
ವಿಡಂಬನಾತ್ಮಕ ಆನ್‌ಲೈನ್ ಸಂಘಟನೆಯಾಗಿ ಹುಟ್ಟಿಕೊಂಡ ʼಕಾಕ್ರೋಚ್ ಜನತಾ ಪಾರ್ಟಿʼ ಬೀದಿಗಿಳಿದು ಹೋರಾಟ ನಡೆಸುತ್ತಿದೆ. ಜೂನ್ 20ರಿಂದ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರಾರಂಭವಾದ ಅನಿರ್ಧಿಷ್ಟ ಕಾಲದ ಪ್ರತಿಭಟನೆ 7ನೇ ದಿನವೂ ಮುಂದುವರಿದಿದೆ. ಇದರಲ್ಲಿ ಸಹಸ್ರಾರು ಯುವಜನರು ಭಾಗವಹಿಸುತ್ತಿದ್ದಾರೆ. ಸಿಜೆಪಿ ಯನ್ನು “ದೇಶವನ್ನು ಒಡೆಯುವ ವಿಚ್ಛಿದ್ರಕಾರಿ ಶಕ್ತಿಗಳ ಬಿ ತಂಡ” ಎಂದು ಕೇಂದ್ರ ಸಚಿವರು ಆರೋಪಿಸುತ್ತಿದ್ದಾರೆ. ʼಕಾಕ್ರೋಚ್ ಗಳುʼ ರೈತರು, ಕಾರ್ಮಿಕರು ಮತ್ತು ಜನಸಾಮಾನ್ಯರ ಜೊತೆಗೂಡಿ, ದೇಶದ ಜನಸಾಮಾನ್ಯರ ನಿಜವಾದ ಸಮಸ್ಯೆಗಳಿಗೆ ಕಾರಣವಾದ ಉದಾರೀಕರಣ ನೀತಿಗಳ ವಿರುದ್ಧ ಹೋರಾಡಲು ಮುಂದಾಗಬೇಕಿದೆ ಮತ್ತು ಅವರು ನವ ಫ್ಯಾಸಿಸಂ (Neofascism) ನಡೆಸುವ ದಾಳಿಯನ್ನು ಗಟ್ಟಿಯಾಗಿ ಎದುರಿಸಿ ನಿಲ್ಲಬೇಕಿದೆ.
ವಿಡಂಬನಾತ್ಮಕ ಆನ್‌ಲೈನ್ ಸಂಘಟನೆಯಾಗಿ ಹುಟ್ಟಿಕೊಂಡ ʼಕಾಕ್ರೋಚ್ ಜನತಾ ಪಾರ್ಟಿʼ ಬೀದಿಗಿಳಿದು ಹೋರಾಟ ನಡೆಸುತ್ತಿದೆ. ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಮೇಲೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಮೊದಲಿಗೆ ಜೂನ್ 6ರಂದು ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಯಿತು. ನಂತರ, ಪುಣೆ, ಜೈಪುರ, ಲಕ್ನೋ ಮತ್ತು ಬೆಂಗಳೂರು ಸೇರಿದಂತೆ ದೇಶದ ಹಲವು ನಗರಗಳಲ್ಲಿ ʼಕಾಕ್ರೋಚ್ ಗಳುʼ ಪ್ರತಿಭಟನೆ ನಡೆಸಿದ್ದಾರೆ. ಈ ಎಲ್ಲಾ ಪ್ರತಿಭಟನೆಗಳಲ್ಲಿ ಸಹಸ್ರಾರು ಯುವಜನರು ಭಾಗಿಯಾಗಿದ್ದರು.
ಮುಂದುವರಿದ ಭಾಗವಾಗಿ ಜೂನ್ 20ರಿಂದ ದೆಹಲಿಯ ಜಂತರ್ ಮಂತರ್ ನಲ್ಲಿ ಅನಿರ್ಧಿಷ್ಟ ಕಾಲದ ಪ್ರತಿಭಟನೆ ನಡೆಯುತ್ತಿದೆ. ಅಂದು ಭಾರತೀಯ ವಿದ್ಯಾರ್ಥಿ ಒಕ್ಕೂಟ (SFI), ಅಖಿಲ ಭಾರತ ವಿದ್ಯಾರ್ಥಿ ಸಂಘ (AISA), ಕ್ರಾಂತಿಕಾರಿ ಯುವ ಸಂಘಟನ್ (KYS), ಮತ್ತು ಕಲೆಕ್ಟಿವ್ ಸೇರಿದಂತೆ ಹಲವಾರು ವಿದ್ಯಾರ್ಥಿ ಸಂಘಟನೆಗಳು ಸಹ ಉಪಸ್ಥಿತರಿದ್ದರು. ಅದೇ ದಿನ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೆ ಮತ್ತು NEET ಸೋರಿಕೆ ಮತ್ತು ಮರು ಪರೀಕ್ಷೆಯಿಂದ ಆತ್ಮಹತ್ಯೆ ಮಾಡಿಕೊಂಡ ಪ್ರತಿ ವಿದ್ಯಾರ್ಥಿಯ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರವನ್ನು ನೀಡುವವರೆಗೆ CJP ಅನಿರ್ದಿಷ್ಟಾವಧಿ ಧರಣಿ ನಡೆಸಲಿದೆ ಎಂದು ದೀಪ್ಕೆ ಘೋಷಿಸಿದರು.
ಅದು 7ನೇ ದಿನವಾದ ಜೂನ್ 26, 2026 ರಂದೂ ಮುಂದುವರಿದಿದೆ. ದೇಶದ ಯುವಜನತೆಯನ್ನು, ರೈತರನ್ನು ತಮ್ಮ ಹೋರಾಟಕ್ಕೆ ಕೈಜೋಡಿಸುವಂತೆ ಸಿಜೆಪಿ ಮುಂಖಡರು ಕರೆಕೊಟ್ಟಿದ್ದಾರೆ. ಕೆಲವು ರೈತ ಸಂಘಟನೆಗಳು ಬೆಂಬಲ ಕೊಡುವುದಾಗಿ ಹೇಳಿವೆ. ಎಂದಿನಂತೆ, ಮೋದಿ ನೇತೃತ್ವದ ಸರ್ಕಾರದ ನೀತಿಗಳು ಮತ್ತು ಅದರ ಧೋರಣೆಗಳ ವಿರುದ್ಧ ಪ್ರತಿಭಟನೆಗೆ ಇಳಿಯುವವರನ್ನು ದೇಶದ್ರೋಹಿಗಳು ʼತುಕಡೇ ತುಕಡೇ ಗ್ಯಾಂಗ್” ಎಂದು ಬಿಂಬಿಸುವಂತೆ, ಸಿಜೆಪಿ ಯನ್ನು ಸಹಾ “ದೇಶವನ್ನು ಒಡೆಯುವ ವಿಚ್ಛಿದ್ರಕಾರಿ ಶಕ್ತಿಗಳ ಬಿ ತಂಡ” ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ.
ಆಳುವವರ ನೀತಿಗಳ ಬಗ್ಗೆ ಅಸಮಾಧಾನದ ಸಂಕೇತ
ಆಳುವವರ ನೀತಿಗಳ ಬಗ್ಗೆ ಅಸಮಾಧಾನದ ಇತ್ತೀಚಿನ ಸಂಕೇತವೆಂದರೆ “ಕಾಕ್ರೋಚ್ ಜನತಾ ಪಕ್ಷ” (CJP) ಎಂಬ ವಿಡಂಬನಾತ್ಮಕ ಆನ್‌ಲೈನ್ ಸಂಘಟನೆಯ ಹುಟ್ಟು. ಮೇ 16 ರಂದು, ಸಿಜೆಪಿ ತನ್ನ ಇನ್‌ಸ್ಟಾಗ್ರಾಮ್ ಪುಟವನ್ನು ಪ್ರಾರಂಭಿಸಿತು, 12,00,000 ಜನರು ಪಕ್ಷಕ್ಕೆ ಸೇರಿದ್ದಾರೆ ಎಂದು ಅದು ಹೇಳಿಕೊಂಡಿದೆ. ನಾಲ್ಕು ದಿನಗಳಲ್ಲಿ, ಪುಟವು ಭಾರತೀಯ ಜನತಾ ಪಕ್ಷ (ಬಿಜೆಪಿ) ಗಿಂತ ಹೆಚ್ಚಿನ ಅನುಯಾಯಿಗಳನ್ನು ಗಳಿಸಿತು, ಇದರಿಂದ ಅದು ತನ್ನ ವಿಡಂಬನಾತ್ಮಕ ಹೆಸರನ್ನು ಪಡೆದುಕೊಂಡಿತು. ಇನ್‌ಸ್ಟಾಗ್ರಾಮ್ ಪುಟವು ಇಂದು 2 ಕೋಟಿ ಫಾಲೋವರ್ಸ್ ಹೊಂದಿದೆ.
ಭಾರತದ ಮುಖ್ಯ ನ್ಯಾಯಾಧೀಶರು ನಿರುದ್ಯೋಗಿ ಯುವಜನರನ್ನು “ಜಿರಳೆಗಳಿಗೆ” ಹೋಲಿಸಿದರು, “ಅವರಲ್ಲಿ ಕೆಲವರು ಮಾಧ್ಯಮಗಳಾಗುತ್ತಾರೆ, ಕೆಲವರು ಸಾಮಾಜಿಕ ಮಾಧ್ಯಮಗಳಾಗುತ್ತಾರೆ, ಆರ್‌ಟಿಐ ಕಾರ್ಯಕರ್ತರಾಗುತ್ತಾರೆ” ಮತ್ತು “ಎಲ್ಲರ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತಾರೆ” ಎಂದು ಹೇಳಿದರು. ಹಿರಿಯ ವಕೀಲರ ಹುದ್ದೆಗೆ ಸಂಬಂಧಿಸಿದ ವಕೀಲರ ಅರ್ಜಿಯ ಮೇಲಿನ ಸುಪ್ರೀಂ ಕೋರ್ಟ್ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಮೇ 15, 2026 ರಂದು ಈ ಹೇಳಿಕೆ ನೀಡಿದರು. ಈ ಹಿನ್ನೆಲೆಯಲ್ಲಿ ಯುವಜನತೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿತು. ಆ ಆಕ್ರೋಶ ಕ್ರಮೇಣ ಡಿಜಿಟಲ್ ಚಳುವಳಿಯಾಗಿ ಬದಲಾಯಿತು. ವಿಡಂಬನಾತ್ಮಕ ಪೋಸ್ಟ್‌ಗಳು, ಮೀಮ್‌ಗಳು, ವಿಡಿಯೋಗಳೊಂದಿಗೆ ಪ್ರಾರಂಭವಾದ ಈ ಅಭಿಯಾನವು ಕೆಲವೇ ದಿನಗಳಲ್ಲಿ ಕೋಟ್ಯಂತರ ಯುವಕರನ್ನು ಆಕರ್ಷಿಸಿತು.
ಅನೇಕ ಇಂಟರ್ನೆಟ್ ವಿದ್ಯಮಾನಗಳಂತೆ, ಕಾಕ್ರೋಚ್ ಜನತಾ ಪಕ್ಷವು ಒಂದು ಮೀಮ್ ಆಗಿ ಪ್ರಾರಂಭವಾಯಿತು. ಅಂದಿನಿಂದ ಇದು ತೀವ್ರ ಚರ್ಚೆಯ ವಿಷಯವಾಗಿದೆ: ಇದು ಕೇವಲ ವೈರಲ್ ಆಗಿರುವ ಜೋಕ್ ಆಗಿದೆಯೇ ಅಥವಾ ಪ್ರಸ್ತುತ ರಾಜಕೀಯ ವ್ಯವಸ್ಥೆಯನ್ನು ಪ್ರಶ್ನಿಸುವ ಸಾಮರ್ಥ್ಯವಿರುವ ನಿಜವಾದ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಬಹುದೇ? ಉತ್ತರ ಇನ್ನೂ ಅಸ್ಪಷ್ಟವಾಗಿದೆ. ಅದರ ಸದಸ್ಯರು, ಸಂಘಟಕರು ಅಥವಾ ಸಂಸ್ಥಾಪಕರು ನಿರ್ಣಾಯಕ ದೃಷ್ಟಿಕೋನವನ್ನು ಹೊಂದಿದ್ದಾರೆಯೇ ಎಂಬುದು ಖಚಿತವಿಲ್ಲ.
ಬೆಂಗಳೂರಿನಲ್ಲಿ ಸುರಿಯುವ ಮಳೆಯ ನಡುವೆಯೂ

ಜೂನ್ 14, 2026. ಮಧ್ಯಾಹ್ನ ಕಳೆಯುತ್ತಿದ್ದಂತೆ ಬೆಂಗಳೂರಿನಲ್ಲಿ ವ್ಯಾಪಕ ಮಳೆ ಆರಂಭವಾಯಿತು. ಅಂದು ಸಾಯಂಕಾಲ 4 ಗಂಟೆಗೆ ಪ್ರೀಡಂ ಪಾರ್ಕ್ ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ಯುವಜನರ ಪ್ರತಿಭಟನೆಗೆ ಕರೆಕೊಡಲಾಗಿತ್ತು. ಮಳೆಯ ಕಾರಣದಿಂದ ಯುವಜನತೆ ಪ್ರತಿಭಟನೆಗೆ ಬರಲಾರರು, ಬಂದರೂ ಅದು ಮೂರರ ಸಂಖ್ಯೆ ಮುಟ್ಟಲಾರದು ಎಂದೇ ಹಲವರು ಭಾವಿಸಿದ್ದರು. ಆದರೆ, ಅಲ್ಲಿ ಕಂಡಿದ್ದೇ ಬೇರೆ. ಸುರಿಯುವ ಮಳೆಯಲ್ಲಿಯೇ ಸಾವಿರಕ್ಕೂ ಹೆಚ್ಚು ಯುವಜನರು ಬಂದು ಸೇರಿದ್ದರು. ಕೆಲವರು ಮುಂಜಾಗೃತವಾಗಿ ಕೊಡಗಳನ್ನು, ರೈನ್ ಕೋಟ್ ಗಳನ್ನು, ಪ್ಲಾಸ್ಟಿಕ್ ಉಡುಪುಗಳನ್ನು ತಂದಿದ್ದರೆ, ಬಹುತೇಕರು ಮಳೆಯಲ್ಲೇ ನಿಂತು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಇದನ್ನು ನೋಡಿದಾಗ, ಆಳುವವರ ವಿರುದ್ಧ ಯುವಜನತೆಯಲ್ಲಿ ಎಷ್ಟೊಂದು ಆಕ್ರೋಶವಿದೆ ಎಂಬುದು ತಿಳಿಯುತ್ತಿತ್ತು. ಇಲ್ಲಿ ರಾಜಕೀಯ ಪಕ್ಷಗಳಿಗೆ, ಅವುಗಳ ಬಾವುಟಗಳಿಗೆ ಅವಕಾಶ ಇರಲಿಲ್ಲ. ಆದರೆ, ಇವರಲ್ಲಿ ಎಡ, ಬಲ, ನಡು ಎನ್ನದೆ ಎಲ್ಲಾ ಸಿದ್ದಾಂತಗಳ ಯುವಜನರಿದ್ದರು.
ಸಿಜೆಪಿಯ ನಿಜವಾದ ಶಕ್ತಿ, ಅದರ ಹಿಂದಿನ ವೇದನೆಯಲ್ಲಿದೆ
ಜಿರಳೆ ಜನತಾ ಪಕ್ಷದ ನಿಜವಾದ ಶಕ್ತಿ ಅದರ ಹೆಸರಿನಲ್ಲಿಲ್ಲ, ಬದಲಾಗಿ ಅದರ ಹಿಂದಿನ ವೇದನೆಯಲ್ಲಿದೆ. ನಿರುದ್ಯೋಗಿಯಾಗಿರುವ, ತನ್ನ ಭವಿಷ್ಯದ ಬಗ್ಗೆ ಅನಿಶ್ಚಿತವಾಗಿರುವ ಮತ್ತು ಸರ್ಕಾರದ ಭರವಸೆಗಳಲ್ಲಿ ನಂಬಿಕೆ ಕಳೆದುಕೊಳ್ಳುವ ಪೀಳಿಗೆಯು ಹೊಸ ಭಾಷೆಯಲ್ಲಿ ತನ್ನ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದೆ. ಇದು ಕೇವಲ ಸೋಷಿಯಲ್ ಮೀಡಿಯಾ ಟ್ರೆಂಡ್ ಮಾತ್ರವೇ ಅಲ್ಲ, ಇದು ಯುವಕರ ಮನಸ್ಥಿತಿಯಲ್ಲಿನ ಬದಲಾವಣೆಯ ಸಂಕೇತವಾಗಿದೆ.
“ನಮ್ಮ ಭವಿಷ್ಯ ಎಲ್ಲಿದೆ?” ಎಂದು ಯುವಜನತೆ ಕೇಳುತ್ತಿದ್ದಾರೆ. ಈ ಪ್ರಶ್ನೆಗೆ ಉತ್ತರಿಸದೆ ದೇಶವು ಅಭಿವೃದ್ಧಿ ಹೊಂದುತ್ತಿದೆ ಎಂದು ಹೇಳಿದರಷ್ಟೇ ಸಾಕಾಗುವುದಿಲ್ಲ. ಯುವಜನರು ಇಂದು ಉದ್ಯೋಗಕ್ಕಾಗಿ ಬೀದಿಗಿಳಿಯಬೇಕಾದ ಕಾರಣವೇನು? ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರವೂ ಉದ್ಯೋಗಗಳನ್ನು ಆಯ್ಕೆಮಾಡಿಕೊಳ್ಳಲು ಸಾಧ್ಯವಾಗದ ಯುವಜನರ ಸಂಖ್ಯೆ ಹೆಚ್ಚುತ್ತಿರುವುದೇಕೆ? ಈ ಪ್ರಶ್ನೆಗಳಿಗೆ ಉತ್ತರಿಸುವುದು ಆಳುವವರ ಜವಾಬ್ದಾರಿಯಾಗಿದೆ. ಇಂದು, ಕಾರ್ಪೊರೇಟ್ ಹಿತಾಸಕ್ತಿಗಳು, ಅವಕಾಶವಾದಿ ರಾಜಕೀಯ, ಪ್ರಚಾರ ರಾಜಕೀಯವು ಸಾರ್ವಜನಿಕ ಸಮಸ್ಯೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿಲ್ಲ, ಬದಲಿಗೆ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿವೆ ಎಂಬ ಟೀಕೆಗಳು ಯುವಜನರಲ್ಲಿ ಆತ್ಮವಿಶ್ವಾಸವನ್ನು ಕುಗ್ಗಿಸುತ್ತಿವೆ.
ಸಿಜೆಪಿ ಪ್ರಣಾಳಿಕೆಯಲ್ಲಿ…
ಸಿಜೆಪಿ ಪ್ರಣಾಳಿಕೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳಿಗೆ ನಿವೃತ್ತಿಯ ನಂತರದ ರಾಜ್ಯಸಭಾ ಸ್ಥಾನಗಳ ನಿಷೇಧ, ಮಾಧ್ಯಮ ತಟಸ್ಥತೆ, ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ. 50 ರಷ್ಟು ಮೀಸಲಾತಿ ಮತ್ತು ಪಕ್ಷಾಂತರಗೊಂಡ ಶಾಸಕರು ಮತ್ತು ಸಂಸದರಿಗೆ 20 ವರ್ಷಗಳ ಚುನಾವಣಾ ನಿಷೇಧದ ಅಂಶಗಳಿವೆ. ಸದಸ್ಯತ್ವಕ್ಕಾಗಿ ಅದರ ಅರ್ಹತಾ ಮಾನದಂಡಗಳು: ‘ನಿರುದ್ಯೋಗಿ, ಸೋಮಾರಿ, ದೀರ್ಘಕಾಲೀನ ಆನ್‌ಲೈನ್, ವೃತ್ತಿಪರವಾಗಿ ಕೂಗಾಡುವ ಸಾಮರ್ಥ್ಯ’. ಸಿಜೆಪಿಯ ಉದ್ದೇಶದ ಬಗ್ಗೆ ವಿಮರ್ಶಕರು ಪ್ರಶ್ನೆಗಳನ್ನು ಎತ್ತಿದ್ದರೂ, ಮುಖ್ಯವಾಹಿನಿಯ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಈ ಎರಡೂ ಪಕ್ಷಗಳ ಒಟ್ಟು ಅನುಯಾಯಿಗಳಿಗಿಂತ ಹೆಚ್ಚಿನ (2 ಕೋಟಿ) ಅನುಯಾಯಿಗಳನ್ನು ಸಿಜೆಪಿ ಹೊಂದಿದೆ ಎಂಬುದು ಸತ್ಯ.
ಇಂದಿನ ಜೆನ್ ಜಿ ಹೆಚ್ಚು ಜಾಗೃತವಾಗಿದೆ
ದೇಶದಲ್ಲಿ ಪ್ರಸ್ತುತ Gen Z ಎಂದು ಕರೆಯಲ್ಪಡುವ ಯುವ ಪೀಳಿಗೆಯು ಹಿಂದಿನ ತಲೆಮಾರುಗಳಿಗಿಂತ ಹೆಚ್ಚು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಜಾಗೃತವಾಗಿದೆ. ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ವೇದಿಕೆಗಳ ಮೂಲಕ ಜಾಗತಿಕ ಬೆಳವಣಿಗೆಗಳನ್ನು ಗಮನಿಸುತ್ತಿರುವ ಈ ಪೀಳಿಗೆಯು ರಾಜಕೀಯ ನಾಯಕರು ಮಾಡುವ ಕೇವಲ ಘೋಷಣೆಗಳಿಂದ ತೃಪ್ತವಾಗಿಲ್ಲ. ಉದ್ಯೋಗ, ಗುಣಮಟ್ಟದ ಶಿಕ್ಷಣ, ಸಮಾನ ಅವಕಾಶಗಳು ಮತ್ತು ಜೀವನದ ಭದ್ರತೆಯನ್ನು ಅವರು ಬಯಸುತ್ತಾರೆ.
ಯುವಜನರು ಎದುರಿಸುತ್ತಿರುವ ಇಂತಹ ಕಠಿಣ ವಾಸ್ತವದಿಂದಲೇ ಈ ಟ್ರೆಂಡ್ ಹುಟ್ಟಿಕೊಂಡಿದೆ. ನಿರುದ್ಯೋಗಿಯಾಗಿರುವ, ತನ್ನ ಭವಿಷ್ಯದ ಬಗ್ಗೆ ಅನಿಶ್ಚಿತವಾಗಿರುವ ಮತ್ತು ಸರ್ಕಾರದ ಭರವಸೆಗಳಲ್ಲಿ ನಂಬಿಕೆ ಕಳೆದುಕೊಳ್ಳುವ ಪೀಳಿಗೆಯು ಹೊಸ ಭಾಷೆಯಲ್ಲಿ ತನ್ನ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದೆ. ಯುವಜನರ ಕೋಪ, ಹತಾಶೆ, ಅತೃಪ್ತಿ ಮತ್ತಷ್ಟು ಹೆಚ್ಚಾದರೆ, ದೇಶದ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ.
6.3 ಕೋಟಿ ಪದವೀಧರರಲ್ಲಿ 1.1 ಕೋಟಿ ನಿರುದ್ಯೋಗಿಗಳು
ಇಂದಿನ ಈ ಪರಿಸ್ಥಿತಿಯು 1991 ರಲ್ಲಿ ಭಾರತದಲ್ಲಿ ನವ-ಉದಾರೀಕರಣ ಆರಂಭವಾದದ್ದಕ್ಕೆ ನೇರವಾಗಿ ಸಂಬಂಧಿಸಿದೆ. ಅಂದಿನಿಂದ, ಭಾರತವು ಹೆಚ್ಚಿನ ಜಿಡಿಪಿ ಬೆಳವಣಿಗೆಯನ್ನು ದಾಖಲಿಸಿದೆ, ಆದರೆ ಅದಕ್ಕೆ ತಕ್ಕಂತೆ ಸುರಕ್ಷಿತ ಉದ್ಯೋಗಗಳು ಹೆಚ್ಚಾಗಿಲ್ಲ. 2002-03 ರಿಂದ 2007-08 ರವರೆಗಿನ ಈ ಪರಿಸ್ಥಿತಿಯನ್ನು ಅನೇಕ ಅರ್ಥಶಾಸ್ತ್ರಜ್ಞರು “ಉದ್ಯೋಗ ರಹಿತ ಬೆಳವಣಿಗೆ” ಎಂದು ಕರೆದಿದ್ದಾರೆ, ಆದರೆ ಈಗ ನಾವು “ಉದ್ಯೋಗ ನಷ್ಟದ ಬೆಳವಣಿಗೆಯ” ಯುಗದಲ್ಲಿದ್ದೇವೆ. ಕೇಂದ್ರ ಸರ್ಕಾರದ ಮಾಹಿತಿಯ ಪ್ರಕಾರ, 2017-18 ರಲ್ಲಿ ನಿರುದ್ಯೋಗ ದರವು ಶೇ. 6.0 ಕ್ಕೆ ತಲುಪಿದ್ದು, ಇದು ದಶಕಗಳಲ್ಲೇ ಅತ್ಯಂತ ಹೆಚ್ಚಾಗಿದೆ. CMIE ಯ ಸ್ವತಂತ್ರ ಅಂದಾಜುಗಳು ನಿರುದ್ಯೋಗ ದರವನ್ನು ಶೇ. 7-10 ರ ನಡುವೆ ಇರಿಸಿವೆ, ಯುವಜನರ ನಿರುದ್ಯೋಗ ದರವು ಶೇ. 20 ಕ್ಕಿಂತ ಹೆಚ್ಚಿರುತ್ತದೆ. ಔಪಚಾರಿಕ ಶಿಕ್ಷಣ ಮತ್ತು ಪದವಿಗಳನ್ನು ಹೊಂದಿರುವ ಯುವಜನರಲ್ಲಿ ಈ ಬಿಕ್ಕಟ್ಟು ಇನ್ನಷ್ಟು ತೀವ್ರವಾಗಿದೆ. ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾಲಯದ ವರದಿಯ ಪ್ರಕಾರ, 2023 ರಲ್ಲಿ 20-29 ವರ್ಷ ವಯಸ್ಸಿನ 6.3 ಕೋಟಿ ಪದವೀಧರರಲ್ಲಿ 1.1 ಕೋಟಿ ನಿರುದ್ಯೋಗಿಗಳಾಗಿದ್ದರು, ಇನ್ನು 25 ವರ್ಷದೊಳಗಿನ ಪದವೀಧರರಲ್ಲಿ ನಿರುದ್ಯೋಗ ದರವು ಶೇ. 40 ಕ್ಕಿಂತ ಹೆಚ್ಚಿದೆ ಎಂದು ಅಂದಾಜಿಸಲಾಗಿದೆ.
ಸರ್ಕಾರಿ ವಲಯದ ಉದ್ಯೋಗಗಳಲ್ಲಿ ಹೆಚ್ಚುತ್ತಿರುವ ಅಭದ್ರತೆ
ಸರ್ಕಾರಿ ವಲಯದ ಉದ್ಯೋಗಗಳಲ್ಲಿ ದಿನದಿಂದ ದಿನಕ್ಕೆ ಅಭದ್ರತೆ ಹೆಚ್ಚುತ್ತಿದೆ. ರಾಯಿಟರ್ಸ್ ವರದಿಯ ಪ್ರಕಾರ, 2014 ಮತ್ತು 2022 ರ ನಡುವೆ ಕೇಂದ್ರ ಸರ್ಕಾರಿ ಕೆಲಸಗಳಿಗಾಗಿ ಸುಮಾರು 22 ಕೋಟಿ ಅರ್ಜಿಗಳು ಸಲ್ಲಿಕೆಯಾಗಿದ್ದವು, ಆದರೆ ಅಂತಿಮವಾಗಿ ಆಯ್ಕೆಯಾದದ್ದು ಕೇವಲ 7,22,000 ಅಭ್ಯರ್ಥಿಗಳು ಮಾತ್ರ. ಇದು ಉದ್ಯೋಗದ ಬೇಡಿಕೆ ಮತ್ತು ಲಭ್ಯವಿರುವ ಹುದ್ದೆಗಳ ನಡುವೆ ಇರುವ ಭಾರಿ ವ್ಯತ್ಯಾಸವನ್ನು ತೋರಿಸುತ್ತದೆ. ಅದೇ ಸಮಯದಲ್ಲಿ, ನೇಮಕಾತಿ ಪ್ರಕ್ರಿಯೆಗಳು ತಡವಾಗುವುದು, ಫಲಿತಾಂಶಗಳಿಗಾಗಿ ದೀರ್ಘಕಾಲ ಕಾಯಬೇಕಾಗಿರುವುದು ಮತ್ತು ಸರ್ಕಾರಿ ಕೆಲಸಗಳನ್ನು ಗುತ್ತಿಗೆ ಆಧಾರದ ಮೇಲೆ ನೀಡುವುದು ಉದ್ಯೋಗಾಕಾಂಕ್ಷಿಗಳಲ್ಲಿ ಅಭದ್ರತೆಯನ್ನು ಇನ್ನುಷ್ಟು ಹೆಚ್ಚಿಸಿದೆ.
ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ, ಸರ್ಕಾರಿ ವಲಯದ ಉದ್ಯೋಗ ನೇಮಕಾತಿಯಲ್ಲಿನ ಕುಸಿತ, ಹುದ್ದೆಗಳಿದ್ದರೂ ನೇಮಕಾತಿ ಇಲ್ಲದಿರುವುದು, ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಕೊರತೆ ಇವುಗಳೆಲ್ಲವೂ ಯುವಜನರಲ್ಲಿ ತೀವ್ರ ಅಸಮಾಧಾನ ಉಂಟುಮಾಡುತ್ತಿವೆ. ಕೆಲವೇ ಉದ್ಯೋಗಗಳಿಗಾಗಿ ಲಕ್ಷಾಂತರ ಅಭ್ಯರ್ಥಿಗಳು ಅರ್ಜಿ ಹಾಕಿ ಕಾಯುತ್ತಿರುವ ದೃಶ್ಯಗಳು ದೇಶದ ಅಭಿವೃದ್ಧಿ ನಿರೂಪಣೆಗೆ ವಿರುದ್ಧವಾದ ವಾಸ್ತವವನ್ನು ತೋರಿಸುತ್ತವೆ.
ಡಜನ್ ಗಟ್ಟಲೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು
ಎಸ್‌ಎಸ್‌ಸಿ (SSC), ರೈಲ್ವೆ ಮಂಡಳಿಗಳು ಮತ್ತು ವಿವಿಧ ರಾಜ್ಯ ಆಯೋಗಗಳು ನಡೆಸುವ ಪರೀಕ್ಷೆಗಳು ಪದೇ ಪದೇ ಪ್ರಶ್ನೆಪತ್ರಿಕೆ ಸೋರಿಕೆ, ತಾಂತ್ರಿಕ ದೋಷಗಳು, ಪರೀಕ್ಷೆ ರದ್ದು ಮತ್ತು ಆಡಳಿತಾತ್ಮಕ ಯಡವಟ್ಟುಗಳ ಆರೋಪಗಳನ್ನು ಎದುರಿಸುತ್ತಿವೆ. ಇದರಿಂದಾಗಿ ವಿದ್ಯಾರ್ಥಿಗಳು ವರ್ಷಗಟ್ಟಲೆ ಕಷ್ಟಪಟ್ಟು ಸಿದ್ಧರಾದ ಪರೀಕ್ಷೆಗಳು ಮುಂದೂಡಲ್ಪಡುತ್ತವೆ ಅಥವಾ ರದ್ದಾಗುತ್ತವೆ. 2019 ರಿಂದೀಚೆಗೆ ಭಾರತದಾದ್ಯಂತ ಡಜನ್ ಗಟ್ಟಲೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ನಡೆದಿರುವುದನ್ನು ತನಿಖೆಗಳು ಮತ್ತು ಮಾಧ್ಯಮ ವರದಿಗಳು ದಾಖಲಿಸಿವೆ. ಇದು ಒಂದು ಕೋಟಿಗೂ ಹೆಚ್ಚು ಉದ್ಯೋಗಾಕಾಂಕ್ಷಿಗಳ ಮೇಲೆ ಪರಿಣಾಮ ಬೀರಿದ್ದು, ನೇಮಕಾತಿ ವ್ಯವಸ್ಥೆಯ ಮೇಲಿದ್ದ ಸಾರ್ವಜನಿಕರ ನಂಬಿಕೆಯನ್ನು ಕುಸಿಯುವಂತೆ ಮಾಡಿದೆ.
ಸಿಜೆಪಿ ಒಂದು ಚಳುವಳಿಯೇ?
ಇಷ್ಟೆಲ್ಲಾ ಹೇಳುವಾಗಲೂ, ಸಿಜೆಪಿ ಒಂದು ಚಳುವಳಿಯೇ? ಎಂಬ ಪ್ರಶ್ನೆಗಳು ಕೇಳಿಬರುತ್ತವೆ. ಇದು ಒಂದು ಚಳುವಳಿಯಲ್ಲ, ಸಧ್ಯದ ಮಟ್ಟಿಗೆ ಇನ್ನೂ ಅಲ್ಲ. ಇದೊಂದು ಟ್ರೆಂಡ್, ಆದರೆ ಅದರರ್ಥ ಟ್ರೆಂಡ್ ಗಳು ಗಂಭೀರವಲ್ಲದ ಅಥವಾ ತಳ್ಳಿಹಾಕಬಹುದಾದ ವಿಷಯವೇನಲ್ಲ. ಇದು ನಮ್ಮ ಸಮಾಜದ, ವಿಶೇಷವಾಗಿ ನಮ್ಮ ಸಮಾಜದಲ್ಲಿನ ಯುವಜನರ ನೈಜ ವಾಸ್ತವದಿಂದ ಹುಟ್ಟಿಕೊಂಡ ಆನ್‌ಲೈನ್ ಟ್ರೆಂಡ್ ಆಗಿದೆ. ನಿಜವಾದ ಪ್ರಶ್ನೆ ‘ಸಿಜೆಪಿ’ ಒಂದು ಚಳವಳಿಯೇ ಅಥವಾ ಅಲ್ಲವೇ ಎಂಬುದಲ್ಲ. ಬದಲಿಗೆ, ನಮ್ಮ ದೇಶದ ನಿರಾಶೆಗೊಂಡಿರುವ ಯುವಜನತೆ ಒಂದು ದೊಡ್ಡ ಚಳವಳಿಯನ್ನು ಹೇಗೆ ಕಟ್ಟಬಹುದು ಎನ್ನುವುದೇ ನಿಜವಾದ ಪ್ರಶ್ನೆಯಾಗಿದೆ.
ಕೆಲವರು ಸಂಘಟಿತರಾಗಿ ಹೋರಾಡುತ್ತಿದ್ದಾರೆ
ಯುವಜನತೆ ಇಲ್ಲಿಯವರೆಗೆ ತಮ್ಮ ಆಕ್ರೋಶ ಮತ್ತು ನಿರಾಶೆಯನ್ನು ಹೆಚ್ಚಾಗಿ ಮೀಮ್ಸ್, ರೀಲ್ಸ್, ಬ್ಲಾಗಿಂಗ್, ಅನಾಮಧೇಯ ಕಮೆಂಟ್ ಗಳು, ರೆಡ್ಡಿಟ್ ಚರ್ಚೆಗಳು, ಗೇಮಿಂಗ್, ಕಾಮಿಡಿ ಸ್ಕೆಚ್‌ಗಳು ಮತ್ತು ಮಿಮಿಕ್ರಿ ಮುಂತಾದವುಗಳ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ಇವರಲ್ಲಿ ಕೆಲವರು ಮಾತ್ರ ಕಾರ್ಮಿಕ, ವಿದ್ಯಾರ್ಥಿ, ಯುವಜನ ಸಂಘಟನೆಗಳಲ್ಲಿ, ಮಹಿಳಾ ಸಂಘಟನೆಗಳಲ್ಲಿ, ರೈತ ಮತ್ತು ಕೃಷಿ ಕೂಲಿಕಾರರ, ಆಧಿವಾಸಿಗಳ ಸಂಘಟನೆಗಳಲ್ಲಿ ಸಂಘಟಿತರಾಗಿದ್ದಾರೆ. ಇವರು ಉತ್ತಮ ಶಿಕ್ಷಣ, ಉದ್ಯೋಗಗಳು, ವೈಜ್ಞಾನಿಕ ಕನಿಷ್ಟ ಕೂಲಿಗಾಗಿ, 8 ಗಂಟೆಗಳ ಕೆಲಸಕ್ಕಾಗಿ, ಉದ್ಯೋಗ ಭದ್ರತೆಗಾಗಿ, ಕಾರ್ಮಿಕ ಹಕ್ಕುಗಳಿಗಾಗಿ ದೇಶದ ಹಲವು ಕಾರ್ಖಾನೆಗಳ ಯುವ ಕಾರ್ಮಿಕರು, ತಮ್ಮ ಸಹೋದ್ಯೋಗಿ ಕಾರ್ಮಿಕರ ಜೊತೆ ಸೇರಿ ದಿಟ್ಟ ಹೋರಾಟ ನಡೆಸುತ್ತಿದ್ದಾರೆ. ಒಂದೆಡೆ ರೈತರು ಕೃಷಿ ಬೆಲೆಗಳಿಗೆ ಕನಿಷ್ಟ ಬೆಂಬಲ ಬೆಲೆಗಾಗಿ, ಮೂರು ಕರಾಳ ಕೃಷಿ ಕಾಯ್ದೆಗಳ ವಿರುದ್ದ ವರ್ಷಗಟ್ಟಲೆ ನಿರಂತವಾಗಿ ಹೋರಾಟ ನಡೆಸಿದ್ದಾರೆ. ಭೂಸ್ವಾಧೀನದ ವಿರುದ್ದ ಹೋರಾಟಗಳು ನಡೆಯುತ್ತಿವೆ. ದೇಶಾದ್ಯಂತ ಈಗ ನಡೆಯುತ್ತಿರುವ ಕಾಕ್ರೋಚ್ ಗಳ ಪ್ರತಿಭಟನೆಗಳು ಈ ಅತೃಪ್ತಿಯ ಪ್ರತಿಬಿಂಬವಾಗಿದೆ. ಈಗಿನ ತುರ್ತು ಪರಿಸ್ಥಿತಿಗೆ ನಮಗೆ ಬೇಕಾಗಿರುವುದು ಬೀದಿ ಹೋರಾಟಗಳು. ಉಳಿದೆಲ್ಲವೂ ಯುವಜನತೆ ತಮ್ಮನ್ನು ತಾವು ಸಂಘಟಿಸಿಕೊಳ್ಳಲು ಸಹಾಯ ಮಾಡುವ ಸಾಧನಗಳಷ್ಟೆ. ಯುವಜನತೆ ಈ ಸಾಧನಗಳನ್ನು ಬಳಸಿಕೊಳ್ಳಬೇಕು.
ನವ-ಫ್ಯಾಸಿಸಂ ವಿರುದ್ಧ ಹೋರಾಡಬೇಕಾಗಿದೆ
ಅಂತಿಮವಾಗಿ, ಯುವಜನರು ನವ-ಫ್ಯಾಸಿಸಂ (neofascism) ವಿರುದ್ಧ ಹೋರಾಡಬೇಕಾಗಿದೆ. ಅವರು ಬೀದಿಗಿಳಿದಾಗ, ಪ್ರಜಾಪ್ರಭುತ್ವದ ಪ್ರಕ್ರಿಯೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದಾಗ ಮತ್ತು ಇಡೀ ಹಳ್ಳಿ ಹಾಗೂ ನಗರಗಳವರೆಗೆ ಪರಿಣಾಮಕಾರಿ ಘಟಕಗಳಾಗಿ ಸಂಘಟಿತರಾದಾಗ ಮಾತ್ರ ಇದನ್ನು ಮಾಡಲು ಸಾಧ್ಯ. ಇಡೀ ಯುವ ಪೀಳಿಗೆ, ಅಂದರೆ ಇಂದಿನ ಜೆನ್-ಝಡ್ (Gen-Z) ಮತ್ತು ಯುವಜನರು ರಾಜಕೀಯವಾಗಿ ನಿಜವಾದ ಬದಲಾವಣೆ ತರಲು ಮತ್ತು ತಮಗಾಗಿ ಒಂದು ಉತ್ತಮ ಜೀವನ ಹಾಗೂ ಎಲ್ಲರಿಗಾಗಿ ಒಂದು ಒಳ್ಳೆಯ ಸಮಾಜವನ್ನು ರೂಪಿಸಿಕೊಳ್ಳಲು ಇದೊಂದೇ ದಾರಿ.
ನಿಮ್ಮ ಟಿಪ್ಪಣಿ ಬರೆಯಿರಿ