‘ಕೌಶಲ’ ಕೊಟ್ಟಿದ್ದೇನೆ, ಉದ್ಯೋಗ ನೀನೇ ಹುಡುಕಿಕೊಳ್ಳಿ

ಆಧುನಿಕ-ದಿನದ ಮಾರುಕಟ್ಟೆ ಬೇಡಿಕೆಗಳಿಗೆ ಅನುಗುಣವಾಗಿ ನುರಿತ ಉದ್ಯೋಗಿಗಳು ಮತ್ತು ನಾಯಕರ ಅಗತ್ಯವಿದೆ. ಅಬ್ಬರದ ಪ್ರಚಾರ ಪಡೆದಿರುವ ಮತ್ತು ಹಿಂದೆಂದೂ ಮಾಡದ ಸಾಧನೆ ಎಂದು ಬಿಂಬಿಸಿಕೊಳ್ಳಲು ಹೊರಟಿರುವ ‘ಸ್ಕಿಲ್ ಇಂಡಿಯಾ’ ಯೋಜನೆ ಇದಕ್ಕೆ ಎಷ್ಟರ ಮಟ್ಟಿಗೆ ಸಹಕಾರಿಯಾಗಿದೆ ಎಂಬುದೇ ಪ್ರಶ್ನೆ. ತರಬೇತಿ ಪಡೆದ ವ್ಯಕ್ತಿಗಳಿಗೆ ಉದ್ಯೋಗದ ಗುರಿಗಳನ್ನು ಸಾಧಿಸಲು ಸಾಧ್ಯವಾಗಬೇಕಲ್ಲವೇ? ಆದರೆ, ಇದು ಆಗುತ್ತಿಲ್ಲ. ತರಬೇತಿ ಪಡೆದ ಬಹುತೇಕ ಜನರಿಗೆ ಅಂತಹ ಕ್ಷೇತ್ರಗಳಲ್ಲಿ ಉದ್ಯೋಗಗಳೇ ಸಿಗುತ್ತಿಲ್ಲ. ಇದನ್ನು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ತನ್ನ ವರದಿಗಳಲ್ಲಿ ಹೇಳಿದೆ.
ಆರು ವರ್ಷಗಳ ಹಿಂದೆ ಮೈಸೂರಿನ ಸುಪ್ರಿತಾ ಬಿಕಾಂ ಮುಗಿಸಿದ್ದಳು. ಆಕೆ ಉದ್ಯೋಗ ಹುಡುಕುತ್ತಿದ್ದಳು. ‘ಪ್ರಧಾನ ಮಂತ್ರಿ ಕೌಶಲ ವಿಕಾಸ್ ಯೋಜನೆ (PMKVY)ಯ ಮೂಲಕ ತರಬೇತಿ ಪಡೆದರೆ ಉದ್ಯೋಗ ಗ್ಯಾರೆಂಟಿ ಎಂದು ಕೆಲವರು ಹೇಳಿದರು. ಬೆಂಗಳೂರಿನ ಹೊಸೂರು ರಸ್ತೆ ಸಮೀಪದ ಪ್ರದೇಶವೊಂದರಲ್ಲಿ ವಾಸವಿದ್ದ ತನ್ನ ಸ್ನೇಹಿತೆ ಮನೆಯಲ್ಲಿ ವಾಸವಿದ್ದು ಆಕೆ ಆರು ತಿಂಗಳ ತರಬೇತಿ ಪಡೆದಳು. ತರಬೇತಿ ಸಮಯದಲ್ಲಿ ದಿನದಲ್ಲಿ ಒಮ್ಮೆ ಊಟ ಅಥವಾ ತಿಂಡಿ ಕೊಡುತ್ತಿದ್ದರು. ಒಂದು ಸಮವಸ್ತ್ರ ಕೊಟ್ಟಿದ್ದರು.
ಆಕಗೆ ಕೊಡುತ್ತಿದ್ದ ತರಬೇತಿ ಎಂದರೆ, ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ ಸಂದರ್ಶನಕ್ಕೆ ಹೋದಾಗ, ಸಂದರ್ಶನ ಮಾಡುವವರ ಪ್ರಶ್ನೆಗಳಿಗೆ ಹೇಗೆ ಉತ್ತರ ಕೊಡಬೇಕು, ಆ ವೇಳೆಯಲ್ಲಿ ಹೇಗೆ ನಡೆದುಕೊಳ್ಳಬೇಕು, ಉದ್ಯೋಗಕ್ಕೆ ಸೇರಿಕೊಂಡಾಗ ಅಲ್ಲಿ ಯಾವ ಉಡುಪು ಧರಿಸಬೇಕು, ಗ್ರಾಹಕರ ಜೊತೆ ಯಾವ ರೀತಿ ವ್ಯವಹರಿಸಬೇಕು, ತಾವು ಮಾಡುವ ಕಂಪನಿಗಳ ಉತ್ಪನ್ನಗಳು ಅಥವಾ ಸೇವೆಗಳ ಕಡೆಗೆ ಗ್ರಾಹಕರನ್ನು ಸೆಳೆಯಲು ನಮ್ಮ ಮಾತುಗಳು ಮತ್ತು ನಡೆದುಕೊಳ್ಳುವ ರೀತಿ ಹೇಗಿರಬೇಕು ಎಂಬಿತ್ಯಾದಿ ವಿಷಯಗಳಲ್ಲಿ ತರಬೇತಿ ನೀಡಿದರು.
ತರಬೇತಿ ಮುಗಿಸಿದ ನಂತರ ಯಾವುದಾದರೂ ಕಂಪನಿಯಲ್ಲಿ ಉತ್ತಮ ವೇತನದ ಕೆಲಸ ಸಿಗುತ್ತದೆ ಎಂಬ ಭರವಸೆ ಆಕೆಗಿತ್ತು. ತರಬೇತಿ ಮುಗಿದ ನಂತರ ಕಾರ್ ಶೋರೂಂ ಒಂದಕ್ಕೆ ಮತ್ತೆ ಒಂದು ತಿಂಗಳ ತರಬೇತಿಗೆ ಕಳುಹಿಸಿದರು. ಅಲ್ಲಿನ ಕೆಲಸವೆಂದರೆ, ಶೋರೂಂ ಗೆ ಬರುವ ಗ್ರಾಹಕರು ಹೊತ್ತು ತರುವ ಸಮಸ್ಯೆಗಳಿಗೆ ಸ್ಪಂದಿಸುವುದು. ತರಬೇತಿ ಸಮಯದಲ್ಲಿ ರೂ. 6 ಸಾವಿರ ವೇತನ, ತರಬೇತಿ ಅವಧಿ ಮುಗಿದ ನಂತರ ರೂ. 9 ಸಾವಿರ ವೇತನ ಕೊಡುವುದಾಗಿ ಹೇಳಿದರು.
9,000 ರೂ. ವೇತನದಲ್ಲಿ ಬೆಂಗಳೂರು ನಗರದಲ್ಲಿ ಬಾಡಿಗೆ ಮನೆ ಮಾಡಿ ಜೀವನ ಸಾಗಿಸಲಾಗದು. ಸುಪ್ರಿತಾ ಮೈಸೂರಿಗೆ ಹಿಂದುರಿಗಿ ಅಲ್ಲೇ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾ, ಎಂ.ಕಾಂ. ಮುಗಿಸಿದ್ದಾಳೆ. ಇಷ್ಟಾದರೂ ಅಕೆಯ ಈಗಿನ ಕೆಲಸ ಮೈಸೂರಿನ ಸರ್ಕಾರಿ ಕಾಲೇಜಿನಲ್ಲಿ ಟೈಪಿಸ್ಟರ್. ಅದೂ ಗುತ್ತಿಗೆ ಆಧಾರದಲ್ಲಿ ಕೇವಲ 15 ಸಾವಿರ ವೇತನಕ್ಕೆ ದುಡಿಯುತ್ತಿದ್ದಾಳೆ. ಸ್ಕಿಲ್ ಇಂಡಿಯಾ ಯೋಜನೆಯಿಂದ ಯುವಜನರಿಗೆ ಯಾವ ಪ್ರಯೋಜನವೂ ಇಲ್ಲ ಎಂಬುದಕ್ಕೆ ಇದೊಂದು ಉದಾಹರಣೆ.
*ಉದ್ಯೋಗ ಪಡೆಯಲು ಅಗತ್ಯವಾದ ಕೌಶಲ್ಯ ತರಬೇತಿಯಲ್ಲ:
2015ರ ಜುಲೈ 16 ರಂದು ಆರಂಭಗೊಂಡ ‘Skilled India’ (ಕೌಶಲ್ಯ ಭಾರತ) ಅಥವಾ ಪ್ರಧಾನ ಮಂತ್ರಿ ಕೌಶಲ ವಿಕಾಸ್ ಯೋಜನ (PMKVY) ಎಂಬುದೂ ಮೋದಿ ಸರ್ಕಾರದ ಮತ್ತೊಂದು ಸಾಧನೆ ಎಂದು ಹೇಳಿಕೊಳ್ಳುತ್ತಾರೆ. ಭಾರತೀಯ ಯುವಕರ ಪ್ರತಿಭೆಗಳ ಅಭಿವೃದ್ಧಿಗೆ ಅವಕಾಶಗಳು, ಸ್ಥಳಾವಕಾಶ ಮತ್ತು ವ್ಯಾಪ್ತಿಯನ್ನು ಸೃಷ್ಟಿಸುವುದು ಮತ್ತು ಕಳೆದ ಹಲವು ವರ್ಷಗಳಿಂದ ಈಗಾಗಲೇ ಕೌಶಲ್ಯ ಅಭಿವೃದ್ಧಿಗೆ ಒಳಪಟ್ಟಿರುವ ಹೆಚ್ಚಿನ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಕೌಶಲ್ಯಾಭಿವೃದ್ಧಿಗಾಗಿ ಹೊಸ ಕ್ಷೇತ್ರಗಳನ್ನು ಗುರುತಿಸುವುದು, ಇದಕ್ಕೆಲ್ಲಾ ಸ್ಕಿಲ್ ಇಂಡಿಯಾ ರೀತಿಯ ಯೋಜನೆಗಳ ಅಗತ್ಯವಿದೆ. ಹೊಸ ಹೊಸ ತಂತ್ರಜ್ಞಾನಗಳು ವೇಗ ಪಡೆಯುತ್ತಿರುವ ಈ ಆಧುನಿಕ ಯುಗದಲ್ಲಿ ಇಂತಹ ತರಬೇತಿಗೆ ಮತ್ತಷ್ಟು ಮಹತ್ವವಿದೆ.
ಆಧುನಿಕ-ದಿನದ ಮಾರುಕಟ್ಟೆ ಬೇಡಿಕೆಗಳಿಗೆ ಅನುಗುಣವಾಗಿ ನುರಿತ ಉದ್ಯೋಗಿಗಳು ಮತ್ತು ನಾಯಕರ ಅಗತ್ಯವಿದೆ. ಅಬ್ಬರದ ಪ್ರಚಾರ ಪಡೆದಿರುವ ಮತ್ತು ಹಿಂದೆಂದೂ ಮಾಡದ ಸಾಧನೆ ಎಂದು ಬಿಂಬಿಸಿಕೊಳ್ಳಲು ಹೊರಟಿರುವ ‘ಸ್ಕಿಲ್ ಇಂಡಿಯಾ’ ಯೋಜನೆ ಇದಕ್ಕೆ ಎಷ್ಟರ ಮಟ್ಟಿಗೆ ಸಹಕಾರಿಯಾಗಿದೆ ಎಂಬುದೇ ಪ್ರಶ್ನೆ. ತರಬೇತಿ ಪಡೆದ ವ್ಯಕ್ತಿಗಳಿಗೆ ಉದ್ಯೋಗದ ಗುರಿಗಳನ್ನು ಸಾಧಿಸಲು ಸಾಧ್ಯವಾಗಬೇಕಲ್ಲವೇ? ಆದರೆ, ಇದು ಆಗುತ್ತಿಲ್ಲ. ತರಬೇತಿ ಪಡೆದ ಬಹುತೇಕ ಜನರಿಗೆ ಅಂತಹ ಕ್ಷೇತ್ರಗಳಲ್ಲಿ ಉದ್ಯೋಗಗಳೇ ಸಿಗುತ್ತಿಲ್ಲ. ಇದನ್ನು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ತನ್ನ ವರದಿಗಳಲ್ಲಿ ಹೇಳಿದೆ.
ಶಾರದ ಪ್ರಸಾದ್ ಸಮಿತಿಯು 2017ರ ತನ್ನ ವರದಿಯಲ್ಲಿ ಸ್ಟ್ಯಾಂಡರ್ಡ್ ಟ್ರೈನಿಂಗ್ ಅಸೆಸ್‌ಮೆಂಟ್ ಮತ್ತು ರಿವಾರ್ಡ್ (STAR) ಕಾರ್ಯಕ್ರಮದ ಕಳಪೆ ಅನುಷ್ಠಾನಕ್ಕೆ NSDC ಯನ್ನು ಹೊಣೆಗಾರರನ್ನಾಗಿಸಿತು. ತರಬೇತಿ ಪಡೆದವರಲ್ಲಿ ಕೇವಲ 8.5 ಪ್ರತಿಶತದಷ್ಟು ಜನರು ಮಾತ್ರ ಉದ್ಯೋಗವನ್ನು ಪಡೆಯಲು ಸಮರ್ಥರಾಗಿದ್ದಾರೆ ಎಂದು ಅದು ಎತ್ತಿ ತೋರಿಸಿದೆ. ಅದನ್ನೇ ಎನ್‌ಎಸ್‌ಡಿಸಿ ಪ್ರತಿಪಾದಿಸಿದೆ.
*ವೈಫಲ್ಯಗಳ ಮೇಲೆ ಬೆಳಕು ಚೆಲ್ಲಿದ ‘ಹಣಕಾಸು ವರದಿ 2023’:
ಆಗಸ್ಟ್ ನಲ್ಲಿ ಕೌಶಲ್ಯ ಹಣಕಾಸು ವರದಿ 2023 ಬಿಡುಗಡೆಗೊಂಡ ನಂತರ ಮತ್ತೊಮ್ಮೆ ದೇಶದಲ್ಲಿ ನುರಿತ ಕಾರ್ಮಿಕರ ಕೊರತೆಯ ಬಗ್ಗೆ ಚರ್ಚೆಗಳಾಗುತ್ತಿವೆ. ಕೌಶಲ್ಯ (ಸ್ಕಿಲ್) ತರಬೇತಿಯ ಹೆಸರಲ್ಲಿ ನಡೆಯುವ ಕಾರ್ಯಕ್ರಮಗಳು ಯದ್ವಾತದ್ವಾ ವಿಫಲವಾಗಿದ್ದು ಹೇಗೆ ಎಂಬ ವಿಶ್ಲೇಷಣೆಗಳು ಈ ಹಿಂದೆಯೇ ನಡೆದಿದ್ದವು. ಕೌಶಲ್ಯ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ರೂಪಿಸಿದ ಕೀರ್ತಿ ತಮ್ಮದು ಎಂದು ಕೇಂದ್ರ ಸರಕಾರ ಹೇಳಿಕೊಳ್ಳುತ್ತದೆ. ಇತರ ಯೋಜನೆಗಳಂತೆ, ಇದೂ ಕೂಡ ಜಾಹೀರಾತುಗಳಲ್ಲಿ ಹೇಳುವ ರೀತಿಯಲ್ಲಿ ಯಾವುದೇ ಫಲಿತಾಂಶವನ್ನು ನೀಡಲಿಲ್ಲ. ಆಗಸ್ಟ್ 2023ರ ಎರಡನೇ ವಾರದಲ್ಲಿ ಕೌಶಲ್ಯ ಹಣಕಾಸು ವರದಿ 2023 ಈ ಕೆಲವು ಅಂಶಗಳನ್ನು ಬಹಿರಂಗಪಡಿಸಿದೆ. ದೇಶದ ಶೇ. 78ರಷ್ಟು ಯುವಕರಿಗೆ ಕಲಿಯಬಹುದಾದ ಕೌಶಲ್ಯದ ಯೋಜನೆಗಳಿಲ್ಲ. 25.4 ಕೋಟಿ ಯುವಕರು 15-24 ವರ್ಷ ವಯಸ್ಸಿನವರಾಗಿದ್ದಾರೆ. ಅವರಲ್ಲಿ ಶೇಕಡ 46.2ರಷ್ಟು ಮಂದಿ ಮಾತ್ರ ಉದ್ಯೋಗಕ್ಕೆ ಅಗತ್ಯವಾದ ಉನ್ನತ ಕೌಶಲ್ಯಗಳನ್ನು ಹೊಂದಿದ್ದಾರೆ. ಒಟ್ಟಾರೆ ಕೌಶಲ್ಯ ಶ್ರೇಯಾಂಕದಲ್ಲಿ ನಮ್ಮ ದೇಶವು ವಿಶ್ವದಲ್ಲಿ 60 ನೇ ಸ್ಥಾನದಲ್ಲಿದೆ. 2015ರ ಹೊತ್ತಿಗೆ, ನಮ್ಮ ದೇಶದ ಕಾರ್ಮಿಕರಲ್ಲಿ ಕೇವಲ 4.7 ಪ್ರತಿಶತದಷ್ಟು ಜನರು ಕೌಶಲ್ಯ ತರಬೇತಿಯನ್ನು ಪಡೆದಿದ್ದಾರೆ, ದಕ್ಷಿಣ ಕೊರಿಯಾದಲ್ಲಿ ಶೇ. 90, ಜಪಾನ್‌ನಲ್ಲಿ ಶೇ. 80, ಬ್ರಿಟನ್‌ನಲ್ಲಿ ಶೇ. 68 ಮತ್ತು ಅಮೆರಿಕದಲ್ಲಿ ಶೇ. 52 ರಷ್ಟು ಕಾರ್ಮಿಕರು ಕೌಶಲ್ಯ ತರಬೇತಿಯನ್ನು ಪಡೆದಿದ್ದಾರೆ. ನಮ್ಮ ದೇಶದಲ್ಲಿ ತರಬೇತಿಯ ಹೆಚ್ಚಿನ ಅವಶ್ಯಕತೆಯಿದೆ ಮತ್ತು ನಿಧಿಯ ಹಂಚಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಿಸಬೇಕು ಎಂದು ವರದಿ ಸಲಹೆ ನೀಡುತ್ತದೆ.
*ತರಬೇತಿ ಪಡೆದವರು 18.04 ಲಕ್ಷ: *ಉದ್ಯೋಗ ಪಡೆದವರು 2.53 ಲಕ್ಷ:
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತಿನಲ್ಲಿ ತಮ್ಮ ಚೊಚ್ಚಲ ಭಾಷಣದಲ್ಲಿ ಯುವಕರು ಎಂಬ ಪದವನ್ನು ಏಳು ಬಾರಿ ಉಚ್ಚರಿಸಿದರು. ಆದರೆ, ಅವರು ಯುವಕರ ಕೌಶಲ್ಯದ ಕುರಿತು ಉಲ್ಲೇಖಿಸಲಿಲ್ಲ (ಇದು ಮೋದಿ ಸರ್ಕಾರ ಬರೆದುಕೊಟ್ಟ ಭಾಷಣ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ). 2023ರ ಬಜೆಟ್‌ನಲ್ಲಿ ಘೋಷಿಸಲಾದ ಕೌಶಲ್ಯ ತರಬೇತಿ ಯೋಜನೆಗಳು ಕಾರ್ಯರೂಪಕ್ಕೆ ಬರಲು ಕೆಲವು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಮಾರ್ಚ್ 14, 2022ರಂದು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಕಾರ, ಪ್ರಧಾನ್ ಮಂತ್ರಿ ಕೌಶಲ್ ವಿಕಾಸ್ ಯೋಜನ (PMKVY) 1.0 ರ ಅಡಿಯಲ್ಲಿ 18.04 ಲಕ್ಷ ಜನರು ದಾಖಲಾಗಿ ಕೌಶಲ್ಯ ತರಬೇತಿ ಪಡೆದಿದ್ದಾರೆ. ಅದರಲ್ಲಿ 13.32 ಲಕ್ಷ ಜನರಿಗೆ ಕೌಶಲ್ಯ ಪ್ರಮಾಣಪತ್ರಗಳನ್ನು ನೀಡಲಾಗಿದೆ. ಕೇವಲ 2.53 ಲಕ್ಷ ಜನರು ಅಥವಾ ಅವರಲ್ಲಿ ಶೇ. 19 ಜನರು ಮಾತ್ರ ಉದ್ಯೋಗವನ್ನು ಕಂಡುಕೊಂಡಿದ್ದಾರೆ. (ಇವರಲ್ಲಿ ಅವರ ಓದಿಗೆ ತಕ್ಕಂತೆ ಉತ್ತಮ ವೇತನ ಸಿಗುವ ಉದ್ಯೋಗ ಪಡೆದವರೆಷ್ಟೋ?) PMKVY 3.0 ರ ಪ್ರಕಾರ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಕೌಶಲ್ಯವನ್ನು ಒದಗಿಸಲು ನಿರ್ಧರಿಸಲಾಯಿತು. ಇದು ತಮಿಳುನಾಡು, ಕರ್ನಾಟಕದಂತಹ ಕೈಗಾರಿಕೀಕರಣಗೊಂಡ ರಾಜ್ಯಗಳಲ್ಲೂ ಒಟ್ಟಾರೆಯಾಗಿ ವಿಫಲವಾಗಿದೆ. PMKVY 3.0 ರಲ್ಲಿ 4.98 ಲಕ್ಷ ಜನರು ದಾಖಲಾಗಿದ್ದಾರೆ. ಇವರಲ್ಲಿ 4.45 ಲಕ್ಷ ಜನರು ಸಂಪೂರ್ಣ ತರಬೇತಿ ಪಡೆದಿದ್ದಾರೆ. ಅವರಲ್ಲಿ 1.72 ಲಕ್ಷ ಮಂದಿ ಪ್ರಮಾಣ ಪತ್ರ ಪಡೆದಿದ್ದಾರೆ. ಅವರಲ್ಲಿ 15,450 ಮಂದಿಗೆ ಮಾತ್ರ ಉದ್ಯೋಗ ಸಿಕ್ಕಿದೆ. PMKVY 1.0 ರಲ್ಲಿ 12,218 ಕೌಶಲ್ಯ ತರಬೇತಿ ಕೇಂದ್ರಗಳು, 2.0 ರಲ್ಲಿ 9,030 ಕೇಂದ್ರಗಳು ಮತ್ತು 3.0 ರಲ್ಲಿ 683 ಮಾತ್ರ. ಇದು ಆ ವಿಶ್ಲೇಷಣೆಯ ಸಾರಾಂಶ.
ಭಾರತ ಯೌವನವಾಗಿದೆ, ದುಡಿಯುವ ಜನ ಸಾಕಷ್ಟಿದ್ದಾರೆ ಎಂದು ಬಡಾಯಿ ಕೊಚ್ಚಿಕೊಂಡರಷ್ಟೇ ಸಾಲದು. ಪ್ರತಿ ವರ್ಷ ಲಕ್ಷಾಂತರ ಹೊಸ ಯುವಜನರು ಕೆಲಸಕ್ಕೆ ಬರುತ್ತಿದ್ದಾರೆ. ಹೊಸ ತಂತ್ರಜ್ಞಾನಗಳು ಸದಾ ಮುಂದೆ ಬರುತ್ತಿವೆ. ಅದಕ್ಕೆ ಅನುಗುಣವಾಗಿ ನಿಯಮಿತವಾಗಿ ತರಬೇತಿ ನೀಡದ ಹೊರತು ಯಾವುದೇ ಪ್ರಯೋಜನವಾಗುವುದಿಲ್ಲ. ಖಾಸಗಿಯವರು ಅಂತಹ ಜವಾಬ್ದಾರಿ ಹೊರಲು ಮುಂದೆ ಬಂದಿರುವ ಬಗ್ಗೆ ದಾಖಲೆಗಳೂ ಇಲ್ಲ. ಕಳೆದ ವರ್ಷ ಜೂನ್ ನಲ್ಲಿ ಕೇಂದ್ರ ಸರ್ಕಾರವು ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಫಾರ್ ಇಂಡಿಯಾ’ ಎಂಬ ಅಭಿಯಾನವನ್ನು ಆರಂಭಿಸಿತ್ತು. ಲಕ್ಷಗಟ್ಟಲೆ ಜನರಿಗೆ ತರಬೇತಿ ನೀಡಬೇಕು ಎಂದು ಸರ್ಕಾರ ಹೇಳಿತು. ವಾಸ್ತವಾಂಶ ಇದಕ್ಕೆ ವಿಭಿನ್ನವಾಗಿವೆ. ಯಾವುದೇ ದೇಶಕ್ಕೆ ನುರಿತ ಕೆಲಸಗಾರರ ಅಗತ್ಯವಿದೆ. ಇದು ಅವರ ಜೀವನ ಪರಿಸ್ಥಿತಿಗಳನ್ನು ಸುಧಾರಿಸುತ್ತದೆ.
21ನೇ ಸ್ಥಾನದಲ್ಲಿ ಭಾರತ
ಅಮೇರಿಕನ್ ಮಾಧ್ಯಮ ಯುಎಸ್ ನ್ಯೂಸ್ ಸೆಪ್ಟೆಂಬರ್ 2022ರಲ್ಲಿ 85 ದೇಶಗಳ ಪರಿಸ್ಥಿತಿಗಳನ್ನು ಸಮೀಕ್ಷೆ ಮಾಡಿ ಪಟ್ಟಿಯನ್ನು ಪ್ರಕಟಿಸಿತು. ಕಾರ್ಮಿಕ ಕೌಶಲ್ಯದ ವಿಷಯದಲ್ಲಿ ಜಪಾನ್ ಮತ್ತು ದಕ್ಷಿಣ ಕೊರಿಯಾದ ನಂತರ ಚೀನಾ ಮೂರನೇ ಸ್ಥಾನದಲ್ಲಿದೆ. ನಮ್ಮ ದೇಶ ಇಪ್ಪತ್ತೊಂದನೇ ಸ್ಥಾನದಲ್ಲಿದೆ. ಒಟ್ಟಾರೆಯಾಗಿ ಚೀನಾ ಎಲ್ಲಾ ರೀತಿಯ ಕೌಶಲ್ಯಗಳಲ್ಲಿ 17 ನೇ ರಾಷ್ಟ್ರವಾಗಿದೆ, ಆದರೆ ನಾವು 31 ನೇ ಸ್ಥಾನದಲ್ಲಿದ್ದೇವೆ. ಯಾವುದೇ ದೇಶವು ಕೌಶಲ ನಿರ್ಮಾಣಕ್ಕೆ ಮಾತ್ರವಲ್ಲದೆ ಸಂಶೋಧನೆ ಮತ್ತು ಅಭಿವೃದ್ಧಿಗೆ ಭಾರಿ ಮೊತ್ತವನ್ನು ವ್ಯಯಿಸಬೇಕಾಗುತ್ತದೆ. ನಮ್ಮ ದೇಶದಲ್ಲಿ ಇವೆರಡೂ ಇಲ್ಲ.
ಮತ್ತೊಂದು ಪ್ರಶ್ನೆ, ನಾವು ಎಲ್ಲಿದ್ದೇವೆ ಮತ್ತು ನಾವು ಏನು ಮಾಡುತ್ತಿದ್ದೇವೆ ಎಂಬುದು. ಮಾಡಲು ಕೆಲಸವಿಲ್ಲದೇ, ಉದ್ಯೋಗಕ್ಕೆ ಬೇಕಿರುವ ಕೌಶಲವಿಲ್ಲದೇ, ನಾಮಮಾತ್ರದ ಕೂಲಿಗೆ ದುಡಿಯುತ್ತಿರುವ ಯುವಕರನ್ನು ದಾರಿ ತಪ್ಪಿಸುವ ಪರಿಸ್ಥಿತಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅದಕ್ಕೆ ಬೇಕಾದ ತಂತ್ರಜ್ಞಾನವನ್ನು ನೋಡದೆ ಗೋವಿನ ಸಗಣಿ ಮತ್ತು ಮೂತ್ರದಿಂದ ಚಿನ್ನವನ್ನು ಹೊರತೆಗೆದರೆ ನಾವು ಶ್ರೀಮಂತ ದೇಶವಾಗುತ್ತೇವೆ ಎಂದುಕೊಂಡರೆ ಅತಿಶಯೋಕ್ತಿಯಲ್ಲ.
ನಿಮ್ಮ ಟಿಪ್ಪಣಿ ಬರೆಯಿರಿ