
ಟಾಟಾ ಪವರ್ ಕಂಪನಿ ಲಿಮಿಟೆಡ್ ಕರ್ನಾಟಕದ 19 ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆಗೆ ಪರವಾನಗಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು, ವಿದ್ಯುತ್ ಸರಬರಾಜು ಕಂಪನಿಗಳು ರೈತರು ಮತ್ತು ವಿದ್ಯುತ್ ಕ್ಷೇತ್ರದ ಕಾರ್ಮಿಕರಿಂದ ಬಂದ ತೀವ್ರ ವಿರೋಧದ ನಂತರ, 2026ರ ಜುಲೈ 3ರಂದು ಹಿಂತೆಗೆದುಕೊಂಡಿದೆ. ಇದು ಜನತೆಗೆ ದೊರೆತಿರುವ ಸದ್ಯದ ಗೆಲುವಷ್ಟೇ ಎಂಬುದನ್ನು ಮರೆಯಬಾರದು. ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರಿಗೆ ನಿರಂತರ ಹಾಗೂ ಸ್ಪರ್ಧಾತ್ಮಕ ದರದಲ್ಲಿ ಗುಣಮಟ್ಟದ ವಿದ್ಯುತ್ ಒದಗಿಸುವುದು ಟಾಟಾ ಪವರ್ ನ ಮುಖ್ಯ ಉದ್ದೇಶವಾಗಿದೆ ಎಂದು ಅದು ಹೇಳುತ್ತಿದೆಯಾದರೂ, ರಾಜ್ಯ ವಿದ್ಯುತ್ ವಲಯ ಖಾಸಗೀರಣದತ್ತ ಮತ್ತೊಂದು ಹೆಜ್ಜೆ ಇಡಲು ಹೊರಟಿದೆ. ಇದರಿಂದಾಗಿ, ಗೃಹ ಬಳಕೆಯ ವಿದ್ಯುತ್ ಗ್ರಾಹಕರು, ಕೃಷಿ ಪಂಪ್ ಸೆಟ್ ಬಳಕೆದಾರರು, ಸಣ್ಣ, ಅತಿಸಣ್ಣ ಮತ್ತು ಮದ್ಯಮ ಕೈಗಾರಿಕೆಗಳು ವಿದ್ಯುತ್ ಗಾಗಿ ದುಬಾರಿ ದರ ತೆರಬೇಕಾದ ಅನಿವಾರ್ಯತೆ ಬರುತ್ತದೆ.
ಕರ್ನಾಟಕದ ವಿವಿಧ ಸಾರ್ವಜನಿಕ ವಿದ್ಯುತ್ ಸರಬರಾಜು ಕಂಪನಿಗಳ 19 ಕಂದಾಯ ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆ ಪರವಾನಿಗೆ ಕೋರಿ ʼದಿ ಟಾಟಾ ಪವರ್ ಕಂಪನಿ ಲಿಮಿಟೆಡ್ʼ (TPCL) ಅರ್ಜಿ ಸಲ್ಲಿಸಿತ್ತು. ವಿದ್ಯುತ್ ಕಾಯ್ದೆ 2003 ರ ಕಲಂ 14 ರ ಸೆಕ್ಷನ್ 6 ರ ಅಡಿಯಲ್ಲಿ ಈ ಅರ್ಜಿ ಸಲ್ಲಿಸಲಾಗಿದೆ ಎಂದು ಹೇಳಲಾಗುತ್ತಿದೆ. ʻಬೆಸ್ಕಾಂʼ ವ್ಯಾಪ್ತಿಯ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ರಾಮನಗರ , ʼಚೆಸ್ಕಾಂʼ ವ್ಯಾಪ್ತಿಯ ಮೈಸೂರು, ಹಾಸನ, ಚಾಮರಾಜನಗರ, ʼಮೆಸ್ಕಾಂʼ ವ್ಯಾಪ್ತಿಯ ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ʼಹೆಸ್ಕಾಂʼ ವ್ಯಾಪ್ತಿಯ ಬೆಳಗಾವಿ, ಉತ್ತರ ಕನ್ನಡ, ಧಾರವಾಡ ಹಾಗೂ ʼಜೆಸ್ಕಾಂʼ ವ್ಯಾಪ್ತಿಯ ಬಳ್ಳಾರಿ, ರಾಯಚೂರು, ಕಲ್ಬುರ್ಗಿ, ಯಾದಗಿರಿ ಹೀಗೆ ಒಟ್ಟು 19 ಕಂದಾಯ ಜಿಲ್ಲೆಗಳಲ್ಲಿ ಈಗ ಇರುವ ಸಾರ್ವಜನಿಕ ವಿದ್ಯುತ್ ವಿತರಣಾ ಕಂಪನಿಗಳಿಗೆ ಸಮಾನಾಂತರವಾಗಿ ವಿದ್ಯುತ್ ವಿತರಣೆಗೆ ಟಾಟಾ ಪವರ್ ಕಂಪನಿಯು ಲೈಸನ್ಸ್ ಕೋರಿತ್ತು. ಈ ಮಾಹಿತಿ ತಿಳಿಯುತ್ತಿದ್ದಂತೆ ರೈತರು, ವಿದ್ಯುತ್ ಇಲಾಖೆ ನೌಕರರು ಹಾಗೂ ಎಲ್ಲಾ ರೀತಿಯ ಗ್ರಾಹಕರಲ್ಲದೇ, ಸಾರ್ವಜನಿಕ ವಿದ್ಯುತ್ ನಿಗಮಗಳು ಕೂಡ ಆಕ್ಷೇಪಣೆ ಸಲ್ಲಿಸಿದವು. ಕೇವಲ ಒಂದು ತಿಂಗಳಿಗೂ ಕಡಿಮೆ ಅವಕಾಶದಲ್ಲಿ 20 ಲಕ್ಷಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿರುವುದು ಅಭೂತಪೂರ್ವ ದಾಖಲೆಯಾಗಿದೆ. ನವ ಉದಾರವಾದಿ ಧೋರಣೆಗಳಿಗೆ ರಾಜ್ಯದ ಜನರಲ್ಲಿರುವ ಆಕ್ರೋಶಕ್ಕೆ ಇದು ಸಾಕ್ಷಿಯಾಗಿದೆ.
ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರಿಗೆ ನಿರಂತರ ಹಾಗೂ ಸ್ಪರ್ಧಾತ್ಮಕ ದರದಲ್ಲಿ ಗುಣಮಟ್ಟದ ವಿದ್ಯುತ್ ಒದಗಿಸುವುದು ಟಾಟಾ ಪವರ್‌ನ ಮುಖ್ಯ ಉದ್ದೇಶವಾಗಿದೆ ಎಂದು ಟಾಟಾ ಕಂಪನಿ ಹೇಳುತ್ತಿದೆ. ಯಾವ ಮಾರಾಟಗಾರರಿಂದ ಮತ್ತು ಯಾವ ಬೆಲೆಗೆ ವಿದ್ಯುತ್ ಖರೀದಿಸಬೇಕೆಂದು ಆಯ್ಕೆ ಮಾಡುವ ಆಯ್ಕೆಯನ್ನು ಗ್ರಾಹಕರು ಹೊಂದಿರುತ್ತಾರೆ ಎನ್ನುತ್ತದೆ. ಖಾಸಗಿ ಕಂಪನಿಯ ವಿದ್ಯುತ್ ವಿತರಣೆಗೆ ಅವಕಾಶ ಕೊಡಲು ಮುಂದಾಗಿರುವ ರಾಜ್ಯ ಸರ್ಕಾರ, ವಿದ್ಯುತ್ ಅನ್ನೂ ಒಂದು ಲಾಭದಾಯಕ ಸರಕನ್ನಾಗಿ ಮಾಡಲು ಮುಂದಾಗಿದೆ.
ವಿದ್ಯುತ್ ಕಂಬ, ತಂತಿ ಸಾರ್ವಜನಿಕರದ್ದು, ವಿದ್ಯುತ್ ಹರಿವು ಖಾಸಗಿ ಕಂಪನಿಯದ್ದು!!
ಟಾಟಾ ಪವರ್ ಕಂಪನಿ ಈಗ ವಿದ್ಯುತ್ ವಿತರಣಾ ಕೆಲಸ ನಿರ್ವಹಿಸುತ್ತಿರುವ ಯಾವುದೇ ರಾಜ್ಯಗಳಲ್ಲಿ ತನ್ನ ಸ್ವಂತ ಮೂಲಭೂತ ಸೌಕರ್ಯಗಳನ್ನು ಸೃಷ್ಟಿಸಿ, ನಿರ್ವಹಿಸಿ, ವಿದ್ಯುತ್ ಪೂರೈಕೆಯಲ್ಲಿ ದಕ್ಷತೆ ಹಾಗೂ ಸೇವಾ ಗುಣಮಟ್ಟವನ್ನು ಉತ್ತಮಪಡಿಸಿದ ಯಾವ ಅನುಭವದ ಹಿನ್ನೆಲೆಯೂ ಇಲ್ಲ.
ಕರ್ನಾಟಕದಲ್ಲೂ ಟಾಟಾ ಪವರ್ ಕಂಪನಿ ವಿದ್ಯುತ್ ವಿತರಣೆಗೆ ತನ್ನದೇ ಆದ ಮೂಲ ಸೌಕರ್ಯಗಳನ್ನು ಹೊಂದಿಲ್ಲ. ಅದು ತಾನು ಉತ್ಪಾದಿಸಿದ ವಿದ್ಯುತ್ ಅನ್ನು ಕೈಗಾರಿಗೆ ಮತ್ತು ವಾಣಿಜ್ಯ ಗ್ರಾಹಕರಿಗೆ ತಲುಪಿಸಬೇಕಾದರೆ, ನಮ್ಮ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ (ಕೆಪಿಟಿಸಿಎಲ್) ಈಗಾಗಲೇ ಅಭಿವೃದ್ಧಿಪಡಿಸಿರುವ ಮೂಲಸೌಲಭ್ಯಗಳಾದ ವಿದ್ಯುತ್ ಕಂಬಗಳು, ವಿದ್ಯುತ್ ತಂತಿಗಳು, ಟ್ರಾನ್ಸ್ ಪಾರ್ಮರ್ ಗಳನ್ನು ಬಳಸಿಕೊಳ್ಳಬೇಕು. ಇವುಗಳ ಬಳಕೆಗೆ ಅವಕಾಶ ಕೊಡಲು ಸರ್ಕಾರ ಮುಂದಾಗಿದೆ. ಅಂದರೆ, ಒಂದೇ ತಂತಿಯ ಮೂಲಕ ಎಸ್ಕಾಂ ಗಳ ಮತ್ತು ಖಾಸಗಿ ಕಂಪನಿಯ ವಿದ್ಯುತ್ ಹರಿಯುತ್ತದೆ!! ಇದು ಸಾರ್ವಜನಿಕ ವಿದ್ಯುಚ್ಛಕ್ತಿ ಮೂಲಸೌಕರ್ಯಗಳ ರಕ್ಷಣೆಗೆ, ಸಾರ್ವಜನಿಕ ವಿದ್ಯುತ್ ವಿತರಣಾ ನಿಗಮಗಳ ಹಣಕಾಸು ಸ್ಥಿರತೆಯ ರಕ್ಷಣೆಗೆ ದಕ್ಕೆ ಉಂಟುಮಾಡುತ್ತದೆ.
ವಿದ್ಯುತ್ ಕಾಯ್ದೆ 2003 ರ ಗಂಭೀರ ಉಲ್ಲಂಘನೆ
ವಿದ್ಯುತ್ ಕಾಯ್ದೆ 2003 ರ ಸೆಕ್ಷನ್ 108 ರ ಅಡಿಯಲ್ಲಿ ಸಾರ್ವಜನಿಕ ಸ್ವಾಮ್ಯದ ವಿದ್ಯುತ್ ವಿತರಣಾ ನಿಗಮಗಳ ಹಣಕಾಸು ಸ್ಥಿರತೆ, ಗ್ರಾಹಕರ ಹಿತಾಸಕ್ತಿ ರಕ್ಷಣೆ ಹಾಗೂ ಸಾರ್ವಜನಿಕ ವಿದ್ಯುತ್ ಮೂಲಸೌಕರ್ಯಗಳನ್ನು ರಕ್ಷಿಸಿಕೊಳ್ಳಲು ರಾಜ್ಯ ಸರ್ಕಾರಗಳಿಗೆ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಇಂಧನ ಇಲಾಖೆಯ ಜೊತೆ ಸಮಾಲೋಚಿಸದೆ, ವಿದ್ಯುತ್ ವಿತರಣೆ ಮಾಡುತ್ತಿರುವ ಸಾರ್ವಜನಿಕ ಸ್ವಾಮ್ಯದ ಕಂಪನಿಗಳ ಅಭಿಪ್ರಾಯ ಕೇಳದೆ, ಖಾಸಗಿ ವಿದ್ಯುತ್ ವಿತರಣಾ ಕಂಪನಿ ನೇರವಾಗಿ ಲೈಸೆನ್ಸ್ ಗೆ ಅರ್ಜಿ ಸಲ್ಲಿಸಿರುವುದು ವಿದ್ಯುತ್ ಕಾಯ್ದೆ 2003 ರ ಗಂಭೀರ ಉಲ್ಲಂಘನೆಯಾಗಿದೆ. ಕೋಟ್ಯಾಂತರ ಬಡ ಗ್ರಾಹಕರ ಹಿತರಕ್ಷಣೆಗೆ ಧಕ್ಕೆ ಉಂಟುಮಾಡುತ್ತದೆ ಮಾತ್ರವಲ್ಲ, ಗ್ರಾಮೀಣ ವಿದ್ಯುತೀಕರಣ ಹಾಗೂ ಸಾರ್ವತ್ರಿಕ ವಿದ್ಯುತ್ ಬಳಕೆಗೆ ಉತ್ತೇಜನ ದಂತಹ ಮಹತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಉದ್ದೇಶಕ್ಕೆ ವಿರುದ್ದವಾಗಿದೆ. ಹಾಗಾಗಿ ಟಾಟಾ ಪವರ್ ಕಂಪನಿಯ ಅರ್ಜಿಯನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ತಿರಸ್ಕರಿಸಬೇಕು.
ಉದ್ಯೋಗ ಭದ್ರತೆಗೆ ಮಾರಕ
ಈಗಾಗಲೇ ರಾಜ್ಯದ ಸರಕಾರಿ ವಲಯದ ವಿದ್ಯುತ್ ಸರಬರಾಜು ಕಂಪನಿಗಳು (ESCOMs) ನಷ್ಟದಲ್ಲಿದ್ದು, ಟಾಟಾ ಕಂಪನಿಯ ಪ್ರವೇಶದಿಂದ ಗ್ರಾಹಕರು ಇತ್ತ ವಾಲಿದರೆ, ಸರ್ಕಾರಿ ಸಂಸ್ಥೆಗಳಿಗೆ ಮತ್ತಷ್ಟು ಆರ್ಥಿಕ ಹೊರೆಯಾಗುವ ಭೀತಿ ಇದೆ. ಭವಿಷ್ಯದಲ್ಲಿ ಖಾಯಂ ಉದ್ಯೋಗಾವಕಾಶಗಳು ಕೈತಪ್ಪಿ, ವಿದ್ಯಾವಂತ ಯುವಕರ ಸರ್ಕಾರಿ ಉದ್ಯೋಗದ ಕನಸು ಮತ್ತಷ್ಟು ಕಮರಿ ಹೋಗಲಿದೆ. ಖಾಸಗೀಕರಣದಿಂದಾಗಿ, ಸಾಮಾಜಿಕ ಭದ್ರತೆ ಮತ್ತು ಮೀಸಲಾತಿಯೊಂದಿಗೆ ಸರ್ಕಾರಿ ಉದ್ಯೋಗ, ಸಾಮಾಜಿಕ ನ್ಯಾಯ ಇಲ್ಲದಂತಾಗುತ್ತದೆ. ಈ ಖಾಸಗೀಕರಣದ ಪ್ರಸ್ತಾವನೆಗೆ ವಿದ್ಯುತ್ ಮಂಡಳಿಯ ನೌಕರರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
ನವ-ಉದಾರೀಕರಣದ ಪರಿಣಾಮ
ಭಾರತ ಸರ್ಕಾರ ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣಕ್ಕೆ ಬೀಜ ಬಿತ್ತಿದ್ದು 1990ರ ದಶಕದಲ್ಲಿ. 1991ರಲ್ಲಿ ಪಿ.ವಿ. ನರಸಿಂಹರಾವ್ ಸರ್ಕಾರವು ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣ (ಎಲ್ ಪಿ ಜಿ) ನೀತಿಗಳನ್ನು ಒಪ್ಪಿಕೊಂಡಿತು. ಅಂದು ಎಡ ಮತ್ತು ಪ್ರಗತಿಪರ ಸಂಘಟನೆಗಳು, ರೈತ ಮತ್ತು ಕಾರ್ಮಿಕ ಸಂಘಟನೆಗಳು ಕೇಂದ್ರ ಸರ್ಕಾರದ ಈ ನೀತಿಗಳನ್ನು ವಿರೋಧಿಸಿ ದೇಶಾದ್ಯಂತ ದೊಡ್ಡ ಮಟ್ಟದ ಹೋರಾಟ ನಡೆಸಿದರು. ಜನತೆಯ ಇಂತಹ ಪ್ರತಿರೋಧದಿಂದಾಗಿ ಎಲ್ ಪಿ ಜಿ ನೀತಿಗಳ ಜಾರಿಯ ವೇಗಕ್ಕೆ ತಡೆವೊಡ್ಡಲು ಸಾಧ್ಯವಾಗಿದೆಯಾದರೂ, ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗಲಿಲ್ಲ. ನಂತರ ಬಂದ ಸರ್ಕಾರಗಳು ಈ ನೀತಿಗಳನ್ನು ಅನುಸರಿಸುತ್ತಾ ಬಂದಿವೆ. ಹಲವು ಸಾರ್ವಜನಿಕ ಕ್ಷೇತ್ರಗಳನ್ನು ಖಾಸಗಿ ಬಂಡವಾಳಗಾರರ ತೆಕ್ಕೆಗೆ ಹಾಕುತ್ತಿವೆ.
ವಾಜಪೇಯಿ ಸರ್ಕಾರದಿಂದ ‘ವಿದ್ಯುತ್ ಕಾಯ್ದೆ 2003’
ವಾಜಪೇಯಿ ಪ್ರಧಾನಿಯಾಗಿದ್ದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು, ವಿದ್ಯುತ್ ವಲಯವನ್ನು ಖಾಸಗೀಕರಣದ ಮುಂದುವರಿದ ಭಾಗವಾಗಿ ‘ವಿದ್ಯುತ್ ಕಾಯ್ದೆ 2003’ ಅನ್ನು ಅಸ್ತಿತ್ವಕ್ಕೆ ತಂದಿತು. ಇದರ ಮೂಲಕ ವಿದ್ಯುತ್ ಉತ್ಪಾದನೆ ಮಾಡಲು ಖಾಸಗಿ ಬಂಡವಾಳಗಾರರಿಗೆ ಅವಕಾಶ ಕೊಟ್ಟಿತು. ಖಾಸಗಿ ಕಂಪನಿಗಳು ಉತ್ಪಾದನೆ ಮಾಡುವ ವಿದ್ಯುತ್ ಅನ್ನು ಸಾರ್ವಜನಿಕ ಕ್ಷೇತ್ರದ ವಿತರಣಾ ಕಂಪನಿಗಳು ಖರೀದಿ ಮಾಡಿ ವಿತರಣೆ ಮಾಡುತ್ತಿವೆ. ಈ ಖರೀದಿ ವ್ಯವಹಾರದಲ್ಲೂ ಖಾಸಗಿ ವಿದ್ಯುತ್ ಉತ್ಪಾದನಾ ಕಂಪನಿಗಳು ಸರ್ಕಾರದ ಮೇಲೆ ಪ್ರಭಾವ ಬೀರುವ ಮೂಲಕ ದುಬಾರಿ ದರಕ್ಕೆ ವಿದ್ಯತ್ ಖರೀದಿ ಮಾಡುವಂತೆ ನೋಡಿಕೊಂಡಿವೆ. ಇಂದು ಎಲ್ಲಾ ರೀತಿಯ ಗ್ರಾಹಕರಿಗೆ ವಿದ್ಯುಚ್ಛಕ್ತಿ ದುಬಾರಿಯಾಗಲು ಖಾಸಗಿ ಕಂಪನಿಗಳ ಒಲವುಳ್ಳ ಸರ್ಕಾರದ ನೀತಿಗಳೇ ಕಾರಣ.
ಮೋದಿ ಸರ್ಕಾರದಿಂದ ವಿದ್ಯುತ್ (ತಿದ್ದುಪಡಿ) ಮಸೂದೆ-2022
ದೇಶದಲ್ಲಿ ವಿದ್ಯುತ್ ವಲಯವನ್ನು ಸಂಪೂರ್ಣ ಖಾಸಗೀಕರಣ ಮಾಡುವ ಗುರಿಯೊಂದಿಗೆ, ವಿದ್ಯುತ್ (ತಿದ್ದುಪಡಿ) ಮಸೂದೆ-2022 ನ್ನು ಸಂಸತ್ತಿನಲ್ಲಿ ಮಂಡಿಸಿತು. ವಿದ್ಯುತ್ ಉತ್ಪಾದನೆ, ಸಾಗಣೆ ಮತ್ತು ವಿತರಣೆ ಈ ಮೂರು ವಿಭಾಗಗಳನ್ನು ಖಾಸಗಿ ಬಂಡವಾಳಗಾರರಿಗೆ ಒಪ್ಪಿಸಲು ಈ ಮಸೂದೆ ಅವಕಾಶ ನೀಡುತ್ತದೆ.
ವಿದ್ಯುತ್ (ಗ್ರಾಹಕರ ಹಕ್ಕುಗಳು) ನಿಯಮಗಳು, 2020 ಅನ್ನು ವಿದ್ಯುತ್ (ಗ್ರಾಹಕರ ನಿಯಮಗಳು) ತಿದ್ದುಪಡಿ ನಿಯಮಗಳು, 2023 ಗೆ ಬದಲಾಯಿಸಲಾಗಿದೆ. ಕೇಂದ್ರ ವಿದ್ಯುತ್ ಸಚಿವಾಲಯವು 2023 ಜೂನ್ 14 ರಂದು ಸರ್ಕಾರಿ ಗೆಜೆಟ್‌ನಲ್ಲಿ ಇದನ್ನು ಸದ್ದಿಲ್ಲದೆ ಪ್ರಕಟಿಸಿತು. ಇದರ ಪ್ರಕಾರ ಗೃಹ ಬಳಕೆ ಸೇರಿದಂತೆ ಎಲ್ಲ ವಿದ್ಯುತ್ ಸಂಪರ್ಕಗಳಿಗೂ ಸ್ಮಾರ್ಟ್ ಮೀಟರ್ ಅಳವಡಿಸಬೇಕು. ಅಲ್ಲದೆ, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳಲ್ಲಿ 19 ಕಿಲೋವ್ಯಾಟ್ ಗಿಂತ ಹೆಚ್ಚು ವಿದ್ಯುತ್ ಬಳಸುವ ಗ್ರಾಹಕರಿಗೆ (ಕೃಷಿ ಗ್ರಾಹಕರನ್ನು ಹೊರತುಪಡಿಸಿ) ಏಪ್ರಿಲ್ 1, 2024 ರ ಮೊದಲು TOD (Time of Day-ದಿನದ ಸಮಯ) ಮೀಟರ್‌ಗಳನ್ನು ಅಳವಡಿಸಬೇಕು ಎಂದು ಸಮಯ ನಿಗದಿಪಡಿಸಲಾಗಿತ್ತು.
ಪ್ರಿಪೇಯ್ಡ್ ವಿದ್ಯುತ್ ಮೀಟರ್
ಪ್ರಿಪೇಯ್ಡ್ ವಿದ್ಯುತ್ ಮೀಟರ್ ಅಳವಡಿಕೆಗೆ ಸಂಬಂಧಿಸಿದಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ ಸಿ), “ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಪೂರ್ವ-ಪಾವತಿಸಿದ ಸ್ಮಾರ್ಟ್ ಮೀಟರಿಂಗ್) ನಿಯಮಗಳು, 2023” ರಂತೆ, ತಾತ್ಕಾಲಿಕ ಸಂಪರ್ಕ ಮತ್ತು ಹೊಸ ಸಂಪರ್ಕ ಪಡೆಯುವವರು ಕಡ್ಡಾಯವಾಗಿ ಪೂರ್ವ-ಪಾವತಿಸಿದ ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳಬೇಕು.
ಗ್ರಾಹಕರನ್ನು ಆಯ್ಕೆ ಮಾಡುವ ಹಕ್ಕು;
ವಿದ್ಯುಚ್ಛಕ್ತಿ ಕಾಯ್ದೆಯ ತಿದ್ದುಪಡಿಯ ಆಧಾರದ ಮೇಲೆ ವಿದ್ಯುತ್ ವಿತರಣೆಯಲ್ಲಿ ಬಹು ಪರವಾನಗಿದಾರರನ್ನು ತೊಡಗಿಸಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಗ್ರಿಡ್ ರಚನೆಯಲ್ಲಿ ಅಸ್ತಿತ್ವದಲ್ಲಿರುವ ಪ್ರಸರಣ ಮಾರ್ಗಗಳ ಮೇಲೆ ಖಾಸಗಿ ಉದ್ಯಮಿಗಳು ವಿದ್ಯುತ್ ವಿತರಣೆ ಮಾಡುತ್ತಾರೆ. ಗ್ರಾಹಕರನ್ನು ಆಯ್ಕೆ ಮಾಡುವ ಹಕ್ಕನ್ನು ಸಹ ಅವರಿಗೆ ನೀಡಲಾಗಿದೆ. ಹಾಗಿದ್ದಲ್ಲಿ, ಖಾಸಗಿ ವಿದ್ಯುತ್ ವಿತರಕರು ಹೆಚ್ಚು ವಿದ್ಯುತ್ ಬಳಸುವವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗಾಗಿ ವಿದ್ಯುತ್ ಸಹ, ಮುಕ್ತ ಮಾರುಕಟ್ಟೆಯ ಸರಕಾಗುತ್ತದೆ. ಅನುಕೂಲಸ್ಥರಿಗೆ ಮಾತ್ರ ವಿದ್ಯುತ್ ಇರುತ್ತದೆ. ಖಾಸಗಿ ವ್ಯಕ್ತಿಗಳು ವಿದ್ಯುತ್ ದರ ನಿಗದಿಯ ಹಕ್ಕುಗಳನ್ನು ಪಡೆಯುವುದರಿಂದ ವಿದ್ಯುತ್ ಬಿಲ್ ಗಗನಕ್ಕೇರುತ್ತದೆ.
ʼಗೃಹ ಜ್ಯೋತಿʼ ಯೋಜನೆ ಉಳಿಯುತ್ತದೆಯೇ?
ಹಲವು ವರ್ಷಗಳಿಂದ ಬಡ ಕುಟುಂಬಗಳು ಉಚಿತವಾಗಿ ಬಳಕೆ ಮಾಡುತ್ತಿದ್ದ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಎಂಬ ವ್ಯವಸ್ಥೆಯನ್ನು ‘ಉಚಿತ ಗೃಹ ಬಳಕೆಯ ವಿದ್ಯುತ್ ಯೋಜನೆ’ಯಾದ ‘ಗೃಹ ಜ್ಯೋತಿ’ಯು ತನ್ನೊಳಗೆ ಸೇರಿಸಿಕೊಂಡಿದೆ. ವಿದ್ಯುತ್ ಕ್ಷೇತ್ರ ಸಂಪೂರ್ಣವಾಗಿ ಖಾಸಗಿಯವರ ತೆಕ್ಕೆಗೆ ಹೋದರೆ, ಬಡ ಗ್ರಾಹಕರನ್ನು ಅವರು ಆಯ್ಕೆಮಾಡಿಕೊಳ್ಳುತ್ತಾರೆಯೇ? ಅಥವಾ, ಖಾಸಗಿ ಕಂಪನಿಗಳು ವಿಧಿಸುವ ದುಬಾರಿ ದರ ಕೊಟ್ಟು ಬಡವರು ವಿದ್ಯುತ್ ಬಳಕೆ ಮಾಡಲಾದೀತೆ? ಇದರೊಂದಿಗೆ ರಾಜ್ಯ ಸರ್ಕಾರದ ʼಗೃಹ ಜ್ಯೋತಿʼ ಯೋಜನೆ ಉಳಿಯಲಿದೆಯೇ? ಇಂತಹ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.
ಪಂಪ್ ಸೆಟ್ ಗಳಿಗೂ ಮೀಟರ್:
ಕೃಷಿಗಾಗಿ ಜಮೀನಿನಲ್ಲಿ ಅಳವಡಿಸಿರುವ ಪಂಪ್ ಸೆಟ್ ಗಳಿಗೆ ಉಚಿತವಾಗಿ ವಿದ್ಯುತ್ ಬಳಕೆ ಸೌಲಭ್ಯವಿದೆ. ಒಬ್ಬ ರೈತ ತಿಂಗಳಿಗೆ 10 ಸಾವಿರ ರೂ ವಿದ್ಯುತ್ ಬಳಕೆ ಮಾಡುತ್ತಿದ್ದಾರೆ ಎಂದಿಟ್ಟುಕೊಳ್ಳಿ. ಈಗ ಅದನ್ನು ಅವರು ಕಟ್ಟಬೇಕಿಲ್ಲ. ಬಿಲ್ ಕಟ್ಟಲಿಲ್ಲ ಎಂದು ವಿದ್ಯುತ್ ಕಂಪನಿಯ ನೌಕರ ಬಂದು ವಿದ್ಯುತ್ ಸಂಪರ್ಕ ಕಡಿತ ಮಾಡುವುದಿಲ್ಲ. ಏಕೆಂದರೆ ಸರ್ಕಾರ ಈ ಹಣವನ್ನು ವಿದ್ಯುತ್ ವಿತರಣಾ ಕಂಪನಿಗಳಿಗೆ ಭರ್ತಿ ಮಾಡಿಕೊಡುತ್ತದೆ. ಆದರೆ, ʼವಿದ್ಯುತ್ (ತಿದ್ದುಪಡಿ) ಮಸೂದೆ-2022ʼ ಪಂಪ್ ಸೇಟ್ ಗಳಿಗೂ ಮೀಟರ್ ಅಳವಡಿಸಬೇಕು ಎಂದು ಹೇಳುತ್ತದೆ. ವಿದ್ಯುತ್ ಬಳಕೆ ಮಾಡುವ ಪ್ರತಿಯೊಬ್ಬರಿಗೂ ಮೀಟರ್ ಅಳವಡಿಸಲು ವಿದ್ಯುತ್ ವಿತರಣಾ ಕಂಪನಿಗಳಿಗೆ ಈ ತಿದ್ದುಪಡಿ ಖಾಯ್ದೆ ಅಧಿಕಾರ ಕೊಡುತ್ತದೆ. ರೈತರೂ ಸಹಾ ಪ್ರಿಪೇಯ್ಡ್ ಮೀಟರ್ ಗಳನ್ನೇ ಅಳವಡಿಸಿಕೊಳ್ಳಬೇಕು. ರೈತರಿಗೆ ವಿದ್ಯುತ್ ಸಂಪರ್ಕ ಬೇಕು ಎನಿಸಿದರೆ ಮೊದಲೇ ಹಣ ಕೊಟ್ಟು ರೀಚಾರ್ಜ್ ಮಾಡಿಸಬೇಕು. ತುಂಬಿರುವ ಹಣ ಖಾಲಿಯಾಗುತ್ತಿದ್ದಂತೆ ವಿದ್ಯುತ್ ಸಂಪರ್ಕ ಕಡಿತವಾಗುತ್ತದೆ. ಇಂದು ಬಹಳಷ್ಟು ಬಡ ರೈತರು ಬಿತ್ತನೆ ಮಾಡುವುದರಿಂದ ಹಿಡಿದು ಬೆಳೆ ಕಟಾವು ಮಾಡುವವರೆಗೂ ಸಾಲ ಮಾಡಿಯೇ ವ್ಯವಸಾಯ ಮಾಡುವ ಸ್ಥಿತಿಯಲ್ಲಿದ್ದಾರೆ. ಇನ್ನು ವಿದ್ಯುತ್ ಮೀಟರ್ ರೀಚಾರ್ಜ್ ಮಾಡಿಸಲೂ ಹತ್ತಾರು ಸಾವಿರ ಸಾಲ ಮಾಡಬೇಕಾಗುತ್ತದೆ.
ನೇರ ನಗದು ಯೋಜನೆ ಎಂಬ ವಂಚನೆ
ರೈತರು ಮತ್ತು ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಯೋಜನೆಯ ಫಲಾನುಭವಿಗಳು ಮೊದಲೇ ಹಣ ಕೊಟ್ಟು ವಿದ್ಯುತ್ ಮೀಟರ್ ಗೆ ರೀಚಾರ್ಜ್ ಮಾಡಿಸಿಕೊಳ್ಳಬೇಕು. ಆ ಹಣವನ್ನು ನೇರನಗದು ಯೋಜನೆ ಮೂಲಕ ಫಲಾನುಭವಿಗಳ ಖಾತೆಗೆ ಹಾಕಲಾಗುವುದು ಎಂಬ ಅಂಶವನ್ನು ʼವಿದ್ಯುತ್ (ತಿದ್ದುಪಡಿ) ಮಸೂದೆ-2022ʼ ರಲ್ಲಿ ಸೇರಿಸಲಾಗಿದೆ. ಇದೇ ರೀತಿಯ ತಂತ್ರ ಅನುಸರಿಸುವ ಮೂಲಕ ಅಡುಗೆ ಅನಿಲದ ಮೇಲಿನ ಸಬ್ಸಿಡಿಯನ್ನು ಹಿಂಪಡೆದದ್ದನ್ನು ಮರೆಯಲಾದೀದೆ? ಇದನ್ನೇ ಉಚಿತ ವಿದ್ಯುತ್ ಬಳಕೆದಾರರಿಗೂ ಅನ್ವಹಿಸಲು ಕೇಂದ್ರ ಸರ್ಕಾರ ಹೊರಟಿದೆ. ವಿವಿಧ ಬಗೆಯಲ್ಲಿ ವಿದ್ಯುತ್ ಗೆ ನೀಡುತ್ತಿರುವ ಸಬ್ಸಿಡಿ ಹಿಂಪಡೆಯುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ.
ರಾಜ್ಯ ಬಜೆಟ್ ನಲ್ಲಿ ಪಿಪಿಪಿ ಮಾದರಿಯಲ್ಲಿ ವಿದ್ಯುತ್ ಯೋಜನೆಗಳು
2026-27ರ ಕರ್ನಾಟಕ ಬಜೆಟ್ ನಲ್ಲಿ ಈ ರೀತಿ ಪ್ರಸ್ತಾಪಿಸಲಾಗಿದೆ: ನವೀಕರಿಸಬಹುದಾದ ಮೂಲಗಳಿಂದ ಉತ್ಪಾದನೆಯಾಗುವ ಇಂಧನದ ಶೇಖರಣೆಗಾಗಿ, ಕೆಪಿಟಿಸಿಎಲ್ ಮೂಲಕ ಏಳು ಸಬ್ ಸ್ಟೇಷನ್ ಗಳಲ್ಲಿ 1,000 ಮೆಗಾವ್ಯಾಟ್ ಅವರ್ (MWh) ಬ್ಯಾಟರಿ ಶಕ್ತಿ ಶೇಖರಣಾ ವ್ಯವಸ್ಥೆಯನ್ನು 1,846 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಥಾಪಿಸಲಾಗುವುದು.
ಸೋಲಾರ್ ಮೈಕ್ರೋ-ಗ್ರಿಡ್ ಗಳ ಸ್ಥಾಪನೆ
ಸೌರಶಕ್ತಿಯನ್ನು ಬಳಸಿ ಗ್ರಾಮ ಪಂಚಾಯತಿಗಳ ವಿದ್ಯುತ್ ಬಿಲ್ಲಿನ ಹೊರೆಯನ್ನು ತಗ್ಗಿಸಲು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸೋಲಾರ್ ಮೈಕ್ರೋ-ಗ್ರಿಡ್ ಗಳನ್ನು ಸ್ಥಾಪಿಸಲಾಗುವುದು ಎಂದು ರಾಜ್ಯ ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ.
ಟಿಬಿಸಿಬಿ ಮಾದರಿಯಲ್ಲಿ ಗೋದ್ನಾ ಶಾಖೋತ್ಪನ್ನ ವಿದ್ಯುತ್ ಸ್ಥಾವರ
ಗೋದ್ನಾ ಶಾಖೋತ್ಪನ್ನ ವಿದ್ಯುತ್ ಸ್ಥಾವರವನ್ನು ಟಿಬಿಸಿಬಿ (Tariff based competitive bidding- ಸುಂಕ ಆಧಾರಿತ ಸ್ಪರ್ಧಾತ್ಮಕ ಹರಾಜು) ಮಾದರಿಯಲ್ಲಿ ಕಾರ್ಯಗತಗೊಳಿಸಲು ನಿರ್ಧಾರ ಮಾಡಲಾಗಿದೆ. ಸ್ಪರ್ಧಾತ್ಮಕ ಬಿಡ್ಡಿಂಗ್ ಮಾರ್ಗಸೂಚಿಗಳನ್ನು ವಿದ್ಯುತ್ ಸಚಿವಾಲಯವು 2003 ರ ವಿದ್ಯುತ್ ಕಾಯ್ದೆಯ ಸೆಕ್ಷನ್ 63 ರ ಪ್ರಕಾರ ರೂಪಿಸಿದೆ. ಈ ಮಾರ್ಗಸೂಚಿಗಳು ಸ್ಪರ್ಧೆಯನ್ನು ಉತ್ತೇಜಿಸುವುದು, ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿವೆ ಎಂದು ರಾಜ್ಯ ಬಜೆಟ್ ನಲ್ಲಿ ಹೇಳಲಾಗಿದೆ. ಅಂದರೆ, ಟಿಬಿಸಿಬಿ ವಿದ್ಯುತ್ ಕ್ಷೇತ್ರವನ್ನು ಖಾಸಗಿಕರಣದ ಒಂದು ಭಾಗವಾಗಿದೆ.
ವಿದ್ಯುತ್ ಕ್ಷೇತ್ರದಲ್ಲಿ ಉತ್ಪಾದನೆ ಮತ್ತು ಸಂಗ್ರಹಣೆಯಲ್ಲಿ ಖಾಸಗಿಯವರಿಗೆ ಅವಕಾಶ ಕೊಡುವ ಇಂತಹ ಪಿಪಿಪಿ ಯೋಜನೆಗಳು, ಸಾರ್ವಜನಿಕ ವಿದ್ಯುತ್ ವಲಯವನ್ನು ಸಂಪೂರ್ಣವಾಗಿ ಖಾಸಗೀಕರಣ ಮಾಡುವ ಕೇಂದ್ರ ಸರ್ಕಾರದ ನೀತಿಗಳ ಭಾಗವಾಗಿ ರಾಜ್ಯ ಸರ್ಕಾರ ಇದನ್ನು ಮಾಡುತ್ತಿದೆ. ಇದು ವಿದ್ಯುತ್ ದರ ಮತ್ತಷ್ಟು ಹೆಚ್ಚಳಕ್ಕೆ ಕಾರಣವಾಗುತ್ತದೆ.
ನಿಮ್ಮ ಟಿಪ್ಪಣಿ ಬರೆಯಿರಿ