ಖಾಸಗಿಯವರಿಗೆ ಸರ್ಕಾರಿ ಗೋದಾಮುಗಳ ಆಸ್ತಿ

ರೈತರಿಗೆ ಬೆಂಬಲ ಬೆಲೆ ಮತ್ತು ಪಡಿತರ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ

ಕೊವಿಡ್-19 ರ ಸಾಂಕ್ರಾಮಿಕ ದಾಳಿಯ ಸಂದರ್ಭದಲ್ಲಿ ದೇಶದ ಜನತೆ ತೀವ್ರ ಆಹಾರದ ಬಿಕ್ಕಟ್ಟನ್ನು ಎದುರಿಸುತ್ತಿದ್ದಾಗ, ಜನರ ಹಸಿವು ನೀಗಿಸಲು ನೆರವಿಗೆ ಬಂದಿದ್ದೇ ಸರ್ಕಾರಿ ಗೋದಾಮುಗಳಲ್ಲಿ ಶೇಖರಿಸಿಟ್ಟಿದ್ದ ಲಕ್ಷಾಂತರ ಟನ್ ಆಹಾರ ಧಾನ್ಯಗಳು. ಬಡತನ ರೇಖೆಯ ಕೆಳಗಿನ ಕುಟುಂಬಗಳಿಗೆ ನಿರ್ಧಿಷ್ಟ ಪ್ರಮಾಣದ ಧಾನ್ಯಗಳನ್ನು ಉಚಿತವಾಗಿ ವಿತರಣೆ ಮಾಡಲು ಈ ಸರ್ಕಾರಿ ಗೋದಾಮುಗಳ ಶೇಖರಣಾ ವ್ಯವಸ್ಥೆ ಕಾರಣ. ಆಹಾರ ಧಾನ್ಯಗಳ ಬೆಲೆ ಏರಿಕೆಗೆ ಕಡಿವಾಣ ಹಾಕಲೂ, ಬರ ಬಂದು ಆಹಾರ ಧಾನ್ಯಗಳ ಉತ್ಪನ್ನ ಕುಸಿತವಾದಾಗಲೂ ಜನರ ಹಸಿವು ನೀಗಿಸಲು ಇದು ನೆರವಿಗೆ ಬರುತ್ತದೆ. ಸೆಂಟ್ರಲ್ ವೇರ್‌ಹೌಸಿಂಗ್ ಕಾರ್ಪೊರೇಷನ್ (ಸಿಡಬ್ಲ್ಯೂಸಿ) ಸಂಸ್ಥೆಯನ್ನು ನಾಶಮಾಡಲು ಮೋದಿ ನೇತೃತ್ವದ ಸರ್ಕಾರ ಮುಂದಾಗಿದೆ. ಸರ್ಕಾರಿ ಗೋದಾಮುಗಳು ಸಂಪೂರ್ಣವಾಗಿ ಖಾಸಗಿಯವರ ತೆಕ್ಕೆಗೆ ಹೋದರೆ, ಖಾಸಗಿಯವರೇ ಆಹಾರ ಧಾನ್ಯಗಳ ಸಂಪೂರ್ಣ ದಾಸ್ತಾನು ಮಾಡಿದರೆ, ಪಡಿತರ ವ್ಯವಸ್ಥೆ ಇರಲು ಸಾಧ್ಯವಿಲ್ಲ.

ಮೋದಿ ಅಧಿಕಾರಕ್ಕೆ ಬಂದ ನಂತರ ಲಾಭದಾಯಕವಾದ ಸಾರ್ವಜನಿಕ ಉದ್ಯಮಗಳನ್ನು ಖಾಸಗಿಯವರಿಗೆ ನಿಕೃಷ್ಟ ಬೆಲೆಗೆ ಮಾರಾಟ ಮಾಡುವ ಪ್ರಕ್ರಿಯೆ ವೇಗವಾಗಿ ನಡೆಯುತ್ತಿದೆ. ಇಂತಹ ಮಾರಾಟದ ಪ್ರಕ್ರಿಯೆಗೆ ಹಲವು ಆಕರ್ಷಕ ಹೆಸರುಗಳನ್ನು ಇಡತೊಡಗಿದ್ದಾರೆ. ಅಂತಹ ಹೆಸರುಗಳಲ್ಲಿ ಒಂದು ‘ರಾಷ್ಟ್ರೀಯ ಆಸ್ತಿ ನಗದೀಕರಣದ ಯೋಜನೆ’. ಈ ಯೋಜನೆಯ ಒಳಗೆ ಸರ್ಕಾರಿ ಒಡೆತನದ ಗೋದಾಮುಗಳನ್ನೂ ಸೇರಿಸಿಬಿಟ್ಟಿದ್ದಾರೆ.

ರೂ. 2,400 ಕೋಟಿ ವಹಿವಾಟು ನಡೆಸುತ್ತಿರುವ ಕೇಂದ್ರ ಸರ್ಕಾರದ ಉದ್ಯಮವಾದ ಸೆಂಟ್ರಲ್ ವೇರ್‌ಹೌಸಿಂಗ್ ಕಾರ್ಪೊರೇಷನ್ (ಸಿಡಬ್ಲ್ಯೂಸಿ) ಮಿನಿ ರತ್ನ ವರ್ಗಕ್ಕೆ ಸೇರಿದೆ.  CWC ಹೆಚ್ಚಾಗಿ FCI, NAFED, CCI, CMSS, ರಾಜ್ಯ ನಾಗರಿಕ ಸರಬರಾಜು ನಿಗಮಗಳು ಇತ್ಯಾದಿಗಳಿಗೆ  ಆಹಾರ ಧಾನ್ಯಗಳ ಶೇಖರಣೆಯನ್ನು ಮಾಡುತ್ತಿದೆ.

ಕೇಂದ್ರ ಸರ್ಕಾರದ ಉದ್ಯಮವಾದ ಸೆಂಟ್ರಲ್ ವೇರ್‌ಹೌಸಿಂಗ್ ಕಾರ್ಪೊರೇಷನ್ ಅನ್ನು ಖಾಸಗೀಕರಣ ಮಾಡಲು ಮೋದಿ ಸರ್ಕಾರ ಮುಂದಾಗಿದೆ. ಕೇಂದ್ರದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ, ಸಾರ್ವಜನಿಕ ವಲಯದ ಸಂಸ್ಥೆಗಳ (ಪಿಎಸ್‌ಯು) ಆಸ್ತಿ ನಗದೀಕರಣದ ಯೋಜನೆಯನ್ನು ಸರ್ಕಾರ ತಂದಿದೆ. ಸರ್ಕಾರ ಆಸ್ತಿ ನಗದೀಕರಣ ಪೈಪ್ ಲೈನ್ ​​ಯೋಜನೆಗಳನ್ನು ಒಂದೊಂದಾಗಿ ಜಾರಿಗೆ ತರುತ್ತಿದೆ. ಅದರ ಭಾಗವಾಗಿ ಸಿಡಬ್ಲ್ಯೂಸಿ ಗೋದಾಮುಗಳ ಖಾಸಗೀಕರಣ ಮಾಡಲು ಹೊರಟಿದೆ. ದೇಶಾದ್ಯಂತ 54 ಸಿಡಬ್ಲ್ಯೂಸಿ ಗೋದಾಮುಗಳಲ್ಲಿನ 344 ಎಕರೆ ಭೂಮಿಯನ್ನು ಖಾಸಗೀಕರಣಕ್ಕಾಗಿ ರಿಯಲ್ ಎಸ್ಟೇಟ್ ಸಲಹಾ ಸೇವಾ ಸಂಸ್ಥೆ ‘ನೈಟ್‌ ಫ್ರಾಂಕ್’ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಸಿಡಬ್ಲ್ಯೂಸಿ ಹೊಂದಿರುವ ಭೂಮಿಯಲ್ಲಿ ನೈಟ್‌ ಫ್ರಾಂಕ್ ಸುಮಾರು 2,152 ಕೋಟಿ ವೆಚ್ಚದಲ್ಲಿ ಸುಧಾರಿತ ಸೌಲಭ್ಯಗಳೊಂದಿಗೆ ಗೋಡೌನ್‌ಗಳನ್ನು ನಿರ್ಮಿಸುತ್ತದೆ. ಇದು 45 ವರ್ಷಗಳ ಗುತ್ತಿಗೆ ಆಧಾರದ ಮೇಲೆ ಅವುಗಳನ್ನು ಸ್ವಾಧೀನಪಡಿಸಿಕೊಂಡು ವ್ಯವಹಾರ ಮಾಡುತ್ತದೆ.

        ಸಿಡಬ್ಲ್ಯುಸಿ ವಿವಿಧ ರಾಜ್ಯಗಳಲ್ಲಿ 572 ಎಕರೆ ಖಾಲಿ ಜಾಗವನ್ನು ಹೊಂದಿದೆ. ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ದೇಶದಾದ್ಯಂತ ಇರುವ ಈ ಅತ್ಯಮೂಲ್ಯವಾದ ಭೂಮಿ ಮೇಲೆ ಕಾರ್ಪೊರೇಟ್‌ ಸಂಸ್ಥೆಗಳ ಕಣ್ಣು ಬಿದ್ದಿದೆ. ಸಾರ್ವಜನಿಕ ಒಡೆತನದ ಆಸ್ತಿಯನ್ನು ಖಾಸಗಿ ಬಂಡವಾಳಗಾರರಿಗೆ ನೇರವಾಗಿ ಮಾರಾಟ ಮಾಡಿದರೆ, ಅದು ಸಾರ್ವಜನಿಕರ ಆಸ್ತಿ ಮಾರಾಟ ಎಂಬ ಆರೋಪವನ್ನು ಸರ್ಕಾರ ಎದುರಿಸಬೇಕಾಗುತ್ತದೆ. ಇಂತಹ ಆರೋಪದಿಂದ ತಪ್ಪಿಸಿಕೊಳ್ಳಲು ಸರ್ಕಾರ ಹೊಸದೊಂದು ಮಾರ್ಗ ಕಂಡುಕೊಳ್ಳುತ್ತದೆ. ಅದೇ ‘ರಾಷ್ಟ್ರೀಯ ಆಸ್ತಿ ನಗದೀಕರಣ ಪೈಪ್ ಲೈನ್’!! ಈ ಭೂಮಿ ಹೇಗೂ ಖಾಲಿಯಾಗಿ ಬಿದ್ದಿದೆ, ಇದನ್ನು ಒಂದು ನಿರ್ಧಿಷ್ಟ ವರ್ಷಗಳ ಅವಧಿಯವರೆಗೆ ಖಾಸಗಿ ಸಂಸ್ಥೆಗಳಿಗೆ ಕೊಡುತ್ತೇವೆ. ಆ ಸಂಸ್ಥೆಗಳು ಆ ಭೂಮಿಯಲ್ಲಿ ಸುಧಾರಿತ ಸೌಲಭ್ಯಗಳೊಂದಿಗೆ ಗೋದಾಮುಗಳನ್ನು ನಿರ್ಮಿಸುತ್ತದೆ. ಅದರಿಂದ ಬರುವ ಲಾಭದ ಶೇ. 5ರಷ್ಟನ್ನು  ಸಿಡಬ್ಲ್ಯುಸಿ ಗೆ ಕೊಡುತ್ತದೆ.  “ನಾವು ಸಾರ್ವಜನಿಕರ ಆಸ್ತಿ ಮಾರಾಟ ಮಾಡುತ್ತಿಲ್ಲ, ಆ ಆಸ್ತಿಯಿಂದ ಹಣ ಗಳಿಸುತ್ತೇವೆ” ಎನ್ನುತ್ತದೆ ಸರ್ಕಾರ.

45 ವರ್ಷಗಳ ಗುತ್ತಿಗೆ!!

ರಾಷ್ಟ್ರೀಯ ನಗದೀಕರಣ ಪೈಪ್ ಲೈನ್ ಯೋಜನೆಯಡಿಯಲ್ಲಿ, ಸಿಡಬ್ಲ್ಯೂಸಿ ದೇಶಾದ್ಯಂತ ತನ್ನ ಗೋದಾಮುಗಳನ್ನು ಆಧುನೀಕರಿಸುತ್ತದಂತೆ. ಇದನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಮಾದರಿಯಲ್ಲಿ ವಿನ್ಯಾಸ, ನಿರ್ಮಾಣ, ಹಣಕಾಸು, ಕಾರ್ಯಾಚರಣೆ ಮತ್ತು ವರ್ಗಾವಣೆ (DBFOT) ಮಾದರಿಯ ಅಡಿಯಲ್ಲಿ 45 ವರ್ಷಗಳ ರಿಯಾಯಿತಿ ಅವಧಿಗೆ ನೈಟ್ ಫ್ರಾಂಕ್ ಸಂಸ್ಥೆಗೆ ಕೊಟ್ಟಿದೆ. ಇದರ ನಿರ್ವಹಣೆಯಿಂದ ಬರುವ ಆದಾಯದ ಶೇ. 95 ರಷ್ಟು ಪಾಲು ಖಾಸಗಿ ಕಂಪನಿಗೆ, ಶೇ. 5ರಷ್ಟು ಪಾಲು ಮಾತ್ರ ಸರ್ಕಾರಿ ಸಂಸ್ಥೆಗೆ!!

 “ದೇಶಾದ್ಯಂತ  ಇರುವ ಸರ್ಕಾರಿ ಗೋದಾಮಿನ ಆಸ್ತಿಗಳು ದೊಡ್ಡ ಖಾಸಗಿ ಡೆವಲಪರ್‌ಗಳಿಗೆ ಆಕರ್ಷಕ ಹೂಡಿಕೆಯ ಮಾರ್ಗವಾಗಿವೆ. ಸಿಡಬ್ಲ್ಯೂಸಿ ಭೂಮಿ ಸಾಗಾಣಿಕೆಗೆ ಅನುಕೂಲಕರವಾದ ಆಯಕಟ್ಟಿನ ಸ್ಥಳಗಳಲ್ಲಿ ಲಭ್ಯವಿವೆ, ಇದು ಪ್ರೀಮಿಯಂ ಬೆಲೆ ಮೌಲ್ಯದಲ್ಲಿ ಲಭ್ಯವಿರುವ ಆಸ್ತಿ ವರ್ಗಕ್ಕೆ ಅದರ ಗುಣಲಕ್ಷಣದಿಂದಾಗಿ ಪರಿಣಾಮಕಾರಿ ಬೆಲೆ ಕಾರ್ಯಸಾಧ್ಯತೆಯನ್ನು ಒದಗಿಸುತ್ತದೆ. ಮತ್ತು ಡೆವಲಪರ್‌ಗಳಿಗೆ ತಮ್ಮ ವೇರ್‌ಹೌಸಿಂಗ್ ಬಂಡವಾಳವನ್ನು ದೇಶದ ಎಲ್ಲಾ ಭಾಗಗಳಲ್ಲಿಯೂ ವಿಸ್ತರಿಸಲು ಉತ್ತಮ ಅವಕಾಶವನ್ನು ಒದಗಿಸುತ್ತದೆ. ಒಟ್ಟು 572 ಎಕರೆ ಪ್ರದೇಶದಲ್ಲಿ 54 ಸ್ಥಳಗಳ ಅಭಿವೃದ್ಧಿಗೆ ಸುಮಾರು 2,152 ಕೋಟಿ ರೂ. ಬಂಡವಾಳ ಹೂಡಲಿದ್ದೇವೆ” ಎಂದು , ನೈಟ್ ಫ್ರಾಂಕ್ ಸಂಸ್ಥೆಯ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ ಗುಲಾಮ್ ಜಿಯಾ ಹೇಳಿದ್ದಾರೆ.

ಖಾಸಗಿ ಕಂಪನಿಗಳ ಸರಕು ಶೇಖರಣೆ

ಈ ಗೋದಾಮುಗಳಲ್ಲಿ ಆಹಾರ ಧಾನ್ಯಗಳ ಸಂಗ್ರಹಕ್ಕೆ ಮೊದಲ ಆದ್ಯತೆ ನೀಡಬೇಕು. ಅದರ ನಂತರ, ಸಾರ್ವಜನಿಕ ವಲಯದ ಕಂಪನಿಗಳ ಸರಕುಗಳನ್ನು ಸಂಗ್ರಹಿಸಲು ಅವಕಾಶ ನೀಡಬೇಕು. ಬಳಿಕ ಖಾಸಗಿ ಸಂಸ್ಥೆಗಳಿಗೆ ಬಾಡಿಗೆ ನೀಡಬೇಕು. ಸರ್ಕಾರಗಳು ಖಾಸಗೀಕರಣ ನೀತಿಗಳನ್ನು ಜಾರಿಗೆ ತಂದಾಗ ಈ ಆದ್ಯತೆಗಳು ಬದಲಾದವು. ಕೊನೆಗೆ ಪರಿಸ್ಥಿತಿ ಹದಗೆಟ್ಟಿದ್ದು, ಆಹಾರ ಧಾನ್ಯ ಸಂಗ್ರಹಕ್ಕೆ ಜಾಗವೇ ಇಲ್ಲ ಎನ್ನುವ ಸ್ಥಿತಿಗೆ ಬಂದು, ಖಾಸಗಿ ಕಂಪನಿಗಳು ಸರಕನ್ನು ಶೇಖರಿಸುತ್ತಿವೆ. ಮೋದಿ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಿಡಬ್ಲ್ಯೂಸಿ ಅನ್ನು ಹಣಗಳಿಕೆಯ ಪೈಪ್‌ಲೈನ್‌ನಲ್ಲಿ ಸೇರಿಸಿತು. ಅದರ ಭಾಗವಾಗಿ, ಸರ್ಕಾರವು ಗೋದಾಮುಗಳ ಖಾಸಗೀಕರಣದತ್ತ ಸಾಗುತ್ತಿದೆ, ಇದು ನೈಟ್ ಫ್ರಾಂಕ್ ಜೊತೆಗಿನ ಇತ್ತೀಚಿನ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಒಪ್ಪಂದದಿಂದ ದೃಢೀಕರಿಸಲ್ಪಟ್ಟಿದೆ.

ಆ ಭೂಮಿಯನ್ನು ಖಾಸಗಿ ಸಂಸ್ಥೆಗಳಿಗೆ ದಾನ ಮಾಡುವ ಮೋದಿ ಸರ್ಕಾರದ ಯೋಜನೆಯೇ ಹಣಗಳಿಕೆಯ ಪೈಪ್ ಲೈನ್ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅವುಗಳಲ್ಲಿ 344 ಎಕರೆಯನ್ನು ಮಾರಾಟ ಮಾಡಿ ಹಣ ಸಂಗ್ರಹಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಈ ಯೋಜನೆಯಲ್ಲಿ ನೈಟ್ ಫ್ರಾಂಕ್ ಎಂಬ ಖಾಸಗಿ ಸಂಸ್ಥೆ ಎರಡು ಸಾವಿರ ಕೋಟಿಗೂ ಹೆಚ್ಚು ಹೂಡಿಕೆ ಮಾಡಲಿದ್ದಾರೆ ಎನ್ನಲಾಗಿದೆ. ಹಿಂದೆ, CWC ಮತ್ತು ರಾಜ್ಯ ಉಗ್ರಾಣ ನಿಗಮ (SWC) ಗೋದಾಮಿನ ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿದ್ದವು. ಈಗ ಜಮೀನು, ಕಟ್ಟಡಗಳು ಮತ್ತು ಬಾಡಿಗೆ ನಿರ್ಧಾರ ಎಲ್ಲವೂ ಖಾಸಗಿ ಕಂಪನಿಗಳ ಪಾಲಾಗುತ್ತದೆ. ಕೇವಲ ನಾಮಮಾತ್ರದ ಗುತ್ತಿಗೆಯನ್ನು ತೆಗೆದುಕೊಳ್ಳುವ ಕೆಲಸ ಸಿಡಬ್ಲ್ಯೂಸಿ ಸಂಸ್ಥೆಯದಾಗಿದೆ.

ಖಾಸಗಿಕರಣಕ್ಕೆ 2015 ರಲ್ಲೇ ಸಿದ್ದತೆ ;

ಲೋಕಸಭೆಯಲ್ಲಿ ಮಾರ್ಚ್ 2015 ರಲ್ಲಿ ಕೇಂದ್ರೀಯ ಉಗ್ರಾಣ ನಿಗಮಕ್ಕೆ ಸಂಬಂಧಿಸಿದ ಮಸೂದೆ ಅಂಗೀಕಾರವಾದಾಗಲೇ ಗೋದಾಮುಗಳ ಖಾಸಗೀಕರಣದ ವಾಸನೆ ಬಡಿಯಿತು. ಇದನ್ನು ವಿರೋಧ ಪಕ್ಷಗಳ ಸಂಸದರು ಪ್ರಶ್ನಿಸಿದರು. ಆದರೆ, ಈ ಶಾಸನವು ನಿಗಮಕ್ಕೆ ಹೆಚ್ಚಿನ ಆರ್ಥಿಕ ಸ್ವಾತಂತ್ರ್ಯವನ್ನು ನೀಡುವ ಗುರಿಯನ್ನು ಹೊಂದಿದೆ, ಇದು ಸರ್ಕಾರದ ಅನುಮೋದನೆಯನ್ನು ಪಡೆಯದೆಯೇ ರೂ. 500 ಕೋಟಿವರೆಗೆ ಖರ್ಚು ಮಾಡಲು ಮುಕ್ತವಾಗಿದೆ ಎನ್ನುತ್ತಾ, ಈ ಮಿನಿ ರತ್ನ ಕಂಪನಿಯನ್ನು ಖಾಸಗೀಕರಣಗೊಳಿಸುವ ಯಾವುದೇ ಕ್ರಮವನ್ನು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಳ್ಳಿಹಾಕಿದರು.

ಆಹಾರ ಧಾನ್ಯಗಳ ಬೆಲೆ ಏರಿಕೆಗೆ ಕಡಿವಾಣ ಹಾಕಲು, ಬರ ಬಂದು ಆಹಾರ ಧಾನ್ಯಗಳ ಉತ್ಪನ್ನ ಕುಸಿತವಾದಾಗ ಜನರ ಹಸಿವು ನೀಗಿಸಲು ಜನರಿಗೆ ನೆರವಾಗುವ ಉದ್ದೇಶ ಇಟ್ಟುಕೊಂಡು ಮತ್ತು ಕೃಷಿ ವಲಯಕ್ಕೆ ಬೆಂಬಲ ಬೆಂಬಲವನ್ನು ಒದಗಿಸುವ ಗುರಿಯೊಂದಿಗೆ  1957ರಲ್ಲಿ ಸ್ಥಾಪಿಸಲಾದ ಸರ್ಕಾರಿ ಗೋದಾಮುಗಳು ಮತ್ತು ವಿಶೇಷ ಕಾಯಿದೆಯ ಮೂಲಕ 1962 ರಲ್ಲಿ ಸ್ಥಾಪಿತವಾದ ಸೆಂಟ್ರಲ್ ವೇರ್‌ಹೌಸಿಂಗ್ ಕಾರ್ಪೊರೇಷನ್ (ಸಿಡಬ್ಲ್ಯೂಸಿ) ಸಂಸ್ಥೆಯನ್ನು ನಾಶಮಾಡಲು ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ಮುಂದಾಗಿದೆ.

ರೈತರಿಗೆ ಬೆಂಬಲ ಬೆಲೆ ಇರುವುದಿಲ್ಲ ;

ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಫ್‌ಸಿಐ), ಭಾರತ ಸರ್ಕಾರದ ನೋಡಲ್ ಕೇಂದ್ರ ಸಂಸ್ಥೆ. ಇತರ ರಾಜ್ಯ ಏಜೆನ್ಸಿಗಳೊಂದಿಗೆ ಬೆಂಬಲ ಬೆಲೆಯಡಿಯಲ್ಲಿ ಗೋಧಿ ಮತ್ತು ಭತ್ತದ ಸಂಗ್ರಹಣೆಯನ್ನು ಕೈಗೊಳ್ಳುತ್ತದೆ. ಕಾಲಕಾಲಕ್ಕೆ ಭಾರತ ಸರ್ಕಾರ ಹೊರಡಿಸಿದ ನಿರ್ದೇಶನದಂತೆ ಒರಟಾದ ಧಾನ್ಯಗಳನ್ನು ರಾಜ್ಯ ಸರ್ಕಾರದ ಏಜೆನ್ಸಿಗಳು ಖರೀದಿಸುತ್ತವೆ. ರೈತರಿಗೆ ಲಾಭದಾಯಕ ಬೆಲೆಗಳನ್ನು ಖಚಿತಪಡಿಸಿಕೊಳ್ಳಲು ಬೆಂಬಲ ಬೆಲೆ ಅಡಿಯಲ್ಲಿ ಸಂಗ್ರಹಣೆ ಮಾಡಲಾಗುತ್ತದೆ. ಇವು ಖಾಸಗಿಯವರ ಕೈಗೆ ಹೋದರೆ, ರೈತರಿಂದ ಈಗಿನ ಕನಿಷ್ಟ ಬೆಂಬಲ ಬೆಲೆಗೆ ಖರೀದಿ ಮಾಡಲೂ ಸರ್ಕಾರ ಮುಂದಾಗುವುದಿಲ್ಲ. ಇಂತಹ ದುರುದ್ದೇಶದಿಂದಲೇ ಮೋದಿ ಸರ್ಕಾರ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿತ್ತು. ರೈತರು ದಿಟ್ಟ ಹೋರಾಟದಿಂದ ಈ ಕರಾಳ ಕಾಯ್ದೆಗಳನ್ನು ಹಿಂಪಡೆಯುವಂತೆ ಮಾಡಿದರೂ, ಸರ್ಕಾರ ಹಿಂಬಾಗಿಲಿನಿಂದ ಇವುಗಳನ್ನು ಜಾರಿಮಾಡಲು ಹೊರಟಿದೆ.

ಆಹಾರ ಭದ್ರತೆಗೆ ಅಪಾಯ ;

ಸರ್ಕಾರಿ ಗೋದಾಮುಗಳು ಸಂಪೂರ್ಣವಾಗಿ ಖಾಸಗಿಯವರ ತೆಕ್ಕೆಗೆ ಹೋದರೆ, ಖಾಸಗಿಯವರೇ ಆಹಾರ ಧಾನ್ಯಗಳ ಸಂಪೂರ್ಣ ದಾಸ್ತಾನು ಮಾಡಿದರೆ, ಕೊರೋನಾ ದಂತಹ ಸಾಂಕ್ರಾಮಿಕದ ಬಿಕ್ಕಟ್ಟಿನ ಸಂದರ್ಭದಲ್ಲಿ ಅಥವಾ ತೀವ್ರ ಬರಗಾಲ ಬಂದಾಗ ಜನರ ಹಸಿವು ನೀಗಿಸಲು, ಉಚಿತವಾಗಿ ಅಥವಾ ಜನರ ಕೈಗೆಟುವ ದರದಲ್ಲಿ ಧಾನ್ಯಗಳನ್ನು ಪೂರೈಸಲು ಸರ್ಕಾರದ ಬಳಿ ಏನೂ ಇರುವುದಿಲ್ಲ. ಪಡಿತರ ವ್ಯವಸ್ಥೆ ಎಂಬುದಂತೂ ಇರಲು ಸಾಧ್ಯವಿಲ್ಲ.  ಈಗಾಗಲೇ, ಸರ್ಕಾರಿ ಉಗ್ರಾಣಗಳಲ್ಲಿ ಆಹಾರ ಧಾನ್ಯಗಳ ಸಂಗ್ರಹ ಕಡಿಮೆಯಾಗುತ್ತಿದೆ. ಸಾರ್ವಜನಿಕ ಪಡಿತರ ವ್ಯವಸ್ಥೆಯು ಕಡಿತವನ್ನು ಎದುರಿಸುತ್ತಿದೆ. ಇದರಿಂದ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಸಿಗುತ್ತಿಲ್ಲ, ಜನತೆ ಖರೀದಿಸುವ ಧಾನ್ಯಗಳ ಬೆಲೆಯೂ ಹೆಚ್ಚುತ್ತಿದೆ. ಸರ್ಕಾರದ ಗೋದಾಮುಗಳು ಹಲವು ಕಾರ್ಪೊರೇಟ್‌ಗಳ ಕೈಗೆ ಹೋದರೆ, ಭವಿಷ್ಯದಲ್ಲಿ ಆಹಾರ ಭದ್ರತೆ ಪ್ರಶ್ನಾರ್ಹವಾಗುತ್ತದೆ. ಇದಲ್ಲದೆ, ಗೋದಾಮುಗಳ ಆನ್‌ಲೈನ್ ನಿರ್ವಹಣೆಗಾಗಿ ಕೇಂದ್ರವು ಡಿಜಿಟಲೀಕರಣವನ್ನು ಪ್ರಾರಂಭಿಸಿದೆ. ಕಾರ್ಪೊರೇಟ್‌ಗಳಿಗೆ ಮತ್ತು ಗೋದಾಮುಗಳ ಮಾರಾಟಕ್ಕಾಗಿ ಮೋದಿ ಸರ್ಕಾರ ರೂಪಿಸಿರುವ ಹಣಗಳಿಸುವ ಕಾರ್ಯಕ್ರಮವನ್ನು ಎಲ್ಲ ಜನರು ವಿರೋಧಿಸಬೇಕಿದೆ.

ಆಸ್ತಿ ನಗದೀಕರಣದ ಪೈಪ್ಲೈನ್

ರಾಷ್ಟ್ರೀಯ ಆಸ್ತಿ ನಗದೀಕರಣದ ಪೈಪ್ಲೈನ್ (NMP) ಕುರಿತು  ತಿಳಿಯೋಣ. ಕೇಂದ್ರ ಸಚಿವಾಲಯಗಳು ಮತ್ತು ಸಾರ್ವಜನಿಕ ವಲಯದ ಘಟಕಗಳ ಆಸ್ತಿ ನಗದೀಕರಣ ಪೈಪ್‌ಲೈನ್ ಅನ್ನು ಕೇಂದ್ರ ಸರ್ಕಾರ 2021ರ ಆಗಸ್ಟ್ 23 ರಂದು ಪ್ರಾರಂಭಿಸಿತು. 2021-22 ರ ಕೇಂದ್ರ ಬಜೆಟ್ ನಲ್ಲಿ ‘ಆಸ್ತಿ ನಗದೀಕರಣ’ ವಿಷಯ ಪ್ರಸ್ತಾಪವಾಗಿತ್ತು.

ಈ ನಗದೀಕರಣ ಯೋಜನೆಯಲ್ಲಿ ರಸ್ತೆಗಳು, ಸಾರಿಗೆ ಮತ್ತು ಹೆದ್ದಾರಿಗಳು, ರೈಲ್ವೆ, ವಿದ್ಯುತ್, ಪೈಪ್‌ಲೈನ್ ಮತ್ತು ನೈಸರ್ಗಿಕ ಅನಿಲ, ನಾಗರಿಕ ವಿಮಾನಯಾನ, ಶಿಪ್ಪಿಂಗ್ ಬಂದರುಗಳು ಮತ್ತು ಜಲಮಾರ್ಗಗಳು, ದೂರಸಂಪರ್ಕ, ಆಹಾರ ಮತ್ತು ಸಾರ್ವಜನಿಕ ವಿತರಣೆ, ಗಣಿಗಾರಿಕೆ, ಕಲ್ಲಿದ್ದಲು ಮತ್ತು ವಸತಿ ಮತ್ತು ನಗರ ವ್ಯವಹಾರಗಳ ಆಸ್ತಿಗಳು ಸೇರಿವೆ.  2022 ರಿಂದ 2025 ರವರೆಗಿನ ನಾಲ್ಕು ಆರ್ಥಿಕ ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರದ ಪ್ರಮುಖ ಆಸ್ತಿಗಳ ಮೂಲಕ 6 ಲಕ್ಷ ಕೋಟಿ ರೂಪಾಯಿಗಳ ಒಟ್ಟು ಹಣಗಳಿಕೆಯ ಸಾಮರ್ಥ್ಯವನ್ನು ಎಂಎನ್ ಪಿ ಅಂದಾಜಿಸಿದೆ ಎಂದು ಅಂದು ಹೇಳಲಾಗಿದೆ.

2022-25 ರ ವರಗಿನ 4 ಆರ್ಥಿಕ ವರ್ಷಗಳಲ್ಲಿನ ಗುರಿ ರೂ.ಗಳಲ್ಲಿ ಹೀಗಿದೆ: ರಸ್ತೆ- 1,60,200 ಕೋಟಿ. ರೈಲ್ವೇ- 1,52,496 ಕೋಟಿ. ವಿದ್ಯುತ್ ಪ್ರಸರಣ- 45,200 ಕೋಟಿ. ವಿದ್ಯುತ್ ಉತ್ಪಾದನೆ- 39,832 ಕೋಟಿ. ನೈಸರ್ಗಿಕ ಅನಿಲ ಪೈಪ್‌ಲೈನ್- 24,462 ಕೋಟಿ. ದೂರಸಂಪರ್ಕ- 35,100 ಕೋಟಿ. ಉಗ್ರಾಣ- 28,900 ಕೋಟಿ. ಗಣಿಗಾರಿಕೆ- 28,747 ಕೋಟಿ. ನಾಗರಿಕ ವಿಮಾನಯಾನ- 20,782 ಕೋಟಿ. ಬಂದರುಗಳು- 12,828 ಕೋಟಿ. ಕ್ರೀಡಾಂಗಣ- 11,450 ಕೋಟಿ. ಹೀಗೆ 4 ವರ್ಷಗಳಲ್ಲಿ 6 ಲಕ್ಷ ಕೋಟಿ ರೂ ಆದಾಯ ಗಳಿಸುವ ಗುರಿ ಹೊಂದಲಾಗಿದೆ. ಸರ್ಕಾರದ ಮಾತಿನಲ್ಲಿ ಹೇಳುವುದಾದರೆ, ಆಸ್ತಿಯನ್ನು ಹಣವನ್ನಾಗಿ ಪರಿವರ್ತಿಸಲಾಗುತ್ತದೆ. ನೇರವಾಗಿ ಹೇಳುವುದಾದರೆ, ‘ರಾಷ್ಟ್ರೀಯ ಆಸ್ತಿ ನಗದೀಕರಣದ ಪೈಪ್ಲೈನ್’ಎಂಬುದು, ಸಾರ್ವಜನಿಕ ಆಸ್ತಿಗಳ ಮಾರಾಟಕ್ಕೆ ಎಂಬುದಕ್ಕೆ ಬದಲಾಗಿ ಜನತೆಯನ್ನು ವಂಚಿಸಲು ಇಟ್ಟಿರುವ ಹೆಸರಾಗಿದೆ.  

Is this your new site? Log in to activate admin features and dismiss this message
ಲಾಗಿನ್