
ಪಶ್ಚಿಮ ಬಂಗಾಳದಲ್ಲಿ ಸತತ ಮೂವತ್ತೈದು ವರ್ಷಗಳ ಆಡಳಿತ, ಕೇರಳದಲ್ಲಿ 1957 ರಿಂದ ಆಡಳಿತ, ತ್ರಿಪುರದಲ್ಲಿ ಸತತ ಇಪ್ಪತ್ತು ವರ್ಷಗಳ ಆಡಳಿತ, ಸ್ವಾತಂತ್ರ್ಯ ನಂತರದಲ್ಲಿ ಲೋಕಸಭೆಯ ಮೊದಲ ವಿರೋಧ ಪಕ್ಷ, ಹಲವಾರು ಮುಖ್ಯಮಂತ್ರಿಗಳು, ನೂರಾರು ಮಂತ್ರಿಗಳು, ಸಾವಿರಾರು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಸದಸ್ಯರು… ಆದರೂ ಈಗಲೂ ಒಂದು ಕಾರ್ಯಕ್ರಮವೋ, ಸಮ್ಮೇಳನವೋ ಮಾಡಬೇಕೆಂದರೆ ಎಡಪಕ್ಷಗಳ ಅದರಲ್ಲೂ #CPIM ಪಕ್ಷದ ಕಾರ್ಯಕರ್ತರು, ನಾಯಕರು ಬಕೇಟನ್ನೋ, ಟವಲನ್ನೋ ಹಿಡಿದು ಜನರ ಬಳಿ ಕೈಯೊಡ್ಡುತ್ತಾರೆ, ಜನತೆ ಪ್ರೀತಿಯಿಂದಲೋ, ದಾಕ್ಷಿಣ್ಯದಿಂದಲೋ ನೀಡುವ ಹಣವನ್ನು ಸಂತೋಷದಿಂದ ಸ್ವೀಕರಿಸಿ ಖರ್ಚು ಮಾಡುತ್ತಾರೆ.. ಮತ್ತೆ ಜನರ ಬಳಿಗೆ ತೆರಳುತ್ತಾರೆ… ಇದು ಎಂದೂ ನಿಲ್ಲದ, ನಿಲ್ಲಲೇ ಬಾರದ ಸರಪಳಿ… ಜನತೆಗೆ ನಿಷ್ಟವಾಗಿರುವ ರಾಜಕೀಯ ಪಕ್ಷವೊಂದು ಇರಬೇಕಾದುದು ಹೀಗೆ..
ಈಗ ದೇಶದೆಲ್ಲೆಡೆ ಚುನಾವಣಾ ಬಾಂಡ್ ಎಂಬ ಭ್ರಷ್ಟಾಚಾರದ ಕೆಸರು ಗುಂಡಿಯ ವಾಸನೆ ದೇಶದೆಲ್ಲೆಡೆ ಹರಡಿಕೊಂಡಿದೆ. #CPIM ಮತ್ತು ಎಡಪಕ್ಷಗಳನ್ನು ಹೊರತುಪಡಿಸಿ ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳಿಂದ ಹಿಡಿದು ಜಗತ್ತಿನ ಶ್ರೀಮಂತ ಪಕ್ಷ, ಸ್ವಚ್ಚ ಪಕ್ಷ ಎಂದು ಕೊಚ್ಚಿಕೊಳ್ಳುವ ಬಿಜೆಪಿಯ ವರೆಗೆ ಕಾಂಗ್ರೇಸ್, ಜೆಡಿಎಸ್, ತೃಣಮೂಲ ಕಾಂಗ್ರೆಸ್, ಡಿಎಂಕೆ, ತೆಲುಗುದೇಶಂ ಕೊನೆಗೆ ಕೇಜ್ರಿವಾಲರ ಆಮ್ ಆದ್ಮಿ ಪಕ್ಷ ಹೀಗೆ ಎಲ್ಲಾ ಪಕ್ಷಗಳು ತಮ್ಮ ಸಾಮರ್ಥ್ಯ ಮತ್ತು ಲಾಭಿಗೆ ಅನುಗುಣವಾಗಿ ಕಾರ್ಪೋರೆಟ್ ಸಂಸ್ಥೆಗಳಿಂದ ಕಾಸು ಪಡೆದಿವೆ. ಬಿಜೆಪಿ 6000 ಕೋಟಿಗೂ ಹೆಚ್ಚು ಹಣ ವಸೂಲಿ ಮಾಡಿದ್ದರೆ ಕಾಂಗ್ರೆಸ್ 1000 ಕೋಟಿ, ಒಂದು ರಾಜ್ಯಕ್ಕೆ ಸೀಮಿತವಾದ ತೃಣಮೂಲ ಕಾಂಗ್ರೆಸ್ 900 ಕೋಟಿಯಷ್ಟು ಹಣ ಪಡೆದಿವೆ. ಸ್ವತಂತ್ರ ಭಾರತದ ಚರಿತ್ರೆಯಲ್ಲಿ ಇದೊಂದು ಕರಾಳ ಅಧ್ಯಾಯವಾಗುವ ಎಲ್ಲಾ ಸಾಧ್ಯತೆಗಳಿವೆ.
ಸಂವಿಧಾನ ಬಾಹಿರವಾದ ಚುನಾವಣಾ ಬಾಂಡ್ ರದ್ದುಮಾಡಬೇಕೆಂದು #CPIM ಪಕ್ಷ ಸುಪ್ರೀಂ ಕೋರ್ಟಿನಲ್ಲಿ ಹೂಡಿದ ದಾವೆಯಿಂದಾಗಿ ಈ ಪಟ್ಟಿ ಹೊರಬಿದ್ದಿದೆ. ಕೆಲವು ಕಂಪನಿಗಳು ED ದಾಳಿಗೆ ತುತ್ತಾದ ನಂತರ ಕೋಟ್ಯಂತರ ರೂಪಾಯಿ ದೇಣಿಗೆ ನೀಡಿದ್ದರೆ ಇನ್ನೂ ಕೆಲವು ಕಂಪನಿಗಳು ದೇಣಿಗೆ ನೀಡಿದ ಮರುದಿನವೇ ಸಾವಿರಾರು ಕೋಟಿ ರೂಪಾಯಿಗಳ ಕಾಂಟ್ಯಾಕ್ಟ್ ಪಡೆದುಕೊಂಡಿವೆ. ಅಂದರೆ ಆಳುವ ಪಕ್ಷವೊಂದು ಒಂದೋ ತನಗಿರುವ ಅಧಿಕಾರವನ್ನು ಬಳಸಿ ಬೆದರಿಸಿ ಹಣ ವಸೂಲಿ ಮಾಡಿದೆ ಅಥವಾ ಒಂದಕ್ಕೆ ನಾಲ್ಕು ಲಾಭ ಮಾಡಿಕೊಡುವ ಆಸೆ ತೋರಿಸಿ ಹಣ ಪಡೆದಿದೆ. ಎರಡರಲ್ಲಿ ಯಾವುದನ್ನು ಬಳಸಿದ್ದರೂ ಅದು ಅಧಿಕಾರ ದುರುಪಯೋಗ ಮತ್ತು ಶಿಕ್ಷಾರ್ಹ ಅಪರಾಧ. ಈಗದು ಸುಪ್ರೀಂ ಕೋರ್ಟಿನ ಅಂಗಳದಿಂದ ಜನತಾ ನ್ಯಾಯಾಲಯದ ಅಂಗಳಕ್ಕೆ ಬಂದು ನಿಂತಿದೆ.
ಕೂಲಿ ಕೊಟ್ಟವರಿಗೆ ಕೆಲಸ ಮಾಡುವುದು ತಾಂತ್ರಿಕವಾಗಿ ಮತ್ತು ತಾತ್ವಿಕವಾಗಿ ಎಲ್ಲರೂ ಒಪ್ಪಿರುವ ವಿಚಾರ. ಹಾಗಾಗಿ ಚುನಾವಣಾ ಬಾಂಡ್ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿ ಪಡೆದಿರುವ ರಾಜಕೀಯ ಪಕ್ಷಗಳು ತಾವು ಪಡೆದ ಹಣದ ಋಣ ಸಂದಾಯ ಮಾಡುವ ದಾರಿಯೆಂದರೆ ತಮ್ಮ ಅಧಿಕಾರವನ್ನು ಬಳಸಿ ಕಾರ್ಪೋರೆಟ್ ಚಾಕರಿ ಮಾಡುವುದು. ಹಾಗಾಗಿಯೇ ಹಣ ಕೊಟ್ಟ ಮಾರನೆಗೆ ಸಾವಿರಾರು ಕೋಟಿ ರೂಪಾಯಿಗಳ ಗುತ್ತಿಗೆಯನ್ನು ಕೆಲ ಕಂಪನಿಗಳು ಪಡೆದುಕೊಂಡಿವೆ. ಇದು ಕೇವಲ ಕೆಲಸ ಮಾಡಿಕೊಡುವ ಒಪ್ಪಂದದ ಮೇಲೆ ಕಾರ್ಪೋರೆಟ್ ಸಂಸ್ಥೆಗಳಿಂದ ಪಡೆದ ಲಂಚ ಅಥವಾ ಬಕ್ಷೀಸು ಮಾತ್ರವೇ ಅಲ್ಲ, ಈ ಎಲ್ಲಾ ಪಕ್ಷಗಳು ಕಾರ್ಪೋರೇಟ್‌ಗಳು ಮತ್ತು ಭೂ ಮಾಲೀಕರು ಸಾಕಿಕೊಂಡಿರುವ ಅವರದೇ ಮನೆಯ ಕೂಸುಗಳು ಅಥವಾ ಕಾಲಾಳುಗಳು. ಹಾಗಾಗಿಯೇ ಕಾರ್ಪೋರೇಟ್‌ಗಳು ಒಂದು ಗೂಳಿಟ್ಟರೆ ನಡುಗಿ ಹೋಗುವ 56 ಇಂಚಿನ ಎದೆಯ ಜನ, ಲಕ್ಷಾಂತರ ರೈತರು, ಕೂಲಿಕಾರರು, ಕಾರ್ಮಿಕರು ವರ್ಷಗಟ್ಟಲೆ ಚಳವಳಿ ಮಾಡಿದರೂ ಕ್ಯಾರೆ ಎನ್ನುವುದಿಲ್ಲ. ಇದಕ್ಕೆ ಯಾವುದೇ ಬಂಡವಾಳಶಾಹಿ ಪಕ್ಷ ಹೊರತಲ್ಲ. ಬಿಜೆಪಿಯಿರಲಿ, ಕಾಂಗ್ರೆಸ್ ಇರಲಿ ಎಎಪಿಯೇ ಬರಲಿ ಎಲ್ಲರೂ ಜಿಗಣೆಗಳೆ ಶ್ರಮಜೀವಿಗಳ ನೆತ್ತರಿಗೆ! ಆದರೆ ಬಿಜೆಪಿ ಎಂಬ ಫ್ಯಾಸಿಸ್ಟ್ ಪಕ್ಷಕ್ಕೆ ಹರಿವ ನೆತ್ತರನ್ನೂ ಜನ ಗಮನಿಸದಂತೆ ಅವರಿಗೆ ಕೋಮುವಾದದ ಅಫೀಮು ಉಣಬಡಿಸುವುದು ಗೊತ್ತಿದೆ.
ಕಮ್ಯುನಿಸ್ಟರೇಕೆ ಚುನಾವಣಾ ಬಾಂಡ್ ಮುಟ್ಟಲಿಲ್ಲ!!
ಲೋಕಸಭಾ ಚುನಾವಣೆಯೊಂದರ ಸಂದರ್ಭದಲ್ಲಿ ಕಾರ್ಪೋರೆಟ್ ಸಂಸ್ಥೆಯೊಂದು 16 ಲಕ್ಷ ರೂಪಾಯಿಗಳ ಚೆಕ್ ಒಂದನ್ನು #CPIM ಪಕ್ಷದ ಹೆಸರಿಗೆ ಬರೆದು ಪಕ್ಷದ ಕಛೇರಿಗೆ ಕಳುಹಿಸಿತ್ತು. ಅದನ್ನು ಪಡೆಯಲು ನಿರಾಕರಿಸಿದ CPIM ಚೆಕ್ ವಾಪಸ್ಸು ಕಳುಹಿಸಿ ನಾವು ಕಾರ್ಪೋರೇಟ್ ಸಂಸ್ಥೆಗಳಿಂದ ದೇಣಿಗೆ ಸ್ವೀಕರಿಸುವುದಿಲ್ಲ ಎಂದು ಹೇಳಿತ್ತು. ಅದನ್ನು ನೋಡಿ ಕೆಲವರು ಕುಹಕವಾಡಿದ್ದರು! ಆದರೆ ಮೇಲೆ ಹೇಳಿದಂತೆ ಕೂಲಿ ಕೊಟ್ಟವರಿಗೆ ಕೆಲಸ ಮಾಡಬೇಕು ಎಂಬುದನ್ನು ಬಲವಾಗಿ ನಂಬಿರುವ ಪಕ್ಷ CPIM. ಆದ್ದರಿಂದಲೇ ಅದು ಕೂಲಿಕಾರ, ರೈತ, ಕಾರ್ಮಿಕ ಎಂಬ ಶ್ರಮಜೀವಿಗಳಿಂದ ನಿಧಿಯ ರೂಪದ ಕೂಲಿ ಪಡೆದು ಅವರಿಗಾಗಿಯೇ ಕೆಲಸ ಮಾಡುತ್ತದೆ ಮಾತ್ರವಲ್ಲ ಅದು ಆ ಶ್ರಮಜೀವಿಗಳದೇ ಪಕ್ಷವಾಗಿದೆ. ಶ್ರಮಜೀವಿಗಳು ತಾವೇ ಕಟ್ಟಿಕೊಂಡಿರುವ ಪಕ್ಷವಾಗಿರುವುದರಿಂದ ತಮ್ಮ ಬೆವರು ಮತ್ತು ರಕ್ತದ ದುಡಿಮೆಯ ಹಣದಲ್ಲಿ ಒಂದಷ್ಟನ್ನು ಪಕ್ಷಕ್ಕೂ ನೀಡುತ್ತಾರೆ, ಹಣದ ಅಗತ್ಯ ಬಿದ್ದಾಗೆಲ್ಲ CPIM ಜನರ ಬಳಿಗೇ ಹೋಗುತ್ತದೆ.
ಹೀಗೆ ಜನರಿಗಾಗಿ ಮತ್ತು ಜನರಿಂದಲೇ ಕೆಲಸ ಮಾಡುವ ಕಾರಣದಿಂದಲೇ ಹಲವು ದಶಕಗಳು ಅಧಿಕಾರದಲ್ಲಿದ್ದರೂ ಕಮ್ಯುನಿಸ್ಟನೊಬ್ಬ ಭ್ರಷ್ಟನಾದ ಉದಾಹರಣೆ ಸಿಗುವುದಿಲ್ಲ, ಸಿಕ್ಕ ಮರುಕ್ಷಣವೇ ಆತ ಕಮ್ಯುನಿಸ್ಟನಾಗಿ ಉಳಿಯುವುದಿಲ್ಲ, ಪಕ್ಷದಲ್ಲೂ ಉಳಿಸಿಕೊಳ್ಳುವುದಿಲ್ಲ. ಭ್ರಷ್ಟಾಚಾರ ಎಂಬುದು ಕೇವಲ ಪಕ್ಷಕ್ಕೆ ಪಡೆಯುವ ಹಣಕ್ಕೆ ಮಾತ್ರ ಸೀಮಿತವಾದ ವಿಚಾರವಲ್ಲ, ಇಡೀ ಬಂಡವಾಳಶಾಹಿ ಪಕ್ಷಗಳೇ ಭ್ರಷ್ಟಾಚಾರದ ಕೂಪಗಳು, ಅಲ್ಲಿ ಯಾರಾದರೂ ಪ್ರಾಮಾಣಿಕತೆಯ ಪಾಠ ಮಾಡಿದರೆ ಕಪ್ಪು ಬಣ್ಣದ ಬೃಹತ್ ಕ್ಯಾನ್‌ವಾಸ್ ಒಂದಕ್ಕೆ ಬಿಳಿಯ ಪೆನ್ಸಿಲ್ ಗೆರೆ ಎಳೆಯುವ ವ್ಯರ್ಥ ಪ್ರಯತ್ನ. ಅದೂ ನೋಡುಗರನ್ನು ಮಂಗ ಮಾಡಲು.
ಆದ್ದರಿಂದ ಚುನಾವಣಾ ಬಾಂಡ್ ಸೇರಿದಂತೆ ಇಡೀ ಭ್ರಷ್ಟಾಚಾರದ ವಿರುದ್ಧ ಹೋರಾಡುವುದೆಂದರೆ ಕಾರ್ಪೋರೇಟ್ ಸಂಸ್ಥೆಗಳಿಗೆ ಲಾಭ ಮಾಡಿಕೊಡುವುದೇ ಉದ್ದೇಶವಾಗಿರುವ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಮತ್ತು ಎಲ್ಲಾ ಬಂಡವಾಳಶಾಹಿ ರಾಜಕೀಯ ಪಕ್ಷಗಳ ವಿರುದ್ಧ ಹೋರಾಟ ಮಾಡುವುದು. ಆಗ ನೀವು ಬಿಜೆಪಿ, ಕಾಂಗ್ರೆಸ್, ಎಎಪಿ ಸೇರಿದಂತೆ ಎಲ್ಲಾ ಬಂಡವಾಳಶಾಹಿ ಪಕ್ಷಗಳನ್ನು ಗುಡಿಸಿ ಗುಂಡಿ ಸೇರಿಸಬೇಕು.
ನಿಮ್ಮ ಟಿಪ್ಪಣಿ ಬರೆಯಿರಿ