
ಗ್ಯಾಟ್ (GATT-General Agriment on Tariffs and Trade) ಒಪ್ಪಂದ ದೇಶದ ಮೇಲೆ, ಕೃಷಿ ಮತ್ತು ರೈತರ ಮೇಲೆ, ಕಾರ್ಮಿಕರು, ವಿದ್ಯಾರ್ಥಿ, ಯುವಜನ, ಮಹಿಳೆಯರ ಮೇಲೆ, ಒಟ್ಟಾರೆ ಜನಸಾಮಾನ್ಯರ ಬದುಕಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು, ಆ ಒಪ್ಪಂದದ ವಿರುದ್ಧ 1990ರ ದಶಕದಿಂದಲೂ ಕಮ್ಯೂನಿಸ್ಟರು ದಿಟ್ಟವಾದ ಹೋರಾಟ ನಡೆಸುತ್ತಾ ಬಂದಿದ್ದಾರೆ. ‘ಜೈಲ್ ಬರೋ’ ಸೇರಿದಂತೆ ದೇಶಾದ್ಯಂತ ಲಕ್ಷಾಂತರ ಜನರು ಭಾಗಿಯಾಗಿದ್ದ ಹಲವು ಹೋರಾಟಗಳಲ್ಲಿ, 1994ರಲ್ಲಿ ಬೆಂಗಳೂರಿನಲ್ಲಿ ನಡೆದ ‘ರಾಜಭವನ ಚಲೋ’ ಕಾರ್ಯಕ್ರಮವೂ ಒಂದು. ಈ ಹೋರಾಟದಲ್ಲಿ ನಾನೂ ಕೂಡ ಭಾಗವಹಿಸಿದ್ದೆ. ಪೊಲೀಸರು ಬೀಸಿದ ಲಾಠಿ ಏಟುಗಳು ನನ್ನ ಮೈಮೇಲೆ 18 ಬಾಸುಂಡೆಗಳನ್ನು ಬರಿಸಿದ್ದವು.
ಗ್ಯಾಟ್ 1994ರ ಏಪ್ರಿಲ್ 15. ಕೆಲವು ಸಂಗಾತಿಗಳ (ಕಾಮ್ರೇಡ್ಸ್) ಜೊತೆ ರಾಜಭವನದ ಕಡೆ ಹೆಜ್ಜೆ ಹಾಕತೊಡಗಿದೆ. ಮೊದಲೇ ನಿರ್ಧರಿಸಿದಂತೆ ಎಲ್ಲಾ ಸಂಗಾತಿಗಳು ಒಂದೇ ಕಡೆ ಗುಂಪು ಸೇರದಂತೆ ಎಚ್ಚರವಹಿಸಿದೆವು. ಪೊಲೀಸರ ಕಣ್ಣು ತಪ್ಪಿಸಿ ರಾಜಭವನಕ್ಕೆ ಮುತ್ತಿಗೆ ಹಾಕಲು ಸಿಪಿಐ(ಎಂ) (ಭಾರತ ಕಮ್ಯುನಿಸ್ಟ್ ಪಕ್ಷ- ಮಾರ್ಕ್ಸ್ ವಾದಿ)ನ ಬೆಂಗಳೂರು ಜಿಲ್ಲಾ ಸಮಿತಿಯ ಪಕ್ಷದ ಕಾರ್ಯದರ್ಶಿ ಆರ್.ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ ಪಕ್ಷದ ಕಾರ್ಯಕರ್ತರು ನಿರ್ಧರಿಸಿದ್ದೆವು. ಪಕ್ಷದ ಅಖಿಲ ಭಾರತ ಹೋರಾಟದ ಕರೆಯ ಮೇರೆಗೆ ಬೆಂಗಳೂರಿನಲ್ಲೂ ಈ ಪ್ರತಿಭಟನೆ ಅಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯ ಬಗ್ಗೆ ಮಾಧ್ಯಮದವರಿಗೆ ತಿಳಿಸಲಾಗಿತ್ತಾದರೂ, ಅದನ್ನು ನಡೆಸುವ ರೀತಿ ಹೇಗೆಂದು ತಿಳಿಸಿರಲಿಲ್ಲ. ರಾಜಭವನ ರಸ್ತೆ ಮತ್ತು ಪಕ್ಕದ ರಸ್ತೆಗಳು, ಅಲಿ ಅಸ್ಕರ್ ರಸ್ತೆ, ಆಕಾಶವಾಣಿ ಕಾಂಪೌಂಡ್, ಹೀಗೆ ಅಲ್ಲಲ್ಲಿ ಚದುರಿದಂತೆ ಕಾರ್ಯಕರ್ತರು ನಿಂತಿದ್ದೆವು. ರಾಜಭವನದ ಹೆಬ್ಬಾಗಿಲಿನಲ್ಲಿ ಪೊಲೀಸರ ಸರ್ಪಗಾವಲಿತ್ತು. ಸಂಗಾತಿಯೊಬ್ಬರು ಸೂಚನೆ ನೀಡಿದ ತಕ್ಷಣ ಎಲ್ಲರೂ ರಾಜಭವನದ ಹೆಬ್ಬಾಗಿಲ ಬಳಿ ಒಮ್ಮೇಲೆ ಸೇರಬೇಕೆಂದು ನಿರ್ಧರಿಸಲಾಗಿತ್ತು.
ರಾಜಭವನ ಸಮೀಪ ಯಾವುದೇ ಪ್ರತಿಭಟನೆಗಳಿಗೆ ಪೊಲೀಸರು ಅನುಮತಿ ನೀಡುತ್ತಿರಲಿಲ್ಲ. ಅಲ್ಲಿ 144ರ ಸೆಕ್ಷನ್ ಜಾರಿಯಲ್ಲಿತ್ತು. ರಾಜಭವನದ ಎದುರು ಪ್ರತಿಭಟನೆ ನಡೆಸಲು ಬರುವವರನ್ನು ಪೊಲೀಸರು ಜನರಲ್ ಪೋಸ್ಟ್ ಆಫೀಸ್ ಬಳಿಯೇ ತಡೆಯುತ್ತಿದ್ದರು. ನಮ್ಮ ಇಂತಹ ಅನಿರೀಕ್ಷಿತ ಹೋರಾಟದಿಂದ ಪೊಲೀಸರು ರೊಚ್ಚಿಗೇಳಬಹುದೆಂಬ ನಿರೀಕ್ಷೆಯಿಂದ, ಅವರ ದಾಳಿಗೆ ಮೈವೊಡ್ಡಲು ಸಿದ್ದರಾಗಿಯೇ ನಾವು ಬಂದಿದ್ದೆವು. ತಳ್ಳಾಟದಲ್ಲಿ ಕಳೆದುಹೋಗಬಾರದೆಂದು ನಾನು ದರಿಸಿದ್ದ ಕೈಗಡಿಯಾರವನ್ನು ತೆಗೆದು ನನ್ನ ಆಟೋದಲ್ಲಿ ಇಟ್ಟಿದ್ದೆ. ನಾನೂ ಸೇರಿದಂತೆ ಹೋರಾಟಕ್ಕೆ ಬಂದಿದ್ದ ಆಟೋ ಚಾಲಕ ಸಂಗಾತಿಗಳು ಆಟೋರಿಕ್ಷಾವನ್ನು 2 ಕಿಲೋಮೀಟರ್ ದೂರದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ಬಂದಿದ್ದೆವು. ತಳ್ಳಾಟದಲ್ಲಿ ಚಪ್ಪಲಿ ಕಳೆದು ಹೋದೀತೆಂದು ನನ್ನ ಹವಾಯಿ ಚಪ್ಪಲಿಯನ್ನೂ ಬಿಟ್ಟು ಬರಿಗಾಲಲ್ಲಿ ಬಂದಿದ್ದೆ. ಅಲ್ಲಲ್ಲಿ ಚದುರಿ ನಿಂತಿದ್ದ ಸಂಗಾತಿಗಳು ಸೂಚನೆಗಾಗಿ ಕಾಯುತ್ತಾ, ಅಪರಿಚಿತರಂತೆ ಅತ್ತಿತ್ತ ಓಡಾಡಿಕೊಂಡಿದ್ದೆವು.
ಬೆರಗಾದ ಪೊಲೀಸರು
‘ಇಂಕ್ವಿಲಾಬ್ ಜಿಂದಾಬಾದ್’ ಘೋಷಣೆಗಳ ಕೂಗು ಕಿವಿಗೆ ಬೀಳುತ್ತಿದ್ದಂತೆ, ನಾವೂ ಘೋಷಣೆ ಕೂಗುತ್ತಾ ರಾಜಭವನದ ಹೆಬ್ಬಾಗಿಲ ಕಡೆಗೆ ಓಡೋಡಿ ಬಂದೆವು. ಕ್ಷಣಾರ್ಧದಲ್ಲಿ ನೂರಾರು ಸಂಗಾತಿಗಳು ರಾಜಭವನದ ಹೆಬ್ಬಾಗಿಲ ಬಳಿ ಬಂದು ಸೇರಿದೆವು. ಘೋಷಣೆ ಕೂಗುತ್ತಾ ಬಂದ ಗುಂಪು ಸಿಪಿಐ (ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ)ದಾಗಿತ್ತು ಎಂದು ನಂತರ ತಿಳಿಯಿತು. 400 ಮೀಟರ್ ದೂರದ ಜನರಲ್ ಪೋಸ್ಟ್ ಆಫೀಸ್ ವೃತ್ತದಿಂದ ಸಿಪಿಐನ ಸುಮಾರು 50 ಸಂಗಾತಿಗಳ ಮೆರವಣಿಗೆ ಬಂದಿತ್ತು. ಕಡಿಮೆ ಸಂಖ್ಯೆಯ ಜನರಿದ್ದಾರೆ ಎಂಬ ಕಾರಣಕ್ಕೋ ಏನೋ ಅವರ ಜೊತೆ ಬೆರಳೆಣಿಕೆಯ ಪೊಲೀಸರೂ ಹೆಜ್ಜೆ ಹಾಕಿದ್ದರು. ರಾಜಭವನದ ಬಳಿ ಇದ್ದಕ್ಕಿದ್ದಂತೆ 200ರಷ್ಟು ಪ್ರತಿಭಟನಾಕಾರರು ಸೇರಿ, ಘೋಷಣೆ ಕೂಗುತ್ತಾ ರಾಜಭವನದ ಗೇಟಿನ ಕಡೆ ನುಗ್ಗತೊಡಗಿದ್ದನ್ನು ಕಂಡ ಪೊಲೀಸರು ಬೆರಗಾದರು. ಗೇಟಿನ ಒಳಗೆ ನುಗ್ಗದಂತೆ ಬ್ಯಾರಿಕೇಡ್ ಗಳನ್ನು ಅಡ್ಡ ಇಟ್ಟು ತಡೆಗೊಡೆಯಂತೆ ನಿಂತರು. ತಕ್ಷಣ ಮೇಲಧಿಕಾರಿಗಳಿಗೆ ತುರ್ತು ಸಂದೇಶ ಕಳುಹಿಸಿದರು. ಕೆಲವೇ ನಿಮಿಷಗಳಲ್ಲಿ ನಾಲ್ಕೈದು ಪೋಲೀಸ್ ತುಕಡಿಗಳು ಬಂದು ನಿಂತವು. ರಿಸರ್ವ್ ಪೊಲೀಸರು ಕೈಯಲ್ಲಿ ಬಂದೂಕು ಹಿಡಿದು ಸರಸರನೆ ತಮ್ಮ ವಾಹನಗಳಿಂದ ಕೆಳಗೆ ಇಳಿಯತೊಡಗಿದರು. ಲಾಠಿ ಹಿಡಿದ ಪೊಲೀಸರು ರಕ್ಷಣಾ ಕವಚ ತೊಟ್ಟು ಪ್ರತಿಭಟನಾಕಾರರನ್ನು ಸುತ್ತುವರಿದು ನಿಂತರು. ರಾಜಭವನದ ಸುತ್ತಮುತ್ತಲ ರಸ್ತೆಗಳನ್ನು ಬಂದ್ ಮಾಡಲಾಯ್ತು. ಕ್ಷಣಾರ್ಧದಲ್ಲಿ ಸುತ್ತಲಿನ ರಸ್ತೆಗಳ ಸಂಚಾರ ಸ್ತಬ್ಧವಾಯಿತು. ಹೋರಾಟಗಾರರ ಘೋಷಣೆಗಳ ದ್ವನಿ ಜೋರಾಗಿತ್ತು.
‘ದೇಶದ ಹಿತಕ್ಕೆ ಮಾರಕವಾದ ಗ್ಯಾಟ್ ಒಪ್ಪಂದ ಬೇಡವೇ ಬೇಡ.’
‘ರೈತರಿಗೆ ಮಾರಕವಾದ ಗ್ಯಾಟ್ ಬೇಡವೇ ಬೇಡ.’
‘ಸರ್ಕಾರಿ ಸ್ವಾಮ್ಯದ ಕಂಪನಿಗಳ ಅವನತಿಗೆ ಕಾರಣವಾಗುವ ಗ್ಯಾಟ್ ಬೇಡವೇ ಬೇಡ.’
‘ಗ್ಯಾಟ್ ಒಪ್ಪಂದಕ್ಕೆ ಸಹಿ ಹಾಕುವ ನರಸಿಂಹರಾವ್ ಸರ್ಕಾರಕ್ಕೆ ಧಿಕ್ಕಾರ.’
‘ದೇಶದ ಸಾರ್ವಭೌಮತ್ವವನ್ನು ಬಲಿಕೊಡಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ.’
ಹೀಗೆ ಘೋಷಣೆಗಳು ಮೊಳಗತೊಡಗಿದವು.
ಜಲ ಫಿರಂಗಿಯ ಪ್ರಥಮ ಪ್ರಯೋಗ
ಪೊಲೀಸರ ಸಂಖ್ಯೆ ಹೆಚ್ಚುತ್ತಿದಂತೆ ಜಲ ಫಿರಂಗಿಯ ವಾಹನ ಬಂದು ನಿಂತಿತು. (ಪ್ರತಿಭಟನಾಕಾರರ ಮೇಲೆ ರಭಸವಾಗಿ ನೀರು ಚಿಮ್ಮಿಸುವ ಮೂಲಕ ಅವರನ್ನು ಚದುರಿಸಲು ಇದನ್ನು ಪ್ರಯೋಗಿಸುತ್ತಾರೆ. ಇಂತಹ ಪ್ರಯೋಗಗಳನ್ನು ಟಿವಿಗಳಲ್ಲಷ್ಟೇ ನೋಡಿದ್ದೆ. ಬೆಂಗಳೂರು ನಗರದಲ್ಲಿ ಇದು ಮೊದಲ ಪ್ರಯೋಗವಾಗಿತ್ತು.)
ಪೊಲೀಸರು ದ್ವನಿವರ್ದಕದ ಮೂಲಕ ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡುತ್ತಲೇ ಇದ್ದರು. ಇಲ್ಲಿಂದ ಚದುರದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪದೇ ಪದೇ ಎಚ್ಚರಿಸಿದರೂ ಪ್ರತಿಭಟನಾಕಾರರು ಚದುರಲಿಲ್ಲ. ಪೊಲೀಸರಿಂದ ಎದುರಾಗಬಹುದಾದ ದಾಳಿಯನ್ನು ನೆನೆದು ಸಿಪಿಐ ಪಕ್ಷದ ಬಹುತೇಕ ಕಾರ್ಯಕರ್ತರು ಮೆಲ್ಲನೆ ಕಾಲ್ಕಿತ್ತರು. ಆ ಪಕ್ಷದ ಕೆಲ ಮುಖಂಡರು ಅಲ್ಲೇ ನಿಂತರು. ಸಿಪಿಎಂ ಪಕ್ಷದ ಕೆಲವು ಸಂಗಾತಿಗಳೂ ಹಿಂಜರಿದರು. ಪೊಲೀಸರ ದಾಳಿಯನ್ನು ಎದುರಿಸಲು ಮಾನಸಿಕವಾಗಿ ಸಿದ್ದತೆ ಮಾಡಿಕೊಂಡಿದ್ದವರು ಗಟ್ಟಿಯಾಗಿ ನಿಂತರು.
ಜಲ ಫಿರಂಗಿಯಿಂದ ರಭಸದಿಂದ ನುಗ್ಗಿದ ನೀರು ಪೊಲೀಸರ ಮನವಿಗೆ, ಅವರ ಬೆದರಿಕೆಗೆ ಎದೆಗುಂದದೇ ಅಲ್ಲೇ ಘೋಷಣೆ ಕೂಗುತ್ತಾ ನಿಂತೆವು. ಚದುರಲಿಲ್ಲ. ಜಲ ಫಿರಂಗಿ ತನ್ನ ಕೆಲಸ ಪ್ರಾರಂಭಿಸಿತು. ಕೊಳವೆಗಳನ್ನು ಸುತ್ತಲೂ ತಿರುಗಿಸುತ್ತಾ ಪ್ರತಿಭಟನಾಕಾರರ ಮೇಲೆ ರಭಸದಿಂದ ನೀರು ಚಿಮ್ಮಿಸತೊಡಗಿತು. ಅದನ್ನು ಚಾಲನೆ ಮಾಡುವವರಿಗೆ ಇದು ಪ್ರಥಮ ಪ್ರಯೋಗವಾದ್ದರಿಂದ ಜಲ ಫಿರಂಗಿ ಬಳಸಿ ಪ್ರತಿಭಟನಾಕಾರರು ಚದುರುವಂತೆ ಮಾಡಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಅದು ಚಿಮ್ಮಿಸಿದ ನೀರಿನಿಂದ ತೋಯ್ದ ನಾವು, ಪಿರಂಗಿಯ ಕೊಳವೆಗಳ ರಂದ್ರಗಳನ್ನು ಮುಚ್ಚುವ ಆಟದಲ್ಲಿ ತೊಡಗಿದೆವು. ಚಿಮ್ಮಿ ಬರುತ್ತಿದ್ದ ನೀರಿನಲ್ಲಿ ಕುಣಿದಾಡತೊಡಗಿದೆವು.ಪೊಲೀಸರ ಲಾಠಿಗಳು ಚುರುಕಾದವು. ಜಲ ಫಿರಂಗಿಯ ನೀರಿನ ರಭಸಕ್ಕೆ ಅಂಜದೇ ಪ್ರತಿಭಟನೆ ಮುಂದುವರೆದಿತ್ತು. ಕೇಂದ್ರ ಸರ್ಕಾರದ ವಿರುದ್ದ , ಗ್ಯಾಟ್ ಒಪ್ಪಂದದ ಷರತ್ತುಗಳ ವಿರುದ್ದ ಘೋಷಣೆ ಮೊಳಗುತ್ತಲೇ ಇತ್ತು. ಪೊಲೀಸರ ಮನವಿಗೆ ಯಾರೂ ಕಿವಿಗೊಡಲಿಲ್ಲ. ಅವರ ಎಚ್ಚರಿಕೆಗೆ ಮಣಿಯಲಿಲ್ಲ. ಪ್ರತಿಭಟನಾಕಾರರ ಈ ನಡೆ ಪೊಲೀಸ್ ಪಡೆಯನ್ನು ಕೆರಳಿಸಿತ್ತು. ನಮ್ಮ ಮೇಲೆ ಕಠಣ ಕ್ರಮ ಕೈಗೊಳ್ಳಲು ಕಾತರಿಸತೊಡಗಿದರು. ಪ್ರತಿಭಟನಾಕಾರರ ಮೇಲೆ ದಾಳಿಮಾಡಲು ತುದಿಗಾಲಲ್ಲಿ ನಿಂತರು. ಹಿರಿಯ ಅಧಿಕಾರಿಗಳ ಸೂಚನೆಗಾಗಿ ಕಾತುರದಿಂದ ಕಾಯುತ್ತಿದ್ದರು. ‘ಚಾರ್ಜ್’ ಎಂಬ ಶಬ್ದ ಹಿರಿಯ ಅಧಿಕಾರಿಯ ಬಾಯಿಂದ ಬಂದದ್ದೇ ತಡ, ಪ್ರತಿಭಟನಾಕಾರರ ಮೇಲೆ ಮನಸೋ ಇಚ್ಛೆ ಲಾಠಿ ಬೀಸತೊಡಗಿದರು. ಯಾವೊಬ್ಬ ಪ್ರತಿಭಟನಾಕಾರರೂ ತಪ್ಪಿಸಿಕೊಳ್ಳದಂತೆ ಅವರನ್ನು ಪೊಲೀಸರು ಸುತ್ತುವರಿದಿದ್ದರು. ಪೊಲೀಸರ ದೊಣ್ಣೆಯಂತಿದ್ದ ಬಲವಾದ ಲಾಠಿಗಳ ಏಟು ತಿಂದವರ ಚೀರಾಟ, ಅರಚಾಟ ಮುಗಿಲುಮುಟ್ಟಿತ್ತು. ತಪ್ಪಿಸಿಕೊಂಡು ಓಡುತ್ತಿದ್ದವರನ್ನು ಅಟ್ಟಿಸಿಕೊಂಡು ಹೋಗಿ ಸಿಕ್ಕಲೆಲ್ಲಾ ಹೊಡೆಯತೊಡಗಿದರು. ಬಸವೇಶ್ವರ ವೃತ್ತ, ಜಿಪಿಓ ವೃತ್ತ, ಅಲಿಹಸ್ಕರ್ ರಸ್ತೆ, ಪೊಲೀಸ್ ಕಮೀಷನರ್ ಕಛೇರಿ ಇರುವ ಇನ್ಪೆಂಟ್ರಿ ರಸ್ತೆ ಹೀಗೆ ಎಲ್ಲೆಂದರಲ್ಲಿ ಅಟ್ಟಾಡಿಸಿಕೊಂಡು ಲಾಠಿಬೀಸತೊಡಗಿದರು. ಜಲಪಿರಂಗಿ ಚಿಮ್ಮಿಸಿದ ನೀರಿನಿಂದ ಬಟ್ಟೆಗಳು ಒದ್ದೆಯಾಗಿದ್ದ ಕಾರಣ, ಚಳುವಳಿಗಾರರನ್ನು ಸುಲಭವಾಗಿ ಗುರುತಿಸುತ್ತಿದ್ದರು. ಹಲವು ಸಂಗಾತಿಗಳು ಲಾಠಿ ಏಟು ತಿಂದು ಅಲ್ಲಿಂದ ತಪ್ಪಿಸಿಕೊಳ್ಳುವ ಪ್ರಯತ್ನಮಾಡುತ್ತಿದ್ದರು. ಪೊಲೀಸರು ಅವರನ್ನು ಅಟ್ಟಿಸಿಕೊಂಡು ಹೋಗಿ, ಹಿಡಿದು, ಲಾಠಿಯಿಂದ ಥಳಿಸುತ್ತಾ ವ್ಯಾನಿಗೆ ತಳ್ಳುತಿದ್ದರು.
ರಕ್ತ ಚೆಲ್ಲಿತು
ಪೊಲೀಸರು ಲಾಠಿಯಿಂದ ನನ್ನನ್ನೂ ಮನಸೋ ಇಚ್ಛೆ ಥಳಿಸತೊಡಗಿದರು. ತಲೆಯಿಂದ ಕಾಲಿನವರೆಗೆ ಎಲ್ಲೆಂದರಲ್ಲಿ ಲಾಠಿ ಬೀಸತೊಡಗಿದರು. ಏಟಿನ ರಭಸಕ್ಕೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದೆ. ಪೊಲೀಸರು ಒಬ್ಬರ ನಂತರ ಒಬ್ಬರು ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾ ಸರತಿಯಂತೆ ಹೊಡೆಯತೊಡಗಿದರು. ನೋವು ತಾಳಲಾರದೆ ಕಿರುಚತೊಡಗಿದೆ. ಲಾಠಿಯಿಂದ ತಪ್ಪಿಸಿಕೊಳ್ಳಲು ಓಡತೊಡಗಿದೆ. ಪೊಲೀಸರು ಅಟ್ಟಿಸಿಕೊಂಡು ಬಂದರು. ದೊಣ್ಣೆಯ ಏಟಿನಿಂದ ತಪ್ಪಿಸಿಕೊಳ್ಳಲು ರಾಜಭವನದ ಗೋಡೆಗೆ ಒರಗಿ ನಿಂತೆ. ನನ್ನಂತೆ ನಾಲ್ವರು ಸಂಗಾತಿಗಳೂ ಒಂದೇ ಕಡೆ ಸೇರಿದೆವು. ಒಬ್ಬರ ಮೇಲೊಬ್ಬರು ಉರುಳಾಡುತ್ತಾ ಲಾಠಿ ಏಟಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದೆವು. ತಪ್ಪಿಸಿಕೊಳ್ಳುವ ಹಾವಿಗೆ ಹೊಡೆಯುವಂತೆ ನಾಲ್ಕಾರು ಪೊಲೀಸರು ದೊಣ್ಣೆಯಿಂದ ಎಲ್ಲರನ್ನೂ ಬಡಿಯತೊಡಗಿದರು. ನನ್ನ ಪ್ಯಾಂಟಿನ ನಡು ಪಟ್ಟಿ ಹಿಡಿದು, ಮೈಮೇಲೆ ಲಾಠಿ ಬೀಸುತ್ತಲೇ ನನ್ನನ್ನು ಪೊಲೀಸ್ ವ್ಯಾನಿಗೆ ತಳ್ಳಿದರು.
ಮುಖಂಡರ ತಲೆಯಿಂದ ರಕ್ತ ಸುರಿಯಿತು
ರಾಜಭವನದ ಸುತ್ತಮುತ್ತಲ ಪ್ರದೇಶ ರಣರಂಗದಂತಾಗಿತ್ತು.ಶಾಂತಿಯುವಾಗಿ ಪ್ರತಿಭಟನೆ ನಡೆಸುತ್ತಿದ್ದ ಚಳುವಳಿಗಾರರ ಮೇಲೆ ನಡೆಸಿದ ಪೊಲೀಸರ ಕ್ರೌರ್ಯದ ದಾಳಿ ಅದಾಗಿತ್ತು. ಹಲವು ಸಂಗಾತಿಗಳು ಪೊಲೀಸರ ದಾಳಿಯಿಂದ ಪಾರಾಗುವ ಯತ್ನದಲ್ಲಿ ಸಿಕ್ಕಿಬಿದ್ದು, ಲಾಠಿ ಏಟು ತಿಂದು ಬಂದಿತರಾದರೆ, ಹಲವು ಮುಖಂಡರು ಸ್ಥಳ ಬಿಟ್ಟು ಕದಲಲಿಲ್ಲ. ಸರ್ಕಾರದ ನೀತಿಗಳ ವಿರುದ್ದ ಮತ್ತು ಪೊಲೀಸರ ದೌರ್ಜನ್ಯದ ವಿರುದ್ದ ಘೋಷಣೆ ಕೂಗುತ್ತಾ ಕುಳಿತಲ್ಲೇ ಕುಳಿತರು. ಪೊಲೀಸರ ಲಾಠಿ ಮುಖಂಡರನ್ನೂ ಬಿಡಲಿಲ್ಲ. ತುಚ್ಚ ಬೈಗುಳಗಳೊಂದಿದೆ ಮುಖಂಡರ ಮೇಲೆ ಲಾಠಿ ಬೀಸತೊಡಗಿದರು. ಎಲ್ಲರ ತಲೆಯಲ್ಲಿ ರಕ್ತ ಸುರಿಯತೊಡಗಿತು. ಚಳುವಳಿಗಾರರನ್ನು ಚದುರಿಸಲು ಬಳಸಬಹುದಾದ ಮಾನವೀಯ ಮಾರ್ಗಗಳನ್ನು ಪೊಲೀಸರು ಅನುಸರಿಸಲಿಲ್ಲ. ಪಕ್ಷದ ಜಿಲ್ಲಾ ಕಾರ್ಯದರ್ಶಿ ಆರ್.ಶ್ರೀನಿವಾಸ್, ರೈತಸಂಘದ ಮುಖಂಡರಾದ ಪಿ. ಜಗನ್ನಾಥ್, ಎಲ್.ಐ.ಸಿ. ನೌಕರರ ಮುಖಂಡರಾದ ಕೆ.ವಿ. ಶ್ರೀನಿವಾಸ್, ಸಿಪಿಐ ಮುಖಂಡರು ಸೇರಿದಂತೆ ಹತ್ತಾರು ಮುಖಂಡರು ಅಲ್ಲಿದ್ದರು. ಮುಖಂಡರನ್ನು ತಕ್ಷಣ ಬಂದಿಸದೇ ಅವರ ಮೇಲೆ ಕ್ರೂರ ಮೃಗಗಳಂತೆ ವರ್ತಿಸತೊಡಗಿದರು.
57 ವರ್ಷ ವಯಸ್ಸಿನ ಕೆ.ವಿ. ಶ್ರೀನಿವಾಸನ್ ಅವರಿಗೆ ಹೃದಯ ಸಂಬಂದಿ ಖಾಯಿಲೆ ಇತ್ತು. ಪೊಲೀಸರ ದಾಳಿಯಿಂದಾಗಿ ಅವರು ನೆಲದ ಮೇಲೆ ಕುಸಿದು ಬಿದ್ದರು. ಕೆಳಗೆ ಬಿದ್ದವರನ್ನೂ ಬಿಡದ ಪೊಲೀಸರು ಲಾಠಿ ಮತ್ತು ದೊಣ್ಣೆಗಳಿಂದ ಥಳಿಸತೊಡಗಿದರು. ಎದೆ ಹಿಡಿದು ರೋದಿಸುತ್ತಾ ‘ಹೃದಯ ಶಸ್ತ್ರಚಿಕಿತ್ಸೆಯಾಗಿದೆ, ಹೊಡೆಯಬೇಡಿ’ ಎಂದು ಬೇಡಿಕೊಂಡರೂ, ಪಾಪಿ ಪೊಲೀಸನೊಬ್ಬ ‘ಖಾಯಿಲೆ ಇದ್ರೆ ಮನೇಲಿ ಇರ್ಬೇಕು. ಇಲ್ಲಿಗೇಕೆ ಬಂದೆ?’ ಎಂದು ತುಚ್ಚ ಮಾತುಗಳಲ್ಲಿ ನಿಂದಿಸುತ್ತಾ ಎದೆಯ ಮೇಲೆ ಲಾಠಿಯಿಂದ ಮತ್ತೊಮ್ಮೆ ಹೊಡೆದ.
ಮಹಿಳೆಯರ ಮೇಲೂ ಪೊಲೀಸರ ದರ್ಪ
ಪೊಲೀಸ್ ಪಡೆ ಮನಸೋ ಇಚ್ಚೆ ಪ್ರತಿಭಟನಾಕಾರರನ್ನು ಥಳಿಸತೊಡಗಿತು. ಪ್ರತಿಭಟನಾಕಾರರಿಂದ ಯಾವುದೇ ರೀತಿಯ ಮರುದಾಳಿ ನಡೆಯದಿದ್ದರೂ ಪೊಲೀಸರು ತಮ್ಮ ಕ್ರೂರ ದಾಳಿಯನ್ನು ಮುಂದುವರಿಸಿದರು. ಜನವಾದಿ ಮಹಿಳಾ ಸಂಘದ ಕೆ.ಎಸ್. ವಿಮಲಾ, ಸಮುದಾಯದ ಸುರೇಂದ್ರರಾವ್, ಪಕ್ಷದ ಹಿರಿಯ ಮುಖಂಡರಾದ ಪಿ.ಕೆ. ಸುಬ್ರಮಣಿಯವರೂ ಸೇರಿದಂತೆ ಹಲವರ ಮೇಲೆ ಮಾರಣಾಂತಿಕ ಪೆಟ್ಟು ನೀಡಿದರು. ಅನೇಕ ಮಹಿಳಾ ಕಾರ್ಯಕರ್ತರೂ ಪೊಲೀಸರ ದಾಳಿಗೆ ತುತ್ತಾದರು. ಬಹುತೇಕ ಸಂಗಾತಿಗಳ ಮೈಮೇಲಿಂದ ರಕ್ತ ಸುರಿಯುತ್ತಿತ್ತು. ಕಾರ್ಯಕರ್ತರು ನೋವಿನಿಂದ ನರಳಾಡುತ್ತಿದ್ದರು. ನಂತರ 87 ಪ್ರತಿಭಟನಾಕಾರರನ್ನು ಬಂಧಿಸಿ ನಗರದ ಮೂರು ಠಾಣೆಗಳಿಗೆ ಕರೆದ್ಯೊಯ್ದರು. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ, ಉಪ್ಪಾರಪೇಟೆ ಪೊಲೀಸ್ ಠಾಣೆ ಮತ್ತು ಅಲಸೂರು ಪೊಲೀಸ್ ಠಾಣೆಗೆ ಕರೆದ್ಯೊಯ್ದು ಎಲ್ಲರ ವಿವರ ಪಡೆದರು.
ಕೆ.ವಿ.ಎಸ್. ಗೆ ಹೃದಯಾಘಾತ
ಗಾಯಗೊಂಡ ಸಂಗಾತಿಗಳು ಪೊಲೀಸರ ದಾಳಿಯಿಂದಾಗಿ ಗಾಯಗೊಂಡು ನರಳುತ್ತಿದ್ದರೂ ಪೊಲೀಸರು ಯಾರೊಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯಲಿಲ್ಲ. ಅವರು ಕನಿಷ್ಟ ಮಾನವೀಯತೆಯನ್ನೂ ತೋರಲಿಲ್ಲ. ಬಹುತೇಕ ಸಂಗಾತಿಗಳು ನೋವಿನಿಂದ ನರಳುತ್ತಿದ್ದರು. ಸಂಗಾತಿ ಕೆ.ವಿ. ಶ್ರೀನಿವಾಸನ್ ಮತ್ತು ಕೆಲವು ಪ್ರತಿಭಟನಾಕಾರರನ್ನು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಕರೆದ್ಯೊಯ್ಯಲಾಗಿತ್ತು. ಠಾಣೆಗೆ ಬರುತ್ತಿದ್ದಂತೆ ಅವರು ಕುಸಿದು ಬಿದ್ದರು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವಂತೆ ಅಲ್ಲಿದ್ದ ಪೊಲೀಸರಲ್ಲಿ ಮನವಿ ಮಾಡಿದರೂ ಅವರು ಆಸ್ಪತ್ರೆಗೆ ಕರೆದೊಯ್ಯಲಿಲ್ಲ. ಪೊಲೀಸರು ಮಾನವೀಯತೆಯನ್ನೇ ಕಳೆದುಕೊಂಡವರಂತೆ ವರ್ತಿಸಿದರು.
ಈ ವಿಷಯ ಪಕ್ಷದ ಸಾಮೂಹಿಕ ಸಂಘಟನೆಗಳಲ್ಲೊಂದಾದ ವಕೀಲರ ಸಂಘಕ್ಕೆ ತಿಳಿಯಿತು. ಕೆ.ಆರ್.ವೆಂಕಟೇಶ್ ಗೌಡರ ನೇತೃತ್ವದ 20 ವಕೀಲರ ತಂಡವೇ ಬಂದಿತ ಪ್ರತಿಭಟನಾಕಾರರನ್ನು ಇರಿಸಿದ್ದ ಠಾಣೆಗಳಿಗೆ ಓಡೋಡಿ ಬಂದರು. ಕೆ.ವಿ.ಶ್ರೀನಿವಾಸ್ ಅವರ ಚಿಂತಾಜನಕ ಸ್ಥಿತಿ ಕಂಡು ಪೊಲೀಸರ ನಡೆಗೆ ವಕೀಲರು ಆಕ್ರೋಶಗೊಂಡರು. ತಕ್ಷಣ ಮೇಲಾಧಿಕಾರಿಗಳಿಗೆ ದೂರು ನೀಡಿದರು. ಬಂದಿತ ಸಂಗಾತಿಗಳು ಠಾಣೆಲ್ಲಿಯೂ ಘೋಷಣೆ ಕೂಗತೊಡಗಿದರು. ಈ ಘೋಷಣೆಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಧೋರಣೆಗಳ ವಿರುದ್ದ ಜೊತೆಗೆ ‘ಪೊಲೀಸರ ದೌರ್ಜನ್ಯಕ್ಕೆ ದಿಕ್ಕಾರ’ ಎಂಬ ಘೋಷಣೆಗಳೂ ಸೇರಿದ್ದವು. ಅಲ್ಲಿ ಬಂದಿತರಾಗಿದ್ದ ಪ್ರತಿಭಟನಾಕಾರರ ಘೋಷಣೆ, ವಕೀಲರ ಒತ್ತಡ ಮತ್ತು ಮೇಲಾಧಿಕಾರಿಗಳ ಛೀಮಾರಿಯ ನಂತರ, ಕೆ.ವಿ.ಎಸ್. ಅವರನ್ನು ಬೌರಿಂಗ್ ಆಸ್ಪತ್ರೆಗೆ ಕರೆದ್ಯೊಯ್ದರು.
ಓಡೋಡಿ ಬಂದ ಕಾರ್ಯಕರ್ತರು
ಸುದ್ದಿ ನಗರದೆಲ್ಲೆಡೆ ಇರುವ ಪಕ್ಷದ ಮತ್ತು ಸಾಮೂಹಿಕ ಸಂಘಟನೆಗಳ ಸದಸ್ಯರಿಗೆ ತಿಳಿಯುತ್ತಿದ್ದಂತೆ, ಅವರೆಲ್ಲ ಪೊಲೀಸರ ಕ್ರೌರ್ಯದ ವಿರುದ್ದ ಆಕ್ರೋಶಗೊಂಡರು. ತಮ್ಮ ಸಂಘದ ಮುಖಂಡರ ಮೇಲಿನ ಹಲ್ಲೆಯ ಸುದ್ದಿ ತಿಳಿದ ಹಲವು ಕಾರ್ಖಾನೆಗಳ ಕಾರ್ಮಿಕರು ಠಾಣೆಗಳ ಕಡೆಗೆ ಬರತೊಡಗಿದರು. ಬಂಧಿತರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಜೈಲಿಗಟ್ಟಲು ಪೊಲೀಸರು ಸಿದ್ದತೆ ಮಾಡಿಕೊಳ್ಳುತ್ತಿದ್ದರೆ, ವಕೀಲರೂ ಬಂಧಿತರನ್ನು ಬಿಡುಗಡೆಗೊಳಿಸಲು ಸಿದ್ದತೆ ಮಾಡಿಕೊಳ್ಳತೊಡಗಿದರು.
ಸೆಕ್ಸನ್ 307ರ ಅಪರಾಧ!
ನ್ಯಾಯಾಲಯದ ಸಮಯ ಮುಗಿಯುತ್ತಾ ಬಂದರೂ, ಪೊಲೀಸರು ಬಂಧಿತರನ್ನು ನ್ಯಾಯಾಧೀಶರ ಬಳಿ ಕರೆದೊಯ್ಯಲಿಲ್ಲ. ಅವರು ಉದ್ದೇಶಪೂರ್ವಕವಾಗಿಯೇ ವಿಳಂಬ ಮಾಡತೊಡಗಿದರು. ಬಂಧಿತರನ್ನು ಒಂದೆರಡು ದಿನವಾದರೂ ಜೈಲಿಗೆ ಕಳುಹಿಸುವ ತಂತ್ರ ಪೊಲೀಸರದಾಗಿತ್ತು.
ನ್ಯಾಯಾಧೀಶೆಯೊಬ್ಬರ ಬಳಿ ಕರೆದೊಯ್ದಾಗ ರಾತ್ರಿ 7 ಗಂಟೆ. ಪೊಲೀಸರ ದಾಳಿಗೆ ತುತ್ತಾಗಿದ್ದ ಬಹುತೇಕ ಸಂಗಾತಿಗಳು ನಿತ್ರಾಣಗೊಂಡಿದ್ದರು. ನಿಲ್ಲಲೂ ಶಕ್ತಿ ಇಲ್ಲದೆ ನ್ಯಾಯಾಲದ ಕೊಠಡಿಯಲ್ಲೇ ನೋವಿನಿಂದ ನರಳುತ್ತ ಕುಳಿತರು. ಬಟ್ಟೆಗಳು ರಕ್ತದಿಂದ ಒದ್ದೆಯಾಗಿದ್ದವು. ತೀವ್ರ ರಕ್ತಸ್ರಾವವಾಗುತ್ತಿದ್ದ ಕೆಲವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಂಧಿತರಲ್ಲಿ ಅರ್ಧದಷ್ಟು ಮಹಿಳಾ ಸಂಗಾತಿಗಳಿದ್ದರು.
ಬಂದಿತ 87 ಜನರ ವಿರುದ್ದ ಪ್ರಥಮ ಮಾಹಿತಿ ವರದಿ (ಎಫ್ ಐ ಆರ್) ಸಲ್ಲಿಸಿದ ಪೊಲೀಸರ ಪರ ವಕೀಲರು, ತಮ್ಮ ವಾದ ಮಂಡಿಸಿದರು. ‘ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿದರು. ಅವರು ಕೈಗಳಲ್ಲಿ ದೊಣ್ಣೆಗಳು ಮತ್ತು ಮಾರಕಾಸ್ತ್ರಗಳನ್ನು ಹಿಡಿದಿದ್ದರು. ಕಲ್ಲುಗಳಿಂದ ಪೊಲೀಸರ ಮೇಲೆ ಹಲ್ಲೆ ಮಾಡಿದರು. ಪೊಲೀಸರ ಕೊಲೆಗೆ ಯತ್ನಿಸಿದರು. ಕೊಲೆ ಯತ್ನಕ್ಕೆ ಸಂಬಂಧಿಸಿದ ಸೆಕ್ಷನ್ 307 ರ ಪ್ರಕಾರ ಆರೋಪಿಗಳ ಮೇಲೆ ಕ್ರಮ ಜರುಗಿಸಬೇಕು’ ಎಂದು ಪೊಲೀಸರು ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಂಡರು.
ಬಂಧಿತರ ಸ್ಥಿತಿಯನ್ನು ಕಣ್ಣಾರೆ ಕಂಡ ನ್ಯಾಯಾಧೀಶರು ಪೊಲೀಸರು ಮಾಡಿದ ಆರೋಪಗಳನ್ನು ಒಪ್ಪಲಿಲ್ಲ. ಅವರು ಪೊಲೀಸರಿಗೆ ಛೀಮಾರಿ ಹಾಕಿದರು. ‘ಅರೋಪಿಗಳ ಹಲ್ಲೆಯಿಂದಾಗಿ ಯಾವ ಪೊಲೀಸರಿಗೆ ಗಾಯವಾಗಿದೆ?’ ಎಂದು ಪ್ರಶ್ನಿಸಿ, ಎಲ್ಲರನ್ನೂ ಸ್ವಂತ ಜಾಮೀನಿನ ಮೇಲೆ ಬಿಡುಗಡೆಗೊಳಿಸಲು ಆದೇಶಿಸಿದರು.
ನನ್ನ ಮೈಮೇಲೆ 18 ಬರೆಗಳು
ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ನಾನು ಆ ನೋವಿನಲ್ಲಿಯೇ ಅಟೋರಿಕ್ಷಾ ಓಡಿಸಿಕೊಂಡು ಮನೆ ಕಡೆ ಹೊರಟೆ. ಮನೆ ಸೇರಿದಾಗ ರಾತ್ರಿ 10 ಗಂಟೆಯಾಗಿತ್ತು. ಮುಖ ಮತ್ತು ಕೈಗಳ ಮೇಲಿನ ಕೆಂಪಾದ ಬರೆಗಳನ್ನು ನೋಡಿದ ನನ್ನಾಕೆ ‘ಏನಾಯ್ತು?’ ಎಂದು ಆತಂಕದಿಂದ ಕೇಳಿದಳು. ಆಕೆಯ ಕಣ್ಣುಗಳು ಕಣ್ಣೀರಿನಿಂದ ತುಂಬಿಕೊಂಡವು. ಇಂದಿನ ಹಾಗೆ ಅಂದು ಹೆಚ್ಚು ಟಿವಿ ಚಾನಲ್ ಗಳು ಇರಲಿಲ್ಲ. ಸರ್ಕಾರಿ ಸ್ವಾಮ್ಯದ ದೂರದರ್ಶನ ಬಿಟ್ಟರೆ, ಉದಯ ಟಿವಿ ಚಾನಲ್ ಮಾತ್ರ ಇತ್ತು. ಹಾಗಾಗಿ ಅಂದು ನಡೆದ ಹೋರಾಟದ ವಿಷಯ ನನ್ನಾಕೆಗೆ ತಿಳಿದಿರಲಿಲ್ಲ. ನಡೆದ ಘಟನೆಯನ್ನು ವಿವರಿಸತೊಡಗಿದೆ. ಆಕೆ ಬಿಕ್ಕಳಿಸಿ ಅಳತೊಡಗಿದಳು. ನಾನು ಧರಿಸಿದ್ದ ಅಂಗಿ ಬಿಚ್ಚುತ್ತಿದ್ದಂತೆ ನೋವಿನಿಂದ ನರಳುತ್ತಿದ್ದೆ. ಮೈಮೇಲೆ ಅಲ್ಲಲ್ಲಿ ರಕ್ತ ಹೆಪ್ಪುಗಟ್ಟಿತ್ತು. ನನ್ನ ಮೈಮೇಲಿನ ಬರೆಗಳನ್ನು ನೋಡಿದ ನನ್ನಾಕೆಯ ದುಖಃದ ಕಟ್ಟೆ ಒಡೆಯಿತು. ಜೋರಾಗಿ ಅಳತೊಡಗಿದಳು. ಬಟ್ಟೆಯೊಂದರಲ್ಲಿ ಬಿಸಿ ಮಾಡಿದ ಉಪ್ಪು ಹಾಕಿ, ರಕ್ತ ಹೆಪ್ಪುಗಟ್ಟಿರುವಲ್ಲಿ ಮುಟ್ಟಿಸುವ ಮೂಲಕ ನೋವು ಸಮನಗೊಳಿಸಲು ಯತ್ನಿಸಿದಳು. ಮೈಮೇಲಿದ್ದ ಬರೆಗಳನ್ನು ಲೆಕ್ಕಹಾಕಿ ಹೇಳಿದಳು. 18 ಬರೆಗಳಿದ್ದವು.
ಮೂರು ವರ್ಷಗಳ ಕಾಲ ನ್ಯಾಯಾಲಯದ ಮೆಟ್ಟಿಲು ಹತ್ತಿ ಇಳಿದು ಕೊನೆಗೆ ನ್ಯಾಯಾಲಯ ಎಲ್ಲರನ್ನೂ ಆರೋಪದಿಂದ ಮುಕ್ತಗೊಳಿಸಿತು. ಆದರೆ, ಹೋರಾಟ ಮಾತ್ರ ನಿಂತಿಲ್ಲ. ವಿಶ್ವ ವಾಣಿಜ್ಯ ಸಂಘಟನೆಯ ಷರತ್ತುಗಳ ವಿರುದ್ಧ ಹೋರಾಟ ಇಂದಿಗೂ ಮುಂದುವರಿದೇ ಇದೆ. ಏಕೆಂದರೆ, ವಿಶ್ವ ವಾಣಿಜ್ಯ ಸಂಘಟನೆಯ ಜೊತೆ ಮಾಡಿಕೊಂಡಿರುವ ಗ್ಯಾಟ್ (GATT-General Agriment on Tariffs and Trade-ಸುಂಕಗಳು ಮತ್ತು ವ್ಯಾಪಾರದ ಮೇಲಿನ ಸಾಮಾನ್ಯ ಒಪ್ಪಂದ) ನ ಷರತ್ತುಗಳು ಮತ್ತು ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ(LPG) ನೀತಿಗಳು ಇಂದು ದೇಶದ ಜನರನ್ನು ಹೆಚ್ಚಾಗಿ ಭಾದಿಸುತ್ತಿವೆ.
ಹೋರಾಟಗಳು ಇಂದಿಗೂ ಮುಂದುವರೆದಿವೆ

ಇಂದಿನ ಸಾರ್ವಜನಿಕ ಉದ್ಯಮಗಳ ಖಾಸಗೀಕರಣಕ್ಕೆ, ಕೃಷಿಕರ ಸಂಕಷ್ಟಗಳಿಗೆ, ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಂಬಲ ಬೆಲೆ ನಿಗದಿ ಮಾಡದೇ ಇರುವುದಕ್ಕೆ, ಅಡುಗೆ ಅನಿಲದ ಮೇಲಿನ ಸಬ್ಸಿಡಿ ಇಲ್ಲದಂತೆ ಮಾಡಿ ಅದರ ಬೆಲೆ ಏರಲು ಕಾರಣವಾದುದಕ್ಕೆ, ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಬೆಲೆ ನಿಗದಿಯಲ್ಲಿ ಇದ್ದ ಸರ್ಕಾರದ ನಿಯತ್ರವನ್ನು ರದ್ದುಮಾಡಿ, ತೈಲ ಕಂಪನಿಗಳೇ ಬೆಲೆ ನಿಗದಿ ಮಾಡಲು ಅವಕಾಶ ಕೊಟ್ಟಿರುವುದಕ್ಕೆ, ಈ ಕಾರಣದಿಂದ ಪೆಟ್ರೋಲ್, ಡೀಸಲ್, ಅಡುಗೆ ಅನಿಲದ ಬೆಲೆ ಹೆಚ್ಚಳವಾಗಿರುವುದಕ್ಕೆ, ಅನರ್ಹರು ಎಂಬ ಕಾರಣ ನೀಡಿ ಪಡಿತರ ವ್ಯವಸ್ಥೆಯಿಂದ ಬಡವರನ್ನು ದೂರ ಇಡುವ ಪ್ರಯತ್ನಕ್ಕೆ ಮತ್ತು ಪಡಿತರ ವ್ಯವಸ್ಥೆಯನ್ನೇ ಸಂಪೂರ್ಣವಾಗಿ ಇಲ್ಲವಾಗಿಸುವ ಪ್ರಯತ್ನಕ್ಕೆ, ನಿರುದ್ಯೋಗ ಸಮಸ್ಯೆ ಹೆಚ್ಚಳಕ್ಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆಗೆ, ಜನರ ಹಸಿವು ಮತ್ತು ಬಡತನಕ್ಕೆ, … ಈ ಗ್ಯಾಟ್ ಒಪ್ಪಂದದ ಜನವಿರೋಧಿ ಷರತ್ತುಗಳು ಮತ್ತು ಆ ಷರತ್ತುಗಳನ್ನು ಒಪ್ಪಿ, ಅದನ್ನು ಜಾರಿಗೆ ತರುತ್ತಿರುವ ಭಾರತ ಸರ್ಕಾರದ ಆಳುವ ಪಕ್ಷಗಳೇ ಕಾರಣ. ದೆಹಲಿಯಲ್ಲಿ ಸತತ ಒಂದು ವರ್ಷ ಕಾಲ ರೈತರು ಹೋರಾಟ ನಡೆಸಿದರು. ರೈತರು ಇಂದಿಗೂ ವಿವಿಧ ರೀತಿಯಲ್ಲಿ ಹೋರಾಟ ನಡೆಸುತ್ತಲೇ ಇದ್ದಾರೆ. ಕೇಂದ್ರ ಕಾರ್ಮಿಕ ಸಂಘಟನೆಗಳು ಹಾಗೂ ರೈತ ಸಂಘಟನೆಗಳ ಜಂಟಿ ಹೋರಾಟಗಳ ಭಾಗವಾಗಿ ಕೋಟ್ಯಾಂತರ ಕಾರ್ಮಿಕರು ಮತ್ತು ರೈತರು ಆಗಾಗ್ಗೆ ನಡೆಸುತ್ತಲೇ ಇದ್ದಾರೆ. ಈ ನೀತಿಗಳ ವಿರುದ್ದ ಇಂತಹ ಹೋರಾಟ ಮತ್ತಷ್ಟು ವ್ಯಾಪಕವಾಗಿ ನಡೆಯಬೇಕಿದೆ.
-ಸಿ.ಸಿದ್ದಯ್ಯ
ನಿಮ್ಮ ಟಿಪ್ಪಣಿ ಬರೆಯಿರಿ