ಎಸ್‌ಐಆರ್: ಕರ್ನಾಟಕದಲ್ಲಿ 70 ಲಕ್ಷ ಅರ್ಹ ಮತದಾರರು ಹಕ್ಕು ಕಳೆದುಕೊಳ್ಳುವರೇ?

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ಡಿಜಿಟಲೀಕರಣದ ನಂತರ 1.08 ಕೋಟಿ  ಹೆಸರುಗಳನ್ನು ಪಟ್ಟಿಯಿಂದ ಅಳಿಸಲಾಗಿದೆ. ಬೆಂಗಳೂರು ನಗರದ 1.03 ಕೋಟಿ ಮತದಾರರಲ್ಲಿ 46.88 ಲಕ್ಷ ಜನರು ಕರಡು ಪಟ್ಟಿಯಿಂದ ಹೊರಗುಳಿದಿದ್ದಾರೆ. ರಾಜ್ಯದ ಒಟ್ಟು 5.54 ಕೋಟಿ ಮತದಾರರ ಪೈಕಿ, ಕರಡು ಪಟ್ಟಿಯಲ್ಲಿ 4.46 ಕೋಟಿ ಮತದಾರರ ಹೆಸರುಗಳಿವೆ. ಇವರಲ್ಲಿ 43,81,335 ಮತದಾರರಿಗೆ ನೋಟಿಸ್ ನೀಡಲಾಗುತ್ತದೆ. ಕರಡು ಪಟ್ಟಿಯಲ್ಲಿರುವ ಮತ್ತಷ್ಟು ಹೆಸರುಗಳನ್ನು ಪರಿಶೀಲನೆ ನಂತರ ಅಳಿಸಿಹಾಕುವ ಸಾಧ್ಯತೆಗಳೂ ಇವೆ. ರಾಜ್ಯದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರ ಸಂಖ್ಯೆ 5.30 ಕೋಟಿ. ಎಸ್‌ಐಆರ್‌ ಪ್ರಕ್ರಿಯೆ ರಾಜ್ಯದ ಅಂದಾಜು 70 ಲಕ್ಷಕ್ಕಿಂತ ಹೆಚ್ಚು ಮತದಾರರ ಹಕ್ಕುಗಳನ್ನು ಕಸಿದುಕೊಳ್ಳಲು ಹೊರಟಿದೆ.

“ಗಣತಿ ಫಾರಂ ತೆಗೆದುಕೊಂಡಿದ್ದೇವೆ. ಆದರೆ, ಕೆಲಸದ ಒತ್ತಡ, ಪತಿ ಕೆಲಸಕ್ಕೆ ರಜೆ ಹಾಕಲಾಗದ ಕಾರಣದಿಂದ ಅದನ್ನು ಭರ್ತಿ ಮಾಡಿ ಹಿಂತಿರುಗಿಸಲು ಸಾಧ್ಯವಾಗಲಿಲ್ಲ. 2002ರ ನಮ್ಮ ತಂದೆ/ತಾಯಿಯ ಮಾಹಿತಿಯೂ ಸಿಗಲಿಲ್ಲ…” ಹೀಗೆಂದವರು ಬೆಂಗಳೂರಿನ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಗೊಳ್ಳುವ ದಿನಗೂಲಿ ಕಾರ್ಮಿಕರ ಕುಟುಂಬದ ಗೃಹಿಣಿ ಅನಿತಾ.

“ನಾನು ಗಣತಿ ಫಾರಂ ಪಡೆಯೋದಕ್ಕೆ ಈ ಹಿಂದೆ ನಾವು ವಾಸವಿದ್ದ ಪ್ರದೇಶಕ್ಕೆ ಹೋಗಿಯೇ ಇಲ್ಲ ಅಣ್ಣ. ನನಗೆ ಟೈಮೇ ಇಲ್ಲ.” ಟೈಲರ್‌ ಅಂಗಡಿ ಇಟ್ಟಿರುವ ಪಾರ್ವತಿ, ಕರಡು ಮತದಾರರ ಪಟ್ಟಿ ಬಿಡುಗಡೆ ನಂತರವೂ ಹೇಳಿದ ಮಾತಿದು.

“ನನ್ನ ಓಟೇ ಇಲ್ಲ ಅಂಕಲ್‌, ನಮ್ಮ ತವರು ಊರಿನಲ್ಲಿ ಓಟ್‌ ಇತ್ತು, ಅದನ್ನು ತೆಗೆದುಹಾಕಿದ್ದಾರೆ. ಮದುವೆಯಾಗಿ ಬೆಂಗಳೂರಿಗೆ ಬಂದ ನಂತರ ಓಟರ್‌ ಕಾರ್ಡ್‌ ಮಾಡಿಸಲು ಅರ್ಜಿ ಕೊಟ್ಟಿದ್ದೆ, ಆದ್ರೆ, ಕಳೆದ ಚುನಾವಣೆಯಲ್ಲಿ ಮತ ಹಾಕಲು ಹೋದಾಗ ನನ್ನ ಹೆಸರೇ ಇರಲಿಲ್ಲ.” ಇದು ಪೊಲೀಸ್‌ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ಸರಸ್ವತಿ ಅವರ ಮಾತುಗಳು.

“2002ರ ಮತದಾರರ ಪಟ್ಟಿಯಲ್ಲಿ ನನ್ನ ಅಥವಾ ನನ್ನ ತಂದೆ/ತಾಯಿ ಮಾಹಿತಿ ಹುಡುಕಿದರೂ ಸಿಗಲಿಲ್ಲ. ಫಾರಂ ನಲ್ಲಿ ಆ ಭಾಗವನ್ನು ಖಾಲಿ ಬಿಟ್ಟು ಸಹಿ ಮಾಡಿ ಕೊಟ್ಟಿದ್ದೇನೆ.” ಇದು 55 ವರ್ಷದ ಆಟೋ ಚಾಲಕ ಆನಂದ್‌ ಅವರ ಮಾತುಗಳು.

“2002ರ ಮಾಹಿತಿ ಕೊಡ್ಬೇಕು ಅಂತ ನನಗೆ ಗೊತ್ತೇ ಇಲ್ಲ. ಬೆಂಗಳೂರಿನ ನಮ್ಮ ತಾಯಿಯ 2025ರ ಮತದಾರರ ಪಟ್ಟಿಯಲ್ಲಿನ ಮಾಹಿತಿ ತುಂಬಿ ಕೊಟ್ಟೆ. ಅಂಗನವಾಡಿ ಟೀಚರ್‌ (ಬಿಎಲ್‌ಒ) ಅಷ್ಟೇ ಸಾಕು ಕೊಡಿ ಅಂದ್ರು.” ಇದು ವರುಣಾ ವಿಧಾನಸಭಾ ಕ್ಷೇತ್ರದ ಗ್ರಾಮವೊಂದರ ಮಂಜುಳ ಹೇಳಿದ ಮಾತುಗಳು.

“ನಾನು, ನಮ್ಮ ತಂದೆ, ತಾತ ಇದೇ ಊರಲ್ಲಿ ಬಾಳಿ ಬದುಕಿದವರು. ನಮ್ಮ ಕುಟುಂಬ ಉದ್ಯೋಗಕ್ಕಾಗಿ ಕೆಲವು ವರ್ಷಗಳ ಕಾಲ ಬೆಂಗಳೂರಿನಲ್ಲಿದ್ದೆವು. ಬೆಂಗಳೂರಿನಲ್ಲಿಯೂ ನಾವು ಓಟರ್‌ ಕಾರ್ಡ್‌ ಮಾಡಿಸಿರಲಿಲ್ಲ. ಹೀಗಾಗಿ 2002ರ ಮತದಾರರ ಪಟ್ಟಿಯಲ್ಲಿ ನಮ್ಮ ಯಾರ ಮಾಹಿತಿಯೂ ಇಲ್ಲ. ಫಾರಂ ನಲ್ಲಿ ಸಹಿ ಮಾಡಿಸಿಕೊಂಡು ಬಿಎಲ್‌ಒ ತಾವೇ ಭರ್ತಿ ಮಾಡಿ ಇಟ್ಟುಕೊಂಡರು” ಇದು ಅದೇ ಗ್ರಾಮದ ಹಿರಿಯ ನಾಗರೀಕ ಎಳೇಗೌಡ ಮಾತುಗಳು.

“2002 ರ ಮಾಹಿತಿ ಸಿಗಲಿಲ್ಲ. 2005ರ ಮತದಾರರ ಪಟ್ಟಿಯಲ್ಲಿ ನಮ್ಮ ಮಾಹಿತಿ ಇದೆ. ಅದನ್ನು ಒಪ್ಪುವುದಿಲ್ಲ ಎಂದು ಬಿಎಲ್‌ ಒ ಹೇಳಿದರು. ಅಪೂರ್ಣ ಅರ್ಜಿಯನ್ನು ಕೊಟ್ಟಿದ್ದೇನೆ. ಈಗ ನೋಟಿಸ್‌ ಬರಬಹುದು. ನಾನು 10ನೇ ತರಗತಿ ಕೂಡ ಓದಿಲ್ಲ. ಬೇರೆ ದಾಖಲೆಗಳನ್ನು ಕೊಡಲು ಸಾಧ್ಯವಾಗದಿದ್ದರೆ ಈ ಓಟೇ ಬೇಡ ಬಿಡಿ ಸಾರ್.‌ ಅದರಿಂದ ಏನಾಗ್ಬೇಕಿತ್ತು?” ಹೀಗೆ ಕೋಪ ಮತ್ತು ಅಸಹನೆಯಿಂದ ಪ್ರಶ್ನಿಸಿದವರು ಬೇಕರಿ ಮಾಲೀಕ ಶಿವಕುಮಾರ್. ಇವರ ಮೂಲ ತಮಿಳುನಾಡು, ಹಲವು ವರ್ಷಗಳ ಹಿಂದೆಯೇ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ವಾಸ ಮಾಡಿ ಈಗ ಬೆಂಗಳೂರು ನಗರ ಜಿಲ್ಲೆಯ ಬೆಟ್ಟದಾಸನಪುರದಲ್ಲಿ ವಾಸಿಸುತ್ತಿದ್ದಾರೆ.

ಎಸ್‌ಐಆರ್‌ ಪ್ರಕ್ರಿಯೆ ಮತ್ತು ಇದರಿಂದ ಮತದಾರರು ಹೇಗೆಲ್ಲಾ ತೊಂದರೆ ಅನುಭವಿಸುತ್ತಿದ್ದಾರೆ, ಈ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಎಷ್ಟೆಲ್ಲಾ ಅನಾನುಕೂಲತೆಗಳಿವೆ ಎಂಬುದಕ್ಕೆ ಇವು ಕೆಲವು ಉದಾಹರಣೆಗಳಷ್ಟೆ. ಇನ್ನು ಸಾಮಾಜಿಕ ಜಾಲತಾಣವಾದ ಫೇಸ್ಬುಕ್‌ ನಲ್ಲಿ ಇಂತವೇ ಆತಂಕಗಳನ್ನು ವ್ಯಕ್ತಪಡಿಸುವ ಪೋಸ್ಟ್‌ ಗಳು ಕಾಣಸಿಗುತ್ತವೆ. ಕೆಲವರು ಗಣತಿ ಫಾರಂ ಪಡೆದೇ ಇಲ್ಲ, ಕೆಲವರು ಪಡೆದರೂ ಅದನ್ನು ಹಿಂತಿರುಗಿಸಿಲ್ಲ, ಕೆಲವರು ಹಿಂತಿರುಗಿಸಿದರೂ ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡಿಲ್ಲ. ಇಂತವರಿಗೆ ಚುನಾವಣಾ ಆಯೋಗ ನೋಟಿಸ್‌ ಕಳುಹಿಸಲು ಮುಂದಾಗಿದೆ.

ಮತ್ತೊಂದೆಡೆ ಬಿಎಲ್‌ಒ ಗಳ ಮೇಲೆ ಅತಿಯಾದ ಒತ್ತಡ, ಎಸ್‌ಐಆರ್‌ ಪ್ರಕ್ರಿಯೆಗೆ ನೀಡಿರುವ ಅತೀ ಕಡಿಮೆ ಕಾಲಾವಕಾಶ ನಿಗದಿ, ನಿಗದಿತ ಸಮಯದೊಳಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂಬ ಮೇಲಧಿಕಾರಿಗಳ ಒತ್ತಡ… ಇವೆಲ್ಲದರಿಂದ ಅಪೂರ್ಣ ಮಾಹಿತಿಗಳುಳ್ಳ ಬಹಳಷ್ಟು ಗಣತಿ ಫಾರಂ ಗಳನ್ನು ಬಿಎಲ್‌ ಒಗಳು ಡಿಜಿಟಲೀಕರಣ ಮಾಡಿದ್ದಾರೆ. ಈ ಕಾರಣದಿಂದಾಗಿಯೂ ಹಲವು ಮತದಾರರು ತಮ್ಮ ಮತದಾನದ ಹಕ್ಕುಗಳನ್ನು ಉಳಿಸಿಕೊಳ್ಳಲು ಶ್ರಮಪಡುವಂತಾಗಿದೆ.

ಶೇಕಡಾ 19.5 ಮತದಾದರರು ಕರಡು ಪಟ್ಟಿಯಿಂದ ಹೊರಕ್ಕೆ

ಆಗಸ್ಟ್‌ 24ರಂದು ಕರಡು ಮತದಾರರ ಪಟ್ಟಿ ಬಿಡುಗಡೆಯೊಂದಿಗೆ, ಎಸ್‌ ಐ ಆರ್‌ (Special Intensive Revision) ಪ್ರಕ್ರಿಯೆಯಿಂದಾಗಿ ತಮ್ಮ ಮತ ಕಳೆದುಕೊಳ್ಳುವ ರಾಜ್ಯದ ಲಕ್ಷಾಂತರ ಮತದಾರರ ಆತಂಕ ನಿಜವಾಗಿದೆ. ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಕರಡು ಮತದಾರರ ಪಟ್ಟಿಯಲ್ಲಿ 1,07,96,415 ಮತದಾರರನ್ನು ಗೈರುಹಾಜರಿ, ಬೇರೆಡೆಗೆ ಸ್ಥಳಾಂತರಗೊಂಡವರು, ಮೃತಪಟ್ಟವರು, ನಕಲು ಮತ್ತು ಇತರರು (ASDDO- Absent, Shifted, Dead, Duplicate, Others) ವರ್ಗದ ಅಡಿಯಲ್ಲಿ ಪಟ್ಟಿ ಮಾಡಿ, ಅವರನ್ನು ಪಟ್ಟಿಯಿಂದ ಅಳಿಸಿಹಾಕಲಾಗಿದೆ. ಜೂನ್‌ 2026ರ ವರೆಗೆ ಇದ್ದ ರಾಜ್ಯದ ಮತದಾರರ ಸಂಖ್ಯೆ 5.54 ಕೋಟಿ (5,54,32,314). ಇವರ ಪೈಕಿ, ಕರಡು ಪಟ್ಟಿಯಲ್ಲಿ 4.46 ಕೋಟಿ (4,46,35,975) ಮತದಾರರ ಹೆಸರುಗಳಿವೆ. ಇದು ಒಟ್ಟು ಮತದಾರರ ಶೇ. 80.52ರಷ್ಟಾಗಿದೆ. ಅಂದರೆ, ಶೇಕಡಾ 19.5 ಮತದಾರರನ್ನು ಪಟ್ಟಿಯಿಂದ ಅಳಿಸಿಹಾಕಲಾಗಿದೆ. ʼಇತರರುʼ ವಿಭಾಗದ (ತೃತೀಯ ಲಿಂಗಿಗಳು) ಶೇ. 44 ರಷ್ಟು ಮತದಾರರನ್ನು ಪಟ್ಟಿಯಿಂದ ಅಳಿಸಿಹಾಕಲಾಗಿದೆ. ಬೆಂಗಳೂರು ನಗರದ 1.03 ಕೋಟಿ ಮತದಾರರಲ್ಲಿ 46.88 ಲಕ್ಷ ಜನರು ಕರಡು ಪಟ್ಟಿಯಿಂದ ಹೊರಗುಳಿದಿದ್ದಾರೆ.

43,80,740 ಮತದಾರರಿಗೆ ನೋಟಿಸ್‌ ನೀಡಲು ಸಿದ್ಧತೆ

ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿದ್ದರೂ, SIR ಪರಿಶೀಲನೆಯ ವೇಳೆ “No Mapping” (ಹಿಂದಿನ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಆಗದಿರುವುದು) ಅಥವಾ ದತ್ತಾಂಶದಲ್ಲಿ ವ್ಯತ್ಯಾಸ ಕಂಡುಬಂದಿರುವವರಿಗೆ ನೋಟಿಸ್ ನೀಡುವ ಪ್ರಕ್ರಿಯೆ ನಡೆಯುತ್ತದೆ. ಹೀಗಾಗಿ, ಕರಡು ಪಟ್ಟಿಯಲ್ಲಿರುವ ಮತ್ತಷ್ಟು ಹೆಸರುಗಳನ್ನು ಪರಿಶೀಲನೆ ನಂತರ ಅಳಿಸಿಹಾಕುವ ಸಾಧ್ಯತೆಗಳೂ ಇವೆ.

SIR ವೇಳೆ 2002ರ ಮತದಾರರ ಪಟ್ಟಿಯೊಂದಿಗೆ ವಿವರಗಳನ್ನು ಮ್ಯಾಪ್‌ ಮಾಡಲು ಸಾಧ್ಯವಾಗದ ಹಾಗೂ ಮತದಾರರ ಮಾಹಿತಿಯಲ್ಲಿ ವ್ಯತ್ಯಾಸ ಕಂಡುಬಂದ ಪ್ರಕರಣಗಳನ್ನು ಪ್ರತ್ಯೇಕವಾಗಿ ಗುರುತಿಸಲಾಗಿದೆ. ಒಟ್ಟು 43,80,740 ಮತದಾರರಿಗೆ ನೋಟಿಸ್‌ ನೀಡಲು ಸಿದ್ಧತೆ ನಡೆದಿದ್ದು, ಈ ಪೈಕಿ 20,35,312 ಮಂದಿ ‘ಅನಮಾಲೀಸ್‌’ (ವ್ಯತ್ಯಾಸ) ಹಾಗೂ 23,45,428 ಮಂದಿ ‘ನೋ ಮ್ಯಾಪಿಂಗ್‌’ ವರ್ಗದಲ್ಲಿದ್ದಾರೆ. ಬೆಂಗಳೂರಿನ ವ್ಯಾಪ್ತಿಯಲ್ಲೇ ಸುಮಾರು 24,05,990 ಮಂದಿಗೆ ನೋಟಿಸ್‌ ನೀಡಲಾಗುತ್ತದೆ ಎಂದು ಚುನಾವಣಾ ಅಧಿಕಾರಿ ಹೇಳಿದ್ದಾರೆ.

ಖುದ್ದಾಗಿ ಹಾಜರಾಗಿ ನಿಮ್ಮ ಅರ್ಹತೆಯನ್ನು ಸಮರ್ಥಿಸಿಕೊಳ್ಳಬೇಕು

ಬಿಎಲ್‌ಒಗಳು ಆಗಸ್ಟ್ 31ರಿಂದ ಸಂಬಂಧಪಟ್ಟ ಮತದಾರರಿಗೆ ನೋಟಿಸ್ ನೀಡಲು ಆರಂಭಿಸಲಿದ್ದಾರೆ. ನೋಟಿಸ್ ನಲ್ಲಿ ವಿಚಾರಣೆಯ ದಿನಾಂಕ, ಸಮಯ ಮತ್ತು ಸ್ಥಳವನ್ನು ನಿರ್ದಿಷ್ಟಪಡಿಸಲಾಗುತ್ತದೆ. ನೋಟಿಸ್‌ಗಳನ್ನು ಪಡೆದವರು ಪರಿಶೀಲನೆಗಾಗಿ ನಿರ್ದಿಷ್ಟ ದಾಖಲೆಗಳೊಂದಿಗೆ (ಆಧಾರ್ ಜೊತೆಗೆ ಗಣತಿ ನಮೂನೆಯಲ್ಲಿ ಪಟ್ಟಿ ಮಾಡಲಾದ 11 ದಾಖಲೆಗಳಲ್ಲಿ ಒಂದು) ಚುನಾವಣಾ ನೋಂದಣಿ ಅಧಿಕಾರಿ (ERO) ಮುಂದೆ ಖುದ್ದಾಗಿ ಹಾಜರಾಗಿ, ದಾಖಲೆಗಳನ್ನು ಸಲ್ಲಿಸಿ ನಿಮ್ಮ ಅರ್ಹತೆಯನ್ನು ಸಮರ್ಥಿಸಿಕೊಳ್ಳಬೇಕು. ವರ್ಚುವಲ್ ವಿಚಾರಣೆಗೆ ಯಾವುದೇ ಅವಕಾಶವಿಲ್ಲ. ಅನಾರೋಗ್ಯದಿಂದ ಬಳಲುತ್ತಿರುವ ಅಥವಾ ಪ್ರಯಾಣಿಸಲು ಸಾಧ್ಯವಾಗದ ಮತದಾರರು ತಮ್ಮ ಮನೆಗಳಲ್ಲಿ ಪರಿಶೀಲನೆ ನಡೆಸಲು ERO ಅಥವಾ ಸಹಾಯಕ ERO ಅವರನ್ನು ಸಂಪರ್ಕಿಸಬಹುದು.

ಮತದಾರರು ತಮ್ಮ ದಾಖಲೆಗಳನ್ನು ನೋಟಿಸ್ ನಲ್ಲಿ ಮುದ್ರಿಸಲಾದ ಸ್ಕ್ಯಾನರ್ ಬಳಸಿ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದರೂ ಸಹ, ಅಂತಿಮ ಪರಿಶೀಲನೆಗಾಗಿ ಅವರು ERO ಮುಂದೆ ಭೌತಿಕವಾಗಿ ಹಾಜರಾಗಬೇಕಾಗುತ್ತದೆ. ಪರಿಶೀಲನೆಯ ನಂತರ ಅವರನ್ನೂ ಅಕ್ಟೋಬರ್ 27 ರಂದು ಪ್ರಕಟಿಸಲಾಗುವ ಅಂತಿಮ ಪಟ್ಟಿಗೆ ಸೇರಿಸಬಹುದು. ಮತದಾರರಿಗೆ ಎರಡು ಬಾರಿ ಮಾತ್ರ ನೋಟಿಸ್‌ಗಳನ್ನು ನೀಡಲಾಗುತ್ತದೆ, ವಿಫಲವಾದರೆ ಅವರನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ.

ಸಿಇಒ ಅವರ ಆ ಒಂದು ಸೂಚನೆಯನ್ನು ಪಾಲಿಸಿದವರು ಇಂದು ಸಂಕಷ್ಟದಲ್ಲಿ

“2002 ರ ಮತದಾರರ ಪಟ್ಟಿಯಲ್ಲಿ ತಮ್ಮ ವಿವರಗಳು ಲಭ್ಯವಿಲ್ಲ ಎಂಬ ಕಾರಣಕ್ಕಾಗಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಅಡಿಯಲ್ಲಿ ತಮ್ಮ ಎಣಿಕೆ ನಮೂನೆಗಳನ್ನು (ಎನ್ಯುಮರೇಷನ್ ಫಾರ್ಮ್) ಸಲ್ಲಿಸಲು ವಿಳಂಬ ಮಾಡಬೇಡಿ. 2002 ರ ಮತದಾರರ ಪಟ್ಟಿಯಲ್ಲಿ ನಿಮ್ಮ ವಿವರಗಳು ಲಭ್ಯವಿಲ್ಲದಿದ್ದರೂ ಸಹ, ಎಣಿಕೆ ನಮೂನೆಯನ್ನು ಭರ್ತಿ ಮಾಡಿ, ನಿಮ್ಮ ಛಾಯಾಚಿತ್ರವನ್ನು ಅಂಟಿಸಿ, ಸಹಿ ಮಾಡಿ ಮತ್ತು ಅದನ್ನು ಬೂತ್ ಮಟ್ಟದ ಅಧಿಕಾರಿಗೆ ಹಸ್ತಾಂತರಿಸಿ. ಕರಡು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಕಾಣಿಸಿಕೊಳ್ಳುತ್ತದೆ” ಎಂದು ಸಿಇಒ ಅನ್ಬುಕುಮಾರ್ ಅವರು ಜುಲೈ 15ರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಇದನ್ನೇ ಹಲವು ಬಿಎಲ್‌ಒ ಗಳು ಮತ್ತು ಕ್ಷೇತ್ರ ಚುನಾವಣಾ ಮೇಲ್ವಿಚಾರಕರು ಅನುಸರಿಸಿದರು. ಕೆಲವು ʼಬುದ್ದಿವಂತʼ ಮತದಾರರೂ 2002 ರ ಮಾಹಿತಿಗಳನ್ನು ಹುಡುಕುವ ತೊಂದರೆ ತೆಗೆದುಕೊಳ್ಳದೆ, ಸಹಿ ಮಾಡಿ ಫಾರಂ ಹಿಂತಿರುಗಿಸಿದರು. ಮಾತ್ರವಲ್ಲ, ಇತರರಿಗೂ ಇದನ್ನೇ ಉಪದೇಶ ಮಾಡಿದರು. ಇದನ್ನು ಅನುಸರಿಸಿದವರು ಈಗ, ಚುನಾವಣಾ ನೋಂದಣಿ ಅಧಿಕಾರಿ ಮುಂದೆ ಖುದ್ದಾಗಿ ಹಾಜರಾಗಿ, ದಾಖಲೆಗಳನ್ನು ಸಲ್ಲಿಸಿ ತಮ್ಮ ಅರ್ಹತೆಯನ್ನು ಸಮರ್ಥಿಸಿಕೊಳ್ಳಬೇಕಾದ ಪರಸ್ಥಿತಿಗೆ ಸಿಲುಕಿದ್ದಾರೆ.

ಫಾರಂ 6 ಅಥವಾ ಫಾರಂ 8 ರ ಮೂಲಕ ಅರ್ಜಿ ಸಲ್ಲಿಸಲು ಅವಕಾಶ

ಅರ್ಹ ಮತದಾರರ ಹೆಸರು ಕರಡು ಪಟ್ಟಿಯಲ್ಲಿ ಇಲ್ಲದಿದ್ದರೆ, ನಮೂನೆ 6 ಅನ್ನು ಬಳಸಿಕೊಂಡು ಮತದಾರರ ಪಟ್ಟಿಯಲ್ಲಿ ಹೊಸ ಸೇರ್ಪಡೆಗಾಗಿ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಯೊಂದಿಗೆ ಅಗತ್ಯ ದಾಖಲೆಗಳು (ಆಧಾರ್ ಜೊತೆಗೆ ಗಣತಿ ನಮೂನೆಯಲ್ಲಿ ಪಟ್ಟಿ ಮಾಡಲಾದ 11 ದಾಖಲೆಗಳಲ್ಲಿ ಒಂದು) ಮತ್ತು ಘೋಷಣೆಯನ್ನು ಸಲ್ಲಿಸುವುದು ಕಡ್ಡಾಯ.
ತಮ್ಮ ಹೆಸರು, ವಿಳಾಸ ಅಥವಾ ಯಾವುದಾದರೂ ತಿದ್ದುಪಡಿಗಳಿದ್ದರೆ ಫಾರಂ 8 ರ ಮೂಲಕ ಅರ್ಜಿ ಸಲ್ಲಿಸಬಹುದು. ಆಕ್ಷೇಪಣೆ ಮತ್ತು ಹಕ್ಕುಗಳ ಸಲ್ಲಿಕೆಗೆ ಸೆಪ್ಟೆಂಬರ್ 23, 2026 ಕೊನೆಯ ದಿನವಾಗಿದೆ. ಅಂದರೆ ಕೇವಲ 30 ದಿನಗಳಲ್ಲಿ ಅಗತ್ಯವಾದ ಫಾರಂ ಪಡೆದು, ತಿದ್ದುಪಡಿಗಳೊಂದಿಗೆ ಚುನಾವಣಾ ಆಯೋಗ ಕೇಳಿರುವ ದಾಖಲೆಗಳನ್ನು ಒದಗಿಸಬೇಕು. ಆ ಫಾರಂ ಪಡೆಯಲು ಸಂಬಂಧಪಟ್ಟ ಚುನಾವಣಾ ಸಿಬ್ಬಂದಿಗಳನ್ನು ಹುಡುಕಿ ಹೋಗಬೇಕು. ಅಗತ್ಯ ದಾಖಲೆ ಇಲ್ಲದಿದ್ದರೆ, ಅದನ್ನು ಪಡೆಯಲು ಸಂಬಂಧಟ್ಟ ಸರ್ಕಾರಿ ಕಛೇರಿಗಳಿಗೆ ಅಲೆಯಬೇಕು. ಇವೆಲ್ಲವನ್ನೂ ಸಿದ್ದಪಡಿಸಿದ ನಂತರ ಮತ್ತೆ ಸಂಬಂಧಪಟ್ಟ ಚುನಾವಣಾ ಸಿಬ್ಬಂದಿಯನ್ನು ಭೇಟಿ ಮಾಡಿ ಫಾರಂ ಒಪ್ಪಿಸಬೇಕು. ಅಕ್ಟೋಬರ್‌ 22ಕ್ಕೆ ನೋಟಿಸ್‌ ಪ್ರಕ್ರಿಯೆ ಹಾಗೂ ಹಕ್ಕು-ಆಕ್ಷೇಪಣೆಗಳ ವಿಲೇವಾರಿ ಅಂತ್ಯವಾಗುತ್ತದೆ. ಅಷ್ಟರೊಳಗೆ ಈ ಎಲ್ಲಾ ಕೆಲಸ ಮುಗಿಸಬೇಕು!

ಇಷ್ಟೆಲ್ಲಾ ಸಹಾಸ ಮಾಡಿದ ನಂತರವೂ ನಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಬರುತ್ತದೆಯೋ ಇಲ್ಲವೋ ಎಂದು ನೋಡಲು ಅಕ್ಟೋಬರ್ 27, 2026 ರಂದು ಬಿಡುಗಡೆಯಾಗಲಿರುವ ಅಂತಿಮ ಮತದಾರರ ಪಟ್ಟಿಗಾಗಿ ಕಾಯಬೇಕಿದೆ.

ಇಷ್ಟು ಕಡಿಮೆ ಸಮಯಾವಕಾಶ ಯಾಕಾಗಿ? ಇಷ್ಟಕ್ಕೂ ಎಸ್‌ಐಆರ್‌ ನ ಕಠಿಣ ನಿಯಮಗಳು ಯಾಕಾಗಿ? ನಾವು ಈ ದೇಶದ ಪ್ರಜೆಗಳು ಎಂಬುದಕ್ಕೆ ದಾಖಲೆಗಳನ್ನು ತೋರಿಸಬೇಕೆ? ನಾವಿಲ್ಲಿ ಜೀವನ ನಡೆಸುತ್ತಿರುವುದೇ ಸಾಕಲ್ಲವೇ? ನಮ್ಮ ತಂದೆ, ತಾಯಿ, ತಾತ, ಅಜ್ಜಿ ಭಾರತದಲ್ಲೇ ಜೀವನ ನಡೆಸಿರುವುದು ನಿಜವಲ್ಲವೇ? ಇದಕ್ಕೆ ದಾಖಲೆಗಳನ್ನು ತೋರಿಸಬೇಕೆ? ಇಷ್ಟಕ್ಕೂ ಯಾಕಾಗಿ ಇಷ್ಟೊಂದು ಅವಸರ? ಎಂಬ ಪ್ರಶ್ನೆಗಳನ್ನು ಮತದಾರರು ಕೇಳುತ್ತಿದ್ದಾರೆ.

18 ವರ್ಷಕ್ಕಿಂತ ಮೇಲ್ಪಟ್ಟವರ ಸಂಖ್ಯೆ 5.30 ಕೋಟಿ