನ್ಯೀಕರಣ ಮಾಡಿ ಘೋಷಣೆ ಮಾಡುವ ಮೂಲಕ, ಜನರ ಬಳಿ ಇದ್ದ ಅಲ್ಪ ಸ್ವಲ್ಪ ಹಣವನ್ನೂ ಹಿಂಪಡೆದು ಬಿಟ್ಟರು. ಇದರಿಂದ ರಾತ್ರಿ ಕಳೆದು ಬೆಳಗಾಗುವ ಹೊತ್ತಿಗೆ ಜನರ ಕೊಳ್ಳುವ ಶಕ್ತಿ ಮಣ್ಣುಪಾಲಾಯಿತು. ಬಹುತೇಕ ಹಣ ಬ್ಯಾಂಕುಗಳ ಖಜಾನೆ ಸೇರಿ ಬೆಚ್ಚಗೆ ಮಲಗಿದವು. ಸರ್ಕಾರದ ಇಂತಹ ಅವೈಜ್ಞಾನಿಕ ನಿರ್ಧಾರವು ಆರ್ಥಿಕ ಅಡೆತಡೆಗಳನ್ನು ಉಂಟುಮಾಡಿತು. ಉತ್ಪಾಧನಾ ಸಂಸ್ಥೆಗಳು ಉತ್ಪಾಧಿಸಿದ ಸರಕುಗಳನ್ನು ಕೊಳ್ಳುವವರೇ ಇಲ್ಲದಂತಾಯಿತು. ಸರಕುಗಳ ಮಾರಾಟವಿಲ್ಲದೆ ಲಕ್ಷಾಂತರ ಸಂಖ್ಯೆಯಲ್ಲಿ ಸಣ್ಣ ಪುಟ್ಟ ಕಾರ್ಖಾನೆಗಳು ಬಾಗಿಲು ಮುಚ್ಚಿದವು. ಅತಿ ಸಣ್ಣ, ಸಣ್ಣ ಉದ್ಯಮಿಗಳು ಸಾಲದ ಸುಳಿಗೆ ಸಿಲುಕಿಕೊಂಡರು. ಇದರಿಂದ ಕೋಟ್ಯಾಂತರ ಕಾರ್ಮಿಕರು ಕೆಲಸ ಕಳೆದುಕೊಂಡರು. ಮತ್ತೊಂದೆಡೆ, ಮದುವೆ ಮತ್ತು ಇತರೆ ಶುಭ ಕಾರ್ಯಗಳಿಗೆ ಜನರ ಬಳಿ ಹಣವೇ ಇರದ ಪರಿಸ್ಥಿತಿ ನಿರ್ಮಾಣವಾಯಿತು. ಜನರ ಓಡಾಟ ನಿಂತುಹೋಯಿತು. ಪ್ರವಾಶೋದ್ಯಮ ನೆಲ ಕಚ್ಚಿತು. ಹೋಟೆಲ್, ಬಸ್ಸು, ಟ್ಯಾಕ್ಸಿ, ಆಟೋ, ಇಂತಹ ಸೇವಾ ವಲಯದಲ್ಲಿ ದುಡಿಯುವ ಜನರ ಆದಾಯ ಕುಸಿಯಿತು. ಇಲ್ಲಿಯೂ ಬಹಳಷ್ಟು ಉದ್ಯೋಗಗಳ ನಷ್ಟವಾಗಿ ಹೋಯ್ತು.

ಸರಕು ಮತ್ತು ಸೇವಾ ತೆರಿಗೆ

ನೋಟು ಅಮಾನ್ಯೀಕರಣದಂತಹ ಸರ್ಕಾರದ ಅವೈಜ್ಞಾನಿಕ ನಿರ್ಧಾರದಿಂದ ತೀವ್ರವಾಗಿ ಬಸವಳಿದಿದ್ದ ದೇಶದ ಆರ್ಥಿಕತೆ ಇನ್ನೇನು ಸುಧಾರಿಸಿಕೊಳ್ಳುತ್ತಿದೆ ಎನ್ನುವಾಗಲೇ, 2017ರಲ್ಲಿ ಸರಕು ಮತ್ತು ಸೇವಾ ತೆರಿಗೆ (GST) ಅನುಷ್ಠಾನ ಗೊಳಿಸುವ ಮೂಲಕ ಸಣ್ಣ, ಅತಿ ಸಣ್ಣ ಕೈಗಾರಿಕೆಗಳು ಹಾಗೂ ವ್ಯಾಪಾರಿಗಳಿಗೆ ಮತ್ತೊಂದು ಹೊಡೆದ ನೀಡಿದರು.  ತೆರಿಗೆ ರಚನೆಯನ್ನು ಸರಳಗೊಳಿಸುವ ಗುರಿಯನ್ನು ಜಿಎಸ್ ಟಿ ಹೊಂದಿದೆಯಾದರೂ, ಇದು ಸಣ್ಣ ಉದ್ಯಮಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ ಅಡೆತಡೆಗಳನ್ನು ಉಂಟುಮಾಡಿತು ಮಾತ್ರವಲ್ಲ, ರಾಜ್ಯಗಳಿಗೆ ಬರುತ್ತಿದ್ದ ಆದಾಯಕ್ಕೂ ಕೊರತೆ ಉಂಟಾಗಿ, ರಾಜ್ಯಗಳ ಜನಪರ ಕಲ್ಯಾಣ ಯೋಜನೆಗಳಿಗೆ ಸಂಪನ್ಮೂಲದ ಕೊರತೆ ಉಂಟಾಯಿತು.  ಇದು ಉದ್ಯೋಗದ ಮೇಲೆ ಪರಿಣಾಮ ಬೀರಿತು.

ಹಠಾತ್ ಲಾಕ್‌ಡೌನ್ ಘೋಷಣೆ

ಜನಸಾಮಾನ್ಯರ ಮೇಲಿನ ಪ್ರಭುತ್ವದ ಇಂತಹ ದಾಳಿಗಳ ಜೊತೆಗೆ, ಪ್ರಕೃತಿಯೂ ಸೇರಿಕೊಂಡಿತು. ಭಾರತವೂ ಸೇರಿದಂತೆ ಜಗತ್ತಿನ ಎಲ್ಲಡೆ ಕೊರೊನಾ ವೈರಸ್ ದಾಳಿ ಮಾಡಿತು. ಈ ಸಾಂಕ್ರಾಮಿಕ ಭಾರತವನ್ನು ಪ್ರವೇಶಿಸದಂತೆ ಆರಂಭದಲ್ಲೇ ತಡೆಯುವ ಪ್ರಯತ್ನವನ್ನು ಸರ್ಕಾರ ಮಾಡಲಿಲ್ಲ. ಪ್ರವೇಶಿದ ನಂತರವೂ ಅದು ಮತ್ತಷ್ಟು ಹರಡದಂತೆ ಸಾಕಷ್ಟು ಮಂಜಾಗ್ರತಾ ಕ್ರಮ ಕೈಗೊಳ್ಳಲಿಲ್ಲ. ಸಾಂಕ್ರಾಮಿಕ ಹರಡಿದ ಮೇಲೆ ಮತ್ತಷ್ಟು ಹರಡದಂತೆ ಸರ್ಕಾರ ತೆಗೆದುಕೊಂಡ ಕ್ರಮವೆಂದರೆ 2020 ರಲ್ಲಿ ಹಠಾತ್ ಲಾಕ್‌ಡೌನ್ ಘೋಷಣೆ. ಜನರು ಜೀವನ ಸಾಗಿಸಲು ಅವಶ್ಯಕವಾದ ಯಾವುದೇ ಪೂರ್ವ ಸಿದ್ದತೆಯನ್ನು ಸರ್ಕಾರ ಮಾಡದೆ, ಜನತೆ ತಾವೇ ಸ್ವತಃ ವ್ಯವಸ್ಥೆ ಮಾಡಿಕೊಳ್ಳಲು ಒಂದು ದಿನವೂ ಅವಕಾಶ  ಕೊಡದೆ, ರಾತ್ರೋರಾತ್ರಿ ಹಠಾತ್ ಲಾಕ್‌ಡೌನ್ ಘೋಷಿಸಿ, ದೇಶದ 130 ಕೋಟಿ ಜನರನ್ನು ಗೃಹಬಂಧನದಲ್ಲಿ ಇರಿಸಿಬಿಟ್ಟರು. ಇದು ನಿರುದ್ಯೋಗವು ಗಗನಕ್ಕೇರಲು ಕಾರಣವಾಯಿತು. ಮೇ 2021 ರಲ್ಲಿ ಕರೋನಾವನ್ನು ನಿಯಂತ್ರಣಕ್ಕೆ ತಂದ ನಂತರವೂ ನಿರುದ್ಯೋಗ ಹೆಚ್ಚಳವು ಮತ್ತೆ ಗೋಚರಿಸತೊಡಗಿತು.

ಚಿಲ್ಲರೆ ವ್ಯಾಪಾರದಲ್ಲಿ ಎಫ್‌ಡಿಐ

ಬಹು ಬ್ರಾಂಡ್ ಚಿಲ್ಲರೆ ವ್ಯಾಪಾರದಲ್ಲಿ ಶೇ. 100 ರಷ್ಟು ವಿದೇಶಿ ನೇರ ಹೂಡಿಕೆ (ಎಫ್‌ಡಿಐ)ಗೆ ಮೋದಿ ಸರ್ಕಾರ ಅನುಮತಿ ನೀಡಿದೆ. 10 ವರ್ಷಗಳ ಹಿಂದೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಈ ನಿರ್ಧಾರವನ್ನು ಬಿಜೆಪಿ ಬಲವಾಗಿ ವಿರೋಧಿಸಿತ್ತು.

ಎಫ್ ಡಿ ಐ (FDI) ವಿರೋಧಿಸಿ ಬಿಜೆಪಿ ಅಂದು ಹೇಳಿದ್ದು ಹೀಗೆ: “ಸುಧಾರಣೆ ಹೆಸರಿನಲ್ಲಿ, ಸರ್ಕಾರವು ದೀರ್ಘಾವಧಿಯ ರಾಷ್ಟ್ರೀಯ ಹಿತಾಸಕ್ತಿಯೊಂದಿಗೆ ರಾಜಿ ಮಾಡಿಕೊಂಡಿದೆ, ಇದು ನಮ್ಮ ಆರ್ಥಿಕತೆಯ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರುತ್ತದೆ. ಕಾಂಗ್ರೆಸ್ ನೇತೃತ್ವದ ಯುಪಿಎ ವಿದೇಶಿ ಒತ್ತಡಕ್ಕೆ ಮಣಿದಿದೆ, ಉದ್ಯೋಗ ಕಳೆದುಕೊಳ್ಳಲಿರುವ ಲಕ್ಷಾಂತರ ಸಣ್ಣ ವ್ಯಾಪಾರಿಗಳ ಮೇಲೆ ಈ ನಿರ್ಧಾರದ ಪರಿಣಾಮ ಬೀರುವುದು ಖಚಿತ. ಎಫ್‌ಡಿಐ ಅಡಿಯಲ್ಲಿ ಶೇಕಡಾ 60-70 ರಷ್ಟು ವ್ಯವಹಾರವು ಕೇವಲ ಎರಡು ಅಥವಾ ಮೂರು ಕಂಪನಿಗಳ ಕೈಗೆ ಹೋಗುತ್ತದೆ, ಇದು ರೈತರಿಗೆ ಹಾನಿಕಾರಕವಾಗಿದೆ. ರೈತರು ತಮ್ಮ ಉತ್ಪನ್ನಗಳನ್ನು ಅವರಿಗೆ ಮಾರಾಟ ಮಾಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಮಾರಾಟಗಾರರ ಸಂಖ್ಯೆ ಕಡಿಮೆಯಾದಾಗ, ರೈತರಿಗೆ ಹೇಗೆ ಪ್ರಯೋಜನವಾಗುತ್ತದೆ?”. ಬಿಜೆಪಿ ಅಂದು ಹೇಳಿದ ಈ ಮಾತುಗಳು ಸತ್ಯ, ಆದರೆ, ಅದು ಅವರ ಒಡಲಾಳದ ಮಾತುಗಳಾಗಿರಲಿಲ್ಲ ಎಂಬುದೂ ಅಷ್ಟೇ ಸತ್ಯ.

ಆರ್ಥಿಕ ಬೆಳವಣಿಗೆ; ಉದ್ಯೋಗ ಬೆಳವಣಿಗೆಯಲ್ಲ

ದೇಶದಲ್ಲಿ ಆರ್ಥಿಕ ಬೆಳವಣಿಗೆ ದಾಖಲಾಗಿದ್ದರೂ ಅದು ಉದ್ಯೋಗ ಬೆಳವಣಿಗೆಗೆ ಕಾರಣವಾಗುವುದಿಲ್ಲ. ನವ ಉದಾರೀಕರಣ ನೀತಿಯಿಂದಾಗಿ ಸಣ್ಣ ಮತ್ತು ಮಧ್ಯಮ ಉದ್ಯಮ ವಲಯವು ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸುತ್ತಿದೆ. ಈ ಕ್ಷೇತ್ರಕ್ಕೆ ಸರ್ಕಾರ ನೀಡುತ್ತಿದ್ದ ಬೆಂಬಲವನ್ನು ಕ್ರಮೇಣ ಹಿಂತೆಗೆದುಕೊಳ್ಳಲಾಯಿತು. ಮೇಲಾಗಿ ವಿದೇಶಿ ಉತ್ಪನ್ನಗಳ ಆಮದಿಗೆ ಯಾವುದೇ ನಿರ್ಬಂಧಗಳಿಲ್ಲದೇ ಇರುವುದರಿಂದ ಈ ವಲಯಕ್ಕೆ ಪೈಪೋಟಿ ಹೆಚ್ಚಿದೆ. ಆ ಸ್ಪರ್ಧೆಯನ್ನು ಎದುರಿಸಲು ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಸರ್ಕಾರ ಬೆಂಬಲಿಸಬೇಕಿತ್ತು. ಆದರೆ ಅದಕ್ಕಿಂತ ಭಿನ್ನವಾಗಿ, ಹಿಂದೆ ಇದ್ದ ಬೆಂಬಲವನ್ನು ಹಿಂತೆಗೆದುಕೊಳ್ಳಲಾಯಿತು. ಕೋವಿಡ್ ನಂತರದ ಯುಗದಲ್ಲಿ ಆರ್ಥಿಕ ಬೆಳವಣಿಗೆಯ ದರವು ಏರಿದ್ದರೂ ಸಹ, ಅದು ಈ ವಲಯಕ್ಕೆ ಯಾವುದೇ ರೀತಿಯಲ್ಲಿ ಸಹಾಯ ಮಾಡಿಲ್ಲ. ಸಣ್ಣ ಮತ್ತು ಮಧ್ಯಮ ಉದ್ಯಮಗಳ ವಲಯವು ಅತ್ಯುನ್ನತ ಮಟ್ಟದ ಉದ್ಯೋಗಾವಕಾಶಗಳನ್ನು ಹೊಂದಿದೆ. ಅಂತಹ ವಲಯದ ಚೇತರಿಕೆಗೆ ಕೊಡುಗೆ ನೀಡದ ಆರ್ಥಿಕ ಬೆಳವಣಿಗೆಯ ಸ್ವರೂಪದಿಂದಾಗಿ, ಒಂದು ಕಡೆ ಆರ್ಥಿಕ ಬೆಳವಣಿಗೆಯ ದರವು ಹೆಚ್ಚುತ್ತಿರುವಂತೆ ತೋರುತ್ತಿದೆ, ಆದರೆ ಉದ್ಯೋಗಾವಕಾಶಗಳು ಹೆಚ್ಚಿಲ್ಲ.

ಸ್ಟಾರ್ಟಪ್ ಇಂಡಿಯಾ….

ಸ್ಟಾರ್ಟಪ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ ಘೋಷಣೆಗಳು ಘೋಷಣೆಗಳಾಗಿಯೇ ಉಳಿದಿವೆ. ಇದುವರೆಗೆ ರೈತರು, ಕೃಷಿ ಕಾರ್ಮಿಕರ ಆತ್ಮಹತ್ಯೆ ಬಗ್ಗೆ ಕೇಳಿದ್ದೇವೆ. ಈಗ ನಿರುದ್ಯೋಗಿಗಳ ಆತ್ಮಹತ್ಯೆಗಳೂ ನಡೆಯುತ್ತಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಅಂಕಿಅಂಶಗಳು ಹೇಳುತ್ತವೆ. ದೇಶವನ್ನು ಮುನ್ನಡೆಸಬೇಕಾದ ಯುವಕರು ನಿರುದ್ಯೋಗ ಅಥವಾ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಸಮಾಜಕ್ಕೆ ತುಂಬಲಾರದ ನಷ್ಟ. ದೇಶದ ಜನಸಂಖ್ಯೆಯ ಶೇಕಡಾ 66 ರಷ್ಟು ಜನರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ಅಂದಾಜಿಸಲಾಗಿದೆ.

ಬೇಡಿಕೆ ಹೆಚ್ಚಳವಾಗದೆ ಹೂಡಿಕೆ ಬರುವುದಿಲ್ಲ

ಹೂಡಿಕೆದಾರರನ್ನು ಹೆಚ್ಚು ಹೂಡಿಕೆ ಮಾಡಲು ಉತ್ತೇಜಿಸುವುದು ಮೋದಿ ಸರ್ಕಾರದ ನೀತಿಗಳ ಮುಖ್ಯ ತತ್ವವಾಗಿದೆ. ಉದ್ಯೋಗಾವಕಾಶ ಸೃಷ್ಟಿಸುವ ಹೆಸರಿನಲ್ಲಿ ದೊಡ್ಡ ಹೂಡಿಕೆದಾರರಿಗೆ ಸರ್ಕಾರ ಹಲವು ಅನುದಾನಗಳನ್ನು ನೀಡುತ್ತಿದ್ದರೂ ಉದ್ಯೋಗಗಳನ್ನು ಸೃಷ್ಟಿಸುವ ಜವಾಬ್ದಾರಿಯನ್ನು ಈ ಸರ್ಕಾರ ಈಡೇರಿಸುತ್ತಿಲ್ಲ. ವಿದೇಶಿ ಹೂಡಿಕೆದಾರರಿಗೂ ಸಾಕಷ್ಟು ರಿಯಾಯಿತಿ ಕೊಡುತ್ತಿದೆ. ಹೂಡಿಕೆ ಹೆಚ್ಚಾದಷ್ಟೂ ಆರ್ಥಿಕ ಬೆಳವಣಿಗೆ ದರ ಹೆಚ್ಚುತ್ತದೆ ಎಂಬುದು ಇದರ ಹಿಂದಿರುವ ವಿಚಾರ. ಆದಾಗ್ಯೂ, ಈ ವಿಧಾನಗಳು ನಿಷ್ಪ್ರಯೋಜಕವಾಗಿವೆ. ಮೊದಲ ಕಾರಣ: ಮಾರುಕಟ್ಟೆಯಲ್ಲಿ ಕೆಲವು ಏಕಸ್ವಾಮ್ಯದಾರರು ಪ್ರಾಬಲ್ಯ ಹೊಂದಿರುವಾಗ, ಮಾರುಕಟ್ಟೆಯಲ್ಲಿ ಕೊಳ್ಳುವ ಶಕ್ತಿ ಅಥವಾ ಬೇಡಿಕೆ ಎಷ್ಟು ಹೆಚ್ಚಾಗಬಹುದು ಎಂಬ ನಿರೀಕ್ಷೆಯ ಆಧಾರದ ಮೇಲೆ ಹೂಡಿಕೆಯ ಮೊತ್ತವನ್ನು ನಿರ್ಧರಿಸಲಾಗುತ್ತದೆ. ಅಂದರೆ ಮಾರುಕಟ್ಟೆಯಲ್ಲಿ ಕೊಳ್ಳುವ ಶಕ್ತಿ ಹೆಚ್ಚಿಸಲು ಕ್ರಮಕೈಗೊಂಡರೆ ಮಾತ್ರ ಹೆಚ್ಚುವರಿ ಹೂಡಿಕೆ ಬರುತ್ತದೆ. ಬೇಡಿಕೆಯನ್ನು ಹೆಚ್ಚಿಸಲು ಯಾವುದೇ ಕ್ರಮಗಳಿಲ್ಲದಿದ್ದರೆ, ಹೂಡಿಕೆದಾರರು ಹೆಚ್ಚಿನ ಹೂಡಿಕೆ ಮಾಡುವುದಿಲ್ಲ. ಸರ್ಕಾರ ಹೂಡಿಕೆದಾರರಿಗೆ ಹೆಚ್ಚುವರಿ ಪ್ರೋತ್ಸಾಹ ನೀಡುವುದರಿಂದ ಕಲ್ಯಾಣ ಯೋಜನೆಗಳ ಮೇಲಿನ ವೆಚ್ಚ ಕಡಿಮೆಯಾಗುತ್ತದೆ. ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗುತ್ತದೆ. ಇದು ಉದ್ಯೋಗ ಕಡಿತಕ್ಕೆ ಮತ್ತಷ್ಟು ಕಾರಣವಾಗುತ್ತದೆ.

ಖಾಲಿ ಹುದ್ದೆಗಳನ್ನು ತುಂಬುತ್ತಿಲ್ಲ

ಲಾಭದಲ್ಲಿರುವ ಸಾರ್ವಜನಿಕ ವಲಯದ ಕಂಪನಿಗಳನ್ನೂ ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ಹೊಸ ಉದ್ಯೋಗಗಳು ಮಾತ್ರವಲ್ಲ, ಇರುವ ಉದ್ಯೋಗಗಳೂ ನಷ್ಟವಾಗುತ್ತಿವೆ. ಜಗತ್ತಿನ ಅತಿ ದೊಡ್ಡ ಸಾರಿಗೆ ವ್ಯವಸ್ಥೆಯಾಗಿರುವ ರೈಲ್ವೇಯಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಖಾಲಿ ಬಿದ್ದಿರುವುದು ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂಬುದು ಸ್ಪಷ್ಟವಾಗಿದೆ. ಸಾರ್ವಜನಿಕ ವಲಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಪ್ರಯತ್ನ ನಡೆಯುತ್ತಿಲ್ಲ. ಆರ್ಥಿಕ ಸಂಪನ್ಮೂಲಗಳ ಕೊರತೆಯೇ ಕಾರಣ ಎಂದು ಅದು ಹೇಳಿದೆ. ಆದರೆ ಆರ್ಥಿಕ ಸಂಪನ್ಮೂಲಗಳ ಕೊರತೆಗೆ ಕಾರಣವೇನು? ಹೂಡಿಕೆದಾರರಿಗೆ ಹೆಚ್ಚುವರಿ ರಿಯಾಯಿತಿಗಳು ಕಾರಣವೇ?

ಎಂಜಿ ನರೇಗಾ ಬದಲಿಗೆ, ಗ್ರಾಮೀಣ ಉದ್ಯೋಗ ಕಸಿದುಕೊಳ್ಳುವ ʼವಿಬಿ ಗ್ರಾಮ್‌ ಜಿʼ

ಒಂದೆಡೆ ನಿರುದ್ಯೋಗ ಹೆಚ್ಚುತ್ತಿರುವುದು ಅಂಕಿಅಂಶಗಳಿಂದ ಬಹಿರಂಗವಾದರೆ, ಇನ್ನೊಂದೆಡೆ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಖರ್ಚು ಮಾಡಬೇಕಾದ ಹಣವನ್ನು ಸರ್ಕಾರ ಕಡಿತಗೊಳಿಸುತ್ತಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯ (MGNREGA) ಬದಲಿಗೆ  ‘ವಿಕಸಿತ್ ಭಾರತ್ – ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ) ಮಸೂದೆ, 2025’ (VB-GRAM G) ಅನ್ನು ಮೋದಿ ಸರ್ಕಾರ ಜಾರಿಗೆ ತಂದಿದೆ. ಕಳೆದ 12 ವರ್ಷಗಳಲ್ಲಿ, ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರವು MGNREGA ಗೆ ಹಣದ ಕೊರತೆಯನ್ನು ಉಂಟುಮಾಡಿತು ಮತ್ತು ವಿಬಿ-ಗ್ರಾಮ್‌ ಜಿ ಮಸೂದೆಯ ಮೂಲಕ ರಾಜ್ಯಗಳು ವೆಚ್ಚದ 40 ಪ್ರತಿಶತವನ್ನು ಭರಿಸುವ ಬಲವಂತಕ್ಕೆ ಒಳಪಡಿಸುತ್ತಿದೆ. ಇದರಿಂದ ಹೆಚ್ಚಿನ ಸಂಖ್ಯೆಯ ಗ್ರಾಮೀಣ ಕಾರ್ಮಿಕರನ್ನು ಉದ್ಯೋಗಾವಕಾಶಗಳಿಂದ ವಂಚಿಸುತ್ತದೆ ಮತ್ತು ಇದು ಹತಾಶ ವಲಸೆಗೆ ಕಾರಣವಾಗುತ್ತದೆ.

ಜನತೆ ಎಚ್ಚೆತ್ತುಕೊಂಡು, ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಸ್ವದೇಶಿ ಮತ್ತು ವಿದೇಶಿ ಬಂಡವಾಳಗಾರರ ಪರವಾದ ನವ ಉದಾರವಾದಿ ನೀತಿಗಳ ವಿರುದ್ದ ದ್ವನಿ ಎತ್ತದಿದ್ದರೆ, ಈ ಜನವಿರೋಧಿ, ಬಂಡವಾಳಶಾಹಿ ಪರವಾದ ನೀತಿಗಳನ್ನು ಹಿಮ್ಮೆಟ್ಟಿಸದಿದ್ದರೆ ನಿರುದ್ಯೋಗ ಸಮಸ್ಯೆಗೆ ಪರಿಹಾರ ಸಿಗಲಾರದು.


ಟಿಪ್ಪಣಿಗಳು

ನಿಮ್ಮದೊಂದು ಉತ್ತರ

ನಮ್ಮ ಹೊಸ ಲೇಖನಗಳನ್ನು ಇ-ಮೇಲ್ ಮೂಲಕ ಪಡೆಯಿರಿ