ಏಷ್ಯನ್‌ ಗೇಮ್ಸ್‌- 2026: ನಾಲ್ಕನೇ ಸ್ಥಾನ ಕಾಯ್ದುಕೊಂಡ ಭಾರತ

ಐಪಿಎಲ್, ಬಿಸಿಸಿಐ ಮತ್ತು ಇತರ ಕ್ರೀಡಾ ಸಂಘಟನೆಗಳಲ್ಲಿ ಭ್ರಷ್ಟಾಚಾರ ಮತ್ತು ರಾಜಕೀಯ ಹಸ್ತಕ್ಷೇಪ ಸಾಮಾನ್ಯವಾಗಿದೆ. ಇವೆಲ್ಲದರ ನಡುವೆಯೂ ಭಾರತ 21 ಚಿನ್ನ, 27 ಬೆಳ್ಳಿ, 37 ಕಂಚಿನ ಪದಕಗಳೊಂದಿಗೆ ಒಟ್ಟು 85 ಪದಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಕಾಯ್ದುಕೊಂಡಿತು.

ಕ್ರೀಡಾಭಿಮಾನಿಗಳನ್ನು ರೋಮಾಂಚನಗೊಳಿಸಿದ ಏಷ್ಯನ್ ಗೇಮ್ಸ್ ಸಂಭ್ರಮ 2026ರ ಅಕ್ಟೋಬರ್‌ 4ರಂದು ವೈಭವದಿಂದ ಮುಕ್ತಾಯಗೊಂಡಿತು. ಜಪಾನ್‌ನ ನಗೋಯಾ ನಗರದ ಮಿಜುಹೊ ಪಾರ್ಕ್ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ಪ್ರತಿಷ್ಠಿತ ಏಷ್ಯನ್ ಗೇಮ್ಸ್ ಅನ್ನು ಅದ್ದೂರಿಯಾಗಿ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ ನಿರ್ವಹಣೆ ಪ್ರಶಂಸೆಗೆ ಪಾತ್ರವಾಗಿದೆ. ಮುಂದಿನ ಕೂಟವನ್ನು ಕತಾರ್ ಆಯೋಜಿಸಲಿದೆ. ಇಡೀ ಜಗತ್ತು ಏಷ್ಯನ್ ಕ್ರೀಡಾಕೂಟದ ಬಗ್ಗೆ ಉತ್ಸಾಹದಿಂದಿದೆ. ಈ ಬಾರಿ, 14 ದಿನಗಳು, 46 ದೇಶಗಳು, 43 ಕ್ರೀಡೆಗಳು, 469 ಚಿನ್ನದ ಪದಕಗಳು, ಹತ್ತು ಸಾವಿರ ಕ್ರೀಡಾಪಟುಗಳು ಭಾಗವಹಿಸಿದ ಬೃಹತ್ ಕ್ರೀಡಾಕೂಟ ಇದಾಗಿರುವುದರಿಂದ ಇಡೀ ಜಗತ್ತನ್ನು ತೀವ್ರ ಕುತೂಹಲ ಮೂಡಿಸಿತ್ತು.

ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಏಷ್ಯನ್ ಗೇಮ್ಸ್‌ನ ಆತಿಥ್ಯದ ಹೊಣೆಯನ್ನು ಜಪಾನ್ ಸ್ವೀಕರಿಸಿತ್ತು. ಆರಂಭದಲ್ಲಿ ಸೌಲಭ್ಯಗಳ ಕುರಿತು ಕೆಲವು ಚರ್ಚೆಗಳು ನಡೆದರೂ, ಯಾವುದೇ ಅಡೆತಡೆಗಳಿಲ್ಲದೆ 2026ರ ಏಷ್ಯನ್ ಗೇಮ್ಸ್ ಆಯೋಜಿಸಿರುವುದು ಮೆಚ್ಚುವಂತಹ ವಿಷಯ. ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳಲ್ಲಿ ಜಪಾನ್ ಸಂಸ್ಕೃತಿ, ಸಾಂಪ್ರದಾಯಿಕ ಸಂಗೀತ, ನೃತ್ಯ ಮತ್ತು ಏಷ್ಯಾದ ಒಗ್ಗಟ್ಟನ್ನು ಬಿಂಬಿಸುವ ಪ್ರದರ್ಶನಗಳು ಗಮನ ಸೆಳೆದವು.

ಚೀನಾ ಸತತ 12ನೇ ಬಾರಿಗೆ ಒಟ್ಟು 341 ಪದಕಗಳೊಂದಿಗೆ ಮೊದಲ ಸ್ಥಾನದಲ್ಲೇ ಮುಂದುವರಿದಿದೆ. ಆ ದೇಶ 169 ಚಿನ್ನ, 89 ಬೆಳ್ಳಿ ಮತ್ತು 83 ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ. ಆತಿಥೇಯ ಜಪಾನ್ 83 ಚಿನ್ನ, 95 ಬೆಳ್ಳಿ, 91 ಕಂಚು ಸೇರಿದಂತೆ ಒಟ್ಟು 269 ಪದಕಗಳೊಂದಿಗೆ ಎರಡನೇ ಸ್ಥಾನ ಪಡೆದುಕೊಂಡಿದೆ. ದಕ್ಷಿಣ ಕೊರಿಯಾ 39 ಚಿನ್ನ, 43 ಬೆಳ್ಳಿ, 68 ಕಂಚುಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಭಾರತ ಒಟ್ಟು 85 ಪದಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಕಾಯ್ದುಕೊಂಡಿದೆ. ಭಾರತಕ್ಕೆ 21 ಚಿನ್ನ, 27 ಬೆಳ್ಳಿ, 37 ಕಂಚಿನ ಪದಕಗಳು ಬಂದವು.

12 ಕೋಟಿ ಜನಸಂಖ್ಯೆಯ ಜಪಾನ್‌ ಗೆ 269 ಪದಕಗಳು

145 ಕೋಟಿ ಜನಸಂಖ್ಯೆಯ ಭಾರತಕ್ಕೆ 85 ಪದಕಗಳು

ಜನಸಂಖ್ಯೆಯಲ್ಲಿ ಜಗತ್ತಿನ ಮೊದಲೆರಡು ಸ್ಥಾನದಲ್ಲಿರುವ ಚೀನಾ ಮತ್ತು ಭಾರತ ಪಡೆದ ಪದಕಗಳಲ್ಲಿ ಅಗಾದ ವ್ಯತ್ಯಾಸಗಳಿವೆ. ಚೀನಾ 341 ಗೆದ್ದುಕೊಂಡರೆ, ಭಾರತ 85 ಪದಕಗಳನ್ನು ಪಡೆದಿದೆ. ಭಾರತದ ಉತ್ತರಪ್ರದೇಶದ ಜನಸಂಖ್ಯೆಯ ಅರ್ಧದಷ್ಟು ಜನಸಂಖ್ಯೆ (12 ಕೋಟಿ) ಹೊಂದಿರುವ ಜಪಾನ್‌ 269 ಪದಕಗಳನ್ನು ಪಡೆದರೆ, 5 ಕೋಟಿ ಜನಸಂಖ್ಯೆ ಹೊಂದಿರುವ ದಕ್ಷಿಣ ಕೊರಿಯಾ 150 ಪದಕಗಳನ್ನು ಪಡೆದು ಮೂರನೇ ಸ್ಥಾನದಲ್ಲಿದೆ. 3.5 ಕೋಟಿ ಜನಸಂಖ್ಯೆ ಹೊಂದಿರುವ ಉಜ್ಬೇಕಿಸ್ತಾನ್ 70 ಪದಕಗನ್ನು ಗೆದ್ದುಕೊಂಡಿದೆ. ಇದರಿಂದಲೇ ಭಾರತ ಸರ್ಕಾರವು ಕ್ರೀಡೆಗೆ ಎಷ್ಟು ಪ್ರೋತ್ಸಾಹ ಕೊಡುತ್ತದೆ ಎಂಬುದು ತಿಳಿಯುತ್ತದೆ.

ಆದರೆ, ಅಪಾರ ನಿರೀಕ್ಷೆಗಳೊಂದಿಗೆ ಜಪಾನ್ಗೆ ತೆರಳಿದ್ದ ಭಾರತೀಯ ಕ್ರೀಡಾಪಟುಗಳು ಆ ಮಟ್ಟದ ಪ್ರತಿಭೆಯನ್ನು ಪ್ರದರ್ಶಿಸದಿರುವುದು ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದೆ. ಹ್ಯಾಂಗ್‌ಝೌನಲ್ಲಿ 2023 ರಲ್ಲಿ ನೀಡಿದ ಪ್ರದರ್ಶನಕ್ಕಿಂತ ಉತ್ತಮವಾಗಿ ಪ್ರದರ್ಶನ ನೀಡಲು ಬಯಸಿದ್ದರು, ಆದರೆ ಆ ಮಟ್ಟವನ್ನು ತಲುಪಲು ಸಾಧ್ಯವಾಗಲಿಲ್ಲ. 2023ರ ಕ್ರೀಡಾಕೂಟದಲ್ಲಿ ಒಟ್ಟು 106 ಪದಕಗಳನ್ನು ಗೆದ್ದಿದ್ದ ಭಾರತ, ಈ ಬಾರಿ 85 ಪದಕಗಳಿಗೆ ಮಾತ್ರ ಸೀಮಿತವಾಯಿತು. ಮಹಿಳಾ ಹಾಕಿ ವಿಭಾಗದಲ್ಲಿ ಎರಡು ಚಿನ್ನದ ಪದಕಗಳು ಬಂದಿವೆ. ಕಳೆದ ಬಾರಿಗೆ ಹೋಲಿಸಿದರೆ 21 ಪದಕಗಳು ಕಡಿಮೆಯಾಗಿವೆ. ಉಜ್ಬೇಕಿಸ್ತಾನ್ ಮತ್ತು ನಾವು ಒಂದೇ ಸಂಖ್ಯೆಯ ಚಿನ್ನದ ಪದಕಗಳನ್ನು ಗೆದ್ದಿದ್ದರೂ, ಭಾರತ ಇತರ ಪದಕಗಳನ್ನು ಹೆಚ್ಚಾಗಿ ಗೆದ್ದಿದ್ದರಿಂದ ನಾಲ್ಕನೇ ಸ್ಥಾನವನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು.

ಅಥ್ಲೆಟಿಕ್ಸ್ ಮತ್ತು ಶೂಟಿಂಗ್ ವಿಭಾಗಗಳಲ್ಲಿನ ವೈಫಲ್ಯವೇ ಪದಕಗಳು ಕಡಿಮೆಯಾಗಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. 30 ಶೂಟರ್‌ಗಳು ಭಾಗವಹಿಸಿದ್ದರೂ 3 ಚಿನ್ನ, 8 ಬೆಳ್ಳಿ, 4 ಕಂಚಿನ ಪದಕಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಹ್ಯಾಂಗ್‌ಝೌನಲ್ಲಿ ಭಾರತ ಶೂಟಿಂಗ್‌ನಲ್ಲಿ ಕ್ರಮವಾಗಿ 7, 9, 6 ಪದಕಗಳನ್ನು ಗೆದ್ದಿತ್ತು. ಮಹಿಳೆಯರ ಏರ್ ಪಿಸ್ಟಲ್ ವಿಭಾಗದಲ್ಲಿ ಒಂದೇ ಒಂದು ಪದಕವೂ ಬರಲಿಲ್ಲ. ಟ್ರ್ಯಾಪ್ ಶೂಟಿಂಗ್‌ ವಿಭಾಗದಲ್ಲಿ ಹರ್ಯಾಣದ ನೀರೂ ಧಂಡಾ ಮೂರು ಪದಕಗಳೊಂದಿಗೆ ಮಿಂಚಿದರು..

ಆರ್ಚರಿಯಲ್ಲಿ ನಮ್ಮ ಕ್ರೀಡಾಪಟುಗಳು ನಿರೀಕ್ಷೆಗೆ ತಕ್ಕಂತೆ ಸಾಧನೆ ಮಾಡಿದರು. ಯುವ ಪ್ರತಿಭೆ ಕುಮ್ಕುಮ್ ಮೊಹದ್, ವೈಯಕ್ತಿಕ ರಿಕರ್ವ್ ವಿಭಾಗದಲ್ಲಿ ಮೊದಲ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ದಾಖಲೆ ನಿರ್ಮಿಸಿದರೆ, 5 ಚಿನ್ನ, 2 ಬೆಳ್ಳಿ, 2 ಕಂಚು ಸೇರಿದಂತೆ ಒಟ್ಟು 9 ಪದಕಗಳನ್ನು ಗಳಿಸಿದರು. ಕಳೆದ ಬಾರಿಯೂ ಭಾರತಕ್ಕೆ 9 ಪದಕಗಳೇ ಬಂದಿದ್ದವು. ಭಾರತದ ಸ್ಪರ್ಧಿಸಿದ್ದ ಈಜು, ಸೈಕ್ಲಿಂಗ್ ಮುಂತಾದ ಹಲವು ಕ್ರೀಡೆಗಳಲ್ಲಿ ಒಂದೇ ಒಂದು ಪದಕವೂ ಬರಲಿಲ್ಲ. ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​ಸ್ಟಾರ್ ಅಥ್ಲೀಟ್‌ಗಳಾದ ಕುಮ್ಕುಮ್ ಮೊಹೂದ್ ಮತ್ತು ಸುಜೀತ್ ಕಲ್ಕಲ್ ಅವರಿಗೆ ಚೊಚ್ಚಲ ಜಸ್ಪಾಲ್ ರಾಣಾ ಮತ್ತು ರಾಜಾ ರಣಧೀರ್ ಸಿಂಗ್ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಭಾರತದ ಯುವ ಕುಸ್ತಿಪಟು ಸುಜೀತ್ ಕಲ್ಕಲ್ ಅವರು, ಪುರುಷರ ಫ್ರೀಸ್ಟೈಲ್ 65 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ.

2047ರ ವೇಳೆಗೆ ‘ವಿಕಸಿತ ಭಾರತ್’ ಎಂಬ ಘೋಷಣೆ ಮುನ್ನೆಲೆಗೆ ತಂದಿರುವ ಮೋದಿ ಸರ್ಕಾರ, 2036ರಲ್ಲಿ ನಡೆಯುವ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಟಾಪ್-10ರಲ್ಲಿ ನಿಲ್ಲಿಸುವುದಾಗಿ ಘೋಷಿಸಿದೆ. ಆದರೆ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪ್ರದರ್ಶನವನ್ನು ನೋಡಿದರೆ ಅದು ಬರಿ ಕನಸಿನ ಮೂಟೆಯಂತೆ ಭಾಸವಾಗುತ್ತದೆ. ಕ್ರೀಡಾಪಟುಗಳನ್ನು ಸಜ್ಜುಗೊಳಿಸಲು 702 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ.

ಭಾರತವು ಕ್ರೀಡಾ ಶಕ್ತಿಯಾಗಿ ಹೊರಹೊಮ್ಮಬೇಕಾದರೆ, ಸರ್ಕಾರವು ಗ್ರಾಮೀಣ ಮತ್ತು ಶಾಲಾ ಹಂತದಿಂದಲೇ ಕ್ರೀಡೆಗಳನ್ನು ಪ್ರೋತ್ಸಾಹಿಸಬೇಕು. ಬಜೆಟ್‌ನಲ್ಲಿ ಸೂಕ್ತ ನಿಧಿ ಮೀಸಲಿಟ್ಟು ಮೂಲಸೌಕರ್ಯಗಳನ್ನು ಕಲ್ಪಿಸಬೇಕು. ಆ ಕೆಲಸವನ್ನು ಮಾಡದೆ ಭಾರತವನ್ನು ಕ್ರೀಡೆಯಲ್ಲಿ ಅಗ್ರಸ್ಥಾನಕ್ಕೇರಿಸುತ್ತೇವೆ ಎಂದರೆ ಅದು ಸಾಧ್ಯವಾಗದ ಮಾತು. ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ ನೀಡಿದ ತಮ್ಮದೇ ಪಕ್ಷದ ಸಂಸದನನ್ನು ಸರ್ಕಾರ ಬೆಂಬಲಿಸಿ ನಿಂತಿತು. ಒಲಿಂಪಿಕ್ಸ್ ಪದಕಗಳನ್ನು ವಾಪಸ್ ನೀಡುತ್ತೇವೆ ಎಂದು ನಿರಸನಗೊಳಿಸಿದರೂ ಆಲಿಸಲಿಲ್ಲ. ಐಪಿಎಲ್, ಬಿಸಿಸಿಐ ಮತ್ತು ಇತರ ಕ್ರೀಡಾ ಸಂಘಟನೆಗಳಲ್ಲಿ ಭ್ರಷ್ಟಾಚಾರ ಮತ್ತು ರಾಜಕೀಯ ಹಸ್ತಕ್ಷೇಪ ಸಾಮಾನ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತವನ್ನು ಕ್ರೀಡೆಯಲ್ಲಿ ವಿಕಸಿತಗೊಳಿಸುತ್ತೇವೆ ಎನ್ನುವುದು ದೊಡ್ಡ ಜೋಕ್!

ಹೆಚ್ಚು ಚಿನ್ನದ ಪದಕಗಳು ಮಹಿಳೆಯರಿಂದ

ಜಪಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತಂಡ ಸಾಧಿಸಿದ 85 ಪದಕಗಳಲ್ಲಿ 21 ಚಿನ್ನ, 27 ಬೆಳ್ಳಿ ಮತ್ತು 37 ಕಂಚು ಪದಕಗಳಿವೆ. ಇದರಲ್ಲಿ 11 ಚಿನ್ನ, 11 ಬೆಳ್ಳಿ, 16 ಕಂಚು ಸೇರಿದಂತೆ ಒಟ್ಟು 38 ಪದಕಗಳನ್ನು ಮಹಿಳಾ ಕ್ರೀಡಾಪಟುಗಳೇ ಪಡೆದಿರುವುದು ದೇಶಕ್ಕೆ ಹೆಮ್ಮೆಯ ವಿಷಯ. ಪುರುಷರು ಮತ್ತು ಮಹಿಳೆಯರು ಜೊತೆಯಾಗಿ ಆಡಿದ ಪಂದ್ಯಗಳಲ್ಲಿಯೂ 3 ಚಿನ್ನ, 2 ಬೆಳ್ಳಿ, 4 ಕಂಚು ಸೇರಿ ಒಟ್ಟು 9 ಪದಕಗಳು ಬಂದಿವೆ. ಇದು ಮಹಿಳೆಯರು ಕ್ರೀಡೆಯಲ್ಲಿ ಸಾಧಿಸಿದ ಗೆಲುವು ಮಾತ್ರವಲ್ಲ; ಅವರ ಸಾಮರ್ಥ್ಯವನ್ನು ಕೀಳಾಗಿ ಕಾಣುವ ಸಾಮಾಜಿಕ ದೃಷ್ಟಿಕೋನದ ಮೇಲೆ ಸಾಧಿಸಿದ ಗೆಲುವು ಕೂಡ ಆಗಿದೆ.

ಭಾರತೀಯ ಮಹಿಳಾ ಹಾಕಿ ತಂಡವು 44 ವರ್ಷಗಳ ನಂತರ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದೆ. ಫೈನಲ್‌ನಲ್ಲಿ ಚೀನಾವನ್ನು ಸೋಲಿಸಿ 2028ರ ಒಲಿಂಪಿಕ್ಸ್‌‌ಗೆ ನೇರವಾಗಿ ಅರ್ಹತೆ ಗಿಟ್ಟಿಸಿಕೊಂಡಿದೆ. ಬಿಲ್ಲುಗಾರಿಕೆಯಲ್ಲಿ (Archery) 17 ವರ್ಷದ ಕುಮ್ಕುಮ್ ಅನಿಲ್‌ ಮೊಹದ್‌ (Kumkum Anil Mohod) ವೈಯಕ್ತಿಕ ರಿಕರ್ವ್ ವಿಭಾಗದಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದಾಳೆ. ಶೂಟಿಂಗ್‌ನಲ್ಲಿ ನೀರೂ ಧಾಂಡಾ (Neeru Dhanda) ಮಹಿಳೆಯರ ಟ್ರ್ಯಾಪ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು, ಏಷ್ಯನ್ ಗೇಮ್ಸ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಬಾಕ್ಸಿಂಗ್‌ನಲ್ಲಿ ಲವ್ಲೀನಾ ಬೊರ್ಗೊಹೈನ್ ಮತ್ತು ಪರ್ವೀನ್ ಹೂಡಾ ಚಿನ್ನದ ಪದಕಗಳನ್ನು ಸಾಧಿಸಿದ್ದಾರೆ.

ಪ್ರತಿಯೊಂದು ಪದಕದ ಹಿಂದೆಯೂ ಒಂದೊಂದು ಕಥೆಯಿದೆ

ನೀರೂ ಧಾಂಡಾ ಹರಿಯಾಣದ ಬಡ ರೈತ ಕುಟುಂಬದಿಂದ ಬಂದವರು. ಎರವಲು ಪಡೆದ ಬಂದೂಕಿನಿಂದ ಅಭ್ಯಾಸ ಶುರು ಮಾಡಿ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಚಿನ್ನ ಗೆದ್ದಿದ್ದಾರೆ. ಕುಮ್ಕುಮ್ ಮೊಹದ್ ಅವರ ಪಯಣ ಅಜ್ಜಿ ನೀಡಿದ ಮೂರು ಸಾವಿರ ರೂಪಾಯಿಯಲ್ಲಿ ಕೊಂಡ ಸಾಮಾನ್ಯ ಮರದ ಬಿಲ್ಲು-ಬಾಣದಿಂದ ಆರಂಭವಾಯಿತು. ಆಕೆಯ ತಂದೆ ಸಿಹಿ ಅಂಗಡಿಗಳಿಗೆ ರಟ್ಟಿನ ಪೆಟ್ಟಿಗೆಗಳನ್ನು ತಯಾರಿಸುತ್ತಾ ಕುಟುಂಬವನ್ನು ಸಲಹುತ್ತಿದ್ದರು. ಆರ್ಥಿಕ ಸಂಕಷ್ಟಗಳಿದ್ದರೂ ಕುಟುಂಬವು ಆಕೆಯ ಆಶಯಕ್ಕೆ ಬೆಂಬಲವಾಗಿ ನಿಂತಿತು. ಪ್ರತಿಭೆಗೆ ಬಡತನ ಅಡ್ಡಿಯಾಗಬಹುದು, ಆದರೆ ಪಟ್ಟುಹಿಡಿದ ಸಾಧನೆಗೆ ಕುಟುಂಬದ ಪ್ರೋತ್ಸಾಹ, ಸರಿಯಾದ ತರಬೇತಿ ಮತ್ತು ಅವಕಾಶಗಳು ಜೊತೆಯಾದರೆ ಅಸಾಧ್ಯವೆನಿಸುವ ಗುರಿಗಳನ್ನು ಸಹ ತಲುಪಬಹುದು ಎಂಬುದಕ್ಕೆ ಈ ಗೆಲುವುಗಳೇ ಸಾಕ್ಷಿ.

ಶ್ರಮಪಟ್ಟರೆ ಗುರಿ ಸಾಧಿಸಬಹುದು. ಆದರೆ, ಆ ಶ್ರಮಕ್ಕೆ ಪೂರಕವಾದ ವಾತಾವರಣವೂ ಇರಬೇಕು. ಒಬ್ಬ ಹೆಣ್ಣು ಕ್ರೀಡಾಪಟುವಾಗಬೇಕಾದರೆ ಮೈದಾನ, ತರಬೇತುದಾರರು, ಸಲಕರಣೆಗಳು ಮತ್ತು ಆರ್ಥಿಕ ನೆರವು ಬೇಕು. ನಮ್ಮ ಸಮಾಜದಲ್ಲಿ ಗಂಡುಮಕ್ಕಳಿಗೆ ಸಿಗುವ ಪ್ರೋತ್ಸಾಹ ಹೆಣ್ಣುಮಕ್ಕಳಿಗೆ ಸಿಗುವುದಿಲ್ಲ. ಮನೆಯ ಗೌರವದ ಹೆಸರಿನಲ್ಲಿ ಸಂಪ್ರದಾಯದ ಕಟ್ಟುಪಾಡುಗಳು, ಭದ್ರತೆಯ ಹೆಸರಿನಲ್ಲಿ ಪ್ರಯಾಣದ ಮೇಲಿನ ನಿರ್ಬಂಧಗಳು ನಿರಂತರವಾಗಿ ಬೆನ್ನಟ್ಟಿರುತ್ತವೆ. ತರಬೇತಿ ಪಡೆಯುವ ಸ್ಥಳದಲ್ಲೂ ತಾರತಮ್ಯ ಮತ್ತು ಕಿರುಕುಳವನ್ನು ಎದುರಿಸಬೇಕಾಗಿರುವುದು ಮತ್ತೊಂದು ದುರಂತ.

ದೇಶಕ್ಕೆ ಎಷ್ಟೋ ಪದಕಗಳನ್ನು ತಂದುಕೊಟ್ಟ ವಿನೇಶ್ ಫೋಗಟ್ ಮತ್ತು ಸಾಕ್ಷಿ ಮಲಿಕ್ ಅವರಂತಹ ಮಹಿಳಾ ಕುಸ್ತಿಪಟುಗಳು, ತಮ್ಮ ಮೇಲೆ ಲೈಂಗಿಕ ಕಿರುಕುಳ ನೀಡಿದ ಅಂದಿನ ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಹಾಗೂ ಬಿಜೆಪಿ ಮಾಜಿ ಸಂಸದ ಬ್ರಿಜ್ ಭೂಷಣ್ ವಿರುದ್ಧ ಹೋರಾಟಕ್ಕಿಳಿದರೂ ಸೂಕ್ತ ನ್ಯಾಯ ಸಿಗಲಿಲ್ಲ. ಕಿರುಕುಳಗಳಿಂದ ಪುರುಷಪ್ರಧಾನ ಮನಸ್ಥಿತಿ ಹೆಚ್ಚಾಗುತ್ತಿದೆ. ಆದಾಗ್ಯೂ, ಆ ಬೇಲಿಗಳನ್ನು ಮುರಿದು, ಆಧಿಪತ್ಯವನ್ನು ಎದುರಿಸಿ ಮಹಿಳೆಯರು ತಮ್ಮನ್ನು ತಾವು ನಿರೂಪಿಸಿಕೊಳ್ಳುತ್ತಿದ್ದಾರೆ.

ಪದಕಗಳನ್ನು ಗೆದ್ದ ಕರ್ನಾಟಕದ ಕ್ರೀಡಾಪಟುಗಳು

2026ರ ಏಷ್ಯನ್ ಗೇಮ್ಸ್‌ನಲ್ಲಿ ಕರ್ನಾಟಕದ ಕ್ರೀಡಾಪಟುಗಳು ಒಟ್ಟು 4 ಚಿನ್ನ, 3 ಬೆಳ್ಳಿ ಮತ್ತು 2 ಕಂಚು ಸೇರಿದಂತೆ 9 ಪದಕಗಳನ್ನು ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಮೈಸೂರಿನ ಪ್ರಣವಿ ಅರಸ್ ಅವರು ಮಹಿಳೆಯರ ವೈಯಕ್ತಿಕ ಗಾಲ್ಫ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಏಷ್ಯನ್ ಗೇಮ್ಸ್‌ನ ವೈಯಕ್ತಿಕ ಗಾಲ್ಫ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫರ್ ಎಂಬ ಹೆಗ್ಗಳಿಕೆಗೆ  ಪಾತ್ರರಾಗಿದ್ದಾರೆ.

ಪೂವಮ್ಮ ಅವರು ಮಹಿಳೆಯರ 4×400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಭಾರತ ತಂಡದ ಪರವಾಗಿ ಚಿನ್ನದ ಪದಕ ಜಯಿಸಿದ್ದಾರೆ.

ಚಿನ್ನ ಗೆದ್ದ ಭಾರತೀಯ ಪುರುಷರ ಹಾಕಿ ತಂಡದಲ್ಲಿ ಗೋಲ್‌ಕೀಪರ್ ಆಗಿ ಮೊಹಿತ್ ಹೆಚ್.ಎಸ್.  ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

ಚಿನ್ನದ ಪದಕ ಮುಡಿಗೇರಿಸಿಕೊಂಡ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಪ್ರಮುಖ ಆಟಗಾರ್ತಿಯಾಗಿ ಶ್ರೇಯಾಂಕ ಪಾಟೀಲ್ ಇದ್ದಾರೆ.


ಟಿಪ್ಪಣಿಗಳು

ನಿಮ್ಮದೊಂದು ಉತ್ತರ

ನಮ್ಮ ಹೊಸ ಲೇಖನಗಳನ್ನು ಇ-ಮೇಲ್ ಮೂಲಕ ಪಡೆಯಿರಿ